ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರದರ್ಶಕವಾಗಿ ನಡೆಸಲು ಸೂಚನೆ

ಕೆಪಿಎಸ್‌ಸಿ ಪ್ರಥಮ–ದ್ವಿತೀಯ ದರ್ಜೆ ಸಹಾಯಕರ ನೇಮಕಾತಿಗೆ ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆ
Last Updated 3 ಫೆಬ್ರುವರಿ 2017, 6:15 IST
ಅಕ್ಷರ ಗಾತ್ರ

ವಿಜಯಪುರ: ಸಹಾಯಕರು, ಪ್ರಥಮ ದರ್ಜೆ ಸಹಾಯಕರು, ಕಿರಿಯ ಸಹಾಯಕರು, -ದ್ವಿತೀಯ ದರ್ಜೆ ಸಹಾಯಕರು, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಹಿರಿಯ, ಕಿರಿಯ ಸಹಾಯಕರ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಲೋಕಸೇವಾ ಆಯೋಗ ನಡೆಸುವ  ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ವ್ಯವಸ್ಥಿತವಾಗಿ, ಪಾರದರ್ಶಕ ರೀತಿಯಲ್ಲಿ ನಡೆಯುವಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಅಧಿಕಾರಿಗಳಿಗೆ ಸೂಚಿಸಿದರು.

ಪರೀಕ್ಷೆಗಾಗಿ ನೇಮಿಸಿರುವ ಮೇಲ್ವಿಚಾರಕರು, ವೀಕ್ಷಕರು, ಮಾರ್ಗಾಧಿಕಾರಿಗಳು, ಸಂವೀಕ್ಷಕರು, ತಾಲ್ಲೂಕು ಮಟ್ಟದ ಅಧಿಕಾರಿ ಗಳೊಂದಿಗೆ ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ  ನಡೆಸಿದ ಪೂರ್ವಸಿದ್ಧತಾ ಸಭೆಯಲ್ಲಿ  ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಇದೇ 5, 11, 12ರಂದು ಪ್ರತಿ ದಿನ ಬೆಳಿಗ್ಗೆ 10ರಿಂದ 11.30ರವರೆಗೆ, ಮಧ್ಯಾಹ್ನ 2ರಿಂದ 3.-30ರವರೆಗೆ ಪರೀಕ್ಷೆಗಳು ನಡೆಯಲಿದ್ದು, ಈ ಪರೀಕ್ಷೆಗಳಲ್ಲಿ ನಕಲುದಂತಹ ಅಕ್ರಮಗಳಿಗೆ ಅವಕಾಶ ನೀಡದೆ ಪಾರದರ್ಶಕವಾಗಿ ಪರೀಕ್ಷೆ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪರೀಕ್ಷೆಗೆ ಸಂಬಂಧಪಟ್ಟಂತೆ ನಿಯಮ, ವಿಧಿವಿಧಾನಗಳನ್ನು ಚಾಚು ತಪ್ಪದೆ ಪಾಲಿಸಬೇಕು. ನಿಗದಿತ ಸಮಯಕ್ಕೆ ಪ್ರಶ್ನೆ ಪತ್ರಿಕೆ ಇತರೆ ಸಾಮಗ್ರಿ ಗಳನ್ನು ಖುದ್ದಾಗಿ ಮಾರ್ಗಾಧಿಕಾರಿಗಳು ಪಡೆಯಬೇಕು. ಪರವಾಗಿ ಯಾರೊಬ್ಬ ರನ್ನು ಕಳುಹಿಸದೆ ನಿಯೋಜಿತ ಅಧಿಕಾರಿ ಖುದ್ದಾಗಿ ಜವಾಬ್ದಾರಿಯಿಂದ ಈ ಕಾರ್ಯವನ್ನು ನಿರ್ವಹಿಸಬೇಕು. ಪ್ರಶ್ನೆ ಸಹಿತ ಉತ್ತರ ಪತ್ರಿಕೆಗಳನ್ನು ವ್ಯವಸ್ಥಿತ ವಾಗಿ ಕಾಯ್ದಿರಿಸುವಂತೆ ಸೂಚಿಸಿದ ಅವರು, ಪರೀಕ್ಷೆ ಆರಂಭದಿಂದ ಮುಕ್ತಾಯದವರೆಗಿನ ಎಲ್ಲ ಪ್ರಕ್ರಿಯೆಗಳನ್ನು ನಿಯಮಾವಳಿಯಂತೆ ಪಾಲಿಸುವಂತೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಪರೀಕ್ಷೆಯು ಒಟ್ಟು 60 ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಗೆ ನೇಮಿಸಿರುವ ವೀಕ್ಷಕರು, ಪರೀಕ್ಷಾ ಕೇಂದ್ರದಲ್ಲಿಯೇ ಇದ್ದುಕೊಂಡು ನಿಗಾ ವಹಿಸಬೇಕು. ಯಾವುದೇ ಪರಿಸ್ಥಿತಿಯಲ್ಲಿ ಪರೀಕ್ಷಾ ಕೇಂದ್ರದ ಹೊರಗಡೆ ಹೋಗುವುದು, ಇತರೆ ನಿರ್ಲಕ್ಷ್ಯದಂತಹ ಚಟುವಟಿಕೆಗಳಿಗೆ ಅವಕಾಶ ನೀಡದೆ ಪರೀಕ್ಷೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು.

ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್, ರಿಸ್ಟ್ ವಾಚ್, ಬ್ಲೂಟೂತ್ ಡಿವೈಸ್, ಪೇಜರ್, ವೈರ್‌ಲೆಸ್ ಕ್ಯಾಲ್ಕ್ಯುಲೇಟರ್, ಇತರೆ ಎಲೆಕ್ಟ್ರಾನಿಕ್ ಉಪಕರಣಗಳು, ಮಾರ್ಕರ್‌ಗಳು, ಲಾಗ್ ಟೇಬಲ್‌ಗಳು, ವೈಟ್ ಪ್ಲ್ಯೂಡ್, ಬ್ಲೇಡ್, ಎರೆಸರ್‌ಗಳನ್ನು ಪರೀಕ್ಷಾ ಕೇಂದ್ರದ ಆವರಣ ಮತ್ತು ಪರೀಕ್ಷಾ ಕೊಠಡಿಯಲ್ಲಿ ತರುವುದನ್ನು ನಿಷೇಧಿಸಲಾಗಿದೆ.

ಅದರಂತೆ ಪರೀಕ್ಷಾ ಕೇಂದ್ರದಲ್ಲಿ, ಪರೀಕ್ಷಾ ಕೊಠಡಿಗಳಲ್ಲಿ ಪರೀಕ್ಷಾರ್ಥಿಗಳು, ಪರೀಕ್ಷೆಗೆ ನಿಯೋಜಿತ ಅಧಿಕಾರಿಗಳು ಹೊರತುಪಡಿಸಿ ಸಾರ್ವಜನಿಕರನ್ನು ನಿಷೇಧಿಸಿದೆ. ವಿಡಿಯೋಗ್ರಾಫಿ, ಫೋಟೋಗ್ರಫಿ, ಮಾಡುವುದನ್ನು ನಿಷೇಧಿಸಿದೆ. ಪರೀಕ್ಷಾ ಪೂರ್ವದ ಪ್ರಕ್ರಿಯೆಗಳನ್ನು ಹಾಗೂ ಪರೀಕ್ಷಾ ಕೇಂದ್ರದ ಆವರಣದ ಹೊರಗಡೆಯ ವಿಡಿಯೋ ಚಿತ್ರೀಕರಣವನ್ನು ಮಾಡುವ ಜವಾಬ್ದಾರಿಯನ್ನು ಆಯಾ ಮೇಲ್ವಿಚಾರಕರು ವಹಿಸಿಕೊಂಡು ಆಯೋಗಕ್ಕೆ ವರದಿ ನೀಡಬೇಕು.

ಪರೀಕ್ಷಾ ಕೊಠಡಿಗಳಲ್ಲಿ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು. ಪರೀಕ್ಷೆ ಮುಗಿಯುವವರೆಗೆ ಶಿಸ್ತು ಪಾಲನೆಯಾಗಬೇಕೆಂದ ಅವರು, ಸಮರ್ಪಕ ಆಸನದ ವ್ಯವಸ್ಥೆ, ನಕ್ಷೆ, ಇರುವಂತೆ ನೋಡಿಕೊಂಡು ಯಾವುದೇ ಲೋಪಕ್ಕೆ ಅವಕಾಶ ನೀಡಬಾರದು. ಪರೀಕ್ಷಾ ಕೇಂದ್ರದಲ್ಲಾಗುವ ಲೋಪಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ಎಚ್ಚರಿಸಿದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಸುಂದರೇಶಬಾಬು, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಬಿ.ಬೂದೆಪ್ಪ ಉಪಸ್ಥಿತರಿದ್ದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಭಾರ ಉಪ ನಿರ್ದೇಶಕ ಅಶೋಕ ಎಂ.ಲಿಮ್ಕರ್ ಪರೀಕ್ಷೆ ಸಿದ್ಧತೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ಸಮಗ್ರವಾಗಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT