ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕಿಪಿಕ್ಕಿ ಜನಾಂಗದ ಮೇಲೆ ದೌರ್ಜನ್ಯ

Last Updated 31 ಜನವರಿ 2017, 7:21 IST
ಅಕ್ಷರ ಗಾತ್ರ

ಹಾಸನ: ಬೇಲೂರು ತಾಲ್ಲೂಕು ಅಂಗಡಿಹಳ್ಳಿ ಬಯಲು ಪ್ರದೇಶದಲ್ಲಿ ವಾಸಿಸುತ್ತಿರುವ ಹಕ್ಕಿಪಿಕ್ಕಿ, ಬುಡಕಟ್ಟು ನಿವಾಸಿಗಳ ಮೇಲೆ ಹಲವು ವ್ಯಕ್ತಿಗಳಿಂದ ನಿರಂತರ ದೌರ್ಜನ್ಯ ನಡೆಯುತ್ತಿದ್ದು, ಜಿಲ್ಲಾಡಳಿತ ರಕ್ಷಣೆಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹಕ್ಕಿಪಿಕ್ಕಿ ಸಮುದಾಯ ಮುಖಂಡ ಹೂರಾಜ್ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಅಲೆದಾಟದ ಬದುಕನ್ನೇ ಇಷ್ಟು ವರ್ಷ ಮಾಡಿಕೊಂಡು ಬಂದಿದ್ದೇವೆ. ಈಗ ಇರಲು ಸ್ವಂತ ಸೂರು, ತುಂಡು ಭೂಮಿ ಕೇಳಿದರೆ ಹಲ್ಲೆ ನಡೆಸುತ್ತಿದ್ದಾರೆ. ಚಿಕ್ಕಮಗಳೂರು ಮತ್ತು ಹಾಸನ ಗಡಿ ಭಾಗದಲ್ಲಿ ನೂರಾರು ಎಕರೆ ಖಾಲಿ ಪ್ರದೇಶ ವಿದೆ. ಅಂಗಡಿಹಳ್ಳಿ ಗ್ರಾಮದಲ್ಲಿ ಈಗಾಗಲೇ ಗುಡಿಸಲು ನಿರ್ಮಿಸಿ ಕೊಂಡಿರುವ ನಮಗೆ ಶಾಶ್ವತ ನೆಲೆ ಕಲ್ಪಿಸಿ ಕೊಡ ಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಹೊನ್ನವಳ್ಳಿ ಕಾವಲಿನಲ್ಲಿ 738 ಎಕರೆ, ಅದೇ ಗ್ರಾಮದ ಸರ್ವೆ ನಂ. 7 ರಲ್ಲಿ 232 ಹೀಗೆ 1,600 ಎಕರೆ ಖಾಲಿ ಪ್ರದೇಶ ಅಲ್ಲಿದ್ದು, ಅದನ್ನು ನಮ್ಮ ಸಮುದಾಯಕ್ಕೆ ನೀಡಬೇಕು. ಭೂಮಿ ಖಾತೆ ಮಾಡಿಕೊಬೇಕು ಎಂದು ಉಪವಿಭಾಗಾಧಿಕಾರಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ 176 ಸದಸ್ಯರ ಅರ್ಜಿ ತಿರಸ್ಕೃತ ಗೊಂಡಿದೆ. ಅರಣ್ಯ ಹಕ್ಕು ಕಾಯ್ದೆಯ ಅರಿವಿಲ್ಲದ ಅಧಿಕಾರಿ ವರ್ಗ ನಮ್ಮನ್ನು ಬಲಿಪಶು ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಂಗಡಿಹಳ್ಳಿಯಲ್ಲಿ ವಾಸ್ತವ್ಯ ಇರುವ ಜಮೀನಿಗೆ ನುಗ್ಗಿ ಖಾಸಗಿ ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ. ಕೊಡಲಿ, ಮಚ್ಚಿನಿಂದ ಜೀವ ಬೆದರಿಕೆ ಒಡ್ಡುತ್ತಿದ್ದಾರೆ. ಎರಡು ದಿನಗಳ ಹಿಂದೆ ನಡೆದ ಗಲಭೆಯಲ್ಲಿ ಜನಾಂಗದ ಇಬ್ಬರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿಸಿದರು.

ಕಂದಾಯ ಕಾಯ್ದೆ 94 ಸಿ ಪ್ರಕಾರ ಅರ್ಜಿ ಸಲ್ಲಿಸಿದ್ದರೂ ಅಕ್ರಮ ಸಕ್ರಮ ಯೋಜನೆಯಡಿ ನಮಗೆ ಭೂಮಿ ಮಂಜೂರು ಮಾಡುತ್ತಿಲ್ಲ. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿ ಸಿಲ್ಲ. ಜಿಲ್ಲಾಧಿಕಾರಿ ವಿ.ಚೈತ್ರಾ ಅವರು ಸಮಸ್ಯೆಗೂ ತಮಗೂ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.

ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ಅವರು ಅಂಗಡಿ ಹಳ್ಳಿ ಹಕ್ಕಿಪಿಕ್ಕಿ ಸಮುದಾಯ ಜನರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಮರಿಜೋಸೆಫ್, ವಿಜಯಕುಮಾರ್, ಕೊಟ್ಟೂರು ಶ್ರೀನಿವಾಸ್  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT