ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ಫ್ಯಾಷನ್‌ಗೆ ‘ವೂನಿಕ್‌’

Last Updated 31 ಜನವರಿ 2017, 19:30 IST
ಅಕ್ಷರ ಗಾತ್ರ

ಅಂತರ್ಜಾಲ ತಾಣದಲ್ಲಿನ ಇ–ಕಾಮರ್ಸ್ ಮಳಿಗೆಗಳು ಮತ್ತು ಈ ಖರೀದಿ ತಾಣಗಳ ಮೊಬೈಲ್‌ ಆ್ಯಪ್‌ಗಳಿಂದಾಗಿ ಗ್ರಾಹಕರ ಫ್ಯಾಷನ್‌ ಕನಸುಗಳಿಗೆ ಹೊಸ ರೆಕ್ಕೆಪುಕ್ಕಗಳು ಬಂದಿವೆ. ಕುಳಿತಲ್ಲಿಯೇ ತಮಗಿಷ್ಟದ ಸಿದ್ಧ ಉಡುಪು, ವಸ್ತ್ರ, ಸೀರೆ, ಒಳ ಉಡುಪು,  ಸೌಂದರ್ಯ ಪ್ರಸಾಧನ,  ಬ್ಯಾಗ್‌, ಪಾದರಕ್ಷೆ, ಕೈಗಡಿಯಾರ, ಕೃತಕ ಆಭರಣ ಮತ್ತಿತರ ಅಗತ್ಯಗಳನ್ನೆಲ್ಲ ಖರೀದಿಸುವುದು ಹೆಚ್ಚು ಸುಲಭವಾಗಿದೆ.

ಸದ್ಯಕ್ಕೆ ಎಲ್ಲೆಡೆ ಫ್ಯಾಷನ್‌ ಮಂತ್ರ ಜೋರಾಗಿ ಜಪಿಸುತ್ತಿರುವುದು ಕಂಡು ಬರುತ್ತಿದೆ. ಆಕರ್ಷಕವಾಗಿ  ಕಾಣಲು ಬಹುತೇಕ ಪ್ರತಿಯೊಬ್ಬರೂ ಹವಣಿಸುತ್ತಿದ್ದಾರೆ. ಅವರ ಈ ಅಭಿರುಚಿಗೆ ಫ್ಯಾಷನ್‌ ಉತ್ಪನ್ನಗಳೂ ನೆರವಾಗುತ್ತಿವೆ.  ತಂತ್ರಜ್ಞಾನವೂ ಮೊಬೈಲ್‌ ಆ್ಯಪ್‌ ರೂಪದಲ್ಲಿ ಇಲ್ಲಿ ಮಾರಾಟಗಾರರ ಮತ್ತು ಗ್ರಾಹಕರ ನೆರವಿಗೆ ಬಂದಿದೆ.

ಅಂದವಾಗಿ ಕಾಣುವ ಪ್ರವೃತ್ತಿ ಪ್ರತಿಯೊಬ್ಬರಲ್ಲೂ ಬೆಳೆಯುತ್ತಿದೆ. ಅದಕ್ಕೆ ಆನ್‌ಲೈನ್‌ ಫ್ಯಾಷನ್‌ ತಾಣಗಳೂ ನೀರೆರೆಯುತ್ತಿವೆ.  ಗೃಹಿಣಿಯರಲ್ಲಿಯೂ  ಆ್ಯಪ್‌ ಬಳಕೆ ಪ್ರವೃತ್ತಿ ಹೆಚ್ಚುತ್ತಿದೆ. ಬೇಡಿಕೆಗೆ ತಕ್ಕಂತೆ ಆಫ್‌ಲೈನ್‌ ಮಾರುಕಟ್ಟೆಯೂ  ವಿಸ್ತರಣೆ ಆಗುತ್ತಿದೆ.

ಮಳಿಗೆಗಳಿಂದ ಮಳಿಗೆಗೆ ಸುತ್ತು ಹಾಕಲು ಸಮಯ ವ್ಯರ್ಥ ಮಾಡದೇ ಫ್ಯಾಷನ್‌ ಪರಿಕರಗಳನ್ನೆಲ್ಲ ಬೆರಳ ತುದಿಯಲ್ಲಿಯೇ ಖರೀದಿಸುವ ಸೌಲಭ್ಯವು ಗ್ರಾಹಕರ ಫ್ಯಾಷನ್‌ ಹಸಿವನ್ನು ಇನ್ನಷ್ಟು ಹೆಚ್ಚಿಸಿದೆ.  ಗ್ರಾಹಕರು ತಮ್ಮ ಫ್ಯಾಷನ್‌ ಅಭಿರುಚಿಯನ್ನು ಈಗ ತುಂಬ ಸುಲಭವಾಗಿ ಈಡೇರಿಸಿಕೊಳ್ಳಬಹುದಾಗಿದೆ. 

ಆನ್‌ಲೈನ್‌ ಮಾರುಕಟ್ಟೆಯಲ್ಲಿನ ಇಂತಹ ಅವಕಾಶ ಬಾಚಿಕೊಳ್ಳಲು 2013ರಲ್ಲಿ ಬೆಂಗಳೂರಿನಲ್ಲಿ ಅಸ್ತಿತ್ವಕ್ಕೆ ಬಂದ ಇ–ಕಾಮರ್ಸ್‌ ತಾಣ ವೂನಿಕ್‌ ಡಾ ಟ್‌ ಕಾಮ್‌ (Voonik.com) ಮತ್ತು ಅದರ ಇತ್ತೀಚಿನ ಅವತಾರ ವೂನಿಕ್‌ ಮೊಬೈಲ್‌ ಆ್ಯಪ್‌, ಮಹಾನಗರಗಳಾಚೆ ತನ್ನ ಪ್ರಭಾವ ಬೀರಿ ಯಶಸ್ಸಿನ ಹಾದಿಯಲ್ಲಿ ಸಾಗಿದೆ.

ಗ್ರಾಹಕರು ತಮ್ಮ ಮೈಬಣ್ಣ, ಎತ್ತರ,   ತೂಕ ಮತ್ತಿತರ ವಿವರಗಳನ್ನು ಒದಗಿಸಿದರೆ ಅದಕ್ಕೆ ಸರಿಯಾಗಿ ಹೊಂದಾಣಿಕೆಯಾಗುವ ವಸ್ತ್ರಗಳನ್ನು ಆನ್‌ಲೈನ್‌ ತಾಣದಲ್ಲಿ, ಮೊಬೈಲ್‌ ಆ್ಯಪ್‌ನಲ್ಲಿಯೇ ಪರಿಚಯಿಸಿ   ಮಳಿಗೆಯಲ್ಲಿ ಖರೀದಿಸುವಂತಹ ಅನುಭವವನ್ನೇ ಒದಗಿಸುವ ವಿಶಿಷ್ಟ ಆನ್‌ಲೈನ್‌ ತಾಣ ಇದಾಗಿದೆ.

ಆರಂಭದಲ್ಲಿ ಮಹಿಳೆಯರನ್ನೇ ಕೇಂದ್ರವಾಗಿ ಇರಿಸಿಕೊಂಡು  ಈ ನವೋದ್ಯಮ (Voonik) ಆರಂಭಿಸಲಾಗಿತ್ತು. ಇತ್ತೀಚಿಗೆ ಪುರುಷರಿಗಾಗಿಯೂ ‘ಮಿಸ್ಟರ್‌ ವೂನಿಕ’ (Mr Voonik) ಹೆಸರಿನ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ.

ಫ್ಲಿಪ್‌ಕಾರ್ಟ್‌, ಅಮೆಜಾನ್‌ ಮತ್ತಿತರ ಆನ್‌ಲೈನ್‌ ಖರೀದಿ ತಾಣಗಳು ಬ್ರ್ಯಾಂಡೆಡ್‌ ಉತ್ಪನ್ನಗಳಿಗೆ ಮತ್ತು  ಮಹಾನಗರ ಕೇಂದ್ರಿತ ವಹಿವಾಟಿಗೆ ಆದ್ಯತೆ ನೀಡಿದ್ದರೆ, ವೂನಿಕ್‌ ಬ್ರ್ಯಾಂಡೆಡ್‌ರಹಿತ ಅಂದರೆ ಅಷ್ಟೇನೂ ಜನಪ್ರಿಯವಲ್ಲದ ಆದರೆ, ಉತ್ತಮ ಗುಣಮಟ್ಟದ  ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲು ಮತ್ತು ಎರಡನೆ ಹಂತದ ನಗರಗಳಲ್ಲಿನ ಗ್ರಾಹಕರ ಮನಗೆಲ್ಲುವ  ನಿಟ್ಟಿನಲ್ಲಿ ಈ ನವೋದ್ಯಮ ಕಾರ್ಯ ನಿರ್ವಹಿಸುತ್ತಿದೆ.

ಹೆಚ್ಚುವರಿ ವೇದಿಕೆಗಳಾದ ‘ಮಿಸ್ಟರ್‌ ವೂನಿಕ್‌’ ಮತ್ತು ‘ವಿಲಾರಾ’ದ ನೆರವಿನಿಂದ ಸಂಸ್ಥೆಯು  ಇತರ ಫ್ಯಾಷನ್‌ ಇ–ಕಾಮರ್ಸ್‌ ತಾಣಗಳಾದ ಮಿಂತ್ರಾ ಮತ್ತು ಜಬಾಂಗ್‌ಗಳಿಗೆ ನೇರ ಸ್ಪರ್ಧೆ ಒಡ್ಡಲು ಮುಂದಾಗಿದೆ. 2013ರಲ್ಲಿ ಆರಂಭಗೊಂಡಿರುವ ವೂನಿಕ್‌ಗೆ ಬ್ರ್ಯಾಂಡೆಡ್‌ ರಹಿತ ವಹಿವಾಟಿನಲ್ಲಿ ಸದ್ಯಕ್ಕೆ ಪ್ರಬಲ ಪ್ರತಿಸ್ಪರ್ಧಿ ಇಲ್ಲ.

ದೇಶಿ ಇ–ಕಾಮರ್ಸ್‌ ಮಾರುಕಟ್ಟೆಯಲ್ಲಿ ಫ್ಲಿಪ್‌ಕಾರ್ಟ್‌, ಸ್ನ್ಯಾಪ್‌ಡೀಲ್‌ಗಳಿಗೆ ಜಾಗತಿಕ ದೈತ್ಯ ಸಂಸ್ಥೆ  ಅಮೆಜಾನ್‌ ತೀವ್ರ ಸ್ಪರ್ಧೆ ಒಡ್ಡುತ್ತಿರುವ ಹೊತ್ತಿನಲ್ಲಿ, ವೂನಿಕ್‌ ಕೂಡ ಹೆಚ್ಚುವರಿ ಬಂಡವಾಳ ಹೂಡಿಕೆ ಮಾಡಿ  ಬ್ರ್ಯಾಂಡೆಡ್‌ರಹಿತ ಉತ್ಪನ್ನಗಳ ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳುವ ಸರ್ವ ಪ್ರಯತ್ನ ಮಾಡುತ್ತಿದೆ.

ವ್ಯಕ್ತಿತ್ವ, ಬಜೆಟ್‌ ಮತ್ತು ಜೀವನಶೈಲಿಗೆ ಅನುಗುಣವಾದ ಫ್ಯಾಷನ್‌ ಉತ್ಪನ್ನಗಳನ್ನು ಖರೀದಿಸುವುದನ್ನು ‘ವೂನಿಕ್‌’ ಸುಲಭಗೊಳಿಸಿದೆ.  ಖರೀದಿದಾರ ಸ್ನೇಹಿ ಆ್ಯಪ್‌ ನೆರವಿನಿಂದ, ಬೇಕಾದ ಪರಿಕರಗಳನ್ನು ಮೊದಲೇ ಹಣ ಕೊಟ್ಟು ಇಲ್ಲವೆ ಮನೆ ಬಾಗಿಲಿಗೆ ಸರಕು ಬಂದಾಗ ದುಡ್ಡು ಪಾವತಿಸುವ ಸೌಲಭ್ಯ ಒದಗಿಸಿ ಖರೀದಿ ಪ್ರಕ್ರಿಯೆಯನ್ನು ತುಂಬ ಸರಳಗೊಳಿಸಿದೆ. ಮನೆ ಬಾಗಿಲಿಗೆ ಬಂದ ಸರಕು ಹಲವಾರು ಕಾರಣಗಳಿಗೆ ಇಷ್ಟವಾಗದಿದ್ದರೆ ಸುಲಭವಾಗಿ ಮರಳಿಸುವ ಅವಕಾಶವೂ ಇಲ್ಲಿದೆ.

‘ಖರೀದಿದಾರರಿಗೆ ಮಳಿಗೆಯಲ್ಲಿ  ದೊರೆಯುವಂತಹ ಅನುಭವವನ್ನೇ ಮೊಬೈಲ್‌ ಆ್ಯಪ್‌ನಲ್ಲಿ  ತಂತ್ರಜ್ಞಾನದ  ನೆರವಿನಿಂದ ಒದಗಿಸಲಾಗುತ್ತಿದೆ. ವೂನಿಕ್‌ ಆ್ಯಪ್‌, ಮಹಿಳಾ ಕೇಂದ್ರಿತ ಫ್ಯಾಷನ್‌ ಮಳಿಗೆಯಾಗಿದ್ದು, ಈಗ  ಪುರುಷರ  ಫ್ಯಾಷನ್‌ ಅಗತ್ಯಗಳನ್ನು ಪೂರೈಸುವುದರ ಕಡೆಗೂ ಗಮನ ಹರಿಸಿದೆ. ಈ ಉದ್ದೇಶಕ್ಕೆ  ಆರು ತಿಂಗಳ ಹಿಂದೆ ‘ಮಿಸ್ಟರ್‌ ವೂನಿಕ್‌’ ಹೆಸರಿನ ಆ್ಯಪ್‌ ಅಭಿವೃದ್ಧಿಪಡಿಸಿದೆ. ಗೂಗಲ್ ಪ್ಲೇ ಸ್ಟೋರ್‌ನ ಜನಪ್ರಿಯ ಆ್ಯಪ್‌ಗಳಲ್ಲಿ ‘ವೂನಿಕ್‌’ ಕೂಡ ಒಂದಾಗಿದೆ’   ಎಂದು ಸಂಸ್ಥೆಯ ಸಿಒಒ ರಘು ಅವರು ಅಭಿಪ್ರಾಯಪಡುತ್ತಾರೆ.

‘ಬಹುತೇಕ ಸರಕು ಬ್ರ್ಯಾಂಡೆಡ್‌ ಅಲ್ಲದ ಸರಕು ಆಗಿರುವುದು,  ತಯಾರಕರಿಂದ ನೇರ ಖರೀದಿ  ಮತ್ತು ಮಧ್ಯವರ್ತಿಗಳ ಹಾವಳಿ ಇಲ್ಲದಿರುವುದರಿಂದ ದರಗಳು – ಶೇ 30 ರಿಂದ ಶೇ 40ರಷ್ಟು ಅಗ್ಗ ಇರಲಿವೆ.

‘ಮಹಾನಗರಗಳಿಗಿಂತ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿನ ಗ್ರಾಹಕರ ಮನ ಗೆಲ್ಲುವಲ್ಲಿ ಈ ತಾಣ ಹೆಚ್ಚು ಯಶಸ್ವಿಯಾಗಿದೆ.  ಒಟ್ಟು ವಹಿವಾಟಿನಲ್ಲಿ  ಎರಡನೆ ಹಂತದ ನಗರಗಳ ಪಾಲು ಶೇ 60 ರಿಂದ ಶೇ 70ರಷ್ಟು ಇದೆ. ದಕ್ಷಿಣ ಭಾರತದಲ್ಲಿ  ಕರ್ನಾಟಕ ಮತ್ತು  ಆಂಧ್ರಪ್ರದೇಶ ರಾಜ್ಯಗಳು  ಮುಂಚೂಣಿಯಲ್ಲಿ ಇವೆ’ ಎಂದು ಹೇಳುತ್ತಾರೆ.

‘ಪ್ರಾದೇಶಿಕ ಭಾಷೆಯಲ್ಲಿ ಆ್ಯಪ್‌  ಅಭಿವೃದ್ಧಿಪಡಿಸಲಾಗಿಲ್ಲ. ಆದರೆ, ಆ್ಯಪ್‌ ಬಳಕೆ ತುಂಬ ಸರಳವಾಗಿದೆ. ಜತೆಗೆ ಉಚಿತ   ಕರೆ ಕೇಂದ್ರದಲ್ಲಿ  ಎಲ್ಲ ಭಾಷೆಗಳಲ್ಲಿ ಸಂವಹನ ಸೌಲಭ್ಯ ಇದೆ.

‘ನೇಕಾರರು ಸೇರಿದಂತೆ ವಿವಿಧ ಬಗೆಯ ಫ್ಯಾಷನ್‌ ಉತ್ಪನ್ನಗಳ ತಯಾರಕರು  ಇ–ಕಾಮರ್ಸ್‌ ವಹಿವಾಟಿನ ಪ್ರಯೋಜನ ಪಡೆಯಲು ಮುಂದೆ ಬರಬೇಕಾಗಿದೆ. ತಯಾರಕರು ನಮಗೆ ಫೋನ್‌ ಮಾಡಿದರೆ ಸಾಕು. ನಾವೇ ಆನ್‌ಲೈನ್‌ನಲ್ಲಿ ಆ ಸರಕು ಗ್ರಾಹಕರ ಗಮನ ಸೆಳೆಯುವ ರೀತಿಯಲ್ಲಿ ಪ್ರದರ್ಶನಗೊಳ್ಳುವಂತೆ, ವಹಿವಾಟು ಕುದುರುವಂತೆ ಮಾಡುತ್ತೇವೆ.

‘ಜನರ ಅಭಿರುಚಿಗಳು ವೇಗವಾಗಿ ಬದಲಾಗುತ್ತಿವೆ. ಅದಕ್ಕೆ ತಕ್ಕಂತೆ ನಾವು ಕೂಡ  ವಹಿವಾಟಿನ ಸ್ವರೂಪ ಬದಲಿಸಿಕೊಳ್ಳಬೇಕಾದ ಸವಾಲು ಎದುರಾಗಿದೆ. ನೋಟು ರದ್ದತಿಯಿಂದ ಗೃಹಿಣಿಯರ ಬಳಿ ಇದ್ದ ನಗದು ಕರಗಿದ್ದರೂ, ನಗದು ರಹಿತ ವಹಿವಾಟಿನ ಕಾರಣಕ್ಕೆ   ಬ್ಯಾಂಕ್‌ ಖಾತೆಗಳ ಸಂಖ್ಯೆ  ಹೆಚ್ಚುತ್ತಿವೆ.  ಇದು ಆನ್‌ಲೈನ್‌ ವಹಿವಾಟು ಇನ್ನಷ್ಟು ವಿಸ್ತರಣೆಗೊಳ್ಳಲು ನೆರವಾಗಲಿದೆ’ ಎಂದೂ ರಘು ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಮಾಹಿತಿಗೆ  Voonik.com ತಾಣಕ್ಕೆ ಭೇಟಿ ನೀಡಬಹುದು.

ಆನ್‌ಲೈನ್‌ ಮಾರುಕಟ್ಟೆಯ ಚಿತ್ರಣ
* ₹ 4.76 ಲಕ್ಷ ಕೋಟಿ ದಕ್ಷಿಣ ಭಾರತದಲ್ಲಿನ  ಸಿದ್ಧ ಉಡುಪು ಮತ್ತು ಜೀವನಶೈಲಿ ಉತ್ಪನ್ನಗಳ ಮಾರುಕಟ್ಟೆ
* 65ಕೋಟಿ ಇಂಟರ್‌ನೆಟ್‌ ಬಳಕೆದಾರರ ಸಂಖ್ಯೆ
* 55 ಕೋಟಿ 2020ರಲ್ಲಿ ಸ್ಮಾರ್ಟ್‌ಫೋನ್‌ ಬಳಕೆದಾರರು


ಆನ್‌ಲೈನ್‌ ಮಾರುಕಟ್ಟೆಯ ಚಿತ್ರಣ
* 2ಕೋಟಿ ವೂನಿಕ್‌ ಬಳಕೆದಾರರು
* 1.7 ಕೋಟಿ ವೂನಿಕ್‌ ಆ್ಯಪ್‌ ಬಳಕೆ
1.7 ಕೋಟಿ ವೂನಿಕ್‌ ಆ್ಯಪ್‌ ಬಳಕೆ
₹ 184ಕೋಟಿ ಇದುವರೆಗೆ ವೂನಿಕ್‌ ಸಂಗ್ರಹಿಸಿರುವ ಬಂಡವಾಳದ ಮೊತ್ತ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT