ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಚುನಾವಣೆ: ಶೇ 87.8ರಷ್ಟು ಮತದಾನ

ಮತದಾರರ ಸೆಳೆಯಲು ಕಸರತ್ತು: ವಿಧಾನಪರಿಷತ್‌ ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಶಾಂತಿಯುತ
Last Updated 4 ಫೆಬ್ರುವರಿ 2017, 6:37 IST
ಅಕ್ಷರ ಗಾತ್ರ
ಚಿತ್ರದುರ್ಗ: ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಶುಕ್ರವಾರ ನಡೆದ ಉಪ ಚುನಾವಣೆಗೆ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆಯಿತು. ಒಟ್ಟು ಶೇ 87.8ರಷ್ಟು ಮತದಾನ ಆಗಿದೆ. ಜಿಲ್ಲೆಯ ಒಟ್ಟು 4,155 ಮತದಾರರಲ್ಲಿ 3,648 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
 
2,864 ಪುರುಷ ಮತದಾರರು, 784 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಮೊಳಕಾಲ್ಮುರಿನಲ್ಲಿ ಅತಿ ಹೆಚ್ಚು ಶೇ 94.55ರಷ್ಟು, ಚಿತ್ರದುರ್ಗದಲ್ಲಿ ಅತಿ ಕಡಿಮೆ ಶೇ 78.31ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ ಒಟ್ಟು 21,354 ಮತದಾರರಿದ್ದು, ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಹಾಗೂ 14 ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಒಟ್ಟು 17 ಅಭ್ಯರ್ಥಿಗಳು ಕಣದಲ್ಲಿದ್ದರು.
 
ಮತದಾನಕ್ಕಾಗಿ ಹಿರಿಯೂರು, ಚಳ್ಳಕೆರೆ, ಹೊಳಲ್ಕೆರೆ, ಮೊಳಕಾಲ್ಮುರು, ಹೊಸದುರ್ಗದ ತಾಲ್ಲೂಕು ಕಚೇರಿಗಳಲ್ಲಿ ಒಂದೊಂದು ಮತಗಟ್ಟೆ ಸ್ಥಾಪಿಸಲಾಗಿತ್ತು. ಚಿತ್ರದುರ್ಗದಲ್ಲಿ ಹೆಚ್ಚು ಮತದಾರರು ಇದ್ದುದರಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ಮತಗಟ್ಟೆ ಸ್ಥಾಪಿಸಲಾಗಿತ್ತು. 
 
ಬೆಳಿಗ್ಗೆ 8ಕ್ಕೆ ಆರಂಭವಾದ ಮತದಾನ ಪ್ರಕ್ರಿಯೆ 10 ಗಂಟೆಯವರೆಗೆ ನೀರಸವಾಗಿತ್ತು. ಚಿತ್ರದುರ್ಗದಲ್ಲಿ 1,418 ಮತದಾರರಿದ್ದು, ಬೆಳಿಗ್ಗೆ 10ಕ್ಕೆ ಕೇವಲ ಶೇ 8ರಷ್ಟು ಮತದಾನ ಆಗಿತ್ತು. 11 ಗಂಟೆಯ ನಂತರ ಮತದಾನ ಬಿರುಸುಗೊಂಡಿತು. 12 ಗಂಟೆಗೆ 557 (ಶೇ 39.28) ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಮಧ್ಯಾಹ್ನ 3ಕ್ಕೆ 1,114 (ಶೇ 78.56) ಮತದಾರರು ಮತ ಚಲಾಯಿಸಿದ್ದರು.
 
ಕೊನೆಯ ಕಸರತ್ತು: ಅಭ್ಯರ್ಥಿಗಳ ಬೆಂಬಲಿಗ ಶಿಕ್ಷಕರು ಮತ್ತು ವಿವಿಧ ಪಕ್ಷಗಳ ಕಾರ್ಯಕರ್ತರು ಮತದಾರರನ್ನು ಸೆಳೆಯಲು ಕೊನೆಯ ಕಸರತ್ತು ನಡೆಸಿದರು. ಮತಗಟ್ಟೆಯ ಹೊರಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ ಮತ್ತು ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರು ಶಾಮಿಯಾನ ಹಾಕಿ ಕುಳಿತು ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಿದರು. 
 
ಮತ ಚಲಾಯಿಸಲು ಬರುತ್ತಿದ್ದ ಶಿಕ್ಷಕರನ್ನು ನಗುಮುಖದಿಂದ ಸ್ವಾಗತಿಸಿ, ಮತದಾರರ ಪಟ್ಟಿಯಲ್ಲಿನ ಕ್ರಮಸಂಖ್ಯೆಯನ್ನು ಹುಡುಕಿ ಬರೆದು ಕೊಡುತ್ತಿದ್ದರು. ‘ನಮ್ಮ ಅಭ್ಯರ್ಥಿಯನ್ನು ಬೆಂಬಲಿಸಿದರೆ ನಿಮಗೆ ಹೆಚ್ಚು ಅನುಕೂಲ ಆಗುತ್ತದೆ. ಏಳನೇ ವೇತನ ಆಯೋಗ ಜಾರಿ ಮಾಡುತ್ತೇವೆ. ನಮ್ಮ ಅಭ್ಯರ್ಥಿಗೇ ಮತ ನೀಡಿ’ ಎಂದು ಮನವಿ ಮಾಡುತ್ತಿದ್ದರು.
 
ಬಿಸಿಲಿಗೆ ಬಸವಳಿದ ಬೆಂಬಲಿಗರು: ಮತದಾರರ ಮನವೊಲಿಸುವ ಕಾರ್ಯದಲ್ಲಿ ತೊಡಗಿದ್ದ ಕಾರ್ಯಕರ್ತರು ಬಿಸಿಲಿಗೆ ಬಸವಳಿದರು. ಇದರ ನಡುವೆ  ಕೆಲವರು ಶಿಕ್ಷಕರನ್ನು ಸೆಳೆಯುವಲ್ಲಿ ನಿರತರಾಗಿದ್ದರು. ಶಾಮಿಯಾನದ ಹೊರಗೆ ನಿಂತು ಶಿಕ್ಷಕರನ್ನು ಆಕರ್ಷಿಸುತ್ತಿದ್ದರು. ಕೆಲವರು ಬಿಸಿಲು ಏರುತ್ತಿದ್ದಂತೆ ಪಕ್ಕದಲ್ಲೇ ಇದ್ದ ಹಣ್ಣು, ತಂಪು ಪಾನೀಯಗಳ ಮೊರೆಹೋದರು. ಪರಿವೀಕ್ಷಣಾ ಮಂದಿರದ ಮುಂಭಾಗ ಕಾರ್ಯಕರ್ತರು, ಶಿಕ್ಷಕರು ಗುಂಪುಗುಂಪಾಗಿ ಸೇರಿದ್ದರಿಂದ ಕೆಲವು ನಿಮಿಷ ಸಂಚಾರ ದಟ್ಟಣೆ ಉಂಟಾಗಿ ಸಮಸ್ಯೆಯಾಯಿತು. 
 
ಜಿಲ್ಲಾಧಿಕಾರಿ ಶ್ರೀರಂಗಯ್ಯ, ಹೆಚ್ಚುವರಿ ಜಿಲ್ಲಾಧಿಕಾರಿ ರವೀಂದ್ರ, ತಹಶೀಲ್ದಾರ್‌ ಮಲ್ಲಿಕಾರ್ಜುನ್ ಮತಗಟ್ಟೆಯ ಹೊರಗೆ ನಿಂತು ಚುನಾವಣಾ ಪ್ರಕ್ರಿಯೆ ವೀಕ್ಷಿಸಿದರು. ಶಿಕ್ಷಕರು  ಮತಗಟ್ಟೆಯ ಹೊರಗೆ ಗುಂಪಾಗಿ ನಿಲ್ಲದಂತೆ, ಅನಗತ್ಯವಾಗಿ ಓಡಾಡದಂತೆ ಸೂಚನೆ ನೀಡುತ್ತಿದ್ದರು. 
 
**
ಹೊಳಲ್ಕೆರೆ: ಶೇ 86.98ರಷ್ಟು ಮತದಾನ
ಹೊಳಲ್ಕೆರೆ: ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ಶೇ 86.98ರಷ್ಟು ಮತದಾನ ಆಗಿದೆ. ತಾಲ್ಲೂಕಿನಲ್ಲಿ ಇದ್ದ 453 ಮತದಾರರಲ್ಲಿ 384 ಮತದಾರರು ಮತ ಚಲಾಯಿಸಿದ್ದಾರೆ. 
 
ಯಾವುದೇ ಗೊಂದಲ ಇಲ್ಲದೆ ಶಾಂತಿಯುತವಾಗಿ ಮತದಾನ ನಡೆದಿದೆ ಎಂದು ತಹಶೀಲ್ದಾರ್‌ ಸೋಮಶೇಖರ ತಿಳಿಸಿದ್ದಾರೆ.
 
**
ಮೊಳಕಾಲ್ಮುರು ತಾಲ್ಲೂಕಿನಲ್ಲಿ ಅತಿಹೆಚ್ಚು ಶೇ 94.55ರಷ್ಟು ಮತದಾನವಾಗಿದ್ದರೆ, ಚಿತ್ರದುರ್ಗದಲ್ಲಿ ಅತಿಕಡಿಮೆ ಶೇ 78.31ರಷ್ಟು ಮತದಾನ ಆಗಿದೆ.
-ಶ್ರೀರಂಗಯ್ಯ, ಜಿಲ್ಲಾಧಿಕಾರಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT