ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜೃಂಭಣೆಯ ಮುರುಘೇಂದ್ರ ರಥೋತ್ಸವ

ರಥೋತ್ಸವಕ್ಕೆ ಚಾಲನೆ ನೀಡಿದ ವಿವಿಧ ಮಠಾಧೀಶರು; ಜಾತ್ರೆಗೆ ಮೆರುಗು ನೀಡಿದ ಡೊಳ್ಳು ಕುಣಿತ, ಭಜನೆ ಮೇಳ
Last Updated 2 ಫೆಬ್ರುವರಿ 2017, 5:43 IST
ಅಕ್ಷರ ಗಾತ್ರ

ಧಾರವಾಡ: ಇಲ್ಲಿನ ಮುರುಘಾಮಠದ ಮುರುಘೇಂದ್ರ ಮಹಾಶಿವಯೋಗಿಗಳ ರಥೋತ್ಸವ ಬುಧವಾರ ಸಾವಿರಾರು ಭಕ್ತರ ಹರ್ಷೋದ್ಗಾರಗಳ ಮಧ್ಯೆ ವಿಜೃಂಭಣೆಯಿಂದ ನೆರವೇರಿತು.

ಸಂಜೆ 4.30ರ ಸುಮಾರಿಗೆ ಚಿತ್ರದುರ್ಗ ಬೃಹನ್ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು.

ಶಿವಬಸವ ಸ್ವಾಮೀಜಿ, ಸವಣೂರಿನ ಸ್ವಾಮೀಜಿ, ಅತ್ತಿಮತ್ತೂರಿನ ಸ್ವಾಮೀಜಿ, ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಮಠಾಧೀಶರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ರಥೋತ್ಸವ ಆರಂಭವಾಗುತ್ತಿದ್ದಂತೆ ಸಾವಿರಾರು ಭಕ್ತರು, ‘ಹರ.. ಹರ.. ಮಹಾದೇವ’ ಎಂದು ಕೂಗುತ್ತ ಬೃಹದಾಕಾರದ ತೇರಿಗೆ ಉತ್ತುತ್ತಿ, ನಿಂಬೆಹಣ್ಣು, ಬಾಳೆಹಣ್ಣುಗಳನ್ನು ತೂರಿ ಮುರುಘೇಂದ್ರ ಮಹಾಶಿವಯೋಗಿಗಳಿಗೆ ಭಕ್ತಿಯ ನಮನ ಸಲ್ಲಿಸಿದರು.

ತೇರು ನಗರದ ಮದಿಹಾಳ ಕ್ರಾಸ್‌ನಲ್ಲಿರುವ ಮೂರು ಸಾವಿರ ಶಾಖಾ ಮಠದವರೆಗೂ ಬಂದು, ಮರಳಿ ಮುರುಘಾಮಠ ತಲುಪಿತು. ರಥೋತ್ಸವದಲ್ಲಿ ಡೊಳ್ಳು ಕುಣಿತ, ಪುರವಂತರ ಕುಣಿತ, ಭಜನೆ ಮೇಳ, ಜಾಂಜ್‌ ಮೇಳಗಳು ಪಾಲ್ಗೊಂಡು ಜಾತ್ರೆಗೆ ಹೆಚ್ಚಿನ ಮೆರಗು ತಂದುಕೊಟ್ಟವು. ನಗರ ಪ್ರದೇಶದ ಜನರನ್ನು ಹೊರತುಪಡಿಸಿ ಗ್ರಾಮೀಣ ಪ್ರದೇಶಗಳಾದ ಅಮ್ಮಿನಬಾವಿ, ಹೆಬ್ಬಳ್ಳಿ, ಶಿವಳ್ಳಿ, ಉಪ್ಪಿನ ಬೆಟಗೇರಿ, ಕರಡಿಗುಡ್ಡ ಸೇರಿದಂತೆ ಇತರ ಗ್ರಾಮಗಳಿಂದಲೂ ಬಂದ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ಮಠದ ಆವರಣದಲ್ಲಿ ಭಕ್ತಾದಿಗಳಿಗಾಗಿ ಪ್ರಸಾದದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಜಾತ್ರಾ ಮಹೋತ್ಸವದ ಅಂಗವಾಗಿ ಸವದತ್ತಿ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಅದೂ ಅಲ್ಲದೇ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಮಠದ ಆಡಳಿತ ಮಂಡಳಿ ಸದಸ್ಯರಾದ ನಾಗರಾಜ ಪಟ್ಟಣಶೆಟ್ಟಿ, ಎಫ್.ಟಿ.ಭಾವಿಕಟ್ಟಿ, ವಿ.ಎಸ್.ಕಟಗಿ,  ಎಂ.ವಿ.ವಡ್ಡಿನ, ಸತೀಶ ತುರಮರಿ ಸೇರಿದಂತೆ ಆಡಳಿತ ಮಂಡಳಿ ಪದಾಧಿಕಾರಿಗಳು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT