ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಾ ಕಲಿಕೆಯ ಸ್ಥಿತಿ ಹೀಗಾಯಿತೇಕೆ?

Last Updated 31 ಜನವರಿ 2017, 19:30 IST
ಅಕ್ಷರ ಗಾತ್ರ

ಐಚ್ಛಿಕ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಗಳಿಸುವ ಪದವಿಪೂರ್ವ ಹಂತದ ಅನೇಕ ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲಿಷ್‌ನಂತಹ ಭಾಷಾ ವಿಷಯಗಳಲ್ಲಿ ಕಡಿಮೆ ಅಂಕ. ಅದಕ್ಕೆ ಕಾರಣ ಅವರ ಉತ್ತರ ಪತ್ರಿಕೆಗಳಲ್ಲಿರುವ ವ್ಯಾಕರಣ ದೋಷ, ಕಾಗುಣಿತದ ತಪ್ಪುಗಳು.

ವಿಷಾದದ ಸಂಗತಿಯೆಂದರೆ ತಮ್ಮ ಈ ನ್ಯೂನತೆ ಒಪ್ಪಿಕೊಳ್ಳುವುದಕ್ಕೆ ಬಹುತೇಕರು ಸಿದ್ಧರಿಲ್ಲ. ಜೊತೆಗೆ ಅವರ ಭ್ರಮೆಯನ್ನೇ ಸರಿಯೆಂಬಂತೆ ಬಿಂಬಿಸುವ, ನಡೆದುಕೊಳ್ಳುವ ಪೋಷಕರು ಮತ್ತು ಅಸಹಾಯಕ ಅಧ್ಯಾಪಕರು.

ಭಾಷಾ ಮೌಲ್ಯಮಾಪನ ಅಂದುಕೊಂಡಷ್ಟು ಸುಲಭವಲ್ಲ, ಸರಳವಲ್ಲ. ವಿದ್ಯಾರ್ಥಿಗಳ ಬರವಣಿಗೆ ಕೆಲವು ಸಲ ಎಷ್ಟು ಅನರ್ಥಕ್ಕೀಡು ಮಾಡುವಂತೆ ಇರುತ್ತದೆ ಎಂದರೆ ಸ್ವತಃ ಶಿಕ್ಷಕರಾದವರು ಮುಖ ಮುಚ್ಚಿಕೊಳ್ಳಬೇಕು. ವಿಪರ್ಯಾಸದ ಸಂಗತಿಯೆಂದರೆ ಇದು ವಿದ್ಯಾರ್ಥಿಗಳ ದಯನೀಯ ಸ್ಥಿತಿ ಎಂಬುದನ್ನು ಅರ್ಥ ಮಾಡಿಕೊಳ್ಳದೆ, ‘ಇವರಿಗೆ ಯಾರು ಪಾಠ ಮಾಡಿದ್ದು?’ ಎಂದು ಶಿಕ್ಷಕರನ್ನೇ ಅನುಮಾನಿಸುವ ಪ್ರವೃತ್ತಿ.

ಇಂದು ಭಾಷೆ ಬಗೆಗಿನ ಅಸಡ್ಡೆ ಯಾವ ಹಂತಕ್ಕೆ ತಲುಪಿದೆಯೆಂದರೆ ‘ಭಾಷಾ ಕಲಿಕೆ ವಿದ್ಯಾರ್ಥಿ ಜೀವನದ ಪ್ರಮುಖ ಅಂಗ’ ಎಂಬುದು ಮರೆತೇ ಹೋದಂತಿದೆ. ಸ್ವತಃ ಉಪನ್ಯಾಸಕರಿಗೂ ಭಾಷಾ ಮೌಲ್ಯಮಾಪನದ ಕುರಿತು ಗೊಂದಲ, ಹೇಗಿದ್ದರೆ ಸರಿ ಎಂಬ ಜಿಜ್ಞಾಸೆ. ಕಾಗುಣಿತ, ವ್ಯಾಕರಣ ತಪ್ಪುಗಳಿಗೆ ಅಂಕಗಳನ್ನು ಕಳೆಯಬೇಕೋ ಬೇಡವೋ ಎಂಬುದು ಸ್ಪಷ್ಟವಿಲ್ಲ. ಕಳೆಯದೇ ಹೋದರೆ ಆ ಮಕ್ಕಳು ಯಾವತ್ತೂ ತಿದ್ದಿಕೊಳ್ಳುವ ಗೋಜಿಗೆ ಹೋಗುವುದಿಲ್ಲ ಎಂಬುದು ಮಾತ್ರ ಬೆಳಕಿನಷ್ಟೇ ಸತ್ಯ.

ಎಲ್ಲ ವಿಷಯಗಳಲ್ಲೂ ಹೆಚ್ಚು ಅಂಕ ಗಳಿಸಿ ಭಾಷೆಯಲ್ಲಿ ಮಾತ್ರ ಅಷ್ಟು ಅಂಕ ಸಿಗಲಿಲ್ಲವೆಂದರೆ ಅಪರಾಧಿಗಳಾಗುವುದು ಭಾಷಾ ಶಿಕ್ಷಕರೇ! ಅದಕ್ಕಾಗಿ ಐಚ್ಛಿಕ ವಿಷಯಗಳೊಂದಿಗೆ ಜಿದ್ದಿಗೆ ಬಿದ್ದವರಂತೆ ‘ಉತ್ತರದಲ್ಲಿ ಅಡಕವಾಗಿರಬೇಕಾದ ವಿಷಯಗಳು ಮಾತ್ರವೇ ಮುಖ್ಯ, ಕಾಗುಣಿತ– ವ್ಯಾಕರಣಗಳನ್ನು ಗಮನಿಸಬೇಕಿಲ್ಲ’ ಎಂಬ ಹೊಸತಾದ ವಾದವೊಂದು ಸೃಷ್ಟಿಯಾಗಿದೆ.  ಹಾಗಿದ್ದರೆ ಅಂತಹ ಪರೀಕ್ಷೆ, ‘ಒಬ್ಬ ವಿದ್ಯಾರ್ಥಿ ಒಂದು ಕಥೆಯನ್ನೋ ಪದ್ಯವನ್ನೋ ಎಷ್ಟು ನೆನಪಿನಲ್ಲಿಟ್ಟುಕೊಂಡಿದ್ದಾನೆ’ ಎಂಬ ನೆನಪಿನ ಶಕ್ತಿಯ ಪರೀಕ್ಷೆಯಾಗುತ್ತದೆ ವಿನಾ ಭಾಷಾ ಪರೀಕ್ಷೆ ಆಗುವುದಿಲ್ಲ.

ಇಂದು ಹೆಚ್ಚಿನ ಆಂಗ್ಲಮಾಧ್ಯಮ ಶಾಲೆಗಳಲ್ಲಿ ಭಾಷಾ ಗೊಂದಲ ಸಾಮಾನ್ಯ. ಊರಿಗೊಂದು ಶಾಲೆಯ ಬದಲು ಬೀದಿಗೊಂದು ಶಾಲೆ ಹುಟ್ಟಿಕೊಂಡಿದೆ. ಅವುಗಳ ನಡುವೆ ದಾಖಲಾತಿಗಾಗಿ ಪೈಪೋಟಿ. ಜೊತೆಗೆ ಸಮರ್ಥ ಶಿಕ್ಷಕರ ಕೊರತೆ. ಕಾಗುಣಿತ-ವ್ಯಾಕರಣ ದೋಷಗಳಿಲ್ಲದೆ ಬರೆಯುವ ಶಿಕ್ಷಕರನ್ನು ಕೂಡ ಭೂತಗನ್ನಡಿ ಹಿಡಿದು ಹುಡುಕುವ ಪರಿಸ್ಥಿತಿಯಿದೆ.

ಪ್ರಾಥಮಿಕ ಹಂತದಿಂದಲೇ ಕಲಿಕೆಯೆಂಬುದು ದುಃಸ್ಥಿತಿಗೆ ತಲುಪಿದೆ. ಒಂದೋ ಅತಿಯಾದ ಹೋಮ್‌ವರ್ಕ್‌ ಕೊಡುವುದು, ಇಲ್ಲವೇ ಶಾಲೆಯಲ್ಲಿಯೇ ಕಲಿಕೆಯ ಮೇಲೆ ಒತ್ತಡ ಹೇರುವುದು. ಸಾಲದ್ದಕ್ಕೆ ಹೆತ್ತವರ ಬಲವಂತದ ಟ್ಯೂಷನ್ನು. ಕಥೆ– ಕವನ ಓದುವ, ಕೇಳುವ ಹಾಡುವ ಆಡುವ ಯಾವ ಹವ್ಯಾಸವೂ ಮಕ್ಕಳಲ್ಲಿ ಬೆಳೆಯುತ್ತಿಲ್ಲ. ಹೋದರೆ ಸಂಗೀತ, ನೃತ್ಯ ಕ್ಲಾಸಿಗೆ ಹೋದಾರು. ಆದರೆ ಒಂದೇ ವಾರದಲ್ಲಿ ಅವರು ಟಿ.ವಿ. ರಿಯಾಲಿಟಿ ಷೋಗಳಲ್ಲಿ ಹಾಡಬೇಕು, ನರ್ತಿಸಬೇಕು. ಎಲ್ಲದಕ್ಕೂ ಧಾವಂತ.

ಈ ವಾತಾವರಣದಲ್ಲಿ ಬೆಳೆದು ಪಿಯುಸಿ ಹಂತಕ್ಕೆ ಬರುವ ವಿದ್ಯಾರ್ಥಿಗಳ ಭಾಷಾ ಪ್ರಯೋಗ ಎಷ್ಟು ದಯನೀಯವಾಗಿದೆ ಎಂದರೆ ಇತ್ತ ಕನ್ನಡವೂ ಬಾರದ, ಅತ್ತ ಇಂಗ್ಲಿಷ್‌ ಕೂಡ ಬಾರದ ಅಪ್ಪಟ ತ್ರಿಶಂಕುಗಳಾಗಿದ್ದಾರೆ. ಈ ಸ್ಥಿತಿ ಮುಂದುವರಿದರೆ ಹೇಗೆ?

ಇಂದಿನ ನಮ್ಮ ಒಟ್ಟಾರೆ ಬದುಕೇ ಇದಕ್ಕೊಂದು ನಿದರ್ಶನ. ಎಲ್ಲವೂ ಸಿದ್ಧ ಆಹಾರದಂತೆ. ಬೇಯಿಸಿ ಪ್ಯಾಕ್ ಆಗಿ ಸಿಗುವ ಆಹಾರವನ್ನು ಅದೇ ಪ್ಲಾಸ್ಟಿಕ್ ಕವರಿನ ಸಮೇತ ಬಿಸಿನೀರಿಗೆ ಅದ್ದಿಟ್ಟು ಬಳಿಕ ತಿಂದ ಹಾಗೆ. ಭಾಷಾ ಪ್ರೌಢಿಮೆಯೂ ಹಾಗೇ ಸಿದ್ಧಿಯಾಗಬೇಕು ಎನ್ನುವಂತಿದೆ. ದಿನಕ್ಕೊಂದು ಪುಟ ಓದುವ ಬರೆಯುವ ಅಭ್ಯಾಸ ಅವರಲ್ಲಿಲ್ಲ.

ದಿನಪತ್ರಿಕೆ, ಕಥೆ, ಕಾದಂಬರಿ ಓದುವ ಹವ್ಯಾಸ ಮೊದಲೇ ಇಲ್ಲ. ಜೊತೆಗೆ ನವ ಮಾಧ್ಯಮಗಳ ಶಾರ್ಟ್‌ಕಟ್ ಭಾಷಾ ಪ್ರಯೋಗ. ಪರೀಕ್ಷೆಯಲ್ಲಿ ಬರೆಯುವಾಗಲೂ ಅದೇ ಭಾಷೆ. ಕೊನೆಗೆ,  ‘ಎಷ್ಟೇ ಬರೆದರೂ ನೂರಕ್ಕೆ ನೂರು ಕೊಟ್ಟಿಲ್ಲ. ಆ ಶಿಕ್ಷಕಿಗೆ ನನ್ನನ್ನು ಕಂಡರಾಗುವುದಿಲ್ಲ. ಪಕ್ಷಪಾತ ಮಾಡುತ್ತಾರೆ’ ಎಂಬ ದೂರು.

ವಿದ್ಯಾರ್ಥಿಗಳು ಈ ರೀತಿ ಮೂಢತನ ತೋರುವುದರಲ್ಲಿ ಅಚ್ಚರಿಯಿಲ್ಲ. ಆದರೆ ಅದನ್ನು ತಿದ್ದುವ ಬದಲು ತಮ್ಮ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಬಳಸಿಕೊಂಡು ಭಾಷಾ ವಿಭಾಗವೇ ಸರಿಯಿಲ್ಲ ಎಂದು ಹೀಗಳೆಯುವುದರಲ್ಲಿ ಖುಷಿ ಕಾಣುವ ಮಂದಿಯಿಂದ ನಿಜವಾದ ನಷ್ಟ ಯಾರಿಗೆ?

‘ವಿದ್ಯಾರ್ಥಿ, ಭಾಷಾ ವಿಷಯದಲ್ಲಿ ಏಕೆ ನೂರಕ್ಕೆ ನೂರು ಪಡೆಯಲಿಲ್ಲ’ ಎಂದು ಭಾಷಾ ಉಪನ್ಯಾಸಕರನ್ನೇ ತರಾಟೆಗೆ ತೆಗೆದುಕೊಳ್ಳಲು ಮುಂದಾಗುವವರು, ಆ ವಿದ್ಯಾರ್ಥಿ ಭಾಷಾ ಕಲಿಕೆಗೆ ದಿನದಲ್ಲಿ ಎಷ್ಟು ಸಮಯ ಮೀಸಲಿಟ್ಟಿದ್ದಾನೆಂದು ಕೇಳುವುದಿಲ್ಲ. ಅಲ್ಲದೆ ಐಚ್ಛಿಕ ವಿಷಯಗಳಷ್ಟೇ ಮುಖ್ಯ ಎಂದು ಎಲ್ಲರೂ ಭ್ರಮಿಸುವ ವಾತಾವರಣ ಸೃಷ್ಟಿಯಾಗಿ ಬಿಟ್ಟಿದೆ. ಅದರ ಜತೆ ಟ್ಯೂಷನ್‌ಗಳ ಭರಾಟೆ.

ಇಡೀ ದಿನ ಅದರಲ್ಲೇ ಮುಳುಗಿರುವ ವಿದ್ಯಾರ್ಥಿಗಳು ಭಾಷೆಯ ಪುಸ್ತಕ ಕೈಗೆತ್ತಿಕೊಳ್ಳುವುದು ಪರೀಕ್ಷೆಯ ಮುನ್ನಾ ದಿನ ಮಾತ್ರ. ನೋಟ್ಸನ್ನೂ  ಸ್ವತಃ ಉಪನ್ಯಾಸಕರೇ ಸಿದ್ಧಪಡಿಸಿ ಕೊಡಬೇಕಾಗಿರುವುದರಿಂದ ವಿದ್ಯಾರ್ಥಿಗಳು ಕನಿಷ್ಠ  ಬರವಣಿಗೆಯನ್ನೂ ಮಾಡಿರುವುದಿಲ್ಲ. ಹೋಗಲಿ ಮನಸ್ಸಿಟ್ಟು ಅದನ್ನು ಓದುತ್ತಾರೆಯೇ ಎಂಬುದೂ ಪ್ರಶ್ನೆ.

ಈ ಎಲ್ಲ ಮುಜುಗರದಿಂದ ತಪ್ಪಿಸಿಕೊಳ್ಳಲು ಭಾಷಾ ಉಪನ್ಯಾಸಕರು ಕಂಡುಕೊಳ್ಳಬಹುದಾದ ಸುಲಭ ಪರಿಹಾರವೆಂದರೆ ಕಾಗುಣಿತ, ವ್ಯಾಕರಣಗಳನ್ನು ತಿದ್ದುವ ಗೋಜಿಗೇ ಹೋಗದೆ ತಾವೂ ಪೂರ್ಣ ಅಂಕಗಳನ್ನು ನೀಡುವುದು. ಅವರೂ ಅಸಹಾಯಕರೇ. ಏಕೆಂದರೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವ ಶಿಕ್ಷಕರ ವೇತನ, ಅವರ ವಿದ್ಯಾರ್ಥಿಗಳು ಎಷ್ಟು ಅಂಕ ಪಡೆದಿದ್ದಾರೆ ಎಂಬುದನ್ನು ಆಧರಿಸಿರುತ್ತದೆ! ಆದರೆ ಇದರಿಂದ ಸಾಧನೆಯಾಗುವುದೇನು– ಇಡೀ ತಲೆಮಾರು ಭಾಷಾ ತ್ರಿಶಂಕುಗಳಾಗುವುದರ ಹೊರತು? ಇದನ್ನು ತಿದ್ದದೇ ಹೋದರೆ ಹೇಗೆ?

ಗಳಿಸುವ ಅಂಕಗಳು ತಾತ್ಕಾಲಿಕ; ಆದರೆ ಪಡೆಯುವ ಶಿಕ್ಷಣ ಶಾಶ್ವತ ಎಂಬ ಸತ್ಯವನ್ನು ಉಪನ್ಯಾಸಕರೂ ಮರೆತರೆ ವಿದ್ಯಾರ್ಥಿಗಳನ್ನು ದೂರಿ ಏನು ಪ್ರಯೋಜನ?  ಖಾಸಗಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮವಾದ, ಆಯಾ ಕಾಲದ ಅಗತ್ಯಗಳಿಗೆ ಪೂರಕವಾದ ವಿದ್ಯೆಯನ್ನು ಜನರತ್ತ ಕೊಂಡೊಯ್ಯುವ ಸಾಧ್ಯತೆಗಳಿವೆ. ಆದರೆ ಅದರ ಬದಲಾಗಿ ಶಿಕ್ಷಣದ ಒಟ್ಟಾರೆ ಗುಣಮಟ್ಟವೇ ಕುಸಿಯುತ್ತಿರುವುದಕ್ಕೆ ಹೊಣೆ ಯಾರು? ಇಂದು ಎಚ್ಚೆತ್ತುಕೊಳ್ಳದೇ ಹೋದರೆ ನಾಳೆಯ ತಲೆಮಾರಿನೆದುರು ತಲೆತಗ್ಗಿಸಿ ನಿಲ್ಲುವ ಪ್ರಾರಬ್ಧ ನಮ್ಮದೇ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT