ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿಗೆ ಆದ್ಯತೆ ನೀಡಿ

41 ಗ್ರಾಮ ಪಂಚಾಯ್ತಿ ಪಿಡಿಓಗಳ ಸಭೆಯಲ್ಲಿ ಶಾಸಕ ತಹಸೀಲ್ದಾರ್ ಸೂಚನೆ
Last Updated 2 ಫೆಬ್ರುವರಿ 2017, 5:45 IST
ಅಕ್ಷರ ಗಾತ್ರ

ಹಾನಗಲ್: ‘ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳನ್ನು ಪಟ್ಟಿ ಮಾಡಿಕೊಂಡು ಪರಿಹಾರೋಪಾಯಗಳನ್ನು ತ್ವರಿತಗತಿಯಲ್ಲಿ ಆಯೋಜಿಸುವ ಕಾರ್ಯಕ್ರಮವು ಪರಿಣಾಮಕಾರಿಯಾಗಿ ನಡೆಯಬೇಕು’ ಎಂದು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಶಾಸಕ ಮನೋಹರ ತಹಸೀಲ್ದಾರ್‌ ತಾಕೀತು ಮಾಡಿದರು.

ಬುಧವಾರ ಇಲ್ಲಿನ ತಾಲ್ಲೂಕು ಪಂಚಾಯ್ತಿಯ ಸಭಾಂಗಣದಲ್ಲಿ ನಡೆದ ತಾಲ್ಲೂಕಿನ 41 ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
‘ಬರದ ಬೇಸಿಗೆಯಲ್ಲಿ ನಾವಿದ್ದೇವೆ. ಕುಡಿಯುವ ನೀರು ಪೂರೈಕೆ ನಮ್ಮ ಪ್ರಥಮ ಆದ್ಯತೆಯಾಗಬೇಕು. ಇದಕ್ಕಾಗಿ ಅಗತ್ಯದ ಯೋಜನೆಗಳನ್ನು ಹಮ್ಮಿ ಕೊಳ್ಳಲು ಅನುದಾನದ ಕೊರತೆಯಿಲ್ಲ’ ಎಂದರು.

‘ಕ್ರಿಯಾ ಯೋಜನೆಯಲ್ಲಿನ ಕಾಮಗಾರಿಗಳನ್ನು ಬದಲಾಯಿಸಿಯಾದರೂ ಕೊಳವೆಭಾವಿ, ಪೈಪ್‌ಲೈನ್‌ ಅಳವಡಿಕೆಯಂತಹ ಕಾಮಗಾರಿಗಳನ್ನು ಪರಿಸ್ಥಿತಿಯ ಗಂಭೀರತೆ ಮೇಲೆ ಕೈಗೆತ್ತಿಕೊಳ್ಳಬಹುದು. ಒಟ್ಟಿನಲ್ಲಿ ಕುಡಿಯುವ ನೀರಿಗೆ ವ್ಯವಸ್ಥೆ ಮಾಡುವ ಕೆಲಸವಾಗಬೇಕು’ ಎಂದರು.

‘ಖಾಸಗಿ ಕೊಳವೆ ಬಾವಿಗಳನ್ನು ಬಳಸಿಕೊಂಡು ತಾತ್ಕಾಲಿಕ ವ್ಯವಸ್ಥೆ ಮೂಲಕ ಕುಡಿಯುವ ನೀರು ಪೂರೈಕೆಗೆ ಸ್ಥಳೀಯ ಆಡಳಿತ ಮುಂದಾಗಬೇಕು. ಅಗತ್ಯವಿದ್ದ ಕಡೆ ಹೊಸ ಕೊಳವೆ ಬಾವಿ ತೋಡಿಸುವುದು, ಇಲ್ಲವೆ ಈಗಿದ್ದ ಕೊಳವೆ ಭಾವಿಗಳ ಪುನಶ್ಚೇತನಕ್ಕೆ ಒತ್ತು ನೀಡಬೇಕು’ ಎಂದರು.

‘ಈಗಾಗಲೇ ಗುರುತಿಸಲಾದ ಕೊಳವೆಬಾವಿಗಳ ಪುನಶ್ಚೇತನಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. 1 ಕಿ.ಮೀ ಗಿಂತ ಹೆಚ್ಚಿನ ಅಂತರದ ಪೈಪ್‌ಲೈನ್‌ ಅಳವಡಿಕೆಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ತಿಳಿಸಬೇಕು. ಹೊಸದಾಗಿ ಕೊಳವೆಬಾವಿ ಕೊರೆಸುವ ಬೇಡಿಕೆಗಳ ಪಟ್ಟಿ ಮಾಡಿಟ್ಟುಕೊಂಡು ಕಾಮಗಾರಿಗೆ ಸನ್ನದ್ಧರಾಗಬೇಕು’ ಎಂದು ಸಭೆಯಲ್ಲಿದ್ದ ಕಾರ್ಯನಿರ್ವಾಹಕ ಅಧಿಕಾರಿ ಎನ್‌.ಎ.ಪುಟ್ಟಪ್ಪನವರ ಅವರಿಗೆ ಆದೇಶಿಸಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಿವಬಸಪ್ಪ ಪೂಜಾರ, ಉಪಾಧ್ಯಕ್ಷೆ ಸರಳಾ ಜಾಧವ ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯ ರಾಘವೇಂದ್ರ ತಹಸೀಲ್ದಾರ್‌ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT