ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನಪದ ಕಲೆ ಬೆಳೆಸುವುದು ಎಲ್ಲರ ಕರ್ತವ್ಯ’

ಸುಗ್ಗಿ–ಹುಗ್ಗಿ ಕಾರ್ಯಕ್ರಮದಲ್ಲಿ ಜಾನಪದ ಕಲೆಗಳ ಅನಾವರಣ
Last Updated 31 ಜನವರಿ 2017, 6:30 IST
ಅಕ್ಷರ ಗಾತ್ರ

ಸಂಡೂರು: ಜನಪದರು ತಮ್ಮ ಮನ­ರಂಜನೆಗಾಗಿ ರೂಢಿಸಿಕೊಂಡು ಬೆಳೆಸಿದ ಜನಪದ ಕಲೆಗಳನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಕೇವಲ ಸರ್ಕಾರ ಅಥವ ಕಲಾವಿದರದ್ದು ಮಾತ್ರವಾಗಿರದೆ, ಎಲ್ಲ­ರದ್ದೂ ಆಗಿದೆ ಎಂದು ಕರ್ನಾಟಕ ಜಾನಪದ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಮಸೂತಿ ಅಭಿಪ್ರಾಯಪಟ್ಟರು.

ಪಟ್ಟಣದ ಎಪಿಎಂಸಿ ಹತ್ತಿರದ ಸರ್ಕಾರಿ ಪ್ರೌಢ ಶಾಲೆಯ ಬಯಲು ರಂಗಮಂದಿರದಲ್ಲಿ ಭಾನುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸುಗ್ಗಿ–ಹುಗ್ಗಿ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಸುಗ್ಗಿಯಲ್ಲಿ ಜಾನಪದ ಸಿರಿ ವಿಜೃಂಭಿ­ಸಿದೆ. ಜಾನಪದ ಕಲೆಗಳ ಉಳಿವಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ. ಕಲಾ­ವಿದರು ಸರ್ಕಾರದ ಮೇಲೆ ಅವಲಂಬಿತ­ರಾಗಿರದೇ, ಕಲೆಯ ಜೊತೆಗೆ ಯಾವು­ದಾದರು ಉದ್ಯೋಗವನ್ನು ಮಾಡಿ­­ಕೊಂಡು ಕಲೆಯನ್ನು ಮುಂದುವರಿಸಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಈ. ತುಕಾರಾಂ ಹಾಗೂ ಕಲಾವಿದ ಡಾ. ವಿ.ಟಿ. ಕಾಳೆ ಜಾನಪದ ಕಲೆಗಳ ಮಹತ್ವ ಮತ್ತು ಅವುಗಳ ಯಶಸ್ವಿ ಬೆಳವಣಿಗೆ ಕುರಿತು ವಿವರಿಸಿದರು.

ಪ್ರೇಕ್ಷಕರನ್ನು ಆಕರ್ಷಿಸಿದ ಜಾನಪದ ವಾಹಿತಿ: ಆರಂಭದಲ್ಲಿ ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರಮುಖ ರಸ್ತೆಗಳ ಮೂಲಕ ಸಾಗಿದ ಜಾನಪದ ವಾಹಿನಿಯ ಮೆರವಣಿಗೆಯಲ್ಲಿ ಕಹಳೆ ವಾದನ, ನಂದಿಧ್ವಜ, ನಾದಸ್ವರ, ವೀರಗಾಸೆ, ಡೊಳ್ಳುಕುಣಿತ, ಹಗಲು­ವೇಷ, ತಾಷರಂಡೋಲ್, ತಮಟೆ­ವಾದನ, ಕುದುರೆ ಕುಣಿತ, ಕಥಕ್ಕಳಿ ಗೊಂಬೆ ನೃತ್ಯ, ಕಂಗೀಲು ನೃತ್ಯ ಹಾಗೂ ಅಲಾಯಿ ಹೆಜ್ಜೆಮೇಳದವರು ಪ್ರಸ್ತುತ ಪಡಿಸಿದ ಜಾನಪದ ಕಲೆಗಳು ನೋಡು­ಗರ ಗಮನ ಸೆಳೆದವು. ರಸ್ತೆ ಪಕ್ಕದಲ್ಲಿ ಕಲಾ ಪ್ರಕಾರಗಳನ್ನು ನೋಡಿ ತಣಿದ ಪ್ರೇಕ್ಷಕರು ಕಲಾವಿದರ  ನೃತ್ಯವನ್ನು ಮೊಬೈಲ್‌­ಗಳಲ್ಲಿ ಸೆರೆ ಹಿಡಿದು ಸಂಭ್ರಮಿಸಿದರು.

ಮೆರವಣಿಗೆ ನಂತರ ವೇದಿಕೆಯಲ್ಲಿ ಕೆ. ಶಾಂತಬಾಯಿ ಮತ್ತು ಸಂಗಡಿಗರು, ಯಲ್ಲನಗೌಡ ಶಂಕರಬಂಡೆ ಮತ್ತು ಸಂಗಡಿಗರು, ಪ್ರಕಾಶ್ ಹೆಮ್ಮಾಡಿ, ಹಂಸಪ್ರಿಯ ನೃತ್ಯನಿಕೇತನ ತಂಡ, ಶಂಕ್ರಪ್ಪ ಬಾದಿಗಿ ಮತ್ತು ಸಂಗಡಿಗರು, ಶಿವಮ್ಮ ಮತ್ತು ಸಂಗಡಿಗರು, ದುರ್ಗಾದೇವಿ ಪ.ಜಾ ಮಹಿಳಾ ಜಾನಪದ ಕಲಾ ಸಂಘ ಹಾಗೂ ಗಜಾನನ ಯುವಕ ನಾಟ್ಯ ಕಲಾ ಸಂಘದವರು ಕ್ರಮವಾಗಿ ಪ್ರಸ್ತುತ ಪಡಿಸಿದ ಲಂಬಾಣಿ ನೃತ್ಯ, ಜಾನಪದ ಗೀತೆಗಳು, ಜಾನಪದ ಜಾದು, ಜಾನಪದ ನೃತ್ಯ, ಮೋರ್ಚಿಂಗ್ ವಾದನ, ಬುರ್ರಕಥೆ, ಸಂಪ್ರದಾಯ ಗೀತೆಗಳು ಹಾಗೂ ದ್ರೌಪದಿ ವಸ್ತ್ರಾಪಹರಣ ಬಯಲಾಟ ಪ್ರೇಕ್ಷಕರ ಮನಸೂರೆಗೊಂಡವು.

ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಗಂಗಾಬಾಯಿ ಚಂದ್ರನಾಯ್ಕ, ಪುರಸಭೆ ಉಪಾಧ್ಯಕ್ಷ ಕೆ.ವಿ. ಸುರೇಶ್, ಉಪ­ನ್ಯಾಸಕ ಸಿ.ಎಂ. ಶಿಗ್ಗಾವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ, ವಿನೋದ್, ಎಚ್. ಕುಮಾರ­ಸ್ವಾಮಿ, ಟಿ.ವೆಂಕಟೇಶ್ ವಿವಿಧ ಸಂಘಟನೆಗಳ ಮುಖಂಡರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT