ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಶಲ ತರಬೇತಿ ಕೇಂದ್ರಕ್ಕೆ 20 ಎಕರೆ ಭೂಮಿ

ಕೌಶಲ ಮೇಳ–2017 ತರಬೇತಿ ಕೇಂದ್ರದ ಉದ್ಘಾಟನೆ
Last Updated 31 ಜನವರಿ 2017, 9:25 IST
ಅಕ್ಷರ ಗಾತ್ರ
ದೊಡ್ಡಬಳ್ಳಾಪುರ: ತಾಲ್ಲೂಕಿನ ಕೈಗಾರಿಕಾ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಕೌಶಲ ತರಬೇತಿ ಕೇಂದ್ರಕ್ಕೆ ಈಗಾಗಲೇ 20 ಎಕರೆ ಮಂಜೂರಾಗಿದ್ದು, ಸಂಪುಟದ ಅನುಮೋದನೆ ಸಹ ದೊರಕಿದೆ. ಆದರೆ ಇದಕ್ಕೆ ಬೇಕಾಗುವ ₹ 328 ಕೋಟಿ ಬಿಡುಗಡೆಗೆ ಕಾನೂನು ತೊಡಕುಗಳಿದ್ದು ಕೇಂದ್ರದ ಕಾರ್ಮಿಕ ಸಚಿವಾಲಯ ಈ ಬಗ್ಗೆ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುವುದು ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.
 
ನಗರದ ಲಯನ್ಸ್ ಕ್ಲಬ್ ಕಟ್ಟಡದಲ್ಲಿ ಶ್ರೀರಾಮ 9 ಆರೋಗ್ಯ ಸೇವೆಗಳ ಕೇಂದ್ರದ ಸಹಯೋಗದಲ್ಲಿ ಕೇಂದ್ರ ಸರ್ಕಾರದ ‘ನ್ಯಾಷನಲ್ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್, ಸ್ಕಿಲ್ ಇಂಡಿಯಾ ಎಜುಕ್ಯಾಂಪ್ ಮತ್ತು ಪ್ರಧಾನ ಮಂತ್ರಿ ಕೌಶಲ ಅಭಿವೃದ್ಧಿ ಯೋಜನೆ’ ವತಿಯಿಂದ ಸೋಮವಾರ ನಡೆದ ಕೌಶಲ ಮೇಳ 2017 ತರಬೇತಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
 
ಕೈಗಾರಿಕಾ ಪ್ರದೇಶದಲ್ಲಿ ಓಬದೇನಹಳ್ಳಿಯಲ್ಲಿ  20 ಎಕರೆ ಮಂಜೂರಾಗಿದ್ದು, ಕೇಂದ್ರದ ಕಾರ್ಮಿಕ ಇಲಾಖೆಯಲ್ಲಿ ಕೋಟ್ಯಂತರ ರೂಪಾಯಿ ಹಣ ಭವಿಷ್ಯ ನಿಧಿಯಲ್ಲಿದೆ. ಆದರೆ ಇದನ್ನು ಕಟ್ಟಡಗಳ ನಿರ್ಮಾಣಕ್ಕೆ ವಿನಿಯೋಗಿಸುವ ಬಗ್ಗೆ ನಿಯಮಗಳ ತಿದ್ದುಪಡಿಯಾಗಬೇಕಿದೆ. ಯೋಜನೆಗೆ ವಿಶ್ವೇಶ್ವರಯ್ಯ ಕೌಶಲ ಅಭಿವೃದ್ದಿ ನಿಗಮದಿಂದ ಹಣ ಬಿಡುಗಡೆಯಾಗಿದೆ. ಕೇಂದ್ರದಿಂದ ಈ ಬಗ್ಗೆ ಇರುವ ಅಡೆತಡೆಗಳು ಬಗೆಹರಿಯಬೇಕಿದ್ದು, ಕೇಂದ್ರ ರೇಷ್ಮೆ ಮಂಡಲಿ ಅಧ್ಯಕ್ಷರು ಹಾಗೂ ಇಲ್ಲಿನ ಕೇಂದ್ರ ಸಚಿವರು ಈ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದರು.
 
ಕೇಂದ್ರ ರೇಷ್ಮೆ ಮಂಡಲಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಮಾತನಾಡಿ, ಇಂದಿನ ಪೀಳಿಗೆ ಸುಲಭದ ಕೆಲಸಗಳನ್ನು ಹುಡುಕುವಲ್ಲಿ ನಿರತರಾಗಿದ್ದು ಕೈಗೆ ಸಿಕ್ಕ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇಂದು ಉದ್ಯೋಗಗಳಿಗೆ  ಬರವಿಲ್ಲ. ಹಾಗೆಯೇ ಉದ್ಯೋಗಾಂಕ್ಷಿಗಳೂ ಸಾಕಷ್ಟು ಮಂದಿ ಇದ್ದಾರೆ. ಆದರೆ ಅದಕ್ಕೆ ಬೇಕಾದ ಕೌಶಲ ಹಾಗೂ ಸಾಧನೆಯ ಶ್ರಮ ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರ ಕೌಶಲ ಅಭಿವೃದ್ದಿ ಯೋಜನೆ ನಿರುದ್ಯೋಗಿಗಳಿಗೆ ವರದಾನವಾಗಿದೆ ಎಂದರು.
 
ಕೇಂದ್ರ ರೇಷ್ಮೆ ಮಂಡಲಿಯಲ್ಲಿ ರೇಷ್ಮೆ ಬೆಳೆಯ ಬೈವೋಲ್ಟೀನ್ ಕೇಂದ್ರಕ್ಕೆ ₹ 10 ಲಕ್ಷಗಳ ಸಹಾಯಧನ ನೀಡಲಾಗುತ್ತಿದೆ. ಆದರ ಸ್ಥಳೀಯರು ಅದನ್ನು ಬಳಸಿಕೊಳ್ಳುತ್ತಿಲ್ಲ. ರೇಷ್ಮೆ ಬೆಳೆಗಾರರ ಸಮಾವೇಶವನ್ನು ಫೆ.17ರಂದು ದೊಡ್ಡಬಳ್ಳಾಪುರದಲ್ಲಿ ನಡೆಸ ಲಾಗುವುದು ಎಂದರು.
 
ಶ್ರೀರಾಮ ಆಸ್ಪತ್ರೆ ನಿರ್ದೇಶಕ ಡಾ. ಎಚ್.ಜಿ. ವಿಜಯಕುಮಾರ್ ಮಾತನಾಡಿ, ಕೌಶಲ ಮೇಳದಲ್ಲಿ  ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅಂತಹವರಿಗೆ ಉಚಿತವಾಗಿ 2 ತಿಂಗಳು ಶಿಕ್ಷಣ ಮತ್ತು ತರಬೇತಿ ನೀಡಿ, ಪ್ರಮಾಣ ಪತ್ರವಿತರಿಸಿ, ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡಲಾಗುತ್ತದೆ ಎಂದರು.
 
‘ಸ್ಕಿಲ್ ಇಂಡಿಯಾ ಎಜುಕ್ಯಾಂಪ್‌’ನ ವ್ಯವಸ್ಥಾಪಕ ಶಶಿಕಾಂತ್ ರೆಡ್ಡಿ, ತರಬೇತಿ ಕುರಿತು ಮಾಹಿತಿ ನೀಡಿದರು. 
 
ಜಿ.ಪಂ ಸದಸ್ಯ ಎಚ್. ಅಪ್ಪಯ್ಯಣ್ಣ, ನಗರಸಭೆ ಅಧ್ಯಕ್ಷ ಕೆ.ಬಿ.ಮುದ್ದಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಮಲ್ಲೇಶ್, ತಾ.ಪಂ. ಅಧ್ಯಕ್ಷ ಎಚ್‌.ವಿ.ಶ್ರೀವತ್ಸ, ನಗರಸಭೆ ಸದಸ್ಯರಾದ ಮಮತ ನಾರಾಯಣಸ್ವಾಮಿ ಟಿ.ಎನ್. ಪ್ರಭುದೇವ್, ವೆಂಕಟರಾಜು, ತಾ.ಪಂ ಮಾಜಿ ಉಪಾಧ್ಯಕ್ಷ ಓಬದೇನಹಳ್ಳಿ ಮುನಿಯಪ್ಪ, ‘ಸ್ಕಿಲ್ ಇಂಡಿಯಾ ಎಜುಕ್ಯಾಂಪ್‌’ನ ವ್ಯವಸ್ಥಾಪಕಿ ಸುಮತಿ ಇದ್ದರು.
 
**
ಪ್ರತಿಯೊಂದು ಕ್ಷೇತ್ರದಲ್ಲಿಯೂ ಉದ್ಯೋಗಾವಕಾಶಗಳು ಲಭ್ಯ ಇವೆ. ಆದರೆ ಅದಕ್ಕೆ ಬೇಕಾದ ಕೌಶಲ ಪಡೆದುಕೊಳ್ಳಬೇಕಾದ ಅಗತ್ಯವಿದೆ
-ಕೆ.ಎಂ. ಹನುಮಂತರಾಯಪ್ಪ, ಕೇಂದ್ರ ರೇಷ್ಮೆ ಮಂಡಲಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT