ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾದ ಲೋಕದ ದೈತ್ಯ ಪ್ರತಿಭೆ

Last Updated 1 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಅದು 1930ರ ದಶಕ. ಮೈಸೂರಿನ ಅರಮನೆಯಲ್ಲಿ ನಡೆಯುತ್ತಿದ್ದ ವೈವಿಧ್ಯಮಯ ಸಂಗೀತ ಕಛೇರಿ ಜಗತ್ಪ್ರಸಿದ್ಧವಾಗಿದ್ದ ಕಾಲ.
ಘಟಾನುಘಟಿ ಸಂಗೀತಗಾರರಾದ ಮೈಸೂರು  ವಾಸುದೇವಾಚಾರ್, ಟಿ.ಆರ್‌. ಮಹಾಲಿಂಗಂ, ಮಧುರೈಮಣಿ, ಪಲ್ಲಡಂ ಸಂಜೀವರಾವ್, ಶರಭಶಾಸ್ತ್ರಿಗಳು, ಟೈಗರ್ ವರದಾಚಾರ್ಯರು, ಅರಿಯಕುಡಿ ರಾಮಾನುಜ ಅಯ್ಯಂಗಾರ್, ಜಿ.ಎನ್. ಬಾಲಸುಬ್ರಹ್ಮಣ್ಯಂ, ಮುಸುರಿ ಸುಬ್ರಹ್ಮಣ್ಯ ಅಯ್ಯರ್, ಮಧುರೆ ಮಣಿ ಅಯ್ಯರ್, ಚಿತ್ತೂರು ಸುಬ್ರಹ್ಮಣ್ಯಪಿಳ್ಳೆ, ಮಹಾರಾಜಪುರಂ ವಿಶ್ವನಾಥ ಅಯ್ಯರ್, ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಆಲತ್ತೂರು ಸಹೋದರರು, ದ್ವಾರಮ್ ವೆಂಕಟಸ್ವಾಮಿನಾಯ್ಡು ಮುಂತಾದ ದಿಗ್ಗಜರು ತಮ್ಮ ಪಾಂಡಿತ್ಯ ಮೆರೆದು ಹಿಗ್ಗುತ್ತಿದ್ದರು.

ಈ ಎಲ್ಲ ಸಂಗೀತ ಸಾರ್ವಭೌಮರಿಗೆ ಪಿಟೀಲು ಪಕ್ಕವಾದ್ಯ ನುಡಿಸಿ ಇಷ್ಟೂ ಕಲಾವಿದರಿಂದ ಶಹಬ್ಬಾಸ್‌ಗಿರಿ ಗಿಟ್ಟಿಸಿಕೊಂಡವರು ಪಿಟೀಲು ವಿದ್ವಾನ್‌ ಟಿ.ಎಸ್‌.ತಾತಾಚಾರ್‌. ಪಿಟೀಲು ಪಕ್ಕವಾದ್ಯದ ಜತೆಗೆ ಜುಗಲ್‌ಬಂದಿಯನ್ನೂ ನುಡಿಸುತ್ತಿದ್ದ ಈ ಘನ ವಿದ್ವಾಂಸ ಎನಿಸಿದ್ದರು ತಾತಾಚಾರ್. ದ್ವಾರಂ ವೆಂಕಟಸ್ವಾಮಿ ನಾಯ್ಡು, ಮಾಯಾವರಂ ಗೋವಿಂದರಾಜಪಿಳ್ಳೆ, ವೆಂಕಟರಾಮಾಶಾಸ್ತ್ರಿ ಮುಂತಾದ ಪಂಡಿತರೊಂದಿಗೆ ದ್ವಂದ್ವ ಪಿಟೀಲು ಕಛೇರಿ ನಡೆಸಿ ಕೇಳುಗರಿಗೆ ಅವಿಸ್ಮರಣೀಯ ಅನುಭವ ನೀಡುತ್ತಿದ್ದರು.

ಹಾಗೆ ನೋಡಿದರೆ ಟಿ.ಎಸ್‌.ತಾತಾಚಾರ್‌ ಅವರ ಬದುಕೇ ಸಂಗೀತ. ಶಾಸ್ತ್ರೀಯ ಸಂಗೀತದಲ್ಲಿ ರಾಗ, ತಾಳ, ಭಾವ, ಲಯ, ಸ್ಥಾಯಿ, ಗತಿಶುದ್ಧಿ, ಸಾಹಿತ್ಯದಲ್ಲಿ ಸ್ಪಷ್ಟತೆ ವಿದ್ವಾನ್‌ ತಾತಾಚಾರ್‌ ಅವರ ನುಡಿಸಾಣಿಕೆಯ ವೈಶಿಷ್ಟ್ಯವಾಗಿತ್ತು. ಇವರ ಸಂಗೀತ ಸುಮಾರು ಐದು ದಶಕಗಳ ಕಾಲ ಕೇಳುಗರ ಮನ ತಣಿಸಿತು. ತಾತಾಚಾರ್‌ ಮನೆ ಮಾತಾಗಿದ್ದರು. ಖ್ಯಾತಿಯ ಉತ್ತುಂಗಕ್ಕೇರಿದ್ದರೂ ಪ್ರಚಾರ ಬಯಸದ ಸಂಗೀತ ಸಮರ್ಪಣ ಭಾವ ಅವರಲ್ಲಿತ್ತು.

ತಾತಾಚಾರ್ ಅವರು ತುಮಕೂರು ಜಿಲ್ಲೆಯ ಪಾವಗಡದಲ್ಲಿ ಮೇ 21, 1917ರಂದು ಜನಿಸಿದರು. ತಂದೆ ಟಿ.ಶ್ರೀನಿವಾಸಾಚಾರ್ ಹಾಗೂ ತಾಯಿ ವಕುಳಮ್ಮ. ತಾತಾಚಾರ್ಯರ ತಂದೆ, ಚಿಕ್ಕಪ್ಪ ಹಾಗೂ ಮನೆತನದ ಹಿರಿಯರೆಲ್ಲಾ ವೈದಿಕರಾಗಿದ್ದರು. ಜತೆಗೆ ಪಿಟೀಲು ವಿದ್ವಾಂಸರಾಗಿದ್ದರು. ತಂದೆ ಶ್ರೀನಿವಾಸಚಾರ್ಯರು ಕೂಡ ಸಂಗೀತ ದಿಗ್ಗಜರಿಗೆ ಪಿಟೀಲು ಪಕ್ಕವಾದ್ಯ ನುಡಿಸಿ ಪ್ರಖ್ಯಾತರಾಗಿದ್ದರು.

ಮನೆಯಲ್ಲಿ ಯಾವಾಗಲೂ ಸಂಗೀತ ವಾತಾವರಣ, ರಾಮಾಯಣ, ಭಾಗವತ ಸಪ್ತಾಹಗಳು, ರಾಮಪಟ್ಟಾಭಿಷೇಕ ಉತ್ಸವಗಳು ನಡೆಯುತ್ತಿದ್ದವು. ಇಂಥ ಉಚ್ಛ ಸಂಸ್ಕೃತಿಯ ವಾತಾವರಣದಲ್ಲಿ ಬೆಳೆದ ತಾತಾಚಾರ್‌ ಅವರಿಗೆ ಸಂಗೀತ ಬಹುಬೇಗ ಒಲಿಯಿತು. ತಾತಾಚಾರ್ಯರು ಪಿಟೀಲಿನ ಜತೆಗೆ ಹಾರ್ಮೋನಿಯಂ ಸಹ ನುಡಿಸುತ್ತಿದ್ದರು. ಬೆಂಗಳೂರಿನ ಕೋಟೆ ಹೈಸ್ಕೂಲಿನಲ್ಲಿ ಅವರ ವಿದ್ಯಾಭ್ಯಾಸ ನಡೆಯಿತು.

ಆಗಲೇ ಸಂಗೀತ ಕಛೇರಿ ನೀಡುವ ಅವಕಾಶವೂ ಸಿಕ್ಕಿತ್ತು. ವೀಣಾ ಕೃಷ್ಣಮಾಚಾರ್ಯರಲ್ಲಿ ಕೆಲವು ವರ್ಣ, ಕೀರ್ತನೆಗಳನ್ನು ಹಾಡುವುದನ್ನು ಅಭ್ಯಾಸ ಮಾಡಿದ್ದರು. ತಂದೆಯನ್ನು ಕಳೆದುಕೊಂಡ ಬಳಿಕ ತಮ್ಮ ದೊಡ್ಡಪ್ಪನವರ ಸಲಹೆಯಂತೆ ಮೈಸೂರಿಗೆ ಹೋಗಿ ವಿದ್ವಾನ್‌ ರಾಳ್ಳಪಲ್ಲಿ ಅನಂತಕೃಷ್ಣಶರ್ಮರಲ್ಲಿ ಉನ್ನತ ಸಂಗೀತ ಶಿಕ್ಷಣ ಪಡೆದರು.

ರಾಳ್ಳಪಳ್ಳಿಯವರ ಮನೆಗೆ ಬರುತ್ತಿದ್ದ ಸಂಗೀತ ವಿದ್ವಾಂಸರ ಪರಿಚಯ ಮಾಡಿಕೊಳ್ಳುವ ಸುಯೋಗ ಇವರಿಗೆ ಒದಗಿ ಬಂತು. ಪಕ್ಕದಲ್ಲೇ ಚೌಡಯ್ಯನವರ ಮನೆ ಇದ್ದುದರಿಂದ ಅವರೂ ಆಗಾಗ ಬಂದು ತಾತಾಚಾರ್ಯರ ನುಡಿಸಾಣಿಕೆ ಕೇಳಿ ಹುರಿದುಂಬಿಸುತ್ತಿದ್ದರು. ಜತೆಗೆ ಇವರ ವಾದನ ಶೈಲಿಯನ್ನು ಮೆಚ್ಚಿದ ಚೌಡಯ್ಯನವರು ತಾವೇ ಅವರಿಗೆ ಅನೇಕ ಕಛೇರಿಗಳಿಗೆ ಆಹ್ವಾನ ನೀಡುತ್ತಿದ್ದರು.

ತಾತಾಚಾರ್ಯ ಅವರ ಸಂಗೀತ ಉತ್ತುಂಗಕ್ಕೇರುತ್ತಿತ್ತು. 1940ರಲ್ಲಿ ಚೌಡಯ್ಯನವರು ತಾತಾಚಾರ್ಯರ ಹೆಸರನ್ನು ಮದ್ರಾಸ್ ಆಕಾಶವಾಣಿಗೆ ಸೂಚಿಸಿದರು. ಅಲ್ಲಿಂದ 1942ರಲ್ಲಿ ಮತ್ತೆ ಮೈಸೂರಿಗೆ ಬಂದ ತಾತಾಚಾರ್‌ ಮೈಸೂರು ಆಕಾಶವಾಣಿಯಲ್ಲಿ ‘ಎ’ಗ್ರೇಡ್‌ ಕಲಾವಿದರಾಗಿ ಸೇರಿದರು. ಅಲ್ಲಿಂದ 1977ರವರೆಗೂ ಆಕಾಶವಾಣಿಯ ಹಿರಿಯ ಕಲಾವಿದರಾಗಿ, ಸಂಗೀತ ನಿರ್ದೇಶಕರಾಗಿ ದುಡಿದರು.

ಇವರು ನಿರ್ದೇಶಿಸಿದ ಭಕ್ತಿ ಸಾಮ್ರಾಜ್ಯ, ತ್ಯಾಗರಾಜರ ನೌಕಾಚರಿತ್ರೆ, ಉಗಾಭೋಗಗಳು, 72 ಮೇಳಕರ್ತರಾಗಗಳ ಪರಿಚಯ, ದೀಕ್ಷಿತರ ನವಾವರಣ ಕೀರ್ತನೆಗಳು, ನವಗ್ರಹ ಕೀರ್ತನೆಗಳು, ಹಾಗೆಯೇ ಶ್ಯಾಮಶಾಸ್ತ್ರಿ ಮತ್ತು ತ್ಯಾಗರಾಜರ ಕೃತಿಗಳ ವಿಶಿಷ್ಟ ಕಾರ್ಯಕ್ರಮಗಳು ರಾಷ್ಟ್ರಮಟ್ಟದಲ್ಲಿ ಜನಪ್ರಿಯವಾಯಿತು. 1955ರಲ್ಲಿ ಮೈಸೂರು ಆಕಾಶವಾಣಿ ಬೆಂಗಳೂರಿಗೆ ಸ್ಥಳಾಂತರವಾದಾಗ ತಾತಾಚಾರ್ಯರು ಬೆಂಗಳೂರಿಗೆ ಬಂದರು. ಪಿಟೀಲಿನ ಸವಿಯನ್ನು ನಾಡಿನ ಉದ್ದಗಲಕ್ಕೂ ಪಸರಿಸಿದರು.

‘ಕರ್ನಾಟಕ ಕಲಾ ತಿಲಕ’,  ಚೌಡಯ್ಯ ಪ್ರಶಸ್ತಿ, ಗಾನಕಲಾಭೂಷಣ, ಸಂಗೀತ ವಿದ್ಯಾಸಾಗರ, ವಯೊಲಿನ್ ವಾದನ ನಿಪುಣ, ‘ಕಲಾದೀಪ್ತಿ', ‘ಪಿಟೀಲು ವಾದ್ಯ ನಿಪುಣ', ‘ರಾಜ್ಯ ಸಂಗೀತ ವಿದ್ವಾನ್’  ಇವರಿಗೆ ಸಂದ ಅತ್ಯುನ್ನತ ಬಿರುದುಗಳು.

ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ
ಪಿಟೀಲು ವಿದ್ವಾಂಸ  ಟಿ.ಎಸ್‌.ತಾತಾಚಾರ್‌ ಅವರ ಜನ್ಮಶತಮಾನೋತ್ಸವ ಪ್ರಯುಕ್ತ ಸಂಗೀತ ಉತ್ಸವ:  ಶನಿವಾರ (ಫೆ.4) ಸಂಜೆ 6ಕ್ಕೆ ಅರಳು ಮಲ್ಲಿಗೆ ಪಾರ್ಥಸಾರಥಿ ಅವರಿಂದ ಉದ್ಘಾಟನೆ. ರಾಮಕೃಷ್ಣನ್‌ ಸ್ವಾಮಿ ಅವರಿಂದ ‘ಶ್ರೀರಾಮಸ್ತುತಿ’ ಬಿಡುಗಡೆ. ಟಿ.ಎಸ್‌.ತಾತಾಚಾರ್‌ ಅವರ ಜೀವನ–ಸಾಧನೆ ಕುರಿತ ವಿಡಿಯೊ ಪ್ರದರ್ಶನ. ‘ಸುಂದರಕಾಂಡ ಸಾರಂ ಸೀತಾರಾಮ ಪಟ್ಟಾಭಿಷೇಕಂ’ ಪ್ರವಚನ– ರಾಮಕೃಷ್ಣನ್‌ ಸ್ವಾಮಿ.
ಭಾನುವಾರ (ಫೆ.5) ಬೆಳಿಗ್ಗೆ 10ಕ್ಕೆ ಆರ್‌.ಗಣೇಶ್‌ ಮತ್ತು ಆರ್‌. ಕುಮರೇಶ್‌ ಅವರಿಂದ ದ್ವಂದ್ವ ಪಿಟೀಲು ವಾದನ.  ಕೆ.ಯು.ಜಯಚಂದರ್‌ ರಾವ್‌ (ಮೃದಂಗ), ಎನ್‌.ಅಮೃತ್‌ (ಖಂಜೀರ). ಸಂಜೆ 6ಕ್ಕೆ ಜೇರೊಮ್‌ ಡೇವಿಸ್‌ ಅವರಿಂದ ಪಾಶ್ಚಾತ್ಯ ಶಾಸ್ತ್ರೀಯ ವಯೊಲಿನ್‌ ಸೊಲೊ. ಆರ್‌.ಕೆ. ಶ್ರೀರಾಂ ಕುಮಾರ್‌ ಅವರಿಂದ ವಯೊಲಿನ್‌ ಸೊಲೊ. ಬಿ.ಸಿ. ಮಂಜುನಾಥ್‌ (ಮೃದಂಗ), ಸಿ.ಪಿ.ವ್ಯಾಸವಿಠ್ಠಲ (ಖಂಜೀರ). ಸ್ಥಳ–ಶ್ರೀರಾಮ ಮಂದಿರ, 9ನೇ ಕ್ರಾಸ್‌ ಈಸ್ಟ್‌ ಪಾರ್ಕ್‌ ರಸ್ತೆ, ಮಲ್ಲೇಶ್ವರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT