ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ ಮಳಿಗೆ ಹಂಚಿಕೆ ರದ್ದತಿಗೆ ಆಗ್ರಹ

Last Updated 3 ಫೆಬ್ರುವರಿ 2017, 5:55 IST
ಅಕ್ಷರ ಗಾತ್ರ

ಬೀದರ್: ನಗರದಲ್ಲಿನ ನಗರಸಭೆಯ ಮಳಿಗೆಗಳ ಹಂಚಿಕೆ ರದ್ದುಪಡಿಸಿ ಮೀಸಲಾತಿ ಆಧಾರದ ಮೇಲೆ ಹೊಸದಾಗಿ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಧರಣಿ ನಡೆಸಿದರು.

ನಗರಸಭೆಗೆ ಸೇರಿದ ಮಳಿಗೆಗಳನ್ನು ಮೂರು–ನಾಲ್ಕು ದಶಕಗಳಿಂದ ಮೀಸಲಾತಿ ಆಧಾರದಲ್ಲಿ ಹಂಚಿಕೆ ಮಾಡದೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳ ನಿರುದ್ಯೋಗಿಗಳನ್ನು ವಂಚಿಸುತ್ತ ಬರಲಾಗಿದೆ ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿರುವ ಮನವಿಯಲ್ಲಿ ದೂರಿದ್ದಾರೆ.
ಶೇ 50 ರಷ್ಟು ಮಳಿಗೆಗಳು ಒಂದೇ ಸಮುದಾಯದ ಪಾಲಾಗಿವೆ. ಹಣ ಪಡೆದು ನಿಯಮಗಳನ್ನು ಗಾಳಿಗೆ ತೂರಿ ಒಬ್ಬರಿಗೆ ಮೂರು-ನಾಲ್ಕು ಮಳಿಗೆಗಳನ್ನು ಹಂಚಿಕೆ ಮಾಡಲಾಗಿದೆ. ಬಹುತೇಕ ಫಲಾನುಭವಿಗಳು ಮಳಿಗೆಗಳನ್ನು ಬೇರೆಯವರಿಗೆ ಬಾಡಿಗೆ ಮೇಲೆ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ರೋಸ್ಟರ್ ಅನ್ವಯ ಮಳಿಗೆಗಳನ್ನು ಹಂಚಿಕೆ ಮಾಡುವಂತೆ ನಗರಸಭೆ ಆಯುಕ್ತರು ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ ಎಂದು ಆಪಾದಿಸಿದ್ದಾರೆ.

ಸದ್ಯ ಮಾಡಲಾದ ಮಳಿಗೆಗಳ ಹಂಚಿಕೆಯನ್ನು ರದ್ದುಪಡಿಸಿ ರೋಸ್ಟರ್ ಪದ್ಧತಿ ಮೂಲಕ ಹಂಚಿಕೆ ಮಾಡಬೇಕು. ಮಳಿಗೆಗಳಿಗೆ ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ನಗರಸಭೆಯಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಅವಧಿಗೆ ಸೇವೆ ಸಲ್ಲಿಸುತ್ತಿರುವವರನ್ನು ವರ್ಗಾವಣೆ ಮಾಡಬೇಕು. ನಗರಸಭೆಗೆ ಸೇರಿದ ಸರ್ಕಾರಿ ಭೂಮಿ, ನಿವೇಶನ, ಉದ್ಯಾನ ಅತಿಕ್ರಮಣ ತೆರವುಗೊಳಿಸಬೇಕು. ಅಂತಹ ಭೂಮಿಯನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಬಡವರಿಗೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಮಾಜಿ ಶಾಸಕ ಸೈಯದ್ ಜುಲ್ಫೆಕರ್ ಹಾಷ್ಮಿ, ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವಿಠ್ಠಲ ಡಾಕುಳಗಿ, ಜಿಲ್ಲಾ ಕಾರ್ಯದರ್ಶಿ ಮಹ್ಮಮದ್ ಜಾಫರ್, ಅಂಬಾದಾಸ ಚಕ್ರವರ್ತಿ, ರಮೇಶ ಹಿಪ್ಪಳಗಾಂವ್, ಬಸವರಾಜ ಜಲಾದೆ, ಜೈಭೀಮ ಶರ್ಮಾ, ರಾಜಕುಮಾರ ಭಾವಿಕಟ್ಟಿ, ಪವನ ಗುನ್ನಳ್ಳಿಕರ್, ಸಚಿನಕುಮಾರ ಮಾಲೆ  ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT