ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಮೆಂಟ್ಸ್‌ ಬ್ಯಾಂಕ್ ವ್ಯವಸ್ಥೆಗೆ ಚಾಲನೆ

Last Updated 31 ಜನವರಿ 2017, 19:30 IST
ಅಕ್ಷರ ಗಾತ್ರ

ಪೇಮೆಂಟ್ಸ್‌ ಬ್ಯಾಂಕ್‌ ವ್ಯವಸ್ಥೆಯು, ಹಣ ಪಾವತಿ ಸೇವೆಗಳಿಗೆ ಸಂಬಂಧಿಸಿದಂತೆ ಬ್ಯಾಂಕಿಂಗ್ ಚಟುವಟಿಕೆಗಳನ್ನು  ಸೀಮಿತ ಪ್ರಮಾಣದಲ್ಲಿಯಷ್ಟೇ ನಡೆಸುವಂತಹುದು. ಮುಖ್ಯವಾಗಿ ಮೊಬೈಲ್‌ ಬ್ಯಾಂಕಿಂಗ್‌ ಸೇವೆಗೆ, ಸೂಪರ್‌ ಮಾರ್ಕೆಟ್‌ಗಳ ಸರಣಿಗೆ ಮತ್ತು ಸಣ್ಣ ಪ್ರಮಾಣದ ವಾಣಿಜ್ಯ ಸಂಸ್ಥೆಗಳ ವಹಿವಾಟಿಗೆ ಹಣ ಪಾವತಿ ಸೌಲಭ್ಯವನ್ನು ಒದಗಿಸುವುದಕ್ಕೆ ಒತ್ತು ನೀಡುವಂತಹದು ಆಗಿದೆ.

ಮೊಬೈಲ್‌ ಫೋನ್‌ನಲ್ಲಿ ನಾವು ಕರೆ ಮಾಡುವುದು, ಸಂದೇಶ ರವಾನೆ, ಅಂತರ್ಜಾಲ ಸಂಪರ್ಕ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಮೊದಲೇ ಹಣ ಪಾವತಿಸಿ (ಕರೆನ್ಸಿ ರೀಚಾರ್ಜ್‌) ಬಳಸಿಕೊಳ್ಳುವ ಹಾಗೆಯೇ ಸಣ್ಣ ಪ್ರಮಾಣದ ವಾಣಿಜ್ಯ ವಹಿವಾಟುಗಳಿಗೆ ಹಣ ಪಾವತಿಸುವುದಕ್ಕೆ, ಒಂದು ಮೊಬೈಲ್ ಫೋನ್‌ನಿಂದ ಇನ್ನೊಂದು ಮೊಬೈಲ್‌ ಫೋನ್‌ಗೆ ಅಥವಾ ನಮ್ಮ ಬ್ಯಾಂಕ್‌ ಖಾತೆಯಿಂದ ಇನ್ನೊಂದು ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲು ಪೇಮೆಂಟ್ ಬ್ಯಾಂಕ್‌ನಲ್ಲಿ ಅವಕಾಶವಾಗಲಿದೆ.

ಪೇಮೆಂಟ್ಸ್‌ ಬ್ಯಾಂಕ್‌ ಸ್ವರೂಪ
ಭಾರತೀಯ ರಿಸರ್ವ್‌ ಬ್ಯಾಂಕ್‌ 2015ರಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌, ಆದಿತ್ಯ ಬಿರ್ಲಾ,   ಪೇಟಿಎಂ, ಏರ್‌ಟೆಲ್‌ ಮತ್ತು ವೊಡಾಫೋನ್‌ ಸೇರಿದಂತೆ 11 ಕಂಪೆನಿಗಳಿಗೆ ಪೇಮೆಂಟ್ಸ್‌ ಬ್ಯಾಂಕ್‌ ಆರಂಭಿಸಲು ಅನುಮತಿ ನೀಡಿತ್ತು.

ದೇಶದಲ್ಲಿ ಇನ್ನೂ ಬ್ಯಾಂಕಿಂಗ್‌ ವ್ಯವಸ್ಥೆಗೆ ಒಳಪಡದ ಜನರಿಗೆ ಬ್ಯಾಂಕ್‌ಗಳಿಂದ ದೊರೆಯುವ ಸೌಲಭ್ಯಗಳನ್ನು ಕಲ್ಪಿಸುವುದೇ ಈ ಪೇಮೆಂಟ್ಸ್‌ ಬ್ಯಾಂಕ್‌ಗಳ ಮುಖ್ಯ ಉದ್ದೇಶವಾಗಿದೆ. ಬಹುತೇಕ ಈ ಜನ ಸಣ್ಣ ಪಟ್ಟಣಗಳು ಮತ್ತು ಗ್ರಾಮಗಳಲ್ಲಿ ವಾಸಿಸುವವರೇ ಹೆಚ್ಚಾಗಿದ್ದಾರೆ.

ಪೇಮೆಂಟ್‌ ಬ್ಯಾಂಕ್‌ನ ವಿಶೇಷಗಳು
1. ಮೊಬೈಲ್‌ ಬ್ಯಾಂಕ್‌ :
  ಪೇಮೆಂಟ್ಸ್‌ ಬ್ಯಾಂಕ್‌ಗಳು ಮೊಬೈಲ್‌ ಬ್ಯಾಂಕ್‌ಗಳ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಅಂದರೆ, ಹಾಲಿ ಇರುವ ಎಸ್‌ಬಿಐ, ಐಸಿಐಸಿಐ ಅಥವಾ ಎಚ್‌ಡಿಎಫ್‌ಸಿ ಬ್ಯಾಂಕ್‌ಗಳ ರೀತಿಯಲ್ಲಿ ವ್ಯವಸ್ಥಿತವಾದ ಸಂಪೂರ್ಣ ಸೌಲಭ್ಯಗಳನ್ನು ಹೊಂದಿರುವ ಶಾಖೆಗಳನ್ನು ಹೊಂದಿರುವುದಿಲ್ಲ. ಗ್ರಾಹಕರು ಮೊಬೈಲ್‌ ಆ್ಯಪ್‌ ಮೂಲಕೇ ತಮ್ಮ  ಬ್ಯಾಂಕ್‌ ಖಾತೆಯನ್ನು ನಿರ್ವಹಿಸುವ ಸೌಲಭ್ಯ ಇಲ್ಲಿ ಇರಲಿದೆ.

2. ಸಣ್ಣ ಉಳಿತಾಯ ಮತ್ತು ಸಾಲ:  ಪೇಮೆಂಟ್ಸ್‌ ಬ್ಯಾಂಕ್‌ ಖಾತೆಯಲ್ಲಿ ₹ 1 ಲಕ್ಷದವರೆಗೂ ಠೇವಣಿ ಇಡಬಹುದು. ಜತೆಗೆ, ಬ್ಯಾಂಕ್‌ಗಳು ₹ 1 ಲಕ್ಷದವರೆಗೂ ಸಾಲ ನೀಡಬಹುದು. ವಿಶೇಷವಾಗಿ ಸಣ್ಣ ವ್ಯಾಪಾರಿಗಳಿಗೆ ಈ ಸಾಲ ನೀಡಬಹುದು.

3. ಎಟಿಎಂ ಮತ್ತು ಡೆಬಿಟ್‌ ಕಾರ್ಡ್‌:   ಪೇಮೆಂಟ್ಸ್‌ ಬ್ಯಾಂಕ್‌ಗಳು ನೀಡುವ ಕಾರ್ಡ್‌ಗಳನ್ನು ಬ್ಯಾಂಕಿಂಗ್‌ ನೆಟ್‌ವರ್ಕ್‌ ಹೊಂದಿರುವ ಎಲ್ಲ ಸ್ಥಳಗಳಲ್ಲಿ ಬಳಸಬಹುದು. ಜತೆಗೆ ಯಾವುದೇ ಬ್ಯಾಂಕ್‌ನ ಎಟಿಎಂಗಳಿಂದ ಹಣ ಪಡೆಯಲು ಈ ಕಾರ್ಡ್‌ಗಳನ್ನು ಉಪಯೋಗಿಸಬಹುದು.

4. ಮೊಬೈಲ್‌ ಸೇವೆ: ಮೊಬೈಲ್‌ ಮೂಲಕ ವಹಿವಾಟು ನಡೆಸಲು ಇದು ಅನುಕೂಲ. ಬಿಲ್‌ಗಳ ಪಾವತಿ, ನಗದುರಹಿತ ಖರೀದಿ, ಚೆಕ್‌ರಹಿತ ಹಣ ಪಾವತಿಸಲು ಹಾಗೂ ಹಣ ವರ್ಗಾವಣೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಈ ಸೇವೆ ಒದಗಿಸುತ್ತಿದೆ.

5. ಉಳಿತಾಯ ಖಾತೆ ಮತ್ತು ಬಡ್ಡಿ: ಸಾಮಾನ್ಯ ಬ್ಯಾಂಕ್‌ಗಳಂತೆ ಉಳಿತಾಯ ಖಾತೆಯಲ್ಲಿ ಹಣ ಇದ್ದರೆ ಬಡ್ಡಿ ನೀಡುವ ವ್ಯವಸ್ಥೆ ಪೇಮೆಂಟ್ಸ್‌ ಬ್ಯಾಂಕ್‌ಗಳಲ್ಲೂ ಇದೆ.

ಏರ್‌ಟೆಲ್‌ ಪೇಮೆಂಟ್ಸ್‌ ಬ್ಯಾಂಕ್‌
ಮೊಬೈಲ್‌ ಸೇವಾ ಸಂಸ್ಥೆ ಏರ್‌ಟೆಲ್ ಈಗ  ಪೇಮೆಂಟ್ಸ್‌ ಬ್ಯಾಂಕ್‌ಗೂ ಕಾಲಿರಿಸಿದೆ. ದೇಶದ ಎಲ್ಲ ರಾಜ್ಯಗಳಲ್ಲಿ ಏರ್‌ಟೆಲ್‌ ಪೇಮೆಂಟ್ಸ್‌ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಏರ್‌ಟೆಲ್‌ ರಿಟೇಲ್‌ ಸ್ಟೋರ್‌ಗಳ ಮೂಲಕ 2.5 ಲಕ್ಷ   ಕೇಂದ್ರಗಳ ಮೂಲಕ ಸೇವೆ ಸಲ್ಲಿಸುವ ವ್ಯವಸ್ಥೆ ಮಾಡಲಾಗಿದೆ.

2016ರ ನವೆಂಬರ್‌ನಲ್ಲಿ ರಾಜಸ್ತಾನದಲ್ಲಿ ಮೊದಲ ಬಾರಿಗೆ ಪೇಮೆಂಟ್ಸ್‌ ಬ್ಯಾಂಕಿಂಗ್‌ ಸೇವೆಯನ್ನು ಏರ್‌ಟೆಲ್‌ ಆರಂಭಿಸಿತು. ಸೇವೆ ಆರಂಭಿಸಿದ ಎರಡೇ ವಾರಗಳಲ್ಲಿ ಒಂದು ಲಕ್ಷದಷ್ಟು ಗ್ರಾಹಕರು ಖಾತೆ ತೆರೆದಿದ್ದರು. ನಂತರ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಬ್ಯಾಂಕಿಂಗ್ ಸೇವೆ ಆರಂಭಿಸಲಾಯಿತು.

ಏರ್‌ಟೆಲ್‌ ಬ್ಯಾಂಕ್‌ನಲ್ಲಿ ಗ್ರಾಹಕರಾಗಿ ನೋಂದಾಯಿಸಿಕೊಳ್ಳಲು ಎಲ್ಲಿಗೂ ಹೋಗಬೇಕಾಗಿಲ್ಲ. ಯಾವುದೇ ದಾಖಲೆಗಳನ್ನು ಸಹ ಸಲ್ಲಿಸಬೇಕಾಗಿಲ್ಲ. ಇದೊಂದು ಕಾಗದರಹಿತ ವಹಿವಾಟು. ‘ಆಧಾರ್‌’  ಮೂಲಕ ಸುಲಭವಾಗಿ ಕೆಲವೇ ನಿಮಿಷಗಳಲ್ಲಿ ನೋಂದಾಯಿಸಿಕೊಳ್ಳಬಹುದು. ಭಾರತೀಯ ರಿಸರ್ವ್‌ ಬ್ಯಾಂಕ್‌ ಕಾಯ್ದೆ 1934ರ ಅನ್ವಯ ಸೆಕ್ಷನ್‌ 42 (6) ಅನ್ವಯ,  ಪೇಮೇಂಟ್ಸ್‌ ಬ್ಯಾಂಕ್‌ಗಳನ್ನು ಷೆಡ್ಯೂಲ್ಡ್‌ ಬ್ಯಾಂಕ್‌ಗಳು ಎಂದೇ ಪರಿಗಣಿಸಲಾಗಿದೆ.

ಆಧಾರ್‌ ಮತ್ತು ಪ್ಯಾನ್‌ ಕಾರ್ಡ್‌ ಹೊಂದಿರುವ  ಏರ್‌ಟೆಲ್‌ ಬಳಕೆದಾರರು ಇಂಟರ್‌ನೆಟ್‌ ಸಂಪರ್ಕ ಹೊಂದಿರುವ ಸ್ಮಾರ್ಟ್‌ಫೋನ್‌ ಮೂಲಕವೇ ಏರ್‌ಟೆಲ್‌ ಪೇಮೆಂಟ್ಸ್‌ ಬ್ಯಾಂಕ್‌ ಸದಸ್ಯರಾಗಬಹುದು. ಆಧಾರ್‌ ಆಧಾರಿತ ‘ಇ–ಕೆವೈಸಿ’ (ತಿಳಿಯಿರಿ ನಿಮ್ಮ ಗ್ರಾಹಕರು) ಮೂಲಕ ಕೆಲವೇ ನಿಮಿಷಗಳಲ್ಲಿ ಪೇಮೆಂಟ್ಸ್‌ ಬ್ಯಾಂಕ್‌ನ ಗ್ರಾಹಕರಾಗಬಹುದು.

ಜತೆಗೆ ಗರಿಷ್ಠ ₹ 1 ಲಕ್ಷ ಠೇವಣಿ ಇಡುವ ಮೂಲಕ ಪ್ರತಿ ವರ್ಷಕ್ಕೆ ಶೇಕಡ 7.25 ಬಡ್ಡಿ ಪಡೆಯಬಹುದು. ಹೊಸ ಗ್ರಾಹಕರು www.airtel.in/money  ಅಂತರ್ಜಾಲ ತಾಣದಲ್ಲಿ ಲಾಗಿನ್‌ ಆಗಬೇಕು. ಆರಂಭದಲ್ಲಿ ‘ಏರ್‌ಟೆಲ್‌ ಮನಿ’ ಅಂತರ್ಜಾಲ ತಾಣದಲ್ಲಿ ನಿಮ್ಮ ಖಾತೆ ಆರಂಭಿಸಲಾಗುತ್ತದೆ.

ಈಗಾಗಲೇ ‘ಏರ್‌ಟೆಲ್‌ ಮನಿ’ ಸದಸ್ಯರಾಗಿರುವವರು, ಪೇಮೆಂಟ್ಸ್ ಬ್ಯಾಂಕ್‌ ಸೌಲಭ್ಯ ಪಡೆಯಲು ತಮ್ಮ  ಆ್ಯಪ್‌  ನವೀಕರಿಸಬೇಕಷ್ಟೆ. ಅಂತರ್ಜಾಲ ತಾಣದಲ್ಲಿ ರೆಜಿಸ್ಟ್ರೇಷನ್‌ ಮೇಲೆ ಕ್ಲಿಕ್‌ ಮಾಡಿ ಮಾಹಿತಿ ಭರ್ತಿ ಮಾಡಬೇಕು. ನಿಮ್ಮ ಮೊಬೈಲ್‌ ಸಂಖ್ಯೆಯೇ ಪೇಮೆಂಟ್ಸ್‌ ಬ್ಯಾಂಕ್‌ ಖಾತೆಯ ಸಂಖ್ಯೆಯಾಗು ತ್ತದೆ. ವಹಿವಾಟಿನ ಭದ್ರತೆಯ ದೃಷ್ಟಿಯಿಂದ ‘ಎಂಪಿನ್‌’ (mPIN) ಮಾತ್ರ ಸೃಷ್ಟಿಸಬೇಕು. ಈ ‘ಎಂಪಿನ್‌’ ಯಾರಿಗೂ ಬಹಿರಂಗಪಡಿಸಬಾರದು. ರಹಸ್ಯವಾಗಿಡ ಬೇಕು.

ವೈಯಕ್ತಿಕ ಮಾಹಿತಿ ಭರ್ತಿ ಮಾಡಿದ ನಂತರ, ಒಂದು ಬಾರಿ ರಹಸ್ಯ ಸಂಖ್ಯೆಗೆ (OTP) ಚಾಲನೆ ನೀಡಬೇಕು. ಈ ಸಂಖ್ಯೆಯು ಬಳಕೆದಾರರನ್ನು ದೃಢೀಕರಿಸುತ್ತದೆ.‘ಒಟಿಪಿ’ ನಮೂದಿಸಿದ ನಂತರ, ಏರ್‌ಟೆಲ್‌ ಆ್ಯಪ್‌  ಬಳಸಲು ಯಶಸ್ವಿಯಾಗಿ ನೋಂದಣಿ ಪ್ರಕ್ರಿಯೆ ಪೂರ್ಣ ಗೊಳ್ಳಲಿದೆ. ಆನಂತರ ಪೇಮೆಂಟ್ಸ್‌ ಬ್ಯಾಂಕ್‌ನ ಮೊಬೈಲ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಈ ಆ್ಯಪ್‌ ಮೂಲಕವೇ ಮೊಬೈಲ್‌ ಕರೆ, ಡೇಟಾ ಬಳಕೆ, ವಾಲೆಟ್‌ ವಿವರ ಮತ್ತು ಪೇಮೆಂಟ್ಸ್‌ ಬ್ಯಾಂಕ್‌ ಸೇವೆ ಬಳಸಿಕೊಳ್ಳಬಹುದು.

‘ಮೈ ಏರ್‌ಟೆಲ್‌’ ಮೊಬೈಲ್‌ ವಾಲೆಟ್‌ ಆಗಿರುವುದರಿಂದ ಆ ಖಾತೆಯಲ್ಲಿ ಹಣ ಭರ್ತಿ ಮಾಡಿದ್ದರೆ ಅದಕ್ಕೆ ಬಡ್ಡಿ ಬರಲಾರದು. ಆ್ಯಪ್‌ನಲ್ಲಿ ಆಧಾರ್‌, ಪ್ಯಾನ್‌ ಮತ್ತು ವ್ಯಕ್ತಿಯೊಬ್ಬರ ಹೆಸರು ಸೂಚಿಸಿದ ನಂತರವೇ  (ನಾಮಿನಿ)  ಹಣ ಠೇವಣಿ ಇರಿಸಬಹುದು.

ಪೇಟಿಎಂ ಪೇಮೆಂಟ್ಸ್‌  ಬ್ಯಾಂಕ್‌
* ವ್ಯಾಪಾರಿಗಳು ₹ 50 ಸಾವಿರದಷ್ಟು ಮೊತ್ತವನ್ನು ನೇರವಾಗಿ ಬ್ಯಾಂಕ್‌ ಖಾತೆಗೆ ಜಮಾ ಮಾಡಬಹುದು.ಪ್ರತಿ ದಿನ  ಹಣವನ್ನು ಜಮಾ ಮಾಡುವ ಪ್ರಕ್ರಿಯೆ ನಡೆಯುತ್ತದೆ. ಇದಕ್ಕಾಗಿ ಯಾವುದೇ  ಹೆಚ್ಚುವರಿ ಶುಲ್ಕ ಇರುವುದಿಲ್ಲ. 

* ಬೆರಳಚ್ಚು ಅನ್ನು ಪಾಸ್‌ವರ್ಡ್‌ ಆಗಿ ಬಳಸುವ ಸೌಲಭ್ಯವನ್ನು ಪೇಟಿಎಂ ಕಲ್ಪಿಸಿದೆ. ಇದು ಸುಲಭ ಮತ್ತು ತ್ವರಿತಗತಿಯಲ್ಲಿ ನಡೆಯುವ ಪ್ರಕ್ರಿಯೆಯಾಗಿದ್ದು, ಶೇಕಡ 100ರಷ್ಟು ಸುರಕ್ಷಿತವಾಗಿದೆ.

* ಜತೆಗೆ ಹಣ ಸ್ವೀಕರಿಸುವವರ ಪೇಟಿಎಂ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಪಾವತಿಸುವ ವ್ಯವಸ್ಥೆಯೂ ಇದೆ.

* ಪೇಟಿಎಂ ಬಳಕೆದಾರರು ಈಗ ‘ಪೇಟಿಎಂ ಕಮ್ಯುನಿಟಿ ಫೋರಂ’ ಆಯ್ಕೆಯನ್ನೂ ಬಳಸಬಹುದು. ಈ ವ್ಯವಸ್ಥೆ ಮೂಲಕ ಯಾವುದೇ ರೀತಿಯ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು. ಸುಮಾರು 1 ಕೋಟಿ ಬಳಕೆದಾರರು ಈ ವ್ಯವಸ್ಥೆ ಬಳಸಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT