ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನಕ್ಕೆ ಕಂಡು ಬಂದ ಬಿರುಸು, ಶೇ 83 ಮತದಾನ

ವಿಧಾನ ಪರಿಷತ್‌ನ ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪಚುನಾವಣೆ; ಕೇಂದ್ರ ಬಿಂದುವಾದ ತುಮಕೂರು ಜಿಲ್ಲೆ
Last Updated 4 ಫೆಬ್ರುವರಿ 2017, 6:15 IST
ಅಕ್ಷರ ಗಾತ್ರ
ತುಮಕೂರು: ಆಗ್ನೇಯ ಶಿಕ್ಷಕ ವಿಧಾನ ಪರಿಷತ್ ಕ್ಷೇತ್ರದ ಉಪಚುನಾವಣೆಗೆ ಶುಕ್ರವಾರ ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಬಿರುಸಿನ ಮತದಾನ ನಡೆಯಿತು.
 
ಜಿಲ್ಲೆಯ ಒಟ್ಟು 13 ಮತಗಟ್ಟೆಯಲ್ಲಿ ಶೇ 83 ಮತದಾನವಾಗಿದೆ. ಮಧ್ಯಾಹ್ನ 12 ಗಂಟೆ ಹೊತ್ತಿಗೆ ಶೇ 25ರಷ್ಟು ಮಾತ್ರ ಮತದಾನ ಆಗಿತ್ತು. ಮಧ್ಯಾಹ್ನ ಮತದಾರರು ಮತಗಟ್ಟೆಯತ್ತ ದೌಡಾಯಿಸಿದ್ದರಿಂದ ಮತದಾನ  ಪ್ರಮಾಣ ಇದ್ದಕ್ಕಿದ್ದಂತೆ ಏರಿಕೆ ಕಂಡಿತು.
 
ಶೇ 85ರಷ್ಟು ಪುರುಷ ಮತದಾರರು, ಶೇ 77ರಷ್ಟು ಮಹಿಳಾ ಮತದಾರರು ಮತದಾನ ಮಾಡಿದ್ದಾರೆ.
 
ಗರಿಷ್ಠ ಮತದಾನ ಕುಣಿಗಲ್‌ನಲ್ಲಿ ಶೇ 94, ಪಾವಗಡ ಮತ್ತು ಮಧುಗಿರಿಯಲ್ಲಿ ಶೇ 89ರಷ್ಟು ಮತದಾನವಾಗಿದೆ. ಕನಿಷ್ಠ ಮತದಾನ ತುಮಕೂರಿನ ಮತಗಟ್ಟೆ 18–ಸಿಯಲ್ಲಿ ಶೇ 65ರಷ್ಟಾಗಿದೆ.
 
ಕ್ಷೇತ್ರದ ಒಟ್ಟು 21 ಸಾವಿರ ಮತದಾರರಲ್ಲಿ 7508 ಮತದಾರರು ತುಮಕೂರು ಜಿಲ್ಲೆಯಲ್ಲೇ ಇದ್ದು, ಅದರಲ್ಲೂ ತುಮಕೂರು ನಗರದಲ್ಲಿ 2540ಕ್ಕೂ ಅಧಿಕ ಮತದಾರರು ಇದ್ದುದರಿಂದ ಪ್ರಮುಖ ರಾಜಕೀಯ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು  ಜಿಲ್ಲೆಯ ಮತಗಟ್ಟೆಗಳ ಮುಂದೆ ನಿಂತು ಮತಯಾಚಿಸಿದರು.
 
ಜೆಡಿಎಸ್ ಬೆಂಬಲಿತ ಅಭ್ಯರ್ಥಿ ರಮೇಶ್ ಬಾಬು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಟಿ.ಎಸ್.ನಿರಂಜನ್‌ ತುಮಕೂರು ಜಿಲ್ಲೆಯನ್ನು ಬಿಟ್ಟು ಕದಲಲಿಲ್ಲ.
 
ವಿಶೇಷವಾಗಿ ತುಮಕೂರು ನಗರದ 4 ಮತಗಟ್ಟೆಗಳ ಮತ ಹಾಕಲು ಬರುತ್ತಿದ್ದ ಮತದಾರರಿಗೆ ಉಭಯ ಪಕ್ಷದ ಅಭ್ಯರ್ಥಿಗಳು ಮನವಿ ಮಾಡಿ ಮತಯಾಚಿಸಿದರು. ಬಿಜೆಪಿ ಅಭ್ಯರ್ಥಿ ಬಸವರಾಜ್ ಹಾಗೂ ಜೆಡಿಎಸ್ ಬಂಡಾಯ ಅಭ್ಯರ್ಥಿ ಎಚ್.ಎಸ್.ಅರವಿಂದ್ ಅವರೂ ಜಿಲ್ಲೆಯಲ್ಲಿ ಮತಯಾಚಿಸಿದರು.
 
ಶಾಸಕರಾದ ರಫೀಕ್ ಅಹಮ್ಮದ್, ಬಿ.ಸುರೇಶಗೌಡ, ವಿಧಾನ ಪರಿಷತ್ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜ್ಯೋತಿ ಗಣೇಶ್, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ರಾಮಕೃಷ್ಣ ಸೇರಿ ಅನೇಕ ಮುಖಂಡರು ಮತಗಟ್ಟೆ ಎದುರುಗಡೆ ನಿಂತು ಯಾಚಿಸಿದರು. ಜಿಲ್ಲೆಯ ಇತರೆ ತಾಲ್ಲೂಕು ಕೇಂದ್ರಗಳಲ್ಲೂ ಪಕ್ಷಗಳ ಕಾರ್ಯಕರ್ತರು, ಮುಖಂಡರು ತಮ್ಮ ಪಕ್ಷ ಬೆಂಬಲಿತ ಅಭ್ಯರ್ಥಿಯ ಪರ  ಮತ ಕೇಳಿದರು.
 
ಮತದಾರರ ಆಕ್ರೋಶ: ತುಮಕೂರಿನ ಮತಗಟ್ಟೆ ಕೇಂದ್ರ 3 ಮತ್ತು 4ರಲ್ಲಿ ಮತದಾನಕ್ಕೆ ಸಂಜೆ 4ರ ಹೊತ್ತಿಗೆ ಮತಗಟ್ಟೆ ಮುಂದೆ 7–8 ಮತದಾರರು ಮತದಾನಕ್ಕೆ ನಿಂತಿದ್ದರು. ಸಮಯ ಮುಗಿದಿದೆ. ಮತದಾನಕ್ಕೆ ಅವಕಾಶವಿಲ್ಲ ಎಂದು ಮತಗಟ್ಟೆ ಅಧಿಕಾರಿ ಹೇಳಿದಾಗ ಮತದಾರರು ಆಕ್ರೋಶ ವ್ಯಕ್ತಪಡಿಸಿದರು. 
 
ನಾವು ಮತಗಟ್ಟೆ ಮುಂದೆಯೇ ಇದ್ದೇವೆ. ಬೇರೆ ಎಲ್ಲೋ ದೂರದಲ್ಲಿ ಇಲ್ಲ. ನಿಯಮದ ಪ್ರಕಾರ ಮತದಾನಕ್ಕೆ ತಮಗೆ ಅವಕಾಶವಿದೆ. ಹೀಗಾಗಿ, ಮತದಾನಕ್ಕೆ ಅವಕಾಶ ಕೊಡಬೇಕು ಎಂದು ಒತ್ತಾಯ ಮಾಡಿದರು.
 
ಹೀಗೆ ಒತ್ತಾಯ ಮಾಡಿದ ಬಳಿಕ ಎಚ್ಚೆತ್ತ ಮತಗಟ್ಟೆ ಅಧಿಕಾರಿಗಳು ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.
 
ಇದೇ ರೀತಿ ಮತಗಟ್ಟೆ 1ರಲ್ಲಿ ಒಬ್ಬ ಶಿಕ್ಷಕಿ ಮತದಾನಕ್ಕೆ ಅವಕಾಶ ಕೋರಿದರೂ ಮತಗಟ್ಟೆ ಅಧಿಕಾರಿ ನಿರಾಕರಿಸಿದ್ದರಿಂದ ವಾಪಸ್ ಹೋದರು.
 
**
ಸಾಮಾನ್ಯ ಚುನಾವಣೆ ಮೀರಿಸಿದ ಅಬ್ಬರ
ತುಮಕೂರು: ಆಗ್ನೇಯ ಶಿಕ್ಷಕರ ವಿಧಾನ ಪರಿಷತ್ ಕ್ಷೇತ್ರಕ್ಕೆ ಶುಕ್ರವಾರ ನಡೆದ  ಉಪಚುನಾವಣೆ ತುಮಕೂರು ಜಿಲ್ಲೆಯಲ್ಲಿ ಬಹಳ ತುರುಸು ಕಂಡು ಬಂದಿತು.
 
ರಾಜಕೀಯ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳ ಪರ ಮತಯಾಚಿಸುತ್ತಿದ್ದವರ ಅಬ್ಬರವೇ ಎದ್ದು ಕಂಡಿತು. 
 
ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಮಹಿಳಾ ಘಟಕಗಳೂ ಮತಯಾಚನೆಯಲ್ಲಿ ಹಿಂದೆ ಬೀಳಲಿಲ್ಲ. ಮತದಾರರಿಗೆ ದುಂಬಾಲು ಬಿದ್ದು ಮನವಿ ಮಾಡುತ್ತಲೇ ಇದ್ದರು.
 
ಅಭ್ಯರ್ಥಿ ಮತ್ತವರ ಬೆಂಬಲಿಗರು ಮತದಾರರಿಗೆ, ಕಾರ್ಯಕರ್ತರಿಗೆ ತಂಪುಪಾನೀಯ, ಮಜ್ಜಿಗೆ, ಉಪಹಾರ, ಟೀ, ಕಾಫಿ ವ್ಯವಸ್ಥೆ ಮಾಡಿದರು.
 
ಶಿಕ್ಷಕ ಮುಖಂಡರು, ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಮುಖಂಡರುಗಳು ತಮ್ಮ ಸಂಸ್ಥೆಯ ಮತದಾರರು ಮತಗಟ್ಟೆ ಹತ್ತಿರ ಬರುತ್ತಿದ್ದಂತೆಯೇ 
ಅವರನ್ನು ಕರೆದುಕೊಂಡು ಹೋಗಿ ಸಂಬಂಧಪಟ್ಟ ಅಭ್ಯರ್ಥಿಗೆ, ಅವರ ಬೆಂಬಲಿಗರಿಗೆ ಭೇಟಿ ಮಾಡಿಸಿ ಪರಿಚಯಿಸುತ್ತಿದ್ದರು.
 
ಬೆಳಿಗ್ಗೆ 12 ಗಂಟೆ ಹೊತ್ತಿಗೆ ಜಿಲ್ಲೆಯಲ್ಲಿ ಶೇ 25ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 2 ಗಂಟೆಯ ಬಳಿಕ ಮತಗಟ್ಟೆಯತ್ತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸಿ ಬಂದರು.
 
ಕಾರ್ಯಕರ್ತರ ದಂಡು: ಸಾಮಾನ್ಯ ಚುನಾವಣೆಯಲ್ಲಿ ಸಾಮಾನ್ಯವಾಗಿ ಕಂಡು ಬರುವ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಮುಖಂಡರ ಅಬ್ಬರ ಶುಕ್ರವಾರ ನಡೆದ ಪರಿಷತ್ ಚುನಾವಣೆ ಮತದಾನ ಸಂದರ್ಭದಲ್ಲೂ  ಕಂಡು ಬಂದಿತು.
 
ಪಕ್ಷದ ರಿಬ್ಬನ್‌, ಪಕ್ಷ ಬೆಂಬಲಿಸಿದ ಅಭ್ಯರ್ಥಿ ಚಿತ್ರ ಮತ್ತು ಹೆಸರು ಇರುವ ಚೀಟಿ ಹಿಡಿದು ನಿರಂತರವಾಗಿ ಮತಯಾಚಿಸುತ್ತಲೇ ಇದ್ದರು.
 
ಅವರು ಮತದಾರರು ಹೌದೊ, ಅಲ್ಲವೊ ಎಂಬುದನ್ನು ವಿಚಾರಿಸುತ್ತಿರಲಿಲ್ಲ. ಯಾರೇ ಕಂಡರೂ ಸರ್, ನೋಡ್ರಿ. ನಮ್‌ ಪಾರ್ಟಿ, ನಮ್ಮ ಮನುಷ್ಯ, ಒಳ್ಳೆಯ ವ್ಯಕ್ತಿ, ಅವಕಾಶ ಕೊಡ್ಬೇಕು. ಅವರ ರಾಜಕೀಯ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದು ಬೇಡಿಕೊಂಡರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT