ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆಗಟ್ಟಿದ ಜನಪದ ನೃತ್ಯ, ಗಾಯನ ಇಂಪು

ಜಿಲ್ಲಾ ಮಟ್ಟದ ಯುವಜನೋತ್ಸವ: ಸ್ಪರ್ಧಿಗಳ ಕೊರತೆ
Last Updated 3 ಫೆಬ್ರುವರಿ 2017, 7:36 IST
ಅಕ್ಷರ ಗಾತ್ರ

ರಾಮನಗರ: ಕಣ್ಮನ ಸೆಳೆದ ಜನಪದ ನೃತ್ಯಗಳು, ಹಾಡುಗಾರಿಕೆ, ಸ್ಪರ್ಧಿಗಳ ಲಯಬದ್ಧ ಪ್ರದರ್ಶನ..
ಇದೆಲ್ಲ ಕಂಡುಬಂದಿದ್ದು ಜಾನಪದ ಲೋಕದ ಆವರಣದಲ್ಲಿ. ಸೋಮವಾರ ಇಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಜಿಲ್ಲೆಯ ಪ್ರತಿಭಾವಂತರು ತಮ್ಮ ಪ್ರತಿಭೆ ಪ್ರದರ್ಶಿಸಿದರು. ಭಾವಗೀತೆ, ಜನಪದ ಗೀತೆ, ಗೀಗೀ ಪದಗಳ ಗಾಯನ, ನೃತ್ಯ, ಏಕಾಪಾತ್ರಾಭಿನಯ.. ಹೀಗೆ ಒಟ್ಟು 18 ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪುರುಷ ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕವಾಗಿ ಸ್ಪರ್ಧೆಗಳು ನಡೆದವು.

ಸ್ಪರ್ಧಿಗಳ ಕೊರತೆ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಈ ಯುವ ಜನೋತ್ಸವದಲ್ಲಿ ಸ್ಪರ್ಧಿಗಳ ಕೊರತೆಯೂ ಕಾಡಿತು. ಕೆಲವು ಸ್ಪರ್ಧೆಗಳಿಗಂತೂ ಬೆರಳೆಣಿಕೆಯಷ್ಟು ಮಂದಿ, ತಂಡಗಳು  ಮಾತ್ರವೇ ಪಾಲ್ಗೊಂಡಿದ್ದವು.
ಕಾರ್ಯಕ್ರಮದ ಉದ್ಘಾಟನೆಯಲ್ಲಿ ಪಾಲ್ಗೊಂಡ ಅತಿಥಿಗಳೂ ಈ ಬಗ್ಗೆ ಆತಂಕ ವ್ಯಕ್ತಪಡಿಸಿದರು.

‘ಒಂದು ಕಾಲಘಟ್ಟದಲ್ಲಿ ಯುವಜನ ಮೇಳ ಎನ್ನುವುದು ಹಬ್ಬದಂತೆ ಇರುತಿತ್ತು. ಆದರೆ ಇಂದಿನ ಯುವಜನರಿಗೆ ಅದರ ಅರಿವು ಕಡಿಮೆ. ಇದು ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಇಂತಹ ಕಾರ್ಯಕ್ರಮಗಳು ನಿಂತುಹೋದರೂ ಅಚ್ಚರಿಯಿಲ್ಲ’ ಎಂದು ರಂಗ ನಿರ್ದೇಶಕ ಬೈರ್ನಳ್ಳಿ ಶಿವರಾಮು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಾನಪದ ಲೋಕದ ಆಡಳಿತಾಧಿಕಾರಿ ಕುರುವ ಬಸವರಾಜು ‘ಭಾವಗೀತೆ ಎಂಬ ಪರಿಕಲ್ಪನೆಯು ಕನ್ನಡದ ವಿಶೇಷತೆಗಳಲ್ಲಿ ಒಂದು. ಆದರೆ ಇಂದು ಭಾವಗೀತೆ ಹಾಗೂ ಜನಪದ ಗೀತೆಗಳು ಹೆಚ್ಚೆಚ್ಚು ಸಿನಿಮಯವಾಗುತ್ತಿವೆ. ಇದು ಹೀಗೆಯೇ ಮುಂದುವರಿದಲ್ಲಿ ಇವು ತಮ್ಮ ಅಸ್ತಿತ್ವ ಕಳೆದುಕೊಳ್ಳುವ ದಿನಗಳು ದೂರವಿಲ್ಲ’ ಎಂದು ವಿಷಾದಿಸಿದರು.

‘ಜಿಲ್ಲೆಯು ಜನಪದ ಕಲೆಗಳ ಸಮೃದ್ಧ ನಾಡು. ಅಂತಹ ನಿಜ ಪ್ರತಿಭೆಗಳಿಗೆ ಹೆಚ್ಚೆಚ್ಚು ಅವಕಾಶಗಳು ಸಿಗಬೇಕು. ಕಲಾವಿದರು ಹೊಸ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳಬೇಕು’ ಎಂದು ಆಶಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಪ್ರಾಸ್ತಾವಿಕವಾಗಿ ಮಾತನಾಡಿ ‘ತಾಲ್ಲೂಕು ಮಟ್ಟದಲ್ಲಿ ನಡೆದ ಸ್ಪರ್ಧೆಗಳಲ್ಲಿ ಆಯ್ಕೆಯಾದವರು ಇಲ್ಲಿ ಪ್ರದರ್ಶನ ನೀಡಲಿದ್ದಾರೆ. ಇಲ್ಲಿ ವಿಜೇತರಾಗುವವರು ಶಿವಮೊಗ್ಗದಲ್ಲಿ ನಡೆದ ವಿಭಾಗೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆಯಲಿದ್ದಾರೆ. 16ರಿಂದ 35 ವಯಸ್ಸಿನ ಒಳಗಿನವರಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು. ರಂಗಾರೆಡ್ಡಿ ಕೋಡಿರಾಂಪುರ, ಯು.ಎಂ. ರವಿ, ಎಂ. ಬೈರೇಗೌಡ, ಅಂಕನಹಳ್ಳಿ ಪಾರ್ಥ, ನಾಗಮಣಿ, ಶಿವಕುಮಾರ್ ಇತರರು ಅತಿಥಿ ಹಾಗೂ ಸ್ಪರ್ಧೆಗಳ ತೀರ್ಪುಗಾರರಾಗಿ ಪಾಲ್ಗೊಂಡರು. ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

**

ಈಚಿನ ದಿನಗಳಲ್ಲಿ ಜನಪದ ಕಲೆಗಳಲ್ಲಿ ತೊಡಗಿಸಿಕೊಳ್ಳುವ ಯುವಜನರ ಸಂಖ್ಯೆ ಕಡಿಮೆಯಾಗುತ್ತಿದೆ. ಅವರು ತಮ್ಮನ್ನು ಹೊಸ ಪ್ರಯೋಗಗಳಿಗೆ ತೊಡಗಿಸಿಕೊಳ್ಳಬೇಕು
- ಕುರುವ ಬಸವರಾಜು, ಆಡಳಿತಾಧಿಕಾರಿ, ಜಾನಪದ ಲೋಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT