ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ್ಡ್‌ ಸಂಖ್ಯೆ ಒಂದು, ಸ್ವಚ್ಛತೆಯಲ್ಲಿ ಹಿಂದು

ಬಿಜೆಪಿಯ ಬಲರಾಮ ಕುಸುಗಲ್‌ ಪ್ರತಿನಿಧಿಸುವ ಧಾರವಾಡ ವ್ಯಾಪ್ತಿಯ 1ನೇ ವಾರ್ಡ್‌; ತಿಪ್ಪೆಯಾದ ಖಾಲಿ ನಿವೇಶನ
Last Updated 2 ಫೆಬ್ರುವರಿ 2017, 5:48 IST
ಅಕ್ಷರ ಗಾತ್ರ

ಹುಬ್ಬಳ್ಳಿ:  ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆವರಣವನ್ನು ಚೋಟಾ ಮಹಾಬಲೇಶ್ವರ ಎಂದೇ ಕರೆಯಲಾಗುತ್ತಿದೆ. ಇಲ್ಲಿ ಬೋಧಿಸುವ ಹಲವು ಪ್ರಾಧ್ಯಾಪಕರು ಒಂದನೇ ವಾರ್ಡ್‌ ವ್ಯಾಪ್ತಿಯ ತಪೋವನ ನಗರ, ಬಸವ ನಗರ, ನೆಹರೂ ನಗರ, ಕೆಎಚ್‌ಬಿ ಲೇಔಟ್‌ನಲ್ಲಿ ವಾಸವಾಗಿದ್ದಾರೆ. ಬಡಾವಣೆಗಳು ಬೆಳೆದು 30 ವರ್ಷಗಳಾಗುತ್ತ ಬಂದರೂ ಕಸದ ಸಮಸ್ಯೆ ಮಾತ್ರ ಭೂತಾಕಾರವಾಗಿ ಬೆಳೆಯುತ್ತಿದೆ.

ಇಲ್ಲಿನ ಖಾಲಿ ಜಾಗಗಳಲ್ಲಿ ಆಳೆತ್ತರದವರೆಗೆ ಕಸ ಬೆಳೆದಿದ್ದರಿಂದ ಅದರಿಂದ ಉತ್ಪತ್ತಿಯಾಗುವ ಸೊಳ್ಳೆಗಳಿಂದ ರಕ್ಷಣೆ ಪಡೆಯುವುದೇ ಇಲ್ಲಿನ ನಿವಾಸಿಗಳ ನಿತ್ಯ ಚಿಂತೆಯಾಗಿದೆ.

ಈ ಬಗ್ಗೆ ಶಾಸಕರು, ಪಾಲಿಕೆ ಸದಸ್ಯರು, ಪಾಲಿಕೆ ಆಯುಕ್ತರಿಗೆ ಪತ್ರ ಬರೆದು ಬರೆದೂ ಪೆನ್ನಿನ ಮಸಿ ಖಾಲಿಯಾಗಿದೆಯೇ ಹೊರತು ಸಮಸ್ಯೆ ಮಾತ್ರ ಹಾಗೆಯೇ ಉಳಿದಿದೆ ಎಂದು ಇಲ್ಲಿನ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸುತ್ತಾರೆ.ಹಳಿಯಾಳ ರಸ್ತೆಯ ಆನಂದ ಮಗುದಮ್ಮ ಕಲ್ಯಾಣ ಮಂಟಪದ ಎಡಬದಿಯ ರಸ್ತೆಗುಂಟ ಮುಂದಕ್ಕೆ ಹೋದರೆ ಎರಡೂ ಬದಿಗಳಲ್ಲಿ ಅರ್ಧಂಬರ್ಧ ಕಟ್ಟಿ ಹಾಗೆಯೇ ಬಿಡಲಾದ ಗಟಾರುಗಳು, ರಸ್ತೆ ಮಧ್ಯದ ವೃತ್ತವನ್ನೇ ಕಸ ಹಾಕುವ ತಾಣ ಮಾಡಿಕೊಂಡ ದೃಶ್ಯಗಳು ಕಂಡು ಬರುತ್ತವೆ.

ಇಲ್ಲಿ ಕಚ್ಚಾ ರಸ್ತೆ ಇರುವುದರಿಂದ ಮತ್ತೂ ಆ ರಸ್ತೆ ಎಂದಿಗೂ ಸರಿ ಹೋಗುವುದಿಲ್ಲ ಎಂದರಿತ ಕರ್ನಾಟಕ ವಿ.ವಿ.ಯ ಪ್ರಾಧ್ಯಾಪಕರೊಬ್ಬರು ದಶಕಗಳ ಹಿಂದೆ ತಾವು ಹಿಡಿದಿದ್ದ ನಿವೇಶನವನ್ನೇ ಮಾರಿಕೊಂಡು ಹೋಗಿದ್ದಾರೆ ಎಂದು ನೆನಪಿಸಿಕೊಳ್ಳುತ್ತಾರೆ ಕರ್ನಾಟಕ ವಿ.ವಿ. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರೂ, ಕವಿಯೂ ಆದ ಪ್ರೊ. ಅಶೋಕ ಶೆಟ್ಟರ್.

ಖಾಲಿ ಮನೆಗಳ ಸುತ್ತ ಮನೆ ಕಟ್ಟಿಕೊಂಡವರ ಗೋಳಂತೂ ಹೇಳತೀರದು. ಕಸ ಇರುವುದರಿಂದ ಸೊಳ್ಳೆಗಳು, ಹಂದಿಗಳ ತಾಣವಾಗಿರುತ್ತವೆ ಈ ಸೈಟುಗಳು.
ಅದಕ್ಕಾಗಿ ನಾವೇ ಕೈಯಿಂದ ಹಣ ಖರ್ಚು ಮಾಡಿ ಕಸವನ್ನು ಕೀಳಿಸುತ್ತೇವೆ. ಆದರೂ ಎಷ್ಟೆಂದು ಸ್ವಚ್ಛ ಮಾಡಿಸೂದ್ರಿ ಎಂದು ಈ ಬಡಾವಣೆ ಆರಂಭವಾದ ಮೊದಲ ಹಂತದಲ್ಲೇ ಮನೆ ಕಟ್ಟಿಸಿರುವ ಡಿಡಿಪಿಐ ಕಚೇರಿಯ ನಿವೃತ್ತಿ ಉದ್ಯೋಗಿ ಮಲ್ಲಿಕಾರ್ಜುನ ಹರಗನಹಳ್ಳಿ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಈ ವಾರ್ಡ್‌ ಸಮಸ್ಯೆಯ ಕುರಿತು ಮಾಹಿತಿ ಪಡೆಯಲು ಪಾಲಿಕೆ ಸದಸ್ಯ ಬಲರಾಮ ಕುಸುಗಲ್‌ ಅವರನ್ನು ಸಂಪರ್ಕಿಸುವ ಪ್ರಯತ್ನ ಫಲ ನೀಡಲಿಲ್ಲ.

***

ನೀವೊಳ್ಳೆ ಹೇಳ್ತೀರಿ. ಕಸ ಒಯ್ಯುವವರು ಯಾರೂ ಅಂತಾನೇ ಗೊತ್ತಿಲ್ಲ. ನಮ್ಮ ಮನಿ ಎದುರಿಗಿ ನೋಡ್ರಿ ಕಸ ಎಷ್ಟು ತುಂಬಿಕೊಂಡದ. ಇದನ್ನ ಫೊಟೊ ಹೊಡದ - ಪೇಪರ್‌ನ್ಯಾಗ ಹಾಕ್ರಿ.
- ಪ್ರೊ. ಅಶೋಕ ಶೆಟ್ಟರ್‌, ತಪೋವನ ನಗರದ ನಿವಾಸಿ, ಕವಿವಿ ಪ್ರಾಧ್ಯಾಪಕ

***

ಗಟಾರು ಕ್ಲೀನ್ ಮಾಡಿಸೂದಿಲ್ಲ. ಮನಿ ಕಸಾ ಒಯ್ಯಾಕಂತೂ ಯಾರೂ ಬರೂದಿಲ್ಲ. ಮಕ್ಕಳನ್ನ ಕರಕೊಂಡು ಸಂಜಿ ಮುಂದ ಹೊರಗೆ ಬಾಕ ಆಗೂದಿಲ್ಲ. ಅಷ್ಟು ಸೊಳ್ಳೆಯ ಕಾಟ

- ಮಲ್ಲಿಕಾರ್ಜುನ ಹರಗನಹಳ್ಳಿ, ತಪೋವನ ನಗರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT