ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಹಾವ್‌... ಅಂಜೂರ್‌ ಹಲ್ವಾ, ಉಪ್ಪಿನಕಾಯಿ ದೋಸೆ...

Last Updated 2 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಬಿಇಎಲ್‌ ರಸ್ತೆಯಲ್ಲಿರುವ ‘ಚೆಟ್ಟೀಸ್‌ ಕಾಫಿ’ ಎಂಬ ಪುಟಾಣಿ ಹೋಟೆಲ್‌ನ ಕ್ಯಾಷಿಯರ್‌ ಮುಂದೆ ನಿಂತು ಮೆನು ಮೇಲೆ ಕಣ್ಣಾಡಿಸಿದಾಗ ಅವರು ‘ಏನು ಕೊಡಲಿ, ಫಸ್ಟ್‌ ಟೈಂ ಬಂದಿರೋದಾ? ಉಪ್ಪಿನಕಾಯಿ ದೋಸೆ ತಿಂದಿದ್ದೀರಾ?’ ಎಂದು ಕಾಳಜಿಯಿಂದ ಸಲಹೆ ಕೊಟ್ಟರು. ‘ಉಪ್ಪಿನಕಾಯಿ ದೋಸೆನಾ? ಅದೇ ಕೊಡಿ’ ಎಂದೆ.

ಮೂರೂವರೆ ನಿಮಿಷದಲ್ಲಿ ಸ್ವಚ್ಛವಾದ ಸ್ಟೀಲ್‌ ತಟ್ಟೆಯಲ್ಲಿ ಮಡಚಿದ ದೋಸೆ, ಪಕ್ಕದಲ್ಲಿ ಎರಡು ಬಗೆಯ ಚಟ್ನಿ ತಂದುಕೊಟ್ಟ ಶೆಫ್‌ ಶ್ರೀನಿವಾಸ್‌, ‘ಪಿಕಲ್‌ ದೋಸೆ’ ಎಂದರು.

ಮೆಂತ್ಯದ ದೋಸೆಯಂತಹ ಘಮ ಮೂಗನ್ನು ಆವರಿಸಿಕೊಂಡಿತು. ದೋಸೆಯ ತುಣುಕನ್ನು ಬಾಯಿಗಿಟ್ಟುಕೊಂಡೆ. ಚೊರ್ರ್‌ ಚೊರ್ರ್‌ ಅಂತ ಬಾಯಿ ತುಂಬಿಕೊಂಡ ಜೊಲ್ಲು ದೋಸೆಯ ತುಣುಕನ್ನು ಮೆತ್ತಗಾಗಿಸಿತು. ಚಪ್ಪರಿಸಿದರೆ ಉಪ್ಪಿನಕಾಯಿಯ ಸ್ವಾದ, ಮೆಂತ್ಯದ ಕಾಳಿನ ರುಚಿಯದೇ ಮೇಲುಗೈ! ಆ ದೋಸೆ ಹೇಗೆ ಮಾಡೋದು ಅಂತ  ಶ್ರೀನಿವಾಸ ವಿವರಿಸಿದರು.

‘ಮಾಮೂಲಿ ಮಸಾಲೆದೋಸೆಯ ಹಿಟ್ಟಿನಲ್ಲಿ ದೋಸೆ ಹುಯ್ದು ಸ್ವಲ್ಪ ಬೇಯುತ್ತಿದ್ದಂತೆ ಹಸಿ ಮೆಣಸಿನಕಾಯಿಯ ಉಪ್ಪಿನಕಾಯಿಯನ್ನು  ಸವರುತ್ತೇನೆ. ಮುಂದಿನ ತಿಂಗಳಿಂದ ಬೆಳ್ಳುಳ್ಳಿ ಶುಂಠಿ, ಮಾವಿನಕಾಯಿ ಮುಂತಾದ ಉಪ್ಪಿನಕಾಯಿಗಳನ್ನು ಹಾಕಿದ ದೋಸೆಯನ್ನೂ ಸವಿಯಬಹುದು. ಈ ದೋಸೆಗೆ ಇಲ್ಲಿ ಬೇಡಿಕೆ ಹೆಚ್ಚು’ಎಂದರು.

ಮಲ್ಲೇಶ್ವರ ನಿವಾಸಿಗಳಾದ ಪೂರ್ಣಪ್ರಜ್ಞ ಮತ್ತು ಸತ್ಯನಾರಾಯಣ ಅವರಿಗೆ ‘ಚೆಟ್ಟೀಸ್‌ನ ತಿಂಡಿ ತೀರ್ಥಗಳ ಸ್ವಾದ ಪರಿಚಯಿಸಲು ಅವರ ಸಂಬಂಧಿಯೊಬ್ಬರು ಕರೆತಂದಿದ್ದರು. ಇಬ್ಬರೂ ಉಪ್ಪಿಟ್ಟು ಖಾಲಿ ಮಾಡಿ ಇಡ್ಲಿ ವಡೆಗಾಗಿ ಕಾಯುತ್ತಾ ಮಸಾಲೆ ಚಹಾವನ್ನು ಗುಟುಕಿರಿಸುತ್ತಿದ್ದರು.
‘ಹಾಗೇ ಎಲ್ಲೋ ಹೋಗುತ್ತಿದ್ದೆವು. ಇಲ್ಲಿ ತಿಂಡಿ ಚೆನ್ನಾಗಿದೇಂತ ಕರ್ಕೊಂಡು ಬಂದ. ನಿಜಕ್ಕೂ ಚೆನ್ನಾಗಿದೆ. ತುಪ್ಪ ಹಾಕಿ ಉಪ್ಪಿಟ್ಟು ಮಾಡಿದ್ದಾರೆ, ಇಡ್ಲಿ ವಡೆನೂ ಚೆನ್ನಾಗಿದೆ ಅಂತ ಆರ್ಡರ್‌ ಮಾಡಿದ್ದಾನೆ. ನೋಡೋಣ’ ಅಂದರು ಪೂರ್ಣಪ್ರಜ್ಞ ಅವರು.

ತಮ್ಮ ಸ್ನೇಹಿತೆಗೆ ಮಸಾಲಾ ಚಹಾದ   ಸವಿ ತೋರಿಸಲು ಕರೆತಂದಿದ್ದ ಟೆಕ್ಕಿ ಅಭಿಜಿತ್‌ ಫಿಲ್ಟರ್‌ ಕಾಫಿಯ ಸ್ವಾದವನ್ನು ಬಣ್ಣಿಸಿದರು. ‘ಎಲ್ಲಾ ಕಡೆ ಫಿಲ್ಟರ್‌ ಕಾಫಿ ಸಿಗುತ್ತದೆ. ಆದರೆ ಇಲ್ಲಿ ಕುಡಿದರೆ ಸಿಗುವ ಆನಂದ ಬೇರೆಲ್ಲೂ ಸಿಗುವುದಿಲ್ಲ. ದೋಸೆಯಂತೂ ಸಖತ್ತಾಗಿರುತ್ತದೆ. ತಿಂಡಿಗಳ ಬೆಲೆಯೂ ಹೆಚ್ಚೇನಿಲ್ಲ’ ಎಂದರು.

‘ಇದೇ ಮೊದಲ ಬಾರಿಗೆ ಮಸಾಲಾ ಚಹಾ ಕುಡಿದಿರೋದು. ತುಂಬಾ ಇಷ್ಟವಾಯಿತು. ಮನೆಯಲ್ಲೇ ತಿಂಡಿ ತಿಂದ್ಕೊಂಡು ಬಂದೆ. ನಮ್ಮನೆಗೆ ಇದು ಸ್ವಲ್ಪ ದೂರವೇ. ಆದರೂ ತಿಂಡಿ ತಿನ್ನಲು ಇಲ್ಲಿಗೆ ಬರಲೇಬೇಕು ಅನ್ನಿಸ್ತಿದೆ’ ಎಂದು ನಕ್ಕರು.

‘ತಿಂಡಿ ಯಾವುದೇ ಇರಲಿ ಎರಡು ಬಗೆಯ ಚಟ್ನಿ ಕೊಡುತ್ತೇವೆ. ಒಂದು, ಈರುಳ್ಳಿ ಹಾಕಿದ ಕಾಯಿ ಚಟ್ನಿ ಮತ್ತೊಂದು ಪುದೀನಾ ಸೊಪ್ಪು ಹಾಕಿದ ಹಸಿರು ಚಟ್ನಿ. ಕೆಲವು ತಿನಿಸುಗಳಿಗೆ ಮಂದವಾದ ಹಸಿರು ಚಟ್ನಿ ಕೊಟ್ಟರೆ ಇನ್ನು ಕೆಲವಕ್ಕೆ ಗಟ್ಟಿ ಚಟ್ನಿ. ಅವಲಕ್ಕಿ ದೋಸೆಗೆ ಟೊಮೆಟೊ  ಕೆಚಪ್‌ನಂತಹ ಗೊಜ್ಜು ಬೇರೆಲ್ಲೂ ಸಿಗುವುದಿಲ್ಲ. ದೋಸೆ ಮುಗಿದರೂ  ಜನ ಅದನ್ನೇ ಚಪ್ಪರಿಸಿಕೊಂಡು ತಿನ್ನುತ್ತಾರೆ’ ಎಂದು ಹೆಮ್ಮೆಯಿಂದ ಹೇಳಿದರು ಶೆಫ್‌ ಶ್ರೀನಿವಾಸ್‌.

ಅವರ ಮಾತು ನಿಜ. ಹತ್ತಿಯಷ್ಟು ಮೃದುವಾದ ಅವಲಕ್ಕಿ ದೋಸೆಯ ತುಂಡನ್ನು ಗೊಜ್ಜಿನಲ್ಲಿ ಅದ್ದಿ ತಿಂದರೆ ನಾಲಿಗೆ ಚುರುಕ್‌ ಅನ್ನುವಷ್ಟು ಖಾರ! ಹುಳಿ, ಖಾರ ಒಟ್ಟಾಗಿ ಚಳಿಗೆ ಹೇಳಿಮಾಡಿಸಿದ ರುಚಿ.

ತರಕಾರಿ ದೋಸೆ ‘ಚೆಟ್ಟೀಸ್‌’ನ ಸಿಗ್ನೇಚರ್‌ ಡಿಶ್‌. ನಾಲ್ಕೈದು ಬಗೆಯ ತರಕಾರಿ, ಈರುಳ್ಳಿ, ಕಾಯಿ, ಶುಂಠಿ ರುಬ್ಬಿ ದೋಸೆ ಹಿಟ್ಟಿಗೆ ಬೆರೆಸಿ ತುಪ್ಪ ಸವರಿ ಮಾಡುವ ದೋಸೆಯಿದು. ಯಾವುದೇ ಹೊತ್ತಿನಲ್ಲೂ ಈ ದೋಸೆಗೆ ಬೇಡಿಕೆ ಕಡಿಮೆಯಾಗುವುದಿಲ್ಲ ಎನ್ನುತ್ತಾರೆ ಶ್ರೀನಿವಾಸ್‌.

‘ಒಂದುವೇಳೆ ನಿಮಗೆ ಬಿಲ್‌ ಸಿಗದೇ ಇದ್ದರೆ ₹1,000 ರೂಪಾಯಿ ಬಹುಮಾನ ಕೊಡುತ್ತೇವೆ’ ಎಂಬ ನೋಟಿಸ್‌, ಕ್ಯಾಷಿಯರ್‌ ಟೇಬಲ್‌ನಲ್ಲಿ ಗಮನ ಸೆಳೆಯುತ್ತದೆ.

ರೆಸ್ಟೋರೆಂಟ್‌ವೊಂದು ಜನಪ್ರಿಯವಾಗಲು ಅಲ್ಲಿ ಸಿಗುವ ಊಟೋಪಹಾರಗಳ ಗುಣಮಟ್ಟ ಉತ್ತಮವಾಗಿದ್ದರೆ ಸಾಕು ಎಂಬುದಕ್ಕೆ ‘ಚೆಟ್ಟೀಸ್‌ ಕಾಫಿ’ ಉತ್ತಮ ನಿದರ್ಶನ.

ಅಂಜೂರದ ಹಲ್ವಾ
ಒಣ ಅಂಜೂರವನ್ನು ನೀರು ಕುದಿಯುವಾಗ ಹಾಕಿ ಕೆಂಪಗಾಗುತ್ತಿದ್ದಂತೆ  ಬಸಿದು ರುಬ್ಬಿದ ಪೇಸ್ಟನ್ನು ಬಾಣಲೆಯಲ್ಲಿ ಬಿಸಿ ಮಾಡಿಕೊಂಡು ಖೋವಾ ಸೇರಿಸಿ, ಸಕ್ಕರೆ ತುಪ್ಪ ಹಾಕಿ ತಳ ಬಿಡುತ್ತಿದ್ದಂತೆ ಇಳಿಸಿದರೆ ಅಂಜೂರದ ಹಲ್ವಾ ಸಿದ್ಧ.

ರೆಸ್ಟೊರೆಂಟ್‌: ಚೆಟ್ಟೀಸ್‌ ಕಾಫಿ
ಪ್ರಮುಖ ತಿನಿಸುಗಳು: ಉಪ್ಪಿನ ಕಾಯಿ ದೋಸೆ, ಅವಲಕ್ಕಿ ದೋಸೆ, ಮಸಾಲೆ ದೋಸೆ, ತರಕಾರಿ ದೋಸೆ, ಇಡ್ಲಿ ವಡೆ, ಉಪ್ಪಿಟ್ಟು, ಶಾವಿಗೆ. ಅಂಜೂರ ಹಲ್ವಾ
ಸಮಯ: ಬೆಳಿಗ್ಗೆ 7ರಿಂದ ಮ. 1;
ಸಂಜೆ 5ರಿಂದ ರಾತ್ರಿ 9.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT