ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಗಾರಿನಲ್ಲೂ ಬೆಳೆ ವಿಮೆಗೆ ರೈತರ ನಿರಾಸಕ್ತಿ

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ: ಸಮರ್ಪಕ ಪ್ರಚಾರ, ಪ್ರೋತ್ಸಾಹ, ಅರಿವು ಮತ್ತು ವಿಶ್ವಾಸದ ಕೊರತೆ
Last Updated 31 ಜನವರಿ 2017, 6:35 IST
ಅಕ್ಷರ ಗಾತ್ರ
ಚಿತ್ರದುರ್ಗ: ಎಷ್ಟೇ ಪ್ರಚಾರ ನೀಡಿದರೂ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಬೆಳೆ ವಿಮೆ ಮಾಡಿಸಲು ಜಿಲ್ಲೆಯ ರೈತರು ಎರಡು ಹಂಗಾಮಿನಲ್ಲೂ ಆಸಕ್ತಿ ತೋರಿಲ್ಲ!
 
ಕೇಂದ್ರ ಸರ್ಕಾರ ಬೆಳೆ ವಿಮೆ ಕುರಿತು ವ್ಯಾಪಕ ಪ್ರಚಾರ ಮಾಡಲಾಗಿದೆ ಎಂದು ಹೇಳುತ್ತಿದ್ದರೂ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ವಿಮೆ ನೋಂದಣಿ ಮಾಡಿಸಿದ್ದು 20 ಸಾವಿರ ರೈತರು ಮಾತ್ರ. ಹಿಂಗಾರು ಹಂಗಾಮಿನಲ್ಲಿ 1,855 ರೈತರಷ್ಟೇ ವಿಮೆ ಮಾಡಿಸಿದ್ದಾರೆ. ಬೆಳೆ ಸಾಲ ಪಡೆದವರು ವಿಮೆ ಮಾಡಿಸುವುದು ಕಡ್ಡಾಯ. ಹಾಗಾಗಿ ಈ ವಿಮೆ ಮಾಡಿಸಿದ ರೈತರಲ್ಲಿ ಮುಕ್ಕಾಲು ಭಾಗ ರೈತರು ಕೃಷಿ ಸಾಲ ಪಡೆದವರೇ ಆಗಿದ್ದಾರೆ. ಸಾಲ ನೀಡುವಾಗಲೇ ವಿಮಾ ಕಂತಿನ ಹಣವನ್ನು ಮುರಿದುಕೊಳ್ಳುವುದರಿಂದ ವಿಮಾ ರೈತರ ಸಂಖ್ಯೆ ಸಾವಿರ ದಾಟಿದೆ.
 
ನಾಲ್ಕಂಕೆ ದಾಟದ ಸಂಖ್ಯೆ: ಮುಂಗಾರು ಹಂಗಾಮಿನಲ್ಲಿ ಚಳ್ಳಕೆರೆ, ಚಿತ್ರದುರ್ಗ ಮತ್ತು ಹಿರಿಯೂರಿನಲ್ಲಿ 3ರಿಂದ 6 ಸಾವಿರದವರೆಗೆ ರೈತರು ವಿಮೆ ಮಾಡಿಸಿದ್ದಾರೆ. ಆದರೆ ಹಿಂಗಾರು ಹಂಗಾಮಿನಲ್ಲಿ ವಿಮೆ ಮಾಡಿಸಿದ ರೈತರ ಸಂಖ್ಯೆ ಯಾವ ತಾಲ್ಲೂಕಿನಲ್ಲೂ ನಾಲ್ಕಂಕೆ ದಾಟಿಲ್ಲ. ಮೊಳಕಾಲ್ಮುರು ತಾಲ್ಲೂಕಿನಲ್ಲಿ ಕೇವಲ 9 ರೈತರು ಮಾತ್ರ ವಿಮೆ ಮಾಡಿಸಿದ್ದಾರೆ. 
 
ಮೊಳಕಾಲ್ಮುರಿನಲ್ಲಿ 38 ಸಾವಿರ ಎಕರೆ ಕೃಷಿ ಭೂಮಿಯಿದೆ. ಅದರಲ್ಲಿ 3 ಸಾವಿರದಷ್ಟು ಭೂಮಿ ಕೊಳವೆಬಾವಿ ಆಶ್ರಿತವಾಗಿದೆ. ಈ ಭಾಗದಲ್ಲಿ  ಹಿಂಗಾರು ಬೆಳೆ ಕಡಿಮೆ. ನೀರಾವರಿ ಆಶ್ರಿತ ಕೃಷಿಕರಿಗೆ ಕೊಳವೆಬಾವಿಗಳಲ್ಲಿ ನೀರು ಬತ್ತಿದೆ. ಕೃಷಿಗಾಗಿ ಸಾಲ ಮಾಡಿ ರುವವರಲ್ಲಿ ಬೆರೆಳೆಣಿಕೆಯಷ್ಟು ಮಾತ್ರ ಬೆಳೆ ವಿಮೆ  ಪಾವತಿಸಿದ್ದಾರೆ. ‘ತಾಲ್ಲೂಕಿನಲ್ಲಿ ಬೆಳೆ ವಿಮೆ ಮಾಡಿಸುವ ಬಗ್ಗೆ ರೈತರಲ್ಲಿ ಸರಿಯಾದ ಅರಿವಿಲ್ಲ. ಜತೆಗೆ ಪರಿಹಾರ ಸಿಗುತ್ತದೆಂಬ ವಿಶ್ವಾಸವಿಲ್ಲ. ಪರಿಹಾರ ಪಡೆದ ಉದಾಹರಣೆಗಳೂ ಕಾಣುತ್ತಿಲ್ಲ. ಹೀಗಾಗಿ ವಿಮೆದಾರರ ಸಂಖ್ಯೆ ಕ್ಷೀಣಿಸಿದೆ’ ಎಂದು ರಾಂಪುರದ ಕೃಷಿಕ ಮಂಜುನಾಥ್ ಅಭಿಪ್ರಾಯಪಡುತ್ತಾರೆ. 
 
ಬ್ಯಾಂಕ್‌ಗಳ ನಿರುತ್ಸಾಹ: ಬ್ಯಾಂಕ್‌ಗಳು ಬೆಳೆ ಸಾಲ ನೀಡಿದ ರೈತರಿಂದ ವಿಮೆ ಪಾವತಿಸಿಕೊಳ್ಳುತ್ತವೆ. ಸಾಲದ ಹಣದಲ್ಲೇ ವಿಮಾ ಕಂತು ಕಡಿತ ಮಾಡಿಕೊಳ್ಳುತ್ತದೆ. ಸಾಲ ಪಡೆಯದ ರೈತರನ್ನು ಬ್ಯಾಂಕ್‌­ನವರು ಉತ್ತೇಜಿಸು ವುದಿಲ್ಲ. ರೈತರು ವಿಮೆಯಿಂದ ದೂರ ಸರಿಯಲು ಇದೂ ಒಂದು ಕಾರಣ ವಾಗಿದೆ’ ಎನ್ನುವುದು ಕೆಲವು ರೈತರ ಅಭಿಪ್ರಾಯ.
 
‘ವಿಮೆಯ ಬಗ್ಗೆ ಸಾಕಷ್ಟು ಪ್ರಚಾರ ಮಾಡಿದ್ದರೂ, ವಿಮೆ ಕಂತು ಪಾವತಿ ಸುವ ರೈತರ ಸಂಖ್ಯೆ ಕಡಿಮೆ ಇದೆ. ರೈತರು ವಿಮೆ ಕುರಿತು ಮಾಹಿತಿ ಪಡೆದು ಕೊಳ್ಳುವ ಅಗತ್ಯವಿದೆ’ ಎನ್ನುತ್ತಾರೆ ಮೊಳಕಾಲ್ಮುರು ತಾಲ್ಲೂಕು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ವಸಂತಕುಮಾರ್. 
 
‘ಬೆಳೆವಿಮೆ ಪಾವತಿಸಿದ ರೈತರಿಗೆ ಸಕಾಲಕ್ಕೆ ಪರಿಹಾರ ಸಿಕ್ಕಿಲ್ಲ. ಪ್ರಚಾರ ಮಾಡಿದರೂ, ಅದು ತಲುಪಬೇಕಾದ ರೈತರನ್ನು ತಲುಪಿಲ್ಲ. ಹೀಗಾಗಿ ವಿಮೆದಾರರ ಸಂಖ್ಯೆ ಕಡಿಮೆಯಾಗಿದೆ’ ಎನ್ನುವುದು ಹೊಸದುರ್ಗ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಆರ್.ಲಿಂಗರಾಜ್ ಅಭಿಪ್ರಾಯ. 
 
ಕೃಷಿ ಸೇರಿದಂತೆ ಬೆಳೆ ವಿಮೆಗೆ ಸಂಬಂಧಿಸಿದ ಇಲಾಖೆಗಳು ವಿಮೆ ಮಾಡಿಸಲು ರೈತರನ್ನು ಪ್ರೋತ್ಸಾಹಿಸ ದಿರುವುದು ರೈತರು ವಿಮೆ ಮಾಡಿಸದಿರಲು ಕಾರಣ ಎಂಬ ಆಕ್ಷೇಪಣೆಯೂ ಕೇಳಿಬಂದಿದೆ. ಯಾವ ತಾಲ್ಲೂಕಿನಲ್ಲಿ ಎಷ್ಟು ಬೆಳೆ ಸಾಲ ಕೃಷಿಕರಿದ್ದಾರೆ ಎಂಬ ಮಾಹಿತಿ ತಕ್ಷಣಕ್ಕೆ ಲಭ್ಯವಿಲ್ಲ. ಇಲಾಖೆಗಳನ್ನು ಕೇಳಿದರೆ ಬ್ಯಾಂಕ್‌ಗಳ ಕಡೆಗೆ ಕೈ ತೋರಿಸುತ್ತಾರೆ. ಬ್ಯಾಂಕ್‌ಗಳಲ್ಲಿ ಕೇಳಿದರೆ ತಕ್ಷಣ ಮಾಹಿತಿ ಸಿಗುವುದಿಲ್ಲ. ಸರಿಯಾದ ಪ್ರಚಾರ, ಇಲಾಖೆಗಳ ಪ್ರೋತ್ಸಾಹ, ಪರಿಹಾರ ಸಿಗುವ ವಿಶ್ವಾಸದ ಕೊರತೆಯಿಂದಾಗಿ ಬೆಳೆ ವಿಮೆ ಮಾಡಿಸಲು ರೈತರು ಹಿಂದೇಟು ಹಾಕುತ್ತಿದ್ದಾರೆ. 
 
**
‘ಸರ್ಕಾರವೇ ಕಂತು ಪಾವತಿಸಲಿ’
‘ಸಣ್ಣ ಮತ್ತು ಅತಿ ಸಣ್ಣ ಹಾಗೂ ಮಳೆಯಾಶ್ರಿತ ಕೃಷಿಕರ ಆದಾಯ ಕಡಿಮೆ. ಅಂಥ ಕೃಷಿಕರ ಪರವಾಗಿ ಸರ್ಕಾರವೇ ಬೆಳೆ ವಿಮೆ ಕಂತು ಪಾವತಿಸುವಂತಾಗಲಿ’ ಎಂದು ರೈತ ಮುಖಂಡ ಈಚಘಟ್ಟ ಸಿದ್ದವೀರಪ್ಪ ಒತ್ತಾಯಿಸುತ್ತಾರೆ. ಪ್ರಚಾರಕ್ಕೆ ವ್ಯಯಿಸುವ ಹಣದಲ್ಲಿ ಸಣ್ಣ ರೈತರ ಬೆಳೆ ವಿಮೆ ಕಂತು ಪಾವತಿಸಬಹುದು ಎಂದು ಅಭಿಪ್ರಾಯಪಡುತ್ತಾರೆ.

ರಾಂಪುರದ ಕೃಷಿಕ ಮಂಜುನಾಥ್, ‘ಬೆಳೆ ವಿಮೆ ಪಾವತಿಸಿದ ನಂತರ ಪರಿಹಾರ ಪಡೆಯುವ ಪ್ರಕ್ರಿಯೆ ಕುರಿತು ಅನೇಕ ರೈತರಿಗೆ ಸರಿಯಾದ ಮಾಹಿತಿ ಇಲ್ಲ. ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ’ ಎನ್ನುತ್ತಾರೆ.
 
**
ಬೆಳೆ ವಿಮೆ ಪಾವತಿಗೆ ಸರ್ಕಾರ ಗಡುವು ನೀಡಿದಂತೆ ಪರಿಹಾರ ವಿತರಣೆಗೂ ಗಡುವು ಕೊಟ್ಟರೆ ರೈತರೇ ಸ್ವಯಂ ಪ್ರೇರಣೆಯಿಂದ ವಿಮೆ ಮಾಡಿಸುತ್ತಾರೆ
– ಈಚಘಟ್ಟ ಸಿದ್ದವೀರಪ್ಪ, ರೈತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT