ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್‌–ಕರ್ನಾಟಕಕ್ಕೆ ಸಾಂಸ್ಕೃತಿಕ ಪ್ಯಾಕೇಜ್‌ ಅಗತ್ಯ

ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಕಪ್ಪಣ್ಣ ಶ್ರೀನಿವಾಸ ಸಲಹೆ
Last Updated 31 ಜನವರಿ 2017, 6:57 IST
ಅಕ್ಷರ ಗಾತ್ರ
ಕಲಬುರ್ಗಿ: ಹೈದರಾಬಾದ್‌ ಕರ್ನಾಟಕ ಭಾಗದ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಗೆ ಸೂಕ್ತ ಪ್ರಾತಿನಿಧ್ಯ, ಪ್ರೋತ್ಸಾಹ ಹಾಗೂ ಪ್ರಚಾರ ದೊರಕಿ­ಸಲು ಸರ್ಕಾರವು ‘ಸಾಂಸ್ಕೃತಿಕ ಪ್ಯಾಕೇಜ್‌’ ಘೋಷಿಸುವ ಅಗತ್ಯವಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಕಪ್ಪಣ್ಣ ಶ್ರೀನಿವಾಸ ಹೇಳಿದರು.
 
ನಗರದ ದಿ ಐಡಿಯಲ್ ಫೈನ್‌ ಆರ್ಟ್‌ ಸಂಸ್ಥೆಯಲ್ಲಿ ‘ದೃಶ್ಯಕಲೆ ಹಾಗೂ ನಾಟಕಗಳ ಅಂತರ ಸಂಬಂಧ’ ಕುರಿತು ಸೋಮವಾರ ಏರ್ಪಡಿಸಿದ್ದ ಸಂವಾದ­ದಲ್ಲಿ ಅವರು ಮಾತನಾಡಿದರು.
 
ಹೈದರಾಬಾದ್ ಕರ್ನಾಟಕ ಭಾಗ ಹಲವು ಸೌಲಭ್ಯಗಳಿಂದಾಗಿ ಹಿಂದುಳಿದಿದೆ ಎನ್ನುವ ಕೂಗಿದೆ. ಆದರೆ ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಈ ಭಾಗ ಹಿಂದುಳಿದಿದೆ ಎಂದು ಯಾರೂ ಒಪ್ಪುವುದಿಲ್ಲ. ದಿ ಐಡಿಯಲ್ ಫೈನ್‌ ಆರ್ಟ್‌ ಸಂಸ್ಥೆಯ ಮೂಲಕ ಹೊರಬಂದ ಅನೇಕ ಕಲಾವಿದರೂ ನಾಡಿನುದ್ದಕ್ಕೂ ಸಂಸ್ಥೆಯ ಹೆಸರು ಖ್ಯಾತಿಗೊಳಿಸಿರುವುದು ಇದಕ್ಕೊಂದು ಸಾಕ್ಷಿ ಎಂದರು.
 
ಈ ಭಾಗದ ಕಲಾವಿದರ ಕೂಗು ಬೆಂಗಳೂರಿಗೆ ತಲುಪುತ್ತಿಲ್ಲ. ಬೆಂಗಳೂರಿ­ನಲ್ಲಿರುವ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರಾಧಿಕಾರ ಮತ್ತು ಅಕಾಡೆಮಿಗಳಲ್ಲಿ ಬೀದರ್‌, ಕಲಬುರ್ಗಿಯಿಂದ ಪ್ರಾತಿ­ನಿಧ್ಯವೆ ಇಲ್ಲ. ರಾಯಚೂರು ಜಿಲ್ಲೆಯಲ್ಲಿ ಹಿಂದೂಸ್ತಾನಿ ಸಂಗೀತ ಕಲಾವಿದ­ರಿದ್ದಾರೆ. ಬೀದರ್‌ ಮತ್ತು ಕಲಬುರ್ಗಿ ಭಾಗದಲ್ಲಿ ದೊಡ್ಡಾಟ, ಸಣ್ಣಾಟ ಹಾಗೂ ದೃಶ್ಯಕಲಾವಿದರಿದ್ದಾರೆ. ಸಾಂಸ್ಕೃತಿಕ ಪ್ಯಾಕೇಜ್‌ ಮೂಲಕ ಇವುಗಳನ್ನು ಪ್ರಚುರಗೊಳಿಸಬೇಕಿದೆ ಎಂದು ಹೇಳಿದರು.
 
ದೃಶ್ಯಕಲಾವಿದರು ಹಾಗೂ ರಂಗ­ಕಲಾವಿದರು ಪರಸ್ಪರ ಬೆರೆಯಬೇಕು. ಎರಡೂ ಕಲಾಪ್ರಕಾರ ಬೇರೆಬೇರೆ­ಯಾದರೂ ಒಬ್ಬರು ಇನ್ನೊಬ್ಬರಿಂದ ಕಲಿಯುವುದು ಸಾಕಷ್ಟಿದೆ. ಜೀವನದ ವೈವಿಧ್ಯತೆ ಅರಿಯಲು ಚಿತ್ರಕಲಾವಿದರು ರಂಗ­ಕಲಾವಿದರ ಒಡನಾಟ ಬೆಳೆಸಬೇಕು. ಬದುಕಿನಲ್ಲಿ ಏಕಾಗ್ರತೆ ಕಲಿಯುವುದಕ್ಕೆ ರಂಗಭೂಮಿಯವರು ಚಿತ್ರಕಲಾವಿದರೊಂದಿಗೆ ಸ್ನೇಹಿತರಾಗಿರ­ಬೇಕು ಎಂದು ಸಲಹೆ ನೀಡಿದರು.
 
ನಾಟಕವು ನಿರ್ದೇಶಕನ ಮಾಧ್ಯಮ. ನಿರ್ದೇಶಕರು ತಮಗೆ ಬೇಕಾದಂತೆ ದೃಶ್ಯ, ಸಂಭಾಷಣೆ ಹಾಗೂ ಬೆಳಕುಗಳನ್ನು ಸಂಯೋಜನೆ ಮಾಡಿಕೊಳ್ಳಬಹುದು. ಹಲವಾರು ವ್ಯಕ್ತಿಗಳು ಅದರಲ್ಲಿ ತೊಡಗಿಸಿಕೊಂಡಿರುತ್ತಾರೆ. ದೃಶ್ಯಕಲೆಯು ಸಂಪೂರ್ಣ ಏಕವ್ಯಕ್ತಿಯನ್ನು ಒಳಗೊಂಡಿದ್ದು, ಇನ್ನೊಬ್ಬರ ನೆರವಿನ ಅಗತ್ಯ ಇರುವುದಿಲ್ಲ. ಎಲ್ಲರೂ ತಮ್ಮ ಇರುವಿಕೆ ಮೀರಿ ಜೀವನ ತಿಳಿಯಲು ಬೇರೆಯವರೊಂದಿಗೆ ಒಡನಾಡುವುದು ತುಂಬಾ ಅಗತ್ಯ ಎಂದು ತಿಳಿಸಿದರು.
 
ರಂಗಭೂಮಿ ಕಲಾವಿದರಿಗೆ ಹೋಲಿ­ಸಿ­ದರೆ ಚಿತ್ರಕಲಾವಿದರು ಹೊರ­ಜಗತ್ತಿಗೆ ಪರಿಚಯಿಸಿಕೊಳ್ಳಲು ಹಿಂಜರಿ­ಯುತ್ತಾರೆ. ಚಿತ್ರಕಲಾವಿದ ಎಂದು ಗುರುತಿಸಿಕೊಳ್ಳುವುದು ಕೆಲವರಿಗೆ ಕಷ್ಟ ಅನ್ನಿಸುತ್ತದೆ. ಚಿತ್ರಕಲೆಯನ್ನು ಗಂಭೀರ­ವಾಗಿ ಪರಿಗಣಿಸದಿರುವುದು ಕೂಡಾ ಅವರ ಹಿಂಜರಿಕೆಗೆ ಕಾರಣವಾಗಿರುತ್ತದೆ. ಮನಸ್ಸು ಬಿಚ್ಚಿ ಮಾತನಾಡಿದರೆ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
 
ಹಿರಿಯ ರಂಗಕರ್ಮಿ ಪ್ರಭಾಕರ ಸಾತಖೇಡ ಅತಿಥಿಯಾಗಿದ್ದರು. ದಿ ಐಡಿಯಲ್ ಫೈನ್‌ ಆರ್ಟ್‌ ಸಂಸ್ಥೆಯ ಅಧ್ಯಕ್ಷ ಡಾ.ಅಂದಾನಿ ವಿ.ಜಿ. ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ರಾಜಶೇಖರ್‌ ಎಸ್‌. ನಿರೂಪಿಸಿದರು.
 
**
ಹೈ- ಕ ಭಾಗದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಕುರಿತು ಬೆಂಗಳೂರಿನವರು ಈ ಭಾಗಕ್ಕೆ ಬಂದಾಗ ಅನುಕಂಪ ತೋರಿಸುತ್ತಾರೆ. ಮರಳಿ ಹೋದ ಬಳಿಕ ಮರೆಯುತ್ತಾರೆ
-ಸ್ವಾಮಿರಾವ್‌ ಕುಲಕರ್ಣಿ
ಸಾಹಿತಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT