ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಿಭೂಮಿ ಸಂರಕ್ಷಣೆಗೆ ಕಾಳಜಿ ತುರ್ತು ಅಗತ್ಯ

ಕಾಂಡ್ಲಾ ಜೀವವೈವಿಧ್ಯ ಮತ್ತು ಸಂರಕ್ಷಣೆ ಕಾರ್ಯಾಗಾರದಲ್ಲಿ ಮ್ಯಾಂಗ್ರೋವ್‌ ಸೊಸೈಟಿ ಅಧ್ಯಕ್ಷ ಡಾ.ಅರವಿಂದ್‌ ಸಲಹೆ
Last Updated 3 ಫೆಬ್ರುವರಿ 2017, 6:37 IST
ಅಕ್ಷರ ಗಾತ್ರ

ಕಾರವಾರ: ಬಹುಪಯೋಗಿ ಆಗಿರುವ ತರಿಭೂಮಿಯನ್ನು ಸಂರಕ್ಷಣೆ ಮಾಡಲು ಎಲ್ಲರೂ ಕಾಳಜಿ ವಹಿಸಬೇಕಾಗಿದೆ ಎಂದು ಮ್ಯಾಂಗ್ರೋವ್‌ ಸೊಸೈಟಿ ಆಫ್‌ ಇಂಡಿಯಾದ ಅಧ್ಯಕ್ಷ ಡಾ.ಅರವಿಂದ್‌ ಉಂತವಲೆ ಹೇಳಿದರು.

ವಿಶ್ವ ತರಿಭೂಮಿ ದಿನಾಚರಣೆ ನಿಮಿತ್ತ ಇಲ್ಲಿನ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ‘ಕಾಂಡ್ಲಾ ಜೀವವೈವಿಧ್ಯ ಮತ್ತು ಸಂರಕ್ಷಣೆ’ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಫಲವತ್ತಾದ ಅಥವಾ ನೀರಿನಿಂದ ಆವೃತವಾದ ಭೂಮಿಯನ್ನು ತರಿಭೂಮಿ ಎನ್ನುತ್ತೇವೆ. ಇದು ವಿವಿಧ ಪ್ರಭೇದದ ಗಿಡಗಳು ಹಾಗೂ ಜೀವವೈವಿಧ್ಯಕ್ಕೆ ಆಶ್ರಯ ನೀಡಿದೆ. ಈ ಭಾಗದಲ್ಲಿ ಬೆಳೆಯುವ ಕಾಂಡ್ಲಾ ಗಿಡಗಳು ಮಾನವನಿಗೆ ಒಂದಲ್ಲ ಒಂದು ರೀತಿಯಲ್ಲಿ ಉಪಕಾರಿಯಾಗಿದೆ. ಸಮುದ್ರ, ನದಿ ತೀರದ ರಕ್ಷಣೆ ಜತೆಗೆ ಸುನಾಮಿ ಹಾಗೂ ಬಿರುಗಾಳಿಯ ಪ್ರಭಾವವನ್ನು ಕುಗ್ಗಿಸುತ್ತದೆ. ಅಲ್ಲದೇ ಮೀನು, ಸಿಗಡಿ, ಏಡಿಗಳ ವಂಶಾಭಿವೃದ್ಧಿ ನೆಲೆ ಕೂಡ ಆಗಿದೆ. ಹೀಗಿರುವಾಗ ತರಿಭೂಮಿಯನ್ನು ನಾಶ ಮಾಡಿದರೆ ಪ್ರಕೃತಿಯಲ್ಲಿ ಏರುಪೇರು ಆಗಲಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾತನಾಡಿ, ತರಿಭೂಮಿಯು ಎಲ್ಲೆಡೆ ಕಂಡುಬರುತ್ತದೆ. ಮಾನವ ಹಾಗೂ ಪ್ರಾಣಿಗಳು ಅವುಗಳ ಮೇಲೆ ಅವಲಂಬಿತವಾಗಿವೆ. ಈ ಪ್ರದೇಶದಲ್ಲಿನ ಸಸ್ಯ ಪ್ರಭೇದಗಳು ನಾಶ ಆಗುವುದನ್ನು ತಡೆಗಟ್ಟಬೇಕು. ಆಗ ಮಾತ್ರ ಮಾನವ ಮತ್ತು ನಿಸರ್ಗದ ನಡುವೆ ಸಮತೋಲನ ವನ್ನು ಕಾಯ್ದುಕೊಳ್ಳಬಹುದು ಎಂದರು.

‘ನಾವೆಲ್ಲ ಮೊದಲಿಗೆ ನಿಸರ್ಗ ಎಂದರೇನು? ಅದರ ಉಪಯೋಗ ಏನಿದೆ? ಅನ್ನುವುದನ್ನು ಸ್ಪಷ್ಟವಾಗಿ ತಿಳಿಯಬೇಕು. ಕಾಂಡ್ಲ ವನಗಳು ಉತ್ತರ ಕನ್ನಡ ಜಿಲ್ಲೆಗೆ ವರದಾನವಾಗಿದೆ. ಅವುಗಳನ್ನು ಸಂರಕ್ಷಣೆ ಮಾಡುವುದರ ಜತೆಗೆ ಅದನ್ನು ವಿಸ್ತರಿಸಲು ಶ್ರಮವಹಿಸಬೇಕಿದೆ’ ಎಂದರು.

ಜಿಲ್ಲಾ ವಿಜ್ಞಾನ ಕೇಂದ್ರದ ಡಾ.ವಿ.ಎನ್‌.ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್‌.ಚಂದ್ರಶೇಖರ ನಾಯಕ, ಸಹ ಪ್ರಾಧ್ಯಾಪಕ ಜಯಕರ ಭಂಡಾರಿ, ಹಿರಿಯ ವಿಜ್ಞಾನಿಗಳಾದ ಡಾ. ಸಯಿದಾ ವಾಫರ್‌, ಡಾ.ವಿನೋದ ದಾಂಡ್ಲೇಕರ್ ಉಪಸ್ಥಿತರಿದ್ದರು. ವಿಜ್ಞಾನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT