ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಕಳಕಳಿಗಾಗಿ ‘ಕಾಮಿಕ್ಸ್’

Last Updated 3 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಕಟ್ಟುಕಥೆಗಳನ್ನು ಆಧಾರವಾಗಿಟ್ಟುಕೊಂಡು ಪ್ರಕಟವಾಗುತ್ತಿದ್ದ ಕಾಮಿಕ್ಸ್‌ ಪುಸ್ತಕಗಳು ಈಗ ಗಂಭೀರ ವಿಷಯಗಳನ್ನು ತಿಳಿಸಲು ಬಳಕೆಯಾಗುತ್ತಿವೆ. ಮೊದಲೆಲ್ಲಾ ಹಾಸ್ಯಚಿತ್ರಗಳ ರೂಪದಲ್ಲಿ ಮಕ್ಕಳಿಗಾಗಿ ಕತೆಗಳನ್ನು ಹೆಣೆಯಲಾಗುತ್ತಿತ್ತು. ಆದರೆ ರಾಮ್‌ ದೇವಿನೇನಿ ಎಂಬ ಬರಹಗಾರ ಮಹಿಳೆಯರ ಮೇಲೆ ನಡೆಯುತ್ತಿರುವ  ದೌರ್ಜನ್ಯವನ್ನು ವಸ್ತುವಿಷಯವನ್ನಾಗಿಟ್ಟುಕೊಂಡು ಕಾಮಿಕ್ಸ್‌ ಪುಸ್ತಕಗಳನ್ನು ಬರೆದಿದ್ದಾರೆ.

ರಾಮ್‌ ದೇವಿನೇನಿ ಅವರು ಭಾರತೀಯ ಮೂಲದ ಅಮೆರಿಕ ನಿವಾಸಿ. 2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣ ಆಧಾರವಾಗಿಟ್ಟುಕೊಂಡು ‘ಪ್ರಿಯಾಸ್‌ ಶಕ್ತಿ’ ಎಂಬ ಕಾಮಿಕ್ಸ್‌ ಪುಸ್ತಕವನ್ನು ಬರೆದರು.

2014ರಲ್ಲಿ ಪುಸ್ತಕ ಬಿಡುಗಡೆಯಾದ ನಂತರ ಜಗತ್ತಿನಾದ್ಯಂತ 400ಕ್ಕೂ ಹೆಚ್ಚು ಪತ್ರಿಕೆಗಳಲ್ಲಿ ವರದಿ ಪ್ರಕಟವಾಯಿತು. 5 ಲಕ್ಷ ಡಿಜಿಟಲ್‌ ಡೌನ್‌ಲೋಡ್‌ ಆಗಿರುವುದು ಇದರ ಹೆಗ್ಗಳಿಕೆ.

ಆಸಿಡ್‌ ದಾಳಿಗೆ ತುತ್ತಾಗಿ ಬದುಕುಳಿದ ಮಹಿಳೆಯರ ಬದುಕನ್ನು ಆಧರಿಸಿ ಬರೆದ ‘ಪ್ರಿಯಾಸ್‌ ಮಿರರ್‌’ ಮತ್ತೊಂದು ಕಾಮಿಕ್ಸ್‌ ಪುಸ್ತಕವಾಗಿದೆ. ಎರಡೂ ಪುಸ್ತಕಗಳಿಗೆ ಸುಂದರ ಚಿತ್ರಗಳನ್ನು ಬಿಡಿಸಿದವರು ಅಮೆರಿಕದ ಕಲಾವಿದ ಡಾನ್‌ ಗೋಲ್ಡ್‌ಮನ್‌.

ಈಚೆಗೆ ನಗರದ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಡಿಸೈನ್‌ ಕ್ಯಾಂಪಸ್‌ನಲ್ಲಿ ಅಮೆರಿಕ ಕನ್ಸೋಲೇಟ್‌ ಜನರಲ್‌ ಚೆನ್ನೈ ಸಹಯೋಗದಲ್ಲಿ ಆಯೋಜಿಸಿದ್ದ ‘ಸೋಶಿಯಲ್‌ ಚೇಂಜ್‌ ಕಾಮಿಕ್‌ ಬುಕ್ಸ್‌’ ಕಾರ್ಯಾಗಾರದಲ್ಲಿ ಇಬ್ಬರು ಕಲಾವಿದರು  ಕಾಮಿಕ್ಸ್‌ಗಳ ಬಗ್ಗೆ ವಿಷಯ ಮಂಡಿಸಿದರು.

‘ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣ ಜಗತ್ತನ್ನೇ ತಲ್ಲಣಗೊಳಿಸಿತು. ಅಲ್ಲದೇ ಆಸಿಡ್‌ ದಾಳಿಯ ಪ್ರಕರಣಗಳು ಹೆಚ್ಚಿದ್ದವು. ಆಗ ನನಗೆ ಕಲ್ಪಿತವಲ್ಲದ ಕಥನಗಳನ್ನು ಕಾಮಿಕ್ಸ್‌ಗಳ ಮೂಲಕ ಹೇಳಬಹುದು ಎಂಬ ಯೋಚನೆ ಬಂತು.   ಯುವಕರನ್ನು ಗಮನದಲ್ಲಿಟ್ಟುಕೊಂಡು ಇಂಥ ಸಂದಿಗ್ದ ವಿಷಯವನ್ನು ಕಾಮಿಕ್ಸ್‌ಗೆ ತರಲು ಮುಂದಾದೆ. ನನ್ನ ಮೇಲೆ ಬಹಳ ಪ್ರಭಾವ ಬೀರಿದ ಘಟನೆಯದು. ಅದಕ್ಕೆಂದೇ ಸೂಪರ್‌ ಹೀರೊ ‘ಪ್ರಿಯಾ’ ಪಾತ್ರವನ್ನು ಸೃಷ್ಟಿಸಿದೆ’ ಎನ್ನುತ್ತಾರೆ ರಾಮ್‌ ದೇವಿನೇನಿ.

‘ಲಿಂಗಾಧಾರಿತ ಅಸಮಾನತೆಯನ್ನು ವಸ್ತುವಾಗಿ ಹೊಂದಿರುವ ಕಾಮಿಕ್ಸ್‌ ಆಗಿರುವುದರಿಂದ ನನ್ನ ಕಥೆಗಳಿಗೆ ‘ಪ್ರಿಯಾ’ ಹೀರೊ ಆಗಿರುತ್ತಾಳೆ. ಈ ಸರಣಿಯ ಕಾಮಿಕ್ಸ್ ಪುಸ್ತಕಗಳಿಗೂ ಮುಂಚೆ ‘ಹ್ಯೂಮನ್‌ ಟವರ್‌’ ಎಂಬ ಸಾಕ್ಷ್ಯಚಿತ್ರವನ್ನು ನಿರ್ದೇಶನ ಮಾಡಿದ್ದೆ. ‘ಪ್ರಿಯಾ’ ಕಾಮಿಕ್ಸ್‌ ಸರಣಿಯನ್ನು ಪುಸ್ತಕಕ್ಕೆ ಮಾತ್ರ ಸೀಮಿತ ಮಾಡದೇ ಒಂದು  ಆಂದೋಲನವಾಗಿಯೂ ಬಳಸಿಕೊಂಡಿದ್ದೇನೆ. ಭಾರತದ ಪ್ರಮುಖ ನಗರಗಳ ರಸ್ತೆ ಬದಿಗಳ ಗೋಡೆಗಳ ಮೇಲೆ ಪ್ರಿಯಾ ಚಿತ್ರ ಬರೆದು ಅರಿವು ಮೂಡಿಸಲು ಮುಂದಾಗಿದ್ದೇವೆ’ ಎನ್ನುತ್ತಾರೆ  ರಾಮ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT