ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ ರಸ್ತೆಗಳಿಗೆ ಬೇಕು ಅಭಿವೃದ್ಧಿ ಸ್ಪರ್ಶ

Last Updated 31 ಜನವರಿ 2017, 6:09 IST
ಅಕ್ಷರ ಗಾತ್ರ

ಖಾಲಿ ನಿವೇಶನಗಳಲ್ಲಿ ತಲೆ ಎತ್ತಿದ ಕುರುಚಲು ಕಾಡು *ಶುರುವಾದ ಕುಡಿಯುವ ನೀರಿನ ಸಮಸ್ಯೆ *ಹಂದಿಗಳ ಹಿಂಡು

**
ದಾವಣಗೆರೆ: ಖಾಲಿ ನಿವೇಶನಗಳಲ್ಲಿ ತಲೆ ಎತ್ತಿರುವ ಜಾಲಿ ಗಿಡಗಳ ಕುರುಚಲು ಕಾಡು; ಅಲ್ಲಲ್ಲಿ ಕಿತ್ತು ಹೋಗಿರುವ ಡಾಂಬರು ರಸ್ತೆಗಳು; ಅಭಿವೃದ್ಧಿ ಕಾಣದ ಬಡಾವಣೆಗಳ ಒಳ ರಸ್ತೆಗಳು; ಕಾಂಕ್ರೀಟ್‌ ಭಾಗ್ಯ ಕಂಡ ಕೆಲ ಮುಖ್ಯ ರಸ್ತೆಗಳು ಮತ್ತು ಕಾಂಕ್ರೀಟ್‌ ಮೆತ್ತಿಕೊಳ್ಳಲು ಸಜ್ಜಾಗಿರುವ ಒಂದೆರಡು ರಸ್ತೆಗಳು; ಬೇಸಿಗೆಯ ಮುನ್ನವೇ ಕುಡಿವ ನೀರಿನ ಸಮಸ್ಯೆಯ ಬಿಸಿ ಮುಟ್ಟಿಸಿಕೊಂಡ ಬಡಾವಣೆಗಳ ನಿವಾಸಿಗಳು...
 
ಇವು ನಗರದ 36ನೇ ವಾರ್ಡ್‌ನಲ್ಲಿ ಸಂಚರಿಸಿದಾಗ ಕಂಡು ಬಂದ ದೃಶ್ಯಾವಳಿಗಳು. ಭೌಗೋಳಿಕವಾಗಿ ದೊಡ್ಡದಾಗಿರುವ ಈ ವಾರ್ಡ್‌ನ ಬಡಾವಣೆಗಳಲ್ಲಿ ಕೆಲವು 
ಮುಖ್ಯ ರಸ್ತೆಗಳ ಸುಧಾರಣೆ, ಉದ್ಯಾನಗಳ ಅಭಿವೃದ್ಧಿ ಕೆಲಸಗಳು ನಡೆದಿವೆ. ಆದರೆ, ಇನ್ನೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕಾಗಿವೆ. 
 
ಜಾಲಿಗಿಡಗಳ ಉದ್ಯಾನ: ಶಿವಕುಮಾರ ಸ್ವಾಮಿ ಬಡಾವಣೆ, ಸರಸ್ವತಿ ಬಡಾವಣೆ, ಚಿಕ್ಕಮ್ಮಣ್ಣಿ ದೇವರಾಜ ಅರಸು ಬಡಾವಣೆಗಳಲ್ಲಿ ಹಲವು ಖಾಲಿ ನಿವೇಶನಗಳಿವೆ. ಅವುಗಳಲ್ಲಿ ಆಳೆತ್ತರಕ್ಕೆ ಜಾಲಿಗಿಡಗಳು ಬೆಳೆದಿದ್ದು, ಕುರುಚಲು ಕಾಡಿನಂತೆ ಕಂಡುಬರುತ್ತಿದೆ. 
 
‘ಖಾಲಿ ನಿವೇಶನಗಳನ್ನು ಕಾಲ ಕಾಲಕ್ಕೆ ಸ್ವಚ್ಛಗೊಳಿಸದೇ ಇರುವುದರಿಂದ ಗಿಡಗಂಟಿಗಳು ಬೆಳೆದಿವೆ. ಅಲ್ಲಿ ಜಾಲಿ ಗಿಡಗಳ ಉದ್ಯಾನ ನಿರ್ಮಿಸಿದಂತೆ ಕಂಡು ಬರುತ್ತಿದ್ದು, ಹಂದಿಗಳ ಆವಾಸ ಸ್ಥಳವಾಗಿ ಮಾರ್ಪಟ್ಟಿದೆ. ಪಾಲಿಕೆಯ ಪೌರ ಕಾರ್ಮಿಕರು ಹಣ ಕೇಳುತ್ತಾರೆ ಎಂಬ ಕಾರಣಕ್ಕೆ ಕೆಲವರು ಕಸವನ್ನು ಖಾಲಿ ನಿವೇಶನಗಳಿಗೆ ತಂದು ಸುರಿಯುತ್ತಿದ್ದಾರೆ. ಸ್ಥಳೀಯರ ಆರೋಗ್ಯದ ದೃಷ್ಟಿಯಿಂದ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಡುವಂತೆ ಕಟ್ಟು ನಿಟ್ಟಿನ ಕ್ರಮವನ್ನು ಪಾಲಿಕೆ ಕೈಗೊಳ್ಳಬೇಕು’ ಎನ್ನುತ್ತಾರೆ ಶಿವಕುಮಾರಸ್ವಾಮಿ ಬಡಾವಣೆಯ 8ನೇ ಕ್ರಾಸ್‌ನ ‘ಸಿ’ ಮುಖ್ಯ ರಸ್ತೆಯ ನಿವಾಸಿ ಮಹಾದೇವಪ್ಪ. 
 
‘ಬಡಾವಣೆಯ ಒಳ ರಸ್ತೆಗಳನ್ನು ಅಭಿವೃದ್ಧಿ ಪಡಿಸಿಲ್ಲ. ಬಹುತೇಕ ಎಲ್ಲ ಒಳ ರಸ್ತೆಗಳು ಕಚ್ಚಾ ರಸ್ತೆಗಳಾಗಿದ್ದು, ಮನೆಯೊಳಗೆ ದೂಳು ಬರುತ್ತಿದೆ. ಒಳ ರಸ್ತೆಗಳನ್ನು ಅಭಿವೃದ್ಧಿ ಮಾಡಲು ಆದ್ಯತೆ ನೀಡಬೇಕು’ ಎಂದು ವಿನಾಯಕನಗರದ ನಿವಾಸಿ ಶಂಕರಪ್ಪ ಒತ್ತಾಯಿಸುತ್ತಾರೆ. 
 
‘ಮೊದಲು ಎರಡು– ಮೂರು ದಿನಗಳಿಗೆ ಕುಡಿಯುವ ನೀರು ಬಿಡುತ್ತಿದ್ದರು. ಈಗ ವಾರಕ್ಕೆ ಒಮ್ಮೆ ನೀರು ಕೊಡುತ್ತಿದ್ದಾರೆ. ಕೊಳವೆ ಬಾವಿಗಳಲ್ಲೂ ನೀರಿನ ಮಟ್ಟ ಕುಸಿದಿದೆ. ಬೇಸಿಗೆ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಆರಂಭವಾಗಿದೆ’ ಎಂದೂ ಅವರು ಅಳಲು ತೋಡಿಕೊಂಡರು. 
 
ಮಾರ್ಗಸೂಚಿ ಫಲಕವೇ ಇಲ್ಲ: ‘ನಮ್ಮ ಬಡಾವಣೆಯಲ್ಲಿ ಒಳ ರಸ್ತೆಗಳು ಸುಸ್ಥಿತಿಯಲ್ಲಿಲ್ಲ. ಒಳಚರಂಡಿ ಸೌಲಭ್ಯವೂ ಸಮರ್ಪಕವಾಗಿಲ್ಲ. ಅಲ್ಲದೇ ರಸ್ತೆಗಳಿಗೆ ಮಾರ್ಗಸೂಚಿ ಫಲಕವನ್ನೂ ಸರಿಯಾಗಿ ಹಾಕಿಲ್ಲ. ಹೀಗಾಗಿ ಹೊರಗಿನಿಂದ ಬರುವ ಜನರಿಗೆ ಮನೆಯ ವಿಳಾಸ ಹುಡುಕುವುದು ಕಷ್ಟವಾಗುತ್ತಿದೆ. ನಾವೇ ಮುಖ್ಯ ರಸ್ತೆಗೆ ಹೋಗಿ ಕರೆದುಕೊಂಡು ಬರುತ್ತಿದ್ದೇವೆ’ ಎನ್ನುತ್ತಾರೆ ಸರಸ್ವತಿ ಬಡಾವಣೆಯ ಸಿ ಬ್ಲಾಕ್‌ ನಿವಾಸಿ ಹಾಲಪ್ಪ. 
 
‘ವಾರದಲ್ಲಿ ಒಮ್ಮೆ ಕುಡಿಯುವ ನೀರು ಬಿಡಲಾಗುತ್ತಿದೆ. ಅದೂ ಒಂದೆರಡು ಗಂಟೆ ಮಾತ್ರ. ಕೊಳವೆಬಾವಿಯಲ್ಲೂ ಸಾಕಷ್ಟು ಪ್ರಮಾಣದಲ್ಲಿ ನೀರು ಬರುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ’ ಎಂದು ಹಾಲಪ್ಪ ಧ್ವನಿಗೂಡಿಸಿದರು. 
 
ಈ ವಾರ್ಡ್‌ನ ಬಡಾವಣೆಗಳಲ್ಲಿ ಕೆಲವೆಡೆ ನಿತ್ಯ ಹಾಗೂ ಕೆಲವೆಡೆ ಎರಡು ದಿನಗಳಿಗೆ ಒಮ್ಮೆ ಮನೆ ಮನೆಯಿಂದ ಕಸವನ್ನು ಸಂಗ್ರಹಿಸಲಾಗುತ್ತಿದೆ. ಸ್ವಲ್ಪ ಮಟ್ಟಿಗೆ ಬಡಾವಣೆಗಳು ಸ್ವಚ್ಛವಾಗಿರುವಂತೆ ಕಂಡರೂ ಅಲ್ಲಲ್ಲಿ ರಸ್ತೆ ಪಕ್ಕ ಕಸ ಎಸೆಯಲಾಗುತ್ತಿದೆ. ಹಂದಿಗಳ ಗುಂಪು ಕಂಡುಬರುತ್ತಿವೆ. 
 
**
ಪಾಲಿಕೆ ಸದಸ್ಯರು ಏನಂತಾರೆ?
ನನ್ನ ವಾರ್ಡ್‌ನಲ್ಲಿ ಇದುವರೆಗೆ ಅಂದಾಜು ₹8 ಕೋಟಿ ವೆಚ್ಚದಲ್ಲಿ ಮುಖ್ಯ ರಸ್ತೆಗೆ ಕಾಂಕ್ರೀಟ್‌ ಹಾಕಿರುವುದು, ಯುಜಿಡಿ ಕೆಲಸ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. 
 
ಶಿವಕುಮಾರಸ್ವಾಮಿ ಬಡಾವಣೆ ಕೊನೆ ಬಸ್‌ನಿಲ್ದಾಣದ ಬಳಿ ಹಾಗೂ ವಿನಾಯಕನಗರದಲ್ಲಿ ತಲಾ ₹ 25 ಲಕ್ಷ ವೆಚ್ಚದಲ್ಲಿ ಉದ್ಯಾನ ಅಭಿವೃದ್ಧಿ ಮಾಡಲಾಗಿದೆ. ಏಳು ಕಡೆ ಹೈಮಾಸ್ಟ್‌ ದೀಪ ಅಳವಡಿಸಲಾಗಿದೆ. ಕುಡಿಯುವ ನೀರಿಗಾಗಿ ನಾಲ್ಕು ಕಡೆ ಕೊಳವೆ ಬಾವಿ ಕೊರೆಸಿದ್ದೇನೆ. ಈ ಬಾರಿಯ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿಭಾಯಿಸುವುದು ಕಷ್ಟವಾಗಲಿದೆ.
 
ಏಪ್ರಿಲ್‌ ಬಳಿಕ ಅನುದಾನ ಲಭಿಸಿದಾಗ ಸರಸ್ವತಿನಗರ, ವಿನಾಯಕನಗರದ ಒಳ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. 
 
ಚಿಕ್ಕಮ್ಮಣ್ಣಿ ದೇವರಾಜ ಅರಸು ಬಡಾವಣೆಯ ಗುಡಿಸಲು ವಾಸಿಗಳಿಗೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದೇನೆ. ಜಾಗದ ಮಾಲೀಕತ್ವ ವಿವಾದದಲ್ಲಿರುವುದರಿಂದ ಇನ್ನೂ ಹಕ್ಕುಪತ್ರ ನೀಡಲು ಸಾಧ್ಯವಾಗಿಲ್ಲ. ನನ್ನ ವಾರ್ಡ್‌ನಲ್ಲಿರುವ ಟಿ.ವಿ. ಸ್ಟೇಶನ್‌ ಕೆರೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರು ₹ 2.50 ಕೋಟಿ ಅನುದಾನದಲ್ಲಿ ಅಭಿವೃದ್ಧಿಪಡಿಸುತ್ತಿದ್ದಾರೆ. 
– ಎಚ್‌. ಗುರುರಾಜ್‌  
36ನೇ ವಾರ್ಡ್‌ ಸದಸ್ಯ
 
**
ಹಕ್ಕು ಪತ್ರದ ನಿರೀಕ್ಷೆಯಲಿ...
ಟಿ.ವಿ ಸೆಂಟರ್‌ ಕೆರೆಯ ಪಕ್ಕದಲ್ಲೇ ಇರುವ ಚಿಕ್ಕಮ್ಮಣ್ಣಿ ದೇವರಾಜ ಅರಸು ಬಡಾವಣೆಯಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು ಗುಡಿಸಲಿನಂತಹ ಮನೆ ನಿರ್ಮಿಸಿಕೊಂಡು ಹಲವು ವರ್ಷಗಳಿಂದ ವಾಸಿಸುತ್ತಿವೆ. ಈ ಜಾಗ ಖಾಸಗಿ ವ್ಯಕ್ತಿಗೆ ಸೇರಿದೆ ಎನ್ನಲಾಗಿದ್ದು, ನಿವೇಶನದ ಹಕ್ಕು ಪತ್ರವನ್ನು ಕೊಡಿಸುವುದಾಗಿ ಚುನಾವಣೆ ಬಂದಾಗಲೆಲ್ಲ ಜನಪ್ರತಿನಿಧಿಗಳು ಭರವಸೆ ನೀಡಿ ಹೋಗುತ್ತಿದ್ದಾರೆ. ಆದರೆ, ಈ ನಿಟ್ಟಿನಲ್ಲಿ ಕೆಲಸ ಮಾಡಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡರು. 
 
‘ನಮ್ಮ ತಂದೆಯ ಕಾಲದಿಂದಲೂ ಇಲ್ಲಿಯೇ ನೆಲೆಸಿದ್ದೇವೆ. ಈ ಕೆರೆಯಲ್ಲಿ ನಮ್ಮ ತಂದೆ ಕೆಲಸ ಮಾಡುತ್ತಿದ್ದರು. ಈಗ ಅವರು ಬದುಕಿಲ್ಲ. ನಮಗೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ. ಯಾವಾಗ ನಮ್ಮನ್ನು ಒಕ್ಕಲೆಬ್ಬಿಸುತ್ತಾರೋ ಎಂಬ ಭೀತಿಯಲ್ಲೇ ಈ ಜೋಪಡಿಯಲ್ಲಿ ದಿನ ಕಳೆಯುತ್ತಿದ್ದೇವೆ’ ಎಂದು ಸ್ಥಳೀಯ ನಿವಾಸಿ ನಾಗರಾಜ್‌ ಅಲವತ್ತುಕೊಂಡರು. 
 
**
ವಾರ್ಡ್‌ ವಿಭಜನೆಗೆ ಯತ್ನ
36ನೇ ವಾರ್ಡ್‌ ಭೌಗೋಳಿಕವಾಗಿ ಅತಿ ದೊಡ್ಡ ವಾರ್ಡ್‌ ಆಗಿದೆ. ಶಿವಕುಮಾರಸ್ವಾಮಿ ಬಡಾವಣೆಯ 1 ಮತ್ತು 2ನೇ ಹಂತ, ಸರಸ್ವತಿನಗರದ ಎ, ಬಿ ಹಾಗೂ ಸಿ ಬ್ಲಾಕ್‌, ವಿನಾಯಕನಗರ, ದುರ್ಗಾಂಬಿಕಾ ಬಡಾವಣೆ, ಚಿಕ್ಕಮ್ಮಣ್ಣಿ ದೇವರಾಜ ಅರಸು ಬಡಾವಣೆ, ಜಯನಗರ ‘ಎ’ ಬ್ಲಾಕ್‌ನ ಭಾಗಶಃ ಪ್ರದೇಶಗಳು ಈ ವಾರ್ಡ್‌ ವ್ಯಾಪ್ತಿಗೆ ಒಳಪಟ್ಟಿವೆ. 4,000ಕ್ಕೂ ಹೆಚ್ಚು ಮನೆಗಳಿದ್ದು, 15,000ಕ್ಕೂ ಹೆಚ್ಚು ಜನಸಂಖ್ಯೆ ಇದೆ. 
 
ದೊಡ್ಡ ವಾರ್ಡ್‌ ಆಗಿರುವುದರಿಂದ ಪಾಲಿಕೆಯಿಂದ ಸಿಗುವ ಅನುದಾನವೊಂದರಲ್ಲೇ ಅಭಿವೃದ್ಧಿ ಕೆಲಸ ಕೈಗೊಳ್ಳುವುದು ಕಷ್ಟವಾಗಿದೆ. ಹೀಗಾಗಿ ಈ ವಾರ್ಡ್‌ ಅನ್ನು ವಿಭಜಿಸಿ ಎರಡು ವಾರ್ಡ್‌ಗಳನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿದ್ದು, ಮುಂದಿನ ಚುನಾವಣೆ ವೇಳೆಗೆ ಅದು ಕಾರ್ಯರೂಪಕ್ಕೆ ಬರುವ ಸಾಧ್ಯತೆಯಿದೆ ಎನ್ನುತ್ತಾರೆ ಪಾಲಿಕೆಯ ಸ್ಥಳೀಯ ಸದಸ್ಯ 
-ಎಚ್‌.ಗುರುರಾಜ್‌, 36ನೇ ವಾರ್ಡ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT