ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟಗಾರಿಕೆ ಕ್ಷೇತ್ರದಲ್ಲಿ ಹಾಡಹಗಲೇ 15 ಮರಗಳ ಹನನ

ತಿಂಗಳ ನಂತರ ಎಚ್ಚೆತ್ತುಕೊಂಡ ಪೊಲೀಸರು
Last Updated 3 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ADVERTISEMENT

ಚಿಕ್ಕಬಳ್ಳಾಪುರ:  ಶಿಡ್ಲಘಟ್ಟ ತಾಲ್ಲೂಕಿನ ಚಿಕ್ಕದಾಸರಹಳ್ಳಿಯಲ್ಲಿರುವ ತೋಟಗಾರಿಕೆ ಇಲಾಖೆಯ ಗೇರು ಹಣ್ಣಿನ (ಗೋಡಂಬಿ) ತೋಟಗಾರಿಕೆ ಕ್ಷೇತ್ರದಲ್ಲಿ ಜನವರಿ 4 ರಂದು ತೋಟಗಾರಿಕೆ ಅಧಿಕಾರಿಗಳನ್ನು ಹೆದರಿಸಿ ಹಾಡಹಗಲೇ ರಾಜಾರೋಷವಾಗಿ 15 ಹಣ್ಣಿನ ಮರಗಳನ್ನು ಕತ್ತರಿಸಿ ಹಾಕಿದ ಪ್ರಕರಣದ ಆರೋಪಿಗಳ ವಿರುದ್ಧ ಶುಕ್ರವಾರ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಈ ಪ್ರಕರಣ ಕುರಿತಂತೆ ‘ಪ್ರಜಾವಾಣಿ’ ಡಿಸೆಂಬರ್ 31 ರಿಂದ ನಿರಂತರ ವಿಶೇಷ ವರದಿಗಳನ್ನು ಪ್ರಕಟಿಸುತ್ತ ಬಂದಿತ್ತು. ಆರಂಭದಲ್ಲಿ ಗೊಂದಲ ಮತ್ತು ಸಂಶಯ ಮೂಡಿಸುವಂತಹ ಹೇಳಿಕೆಗಳನ್ನು ನೀಡಿದ್ದ ಸ್ಥಳೀಯ ಪೊಲೀಸ್‌ ಅಧಿಕಾರಿಗಳು ಘಟನೆ ನಡೆದ ಒಂದು ತಿಂಗಳ ಬಳಿಕ ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

‘ಚಿಕ್ಕದಾಸರಹಳ್ಳಿಯಲ್ಲಿರುವ ತೋಟಗಾರಿಕೆ ಕ್ಷೇತ್ರದಲ್ಲಿ ಮರಗಳನ್ನು ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ಶುಕ್ರವಾರ ಸಂಜೆ ಪ್ರಕರಣ ದಾಖಲಿಸಲಾಗಿದೆ. ಶಿಡ್ಲಘಟ್ಟದ ನಿವಾಸಿ ರಾಮಚಂದ್ರಪ್ಪ ಮತ್ತು ಚಿಕ್ಕದಾಸರಹಳ್ಳಿಯ ನರಸಿಂಹಮೂರ್ತಿ ಮತ್ತು ಇತರ ಹತ್ತು ಜನರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ’ ಎಂದು ಜಿಲ್ಲಾ ಪ್ರಭಾರ ಎಸ್ಪಿ ಬಿ.ಎಸ್.ಲೋಕೇಶ್‌ಕುಮಾರ್‌ ತಿಳಿಸಿದರು.

‘ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 447 (ಕ್ರಿಮಿನಲ್ ಉದ್ದೇಶದಿಂದ ಅಕ್ರಮ ಪ್ರವೇಶ), 143, 149 (ದೊಂಬಿ), 353 (ಕರ್ತವ್ಯಕ್ಕೆ ಅಡ್ಡಿ), 427 (ಸಾರ್ವಜನಿಕ ಆಸ್ತಿಗೆ ಹಾನಿ), 506 (ಜೀವ ಬೆದರಿಕೆ),  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಹೇಳಿದರು.

ಮಂಜೂರಾತಿ ರದ್ದತಿಗೆ ಪ್ರಸ್ತಾವ?: ಚಿಕ್ಕದಾಸರಹಳ್ಳಿಯ ಒಟ್ಟು 393 ಎಕರೆ ವಿಸ್ತೀರ್ಣದಲ್ಲಿ ಗೋಡಂಬಿ ತೋಟಗಾರಿಕೆ ಕ್ಷೇತ್ರ ವ್ಯಾಪಿಸಿಕೊಂಡಿದೆ. ಈ ಪೈಕಿ ಸರ್ವೆ ನಂಬರ್ 134, 135 ಮತ್ತು 136ರಲ್ಲಿ 300 ಎಕರೆ ಜಮೀನು ತೋಟಗಾರಿಕೆ ಇಲಾಖೆ ಹೆಸರಿನಲ್ಲಿದೆ. ಉಳಿದಂತೆ ಇಲಾಖೆ ಅತಿಕ್ರಮಿಸಿಕೊಂಡು ಗೋಡಂಬಿ ಮರಗಳನ್ನು ಬೆಳೆಸಿರುವ 93 ಎಕರೆ ಹೆಚ್ಚುವರಿ ಜಮೀನನ್ನು ಕಳೆದ ಆಗಸ್ಟ್‌ ತಿಂಗಳಲ್ಲಿ ಕೆಲವರು ಒತ್ತುವರಿ ಮಾಡಿಕೊಳ್ಳಲು ಮುಂದಾಗಿದ್ದರು. ಆಗಸ್ಟ್‌ 17ರಂದು ಆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಜಿಲ್ಲಾಧಿಕಾರಿ ಅವರು ತಕ್ಷಣವೇ ಒತ್ತುವರಿ ತಡೆದು, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದರು.

93 ಎಕರೆ ಹೆಚ್ಚುವರಿ ಜಮೀನಿನ ಪೈಕಿ ಇರುವ ಸರ್ವೆ ನಂಬರ್‌ 65ರಲ್ಲಿ 1974– 75ನೇ ಸಾಲಿನಲ್ಲಿ ಸರ್ಕಾರ ಶಿವರಾಂ ಅವರಿಗೆ 4 ಎಕರೆ, ಹನುಮಪ್ಪ ಎಂಬುವರಿಗೆ 3 ಎಕರೆ ಜಮೀನು ಮಂಜೂರು ಮಾಡಿತ್ತು. ಆದರೆ ಮಂಜೂರಿದಾರರ ಸ್ವಾಧೀನಾನುಭವದಲ್ಲಿ ಇಲ್ಲದ ಕಾರಣ ಅರಣ್ಯ ಇಲಾಖೆ  ಆ ಜಮೀನಿನಲ್ಲಿ ಗೋಡಂಬಿ ಮರಗಳನ್ನು ಬೆಳೆಸಿ ಅದರಿಂದ ಬರುವ ಆದಾಯವನ್ನು ಸರ್ಕಾರಕ್ಕೆ ಜಮಾ ಮಾಡುತ್ತ ಬಂದಿತ್ತು. ಇದೀಗ ಶಿವರಾಂ ಅವರಿಂದ ಜಮೀನು ಖರೀದಿಸಿರುವುದಾಗಿ ಹೇಳಿಕೊಂಡು ರಾಮಚಂದ್ರಪ್ಪ ಅವರು ಆ ಜಮೀನಿನಲ್ಲಿರುವ ಮರಗಳನ್ನು ಕಡಿಯಲು ಮುಂದಾಗಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಆರೋಪಿಸುತ್ತಾರೆ.

‘ಮಂಜೂರಿ ಆದಾಗಿನಿಂದಲೂ ಮಂಜೂರಿದಾರರು ಅನುಭವದಲ್ಲಿ ಇಲ್ಲ. ಕೆಲ ದಶಕಗಳ ಹಿಂದೆಯೇ ಆ ಜಮೀನು ತೋಟಗಾರಿಕೆ ಇಲಾಖೆ ಸ್ವಾಧೀನದಲ್ಲಿದೆ. ಜತೆಗೆ ಅವರು ಆ ಜಮೀನನ್ನು ಇಲಾಖೆಗೆ ಮಂಜೂರು ಮಾಡುವಂತೆ ಪ್ರಸ್ತಾವ ಸಲ್ಲಿಸಿದ್ದಾರೆ. ಹೀಗಾಗಿ ಶಿವರಾಂ ಮತ್ತು ಹನುಮಪ್ಪ ಅವರಿಗೆ ಮಂಜೂರಾತಿಯನ್ನು ನಿಯಮಾನುಸಾರ ರದ್ದುಪಡಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಶಿಡ್ಲಘಟ್ಟ ತಹಶೀಲ್ದಾರ್‌ ಅವರಿಗೆ ವರದಿ ನೀಡುವಂತೆ ಸೂಚಿಸಲಾಗಿದೆ’ ಎಂದು ಉಪ ವಿಭಾಗಾಧಿಕಾರಿ ಶಿವಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT