ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನೈ : ಕಡಲ ಜೀವಕ್ಕೆ ಕುತ್ತು ತಂದ ತೈಲ

Last Updated 2 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಚೆನ್ನೈ: ಇಲ್ಲಿನ ಕಾಮರಾಜರ್ ಬಂದರಿಗೆ ಹೊಂದಿಕೊಂಡಿರುವ ಕಡಲಿನ ನೀರಿನಲ್ಲಿ ಚೆಲ್ಲಿರುವ ತೈಲವನ್ನು ತೆರವು ಮಾಡುವ ಕಾರ್ಯ ಗುರುವಾರವೂ ಮುಂದುವರಿದಿದೆ.

ಚೆನ್ನೈನ ವಿವಿಧ ಪ್ರಾಧಿಕಾರಗಳ 1025 ಸಿಬ್ಬಂದಿ ಹಾಗೂ ವಿವಿಧ ಸಂಘಟನೆಗಳ  ನೂರಾರು ಸ್ವಯಂಸೇವಕರು ಬಕೆಟ್‌ಗಳಲ್ಲಿ ತೈಲವನ್ನು ಮೊಗೆದು ತೆರವು ಮಾಡುತ್ತಿದ್ದಾರೆ. ಆದರೆ ತೆರವು ಕಾರ್ಯ ತ್ವರಿತವಾಗಿ ಆಗದ ಕಾರಣ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ಕೆಲಸಕ್ಕೆ ಬಾರದ ಯಂತ್ರಗಳು: ಚೆನ್ನೈನ ಒಳಚರಂಡಿಗಳನ್ನು ಸ್ವಚ್ಛ ಮಾಡಲು ಬಳಸುವ ‘ಸೂಪರ್‌ ಸಕ್ಕರ್’ ಯಂತ್ರವಿರುವ ಎರಡು ಟ್ರಕ್‌ಗಳನ್ನು ತೈಲ ತೆಗೆಯುವ ಕಾರ್ಯಾಚರಣೆಗೆ ಬಳಸಲಾಗುತ್ತಿದೆ. ಈ ಯಂತ್ರಗಳು ಈವರೆಗೆ 27 ಟನ್‌ಗಳಷ್ಟು ಬಗ್ಗಡವನ್ನು ಮಾತ್ರ ಹೊರಗೆ ತೆಗೆದಿವೆ. ಈ ಬಗ್ಗಡದಲ್ಲಿ ತೈಲದ ಪ್ರಮಾಣ ತೀರಾ ಕಡಿಮೆ ಇದೆ. ಅಲ್ಲದೆ, ನೀರು ಹೀರಿಕೊಳ್ಳುವ ಯಂತ್ರಗಳಿರುವ ಟ್ರಕ್‌ಗಳನ್ನು ಬಳಸಿ ತೈಲ ಮಿಶ್ರಿತ ನೀರನ್ನು ಹೊರಗೆ ತೆಗೆಯಲಾಗುತ್ತಿದೆ. ಆದರೆ ಈ ಮಿಶ್ರಣದಲ್ಲಿ ತೈಲದ ಪ್ರಮಾಣ ಶೇ 30 ರಷ್ಟು ಮಾತ್ರ. ಬಕೆಟ್‌ ಮತ್ತು ಕೈಗಳನ್ನು ಬಳಸಿ ಸಿಬ್ಬಂದಿ ಹೊರತೆಗೆಯುತ್ತಿರುವ ತೈಲದ ಪ್ರಮಾಣವೇ ಹೆಚ್ಚಾಗಿದೆ ಎಂದು ಕಾಮರಾಜರ್‌ ಬಂದರು ಪ್ರಾಧಿಕಾರ ಹೇಳಿದೆ.

ಜನವರಿ 28ರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಎರಡು ಹಡಗುಗಳ ನಡುವೆ ಡಿಕ್ಕಿ ನಡೆದು, ಒಂದು ಹಡಗಿನಿಂದ (ಟ್ಯಾಂಕರ್‌) ತೈಲ ಸೋರಿಕೆ ಆಗಿತ್ತು.  ಕಾಮರಾಜರ್‌ ಬಂದರು ಪ್ರದೇಶ ಮತ್ತು  ಮರೀನಾ ಕಡಲ ತೀರದಲ್ಲಿ ತೈಲ ಶೇಖರವಾಗಿದೆ. ತೀರದಲ್ಲಿರುವ ನೀರಿನ ಮೇಲೆ ಸುಮಾರು ಮೂರ್ನಾಲ್ಕು ಇಂಚು ದಪ್ಪನೆಯ ಪದರದಷ್ಟು ತೈಲ ನಿಂತಿದೆ. ಅಲ್ಲದೆ ಕಡಲ ಕೊರೆತ ತಪ್ಪಿಸಲು ಹಾಕಿರುವ ಕಲ್ಲುಗಳ ಮೇಲೆ ಭಾರಿ ಪ್ರಮಾಣದಲ್ಲಿ ತೈಲ ಅಂಟಿಕೊಂಡಿದೆ.

ಸತ್ತ ಕಡಲಾಮೆಗಳು
ತೈಲ ಶೇಖರವಾಗಿರುವ ತೀರದಲ್ಲಿ ಈವರೆಗೆ 20 ಕಡಲಾಮೆಗಳ ಶವಗಳು ಪತ್ತೆಯಾಗಿವೆ. ಅವೆಲ್ಲವೂ ತೈಲದ ಕಾರಣದಿಂದಲೇ ಮೃತಪಟ್ಟಿವೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ. ಜತೆಗೆ ಸಾವಿರಾರು ಸತ್ತ ಮೀನುಗಳು ತೀರ ಪ್ರದೇಶಕ್ಕೆ ಬಂದು ಬೀಳುತ್ತಿವೆ ಎಂದು ಮೂಲಗಳು ತಿಳಿಸಿವೆ. ‘ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಆಲಿವ್ ರಿಡ್ಲೆ ಆಮೆಗಳು ಮೊಟ್ಟೆ ಇಡುವ ಸಲುವಾಗಿ ತೀರ ಪ್ರದೇಶಕ್ಕೆ ಬರುತ್ತವೆ. ತೈಲದಲ್ಲಿ ತೊಯ್ದು ಹಲವು ಆಮೆಗಳು ಸತ್ತಿವೆ. ತೀರಕ್ಕೆ ಬರಲಿರುವ ಮತ್ತಷ್ಟು ಆಮೆಗಳೂ ಸಾಯಬಹುದು. ಇದರಿಂದ ಈ ಆಮೆಗಳ ಸಂತಾನೋತ್ಪತಿ ನಡೆಯದೆ ಅವುಗಳ ಸಂಖ್ಯೆಯಲ್ಲಿ ಇಳಿಕೆ ಆಗುವ ಅಪಾಯವಿದೆ’ ಎಂದು ಟರ್ಟಲ್ ವಾಕ್‌ ಸಂಘಟನೆ ಕಳವಳ ವ್ಯಕ್ತಪಡಿಸಿದೆ.

ಅಂಕಿ ಅಂಶ

40ಟನ್‌
ಹೊರತೆಗೆಯಲಾದ ಬಗ್ಗಡದ ತೂಕ

27ಟನ್‌
ಹೊರತೆಗೆಯಲಾದ ತೈಲ ಮಿಶ್ರಿತ ನೀರಿನ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT