ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘‘ಯಾವ ಲೇಖಕನೂ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ...

Last Updated 4 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

* ಸರ್, ನಿಸಾರರ ಮಾತನ್ನ ಬಳಸಿ ಹೇಳುವುದಾದರೆ, ಒಂದು ರೀತಿಯಲ್ಲಿ ನಿಮ್ಮ ಸಮಕಾಲೀನರ ಜೊತೆಯಲ್ಲಿ ನಿಮ್ಮದು ‘ನಿಮ್ಮೊಡನಿದ್ದೂ ನಿಮ್ಮಂತಾಗದ’ ಸಂಬಂಧ. ನವ್ಯ ಕಾವ್ಯ ಅದರ ಉತ್ತುಂಗದಲ್ಲಿದ್ದಾಗ ನೀವು ಅದಕ್ಕೆ ಎದುರು ಅನ್ನಬಹುದಾದ ವಸ್ತು ಮತ್ತು ಶೈಲಿಯನ್ನ ಆರಿಸಿಕೊಂಡಿರಿ. ಉದ್ದಕ್ಕೂ ಅದನ್ನು ಉಳಿಸಿಕೊಳ್ಳುವುದಕ್ಕೂ ನಿಮಗೆ ಸಾಧ್ಯವಾಯಿತು. ಇದು ಸಾಧ್ಯವಾಗೋದು, ಅದರ ಬಗ್ಗೆ ನಿಮಗೆ ಅಸಾಧಾರಣವಾದ ನಂಬಿಕೆ ಮತ್ತು ಪ್ರೀತಿ ಇದ್ದಾಗ ಮಾತ್ರ ಸಾಧ್ಯ. ಈ ಪ್ರಯಾಣ ಶುರುವಾದದ್ದು ಹೇಗೆ?
ಖರೆ ಅಂದರೆ, ನನಗೆ ನಾನು ರೂಪಕಗಳನ್ನ ಸೃಷ್ಟಿಸ್ತಾ ಇದ್ದೇನೆ ಅನ್ನುವುದರ ಅರಿವಿಲ್ಲದೆಯೇ ರೂಪಕಗಳನ್ನ ಸೃಷ್ಟಿಸ್ತಾ ಹೋದೆ. ನನ್ನ ಬಾಲ್ಯ ಕಾಲವೇ ಇದಕ್ಕೆ  ಆಕರವಾಯಿತು. ಬ್ರಿಟಿಷರ ಸೈನ್ಯದ ಒಂದು ತುಕಡಿ ಬೆಳಗಾವಿಯಲ್ಲಿತ್ತು. ನಾನು ಘೋಡಗೇರಿಯಿಂದ ಪ್ರತಿದಿನ ಹದಿನೆಂಟು ಕಿಲೋಮೀಟರ್ ದೂರದ ಗೋಕಾಕಕ್ಕೆ ಹೈಸ್ಕೂಲಿಗೆ ಹೋಗ್ತಾ ಇದ್ದೆ. (ಆಮೇಲೆ ನನ್ನ ಪ್ರೀತಿಯ ಗುರುಗಳಾದ ಕೃಷ್ಣಮೂರ್ತಿ ಪುರಾಣಿಕರು ಸಾವಳಗಿ ಮಠದಲ್ಲಿ ಇರೋದಕ್ಕೆ ವ್ಯವಸ್ಥೆ ಮಾಡಿಕೊಟ್ಟರು). ಬ್ರಿಟಿಷರ ದುಷ್ಟತನದ  ಅದೆಷ್ಟು ಕತೆಗಳು, ಸಂಗತಿಗಳು ನಮಗೆ ದಿನಾಲೂ ಸಿಗ್ತಾ ಇದ್ದವು ಗೊತ್ತಾ? ಒಂದು ಹೇಳ್ತೀನಿ ಕೇಳಿ, ಗೋಕಾಕ ಫಾಲ್ಸ್‌ನಲ್ಲಿ ಒಂದು ಈಜುಗೊಳದಂತೆ ಇದ್ದ ಜಾಗದಲ್ಲಿ ಈ ಬ್ರಿಟಿಷರು ಸ್ನಾನ ಮಾಡೋದು, ಅದಕ್ಕೆ ನಮಗೆ ಅದ್ಭುತ ಅನ್ನುವ ಹಾಗೆ ಕಾಣಿಸ್ತಿದ್ದ ಸಾಬೂನನ್ನ ಬಳಸೋದು... ನಮಗೆ ಊಹಿಸೋದಕ್ಕೂ ಸಾಧ್ಯವಾಗದ ಬದುಕನ್ನ ಅವರು ಬದುಕ್ತಾ ಇದ್ದರು. ನನಗೇ ಗೊತ್ತಿಲ್ಲದೇ ಬ್ರಿಟಿಷರು ನನ್ನೊಳಗೆ ಒಂದು ರೂಪಕವಾಗಿ ಬೆಳೀತಾ ಹೋದರು. ಈ ದಟ್ಟ ಅನುಭವದ ಫಲವೇ 1963ರಲ್ಲಿ ನಾನು ಬರೆದ ‘ಹೇಳತೇನ ಕೇಳ’. ನಾನು ಆಗಷ್ಟೇ ಅಂದರೆ, 1962ರಲ್ಲಿ ಎಂ.ಎ. ಮುಗಿಸಿ, ಬೆಳಗಾವಿಯಲ್ಲಿ ಅಧ್ಯಾಪಕನಾಗಿದ್ದೆ. ನಾನು ಹುಟ್ಟಿ ಬೆಳೆದದ್ದೇ ಲಾವಣಿಗಳ ಜೊತೆಯಲ್ಲಿ. ಒಂದು ರೀತೀಲಿ ಲಾವಣಿಗಳು ನಮ್ಮ ಬದುಕಿನ ಒಂದು ಭಾಗವೇ ಆಗಿಬಿಟ್ಟಿದ್ದವು. ‘ಹೇಳತೇನ ಕೇಳ’ ಸಹಜವಾಗಿ ಹುಟ್ಟಿದ್ದೇ ಈ ಹಿನ್ನೆಲೆಯಲ್ಲಿ.

ಯಾವುದೋ ಒಬ್ಬ ರಾಕ್ಷಸ ಪ್ರವೇಶ ಮಾಡೊದು, ಅವನು ಗೌಡನನ್ನ ಕೊಂದು ತಾನೇ ಗೌಡನಾಗೋದು ಇವೆಲ್ಲಾ ಬಂತು ‘ಹೇಳತೇನ ಕೇಳ’ದಲ್ಲಿ. ಆದರೆ ನವ್ಯರಿಗೆ ಇದನ್ನೆಲ್ಲಾ ತೋರಿಸೋದಕ್ಕೆ ಸಂಕೋಚ ನನಗೆ. ಈ ನಡುವೆ ಇನ್ನೊಂದು ಸಂಗತಿ ಆಗಿಹೋಗಿತ್ತು. ನಾನು ‘ಹೋರಿ’ ಕವಿತೆಯನ್ನ ಬರೆದಿದ್ದೆ. ಅದನ್ನ ಅಡಿಗರು ಓದಿ ಬಹಳ ಮೆಚ್ಚಿಕೊಂಡಿದ್ದರು. ಅವರೊಂದು ಮೆಚ್ಚುಗೆಯ ಪತ್ರವನ್ನೂ ಬರೆದು ಅದರಲ್ಲಿ ‘ನೀವು ನಿಜವಾದ ಕವಿಗಳು’ ಅನ್ನುವ ಮಾತು ಬರೆದಿದ್ರು. ಅದನ್ನ ನಾನು ಗೆಳೆಯರಿಗೆಲ್ಲಾ ತೋರಿಸಿಕೊಂಡು ಬೀಗ್ತಾ ಇದ್ದೆ. ಅದು ನನಗೆ ತುಂಬಾ ಧೈರ್ಯ ಕೊಟ್ಟಿತು ಅನ್ನಬಹುದು. ಈ ದಿನಗಳಲ್ಲೇ ಒಮ್ಮೆ ನಾನು ‘ಜಿಬಿ ಅಟ್ಟ’ಕ್ಕೆ ಹೋದೆ. ‘ಹೇಳತೇನ ಕೇಳಾ’ ಅಲ್ಲಿಟ್ಟು ಯಾವುದೋ ಕೆಲಸಕ್ಕೆ ವಿಶ್ವವಿದ್ಯಾಲಯಕ್ಕೆ ಹೋಗಿದ್ದೆ. ನಾನು ಬರುವುದರೊಳಗೆ ಕುರ್ತಕೋಟಿ ಅದನ್ನ ಓದಿ , ಬಹಳ ಮೆಚ್ಚಿಕೊಂಡುಬಿಟ್ಟಿದ್ರು. ನಾ ವಾಪಸ್ ಬಂದ ಮೇಲೆ, ‘ನೀವೆ ಒಂದ್ಸಲ ಓದ್ರಿ ಅದನ್ನ’ ಅಂದ್ರು. ‘ಏ ಇದು ಓದೋದಲ್ಲ ತೆಗೀರಿ, ಇದೇನಿದ್ರೂ ಹಾಡೋದು’ ಅಂದೆ ನಾನು’. ‘ಸರಿ, ಹಾಡ್ರಿ ಮತ್ತೆ’ ಅಂದ್ರು. ಸುಮಾರು ಒಂದು ಗಂಟೆ ಹಾಡಿರಬೇಕು ನಾನು. ಮುಗಿಸೋದ್ರೊಳಗೆ, ಆ ಅಟ್ಟದ ತುಂಬಾ, ಜನ ತುಂಬಿಕೊಂಡು ಬಿಟ್ಟಿದ್ರು. ಎಲ್ಲರೂ ಶಾಭಾಷಗಿರಿ ಕೊಟ್ಟಿದ್ದೇ ಕೊಟ್ಟಿದ್ದು. ಕುರ್ತಕೋಟಿಯವರು ಆ ಸಂದರ್ಭದಲ್ಲಿ ಬರೆದ ಒಂದು ಲೇಖನದಲ್ಲಿ, ‘ಕನ್ನಡಕ್ಕೆ ಈಗ ಇಬ್ಬರ ಮೇಲೆ ಬಹಳ ಭರವಸೆ ಇದೆ – ಒಬ್ಬರು ಶಂಕರ ಮೊಕಾಶಿ ಪುಣೇಕರ್, ಇನ್ನೊಬ್ಬರು ಕಂಬಾರರು’ ಅಂತ ಬರೆದಿದ್ರು.

* ಅಬ್ಬಾ, ಎಂಥಾ ಸ್ವಾಗತ ಸರ್ ನಿಮಗೆ, ಕನ್ನಡ ಕಾವ್ಯ ಕ್ಷೇತ್ರಕ್ಕೆ...
ಜಿ.ಬಿ. ಜೋಶಿಯವರು ಆಗ ತಾನೇ ಒಬ್ಬ ಮಗನನ್ನ ಕಳೆದುಕೊಂಡಿದ್ರು. ಕುರ್ತಕೋಟಿ ಹೇಳಿದರು, ‘ಎಷ್ಟೋ ದಿನದ ಮೇಲೆ ಇವರ ಮುಖದ ಮೇಲೆ ನಗು ಕಾಣಿಸಿಕೊಳ್ತು’ ಅಂತ. ಅದೇ ಸುಮಾರಿನಲ್ಲಿ ನನಗೆ ರಾಜೀವ ತಾರಾನಾಥ ಸಿಕ್ಕಿದ್ರು. ಅವರಿಗೂ ‘ಹೇಳತೇನ...’ ಇಷ್ಟವಾಗಿತ್ತು. ಅವರ ರೂಮಿಗೆ ನನ್ನನ್ನ ಕರೆದುಕೊಂಡು  ಹೋದರು. ಅಲ್ಲಿದ್ದ ಬ್ರೆಡ್ ಪೀಸ್‌ಗಳನ್ನ ನೀರಿನಲ್ಲಿ ಅದ್ದಿಕೊಂಡು ತಿನ್ತಾ ಎಷ್ಟೋ ಹೊತ್ತು ನಾವು ಮಾತಾಡಿದೆವು. ಅಷ್ಟು ಹೊತ್ತಿಗಾಗಲೇ ನಾನು ‘ಮುಗುಳು’ ಅನ್ನುವ ಕವಿತಾ ಸಂಕಲನವನ್ನ ಪ್ರಕಟಿಸಿದ್ದೆ. ಅದನ್ನ ಬೇಂದ್ರೆ ಮೆಚ್ಚಿಕೊಂಡಿದ್ದರು. ಇನ್ನೇನು ಬೇಕು ನನಗೆ?

* ಈ ಎಲ್ಲರ ಮೆಚ್ಚುಗೆ ನಿಮಗೆ ಬೇಕಾದ ನೈತಿಕ ಧೈರ್ಯ ಕೊಟ್ಟಿಲ್ಲವೇ?
ಹೌದು. ಅಷ್ಟರಲ್ಲಿ ಬೆಳಗಾವಿಯ ನನ್ನ ಕೆಲಸ ಕಳೆದುಕೊಂಡಿದ್ದೆ. ಅದೇ ಹೊತ್ತಿಗೆ, ನನ್ನನ್ನ ಸಾಗರದ ಕಾಲೇಜಿಗೆ ಅಡಿಗರು ಕರೆಸಿಕೊಂಡರು. ಅಡಿಗರು ನನ್ನ ‘ಹೇಳತೇನ ಕೇಳ’ ಸಂಕಲನಕ್ಕೆ ಮುನ್ನುಡಿ ಬರೆದಿದ್ದರು. ಅದರಲ್ಲೂ ಅಡಿಗರ ಮಾತುಗಳು ಮತ್ತು ಪ್ರೋತ್ಸಾಹ – ನಿಜಕ್ಕೂ ನನಗೆ ನಿಧಿ ಸಿಕ್ಕಂತೆ ಅನಿಸಿತು. ನನಗೆ ಅನ್ನಿಸುತ್ತೆ ಅವರೊಬ್ಬ ಸಂತ ಅಂತ. ಈತ ಏನೋ ಹೊಸದನ್ನ ಹೇಳ್ತಾ ಇದ್ದಾನೆ ಅನ್ನೋದ್ರ ಬಗ್ಗೆ ಅವರಿಗೆ ಬಹಳ ಖಾತ್ರಿ ಇತ್ತು. ಆದರೆ, ಅವರಿಗೆ ನಾನು ಹಾಡೋದೊಂದು ಇಷ್ಟ ಆಗ್ತಾ ಇರಲಿಲ್ಲ! ಎಷ್ಟೋ ಕಾರ್ಯಕ್ರಮಗಳಿಗೆ ನಾವು ಒಟ್ಟಿಗೇ ಹೋಗ್ತಾ ಇದ್ದಾಗ, ಜನ ಎಲ್ಲಾ ನಾನು ಹಾಡಲೇಬೇಕು ಅಂತ ಒತ್ತಾಯ ಮಾಡ್ತಾ ಇದ್ದರೆ, ಇವರು, ‘ಹೂಂ, ಹಾಡಿ’ ಅಂತ ಒಲ್ಲದ ಮನಸ್ಸಿನಿಂದ ಹೇಳ್ತಾ ಇದ್ರು. ಸಾಗರದಲ್ಲಿ ಒಂದು ಸಲ ಕೆ.ವಿ. ಸುಬ್ಬಣ್ಣ ನನ್ನ ‘ಹೇಳತೇನ ಕೇಳ’ದ ವಾಚನವನ್ನ ಏರ್ಪಡಿಸಿದರು. ಆ ಸಭೆಗೆ ಶಾಂತವೇರಿ ಗೋಪಾಲ ಗೌಡರು ಬಂದಿದ್ದರು. ಈ ಕಾವ್ಯ, ವಸಾಹತುಶಾಹಿಗೆ ಪ್ರತಿಕ್ರಿಯೆ ಮತ್ತು ಪ್ರತಿರೋಧವಾಗಿ ಬಂದಿದೆ ಅಂತ ಗೋಪಾಲಗೌಡರು ಕೆಲವು ಭಾಷಣಗಳಲ್ಲಿ ಹೇಳಿದ್ದು ನನಗೆ ಗೊತ್ತಾಯಿತು.

ಆಮೇಲೆ ಗೌಡರು ಲೋಹಿಯಾ ಅವರನ್ನು ನಮ್ಮ ಮನೆಗೂ ಕರೆದುಕೊಂಡು ಬಂದಿದ್ದರು, ಆಗಲೂ ಈ ಕವಿತೆಯ ಚರ್ಚೆಯಾಯಿತು. ಅವರ ಎದುರಿಗೂ ನಾನು ಹಾಡಿದೆ. ಅದರಲ್ಲಿ ನಾನು ಸ್ಕೂಲು ಬಂದದ್ದನ್ನ ವಿರೋಧಿಸಿದ್ದೆ. ಅಡಿಗರು ಈ ಕಾರಣಕ್ಕೆ ನನ್ನನ್ನ ಪ್ರತಿಗಾಮಿ ಅಂತಲೂ ಕರೆದರು. ಆದರೆ ನೋಡಿ, ಸಿಂಗರ್ ಎಂಬ ಜಾನಪದ ತಜ್ಞ 70ರ ದಶಕದಲ್ಲಿ ‘ಒಂದು ಸಮುದಾಯದ ಜಾನಪದ ಹಾಳಾಗೋದು ಅಲ್ಲಿ ಸ್ಕೂಲು ಆರಂಭವಾದ ಮೇಲೆ’ ಅಂತ ಒಂದು ಸಿದ್ಧಾಂತವನ್ನೇ ಮಂಡಿಸಿದ್ದಾನೆ. ಅಂದರೆ, ಬಹಳ ಮುಖ್ಯವಾದ ಒಂದು ವಿದ್ಯಮಾನವನ್ನೇ ನಾನು ಅಲ್ಲಿ ಪ್ರಸ್ತಾಪಿಸಿದ್ದೆ.

* ರಾಮಾನುಜನ್ ಒಡನಾಟ ನಿಮ್ಮ ಬದುಕಿನಲ್ಲಿ ನಿರ್ಣಾಯಕವಾದ ಪಾತ್ರ ವಹಿಸಿದೆ. ಅದರ ಬಗ್ಗೆ ಸ್ವಲ್ಪ ಹೇಳಿ.
ಹೌದು, ಅವರು ನನ್ನ ಬದುಕಿನಲ್ಲಿ ಬಹಳ ಮಹತ್ವದ ಪಾತ್ರ ವಹಿಸಿದ್ದಾರೆ ಎನ್ನುವುದು ನಿಜ. ನೋಡ್ರೀ, ಅವರಿಗಿಂತಾ ಜನಪ್ರಿಯ ಅಧ್ಯಾಪಕರನ್ನ ನಾನು ನೋಡೇ ಇಲ್ಲ. ಅವರ ಭಾಷಣ ಇದೆ ಅಂತಾದ್ರೆ, ಆ ಹಾಲ್ ಹೌಸ್‌ಫುಲ್ ಆಗ್ತಾ ಇತ್ತು. ರಾಮಾನುಜನ್ ನನಗೆ ಗುರುಗಳು. ಆದರೆ ಬೆಳಗಾವಿಯಲ್ಲಿ ಅವರಿಗೂ ನನಗೂ ಆತ್ಮೀಯವಾದ ಪರಿಚಯ ಇರಲಿಲ್ಲ. ಆ ದಿನಗಳಲ್ಲಿ ಬಸವರಾಜ ಕಟ್ಟೀಮನಿ, ಮಿರ್ಜಿ ಅಣ್ಣಾರಾಯರು, ಸುಮತೀಂದ್ರ ನಾಡಿಗ ಇವರೆಲ್ಲಾ ಆಗಾಗ ನನ್ನ ರೂಮಿಗೆ ಬರ್ತಾ ಇದ್ದರು. ಒಂದೇ ಸಮ ಕಾವ್ಯದ ಚರ್ಚೆ ನಡೀತಿತ್ತು. 

ಮುಂದೆ ರಾಮಾನುಜನ್ ಅವರು ಷಿಕಾಗೋಗೆ ಹೋದಾಗ, ನನ್ನನ್ನೂ ಕರೆಸಿಕೊಂಡರು. ಅವರು ಆಗಲೇ ನನ್ನ ‘ಹೇಳತೇನ ಕೇಳ’ ಮೆಚ್ಚಿಕೊಂಡಿದ್ದರು. ಬಹುಶಃ ಅದೇ ಕಾರಣವಾಗಿ ನನ್ನ ಅಲ್ಲಿಗೆ ಕರೆಸಿಕೊಂಡರು. ರಾಮಾನುಜನ್ ಅವರಿಗೆ ಜಾನಪದದ ಬಗೆಗೆ ಅಪಾರವಾದ ಆಸಕ್ತಿ. ಕನ್ನಡ ಮಾತ್ರವಲ್ಲ, ಆಗಲೇ ಅವರು ಪ್ರಪಂಚದ ಜಾನಪದವನ್ನು ಓದಿನ ಮೂಲಕ ತಿಳಿದುಕೊಂಡಿದ್ದರು. ಜಾನಪದದ ಬಗೆಗೆ ಬಹಳ ಚರ್ಚೆ ಮಾಡ್ತಾ ಇದ್ವಿ ನಾವು. ಬೆಳಗ್ಗೆಯಿಂದ ಸಂಜೆಯ ತನಕ. ಆಗಲೇ ನಾನು ‘ನಾರ್ಸಿಸಸ್’ ಬರೆದದ್ದು. ನನಗೆ ಈ ಸಿದ್ಧಾಂತವನ್ನ ಹೇಳಿದ್ದು ನನ್ನ ಅಪ್ಪ. ಆತ ಹೇಳ್ತಾ ಇದ್ದದ್ದು, ಪ್ರಾಯ ಬಂದಾಗ ಧ್ವನಿ ಒಡೆದು ಮನುಷ್ಯ ಎರಡಾಗ್ತಾನೆ. ನಾನು–ಅವನು ಎನ್ನುವ ಎರಡು ಬಿಂಬಗಳು ಅಲ್ಲಿ ಹುಟ್ತಾವೆ ಅಂತ. ಒಂದು ಕತೇನೂ ಅಪ್ಪ ಹೇಳ್ತಾ ಇದ್ದರು. ಒಬ್ಬ ರಾಜಕುಮಾರ ದಿನಾ ಒಂದು ಸರೋವರದ ದಡದಲ್ಲಿ ಕೂತಾಗ ಅದರಲ್ಲಿ ಅವನ ಹೆಣ ತೇಲಿಬರುತ್ತಿತ್ತು. ಅದನ್ನೇ ಅವನು ತನ್ನ ತೊಡೆಯಮೇಲಿಟ್ಟುಕೊಂಡು ಹೊಟ್ಟೆತುಂಬುವ ತನಕ ಹರಿದು ತಿನ್ನುತ್ತಿದ್ದ. ಹೊಟ್ಟೆ ತುಂಬಿದ ಮೇಲೆ ಅದನ್ನ ಸರೋವರಕ್ಕೇ ಬಿಸಾಕಿ ಹೋಗ್ತಾ ಇದ್ದ. ಇದನ್ನ ರಾಮಾನುಜನ್ ಮತ್ತು ಅವರ ಹೆಂಡತಿ ಮಾಲಿಗೆ ಹೇಳಿದ್ದೇ ಅವರು ಅದೆಷ್ಟು ಎಕ್ಸೈಟ್ ಆಗಿಬಿಟ್ಟರು ಅಂದರೆ, ‘ಇದೇ ನಾರ್ಸಿಸಸ್ ಕಥೆ ಅಲ್ಲವಾ!, ಇದೇ ಆತ್ಮ ಸಿದ್ಧಾಂತ ಅಲ್ಲವಾ!, ಇದೆಲ್ಲಾ ನಮ್ಮ ಜಾನಪದದಲ್ಲಿ ಅದೆಷ್ಟು ಘನವಾಗಿ ಬಂದಿದೆ!’ ಅಂತ ಅವರಿಗೆ ಆಶ್ಚರ್ಯವಾಯಿತು.

ಅವರಿಬ್ಬರ ಜೊತೆಗಿನ ಚರ್ಚೆಯಿಂದ ನಾನು ಕಲಿತದ್ದೂ ಬಹಳವಿದೆ. ನಮ್ಮ ಜಾನಪದವೆಂದರೆ, ನಮ್ಮ ಪರಂಪರೆಯನ್ನು ಮತ್ತೆ ಪಡೆದುಕೊಳ್ಳುವ ದಾರಿ ಅನ್ನುವುದು ನನಗೆ ಸ್ಪಷ್ಟವಾದದ್ದು ಆಗ. ಷಿಕಾಗೋ ಪಾರ್ಕಿನಲ್ಲಿ ಒಂದು ಬೃಹದಾಕಾರದ ಶಿಲ್ಪ ಇದೆ. ಪಿಕಾಸೋನದು. ಒಂದು ದೊಡ್ಡ ವ್ಯಕ್ತಿಶಿಲ್ಪ. ಅದರ ಹೊಟ್ಟೆಯ ಒಳಗೆ ಒಂದು ಹೋಲ್. ಅದಕ್ಕೆ ಕೆಂಪು ಬಣ್ಣ. ಇದನ್ನ ನೋಡಿದ್ದೇ ನಾನು, ‘ಬಾಂಬ್ ಹಾಕಿ ತಾಯಿಯ ಗರ್ಭಕ್ಕೆ ಬೆಂಕಿ ಹಚ್ಚಿ ಬಿಟ್ಟಿದ್ದಾರೆ’ ಅಂದೆ. ರಾಮಾನುಜನ್‌ಗೆ ಅದೆಷ್ಟು ಸಂತೋಷವಾಯಿತು ಅಂದ್ರೆ, ‘ಮೆಟಫರ್‌ಗಳನ್ನ ಅದು ಹೇಗೆ ಗ್ರಹಿಸ್ತೀರಿ ನೀವು, ಈ ತನಕ ಯಾರೂ ಇದನ್ನು ಹೀಗೆ ನೋಡೇ ಇರಲಿಲ್ಲ’ ಅಂದ್ರು.

* ಅಡಿಗರು ಮುಂದೆ, ‘ಭೂತ’ ಕವಿತೆಯಲ್ಲಿ ‘ನಾವು ಪಶ್ಚಿಮ ಬುದ್ಧಿಯಾಗಿಬಿಟ್ಟೆವು, ಇನ್ನಾದರೂ ಅಸಲು ಕಸುಬನ್ನ ಕಲಿಯಬೇಕು’ ಅಂತ ಹೇಳುವ ಹೊತ್ತಿಗಾಗಲೇ ನೀವು ಆ ದಾರಿಯಲ್ಲಿ ಕ್ರಮಿಸಲು ಆರಂಭಿಸಿಬಿಟ್ಟಿದ್ದಿರಿ. ಸರ್, ಈ ಅಂಶವನ್ನೇ ಮುಂದುವರಿಸುವುದಾದರೆ, ನಿಮ್ಮ ‘ಶಿವನ ಡಂಗುರ’ ಕಾದಂಬರಿ ಗಾಂಧಿವಾದದ ಕಡೆಗಿನ ಚಲನೆ. ಭಾರತೀಯ ದೇಸೀ ಪರಂಪರೆ ಮತ್ತು ಗಾಂಧಿಗೆ ಬಹಳ ಹತ್ತಿರದ ಸಂಬಂಧ ಅಲ್ಲವೆ? ಜೊತೆಗೆ ನಿಮ್ಮ ಬರವಣಿಗೆಯಲ್ಲಿ ಸಿನಿಕತನ, ನಿರಾಶಾವಾದಗಳು ಎಂದೂ ಸುಳಿದಿಲ್ಲ. ಅದು ನಮ್ಮ ಪರಂಪರೆಯ ಮತ್ತು ಮನುಷ್ಯ ಚೈತನ್ಯದಲ್ಲಿ ನಿಮಗಿರುವ ನಂಬಿಕೆಯೂ ಹೌದು ಅನ್ನಿಸುತ್ತೆ.
ಗಾಂಧಿ ನಮ್ಮ ಕಾಲದ ದಾರ್ಶನಿಕ. ಆ ದಾರ್ಶನಿಕನ ದಾರಿ ನಮಗೆ ಅನಿವಾರ್ಯವೇ ಆಗಿದೆ ಅನ್ನಿಸುತ್ತೆ ನನಗೆ. ಜೊತೆಗೆ ವಚನಕಾರರ ಪ್ರಸ್ತುತತೆಯೂ ಯಾವಾಗಲೂ ನನಗೆ ಮುಖ್ಯ ಅಂತ ಕಂಡಿದೆ. ಮೌಖಿಕತೆಯನ್ನ, ಮಾತನ್ನ ಒಂದು ‘ಪ್ರಮಾಣ’ವಾಗಿ ಬಳಸಿ ಗೆದ್ದವರು ಅವರು. ದಾಸಿಮಯ್ಯ ‘ನಿಮ್ಮ ಶರಣರ ಸೂಳ್ನುಡಿಯನೊಂದರೆಘಳಿಗೆಯಿತ್ತಡೆ ನಿಮ್ಮನಿತ್ತೆ ಕಾಣಾ ರಾಮನಾಥ’ ಎನ್ನುತ್ತಾನಲ್ಲ, ಅದೆಂಥ ದೊಡ್ಡ ಕಾಣ್ಕೆ ನೋಡಿ – ದೈವದ್ದಲ್ಲ, ಮತ್ತೊಂದರದ್ದಲ್ಲ, ತನ್ನ ಶರಣರ ಅನುಭವ, ತನ್ನ ಆತ್ಮಸಾಕ್ಷಿಯೇ ಅಂತಿಮ ಪ್ರಮಾಣ ಅಂತ ಹೇಳುವ ನೈತಿಕ ಶಕ್ತಿಯಿಂದ ನಾವು ಕಲಿಯಬೇಕಾದ್ದಿದೆ. ಒಂದು ಸಮುದಾಯವನ್ನ ಪೊರೆಯುವ ಶಕ್ತಿಯನ್ನ ನಮಗೆ ಕಲಿಸಿಕೊಟ್ಟವರು ಅವರು.

*ಇತ್ತೀಚಿನ ದಿನಗಳಲ್ಲಿ, ಒಂದು ಮುಖ್ಯವಾದ ಚಳವಳಿಯಲ್ಲಿ ನಿಮ್ಮನ್ನ ತೊಡಗಿಸಿಕೊಂಡಿದ್ದೀರಿ. ಮಾತೃಭಾಷಾ ಶಿಕ್ಷಣದ ಬಗ್ಗೆ. ಅದಕ್ಕಾಗಿ ರಾಷ್ಟ್ರಪತಿಗಳನ್ನ ಭೇಟಿಯಾಗುವುದರಿಂದ ಹಿಡಿದು, ಸಹಿ ಸಂಗ್ರಹಣೆಯವರೆಗೆ ನೀವು ಆಸಕ್ತರಾಗಿದ್ದೀರಿ.
ಅಲ್ಲಮ್ಮಾ, ಎಂಥಾ ಸ್ಥಿತಿ ಇದೆ ನೋಡಿ, ನಮ್ಮ ಮಕ್ಕಳು ಇಂಗ್ಲಿಷ್ ಕಥೆಗಳನ್ನ ಬಾಯಿ ಪಾಠ ಮಾಡ್ತಾರೆ. ಅದೇ ಕನ್ನಡದ ಒಂದು ಕಥೆಯನ್ನ ಒಂದು ಮಗು ಅದೆಷ್ಟು ಕ್ರಿಯಾಶೀಲವಾಗಿ ಬೆಳೆಸ್ತಾ ಹೋಗುತ್ತೆ ನೋಡಿ. ಒಂದು ಕಥೆಯನ್ನ ಆ ಮಗು ತನ್ನ ತಾಯಿಗೆ ಹೇಳುವ ರೀತಿ ಬೇರೆ, ಗೆಳೆಯರಿಗೆ ಹೇಳುವ ರೀತಿ ಬೇರೆ, ಗೆಳತಿಯರಿಗೆ ಹೇಳುವ ರೀತಿ ಬೇರೆ. ಅಂದರೆ, ತಾಯಿಭಾಷೆ ಅನ್ನೋದೇ ಒಂದು ಕ್ರಿಯಾಶೀಲತೆಯ ಮೂಲ ಅಲ್ಲವೆ? ಅದಕ್ಕೇ ಮಾತೃಭಾಷಾ ಶಿಕ್ಷಣ ಅನಿವಾರ್ಯ ಅಂತ ನಾನು ಹೋರಾಟ ಮಾಡ್ತಾ ಇರೋದು. ನಮ್ಮಲ್ಲಿರುವಷ್ಟು ಅಂದರೆ, ಸುಮಾರು ಸಾವಿರದ ಆರುನೂರು ಭಾಷೆಗಳು ಇನ್ನಾವ ದೇಶದಲ್ಲಿವೆ ಹೇಳಿ? ಅಮೆರಿಕದಲ್ಲಿ ಕತೆಗಳೇ ಇಲ್ಲ ನೋಡಿ, ಕನಿಕರ ಅನ್ನಿಸುತ್ತೆ ಅವರ ಬಗ್ಗೆ ನನಗೆ. ಮಹಾಭಾರತದಂತಹ ಕಾವ್ಯ ನಮ್ಮಲ್ಲಿ ಇನ್ನೂ ಬೆಳೀತಾನೇ ಇದೆ. ಅದೊಂದು ಮುಗಿಯದ ಕಾವ್ಯ. ಯಾಕೆ ಹೇಳಿ? ನಮ್ಮ ಪ್ರಾದೇಶಿಕ ಭಾಷೆಗಳಲ್ಲಿ ಅದು ನಿರಂತರವಾಗಿ ವಿಸ್ತಾರಗೊಳ್ತಾ, ಬದಲಾಗ್ತಾ, ನಿತ್ಯ ನೂತನವಾಗ್ತಾ ಹೋಗ್ತಾ ಇದೆ ಅಂದ್ರೆ, ಅದಕ್ಕೆ ಮುಖ್ಯ ಕಾರಣ ನಮ್ಮ ಭಾಷೆಗಳು.

* ನಿಮ್ಮ ಸಮಕಾಲೀನರಲ್ಲಿ ನೀವು ಮೆಚ್ಚುವ ಲೇಖಕರು/ಲೇಖಕಿಯರು ಯಾರು?
ಮಧುರಚೆನ್ನ, ಕುವೆಂಪು, ಅಡಿಗರು, ಶಿವರಾಮ ಕಾರಂತ, ಭೈರಪ್ಪ, ಯೇಟ್ಸ್ ಮತ್ತು ಲೋರ್ಕಾ ನನ್ನ ಮೆಚ್ಚಿನ ಲೇಖಕರು.

* ಸರ್, ನಿಮ್ಮ ಸ್ತ್ರೀ ಪಾತ್ರಗಳ ಬಗ್ಗೆ ಒಂದು ಆಕ್ಷೇಪ ಇದೆ. ನಿಮ್ಮ ಸ್ತೀ ಪಾತ್ರಗಳು ಪಿತೃಸಂಸ್ಕೃತಿಯನ್ನೇ ಎತ್ತಿ ಹಿಡಿಯುತ್ತವೆ ಅಂತ.
ನನಗೆ ಹಾಗನ್ನಿಸೋದಿಲ್ಲ. ನನ್ನ ಪ್ರಕಾರ ಹೆಣ್ಣು ಅಂದರೆ, ತಾಯಿ. ತಾಯಿ ಜೀವಕ್ಕಿಂತ ದೊಡ್ಡದು ಇನ್ನ್ಯಾವುದು? ಹೆಣ್ಣು ಪ್ರಕೃತಿ. ಏನೆಲ್ಲಾ ಬದಲಾವಣೆಗಳಾದಾಗಲೂ ಹೆಣ್ಣಿನ ಈ ಮೂಲ ಗುಣ ಬದಲಾಗುತ್ತೆ ಅನ್ನಿಸೋದಿಲ್ಲ ನನಗೆ. ಹೆಣ್ಣಿನ ಈ ಶಕ್ತಿಯನ್ನ ಅರ್ಥ ಮಾಡಿಕೊಂಡು ಗೌರವಿಸಬೇಕು. ಇದು ಅರ್ಥ ಆಗದೇ ಹೋದರೆ ನಷ್ಟ ಗಂಡಿಗೇ ಹೊರತು ಹೆಣ್ಣಿಗಲ್ಲ. ಲೋಕ ಗಂಡಿಲ್ಲದೇ ಇರಬಹುದು, ತಾಯಿಯಿಲ್ಲದೇ ಇರಲು ಸಾಧ್ಯವಿಲ್ಲ.

* ಜೋಕುಮಾರಸ್ವಾಮಿಯಲ್ಲಿ...
ಅಲ್ಲಿ, ಹೆಣ್ಣು ಸೃಷ್ಟಿಶೀಲತೆಯ ರೂಪಕವಾಗಿ ಬರ್ತಾಳೆ. ಜೋಕುಮಾರಸ್ವಾಮಿ ಫಲವಂತಿಕೆಯ ದೇವರು. ಅದನ್ನು ಕುರಿತ ನಾಟಕ ಅದು. ತೀರ ವಾಸ್ತವಿಕವಾಗಿ ಅದನ್ನು ನೋಡಲಾಗುವುದಿಲ್ಲ. ಅಥವಾ ನೋಡಿದರೂ ಕ್ರಾಂತಿಯ ಸಿದ್ಧಾಂತದ ಸ್ವರೂಪವಾಗಿ ನೋಡಬೇಕಷ್ಟೆ. ಶಿವರಾಮ ಕಾರಂತರೇ ಈ ಪ್ರಶ್ನೆಯನ್ನು ಮೊದಲು ಎತ್ತಿದವರು. ಆವಾಗಲೂ ನನಗೆ ಅದನ್ನು ಬದಲಿಸಬೇಕು ಅನ್ನಿಸಲಿಲ್ಲ. ಅದನ್ನ ಕೇವಲ ಜೀವ–ಕಾಮ ಅಂತ ನೋಡೋಕ್ಕಾಗೋಲ್ಲ. ಇಲ್ಲಿ ಇನ್ನೊಂದು ವಿಷ್ಯ ಹೇಳಬೇಕು ನಿಮಗೆ. ಅಮೆರಿಕದಲ್ಲಿ ನಾನೊಂದು ಪ್ರಬಂಧ ಓದಿದೆ, ರಂಗಭೂಮಿಯ ಬಗ್ಗೆ. ‘ಆರಾಧನೆಯೇ ಭಾರತೀಯ ರಂಗಭೂಮಿಯ ಮುಖ್ಯ ಲಕ್ಷಣ’ ಅಂತ. ಶುರು ಮತ್ತು ಕೊನೆ ಎರಡೂ ಆರಾಧನೆಯೇ. ಈ ಎರಡರ ನಡುವಿನ ಕ್ರಿಯಾ ಪರಂಪರೆಯೇ ರಂಗಭೂಮಿ ಅಂತ. ಈ ಹಿನ್ನೆಲೆಯಲ್ಲಿ ಭಾರತೀಯ ನಾಟಕವನ್ನು ನೋಡಬೇಕು. ‘ಸಿಂಗಾರೆವ್ವ ಮತ್ತು ಅರಮನೆ’ಯನ್ನ ನೋಡಿ. ಹೆಣ್ಣಿಗೆ ದೇವರೇ ಹೆದರ್ತಾನೆ.

* ‘ಹರಕೆಯ ಕುರಿ’ ನಿಮ್ಮ ವಿಭಿನ್ನ ನಾಟಕ. ಇದರ ಬಗ್ಗೆ ಸ್ವಲ್ಪ ಹೇಳಿ...
ಈ ನಾಟಕ ರಾಜಕಾರಣ ಅನ್ನೋದು ನಮ್ಮ ಬದುಕಿನ ಅವಿಭಾಜ್ಯ ಭಾಗ ಅನ್ನುವುದನ್ನು ಗುರುತಿಸುವುದಕ್ಕೆ ಬರೆದದ್ದು. ನಮ್ಮ ಬೆಡ್‌ರೂಮಿನ ಸಂಗತಿಗಳೂ ಸೇರಿದಂತೆ ನಮ್ಮ ದೈವ ನಿರ್ಣಯವಾಗುವುದು ರಾಜಕಾರಣದಿಂದ. ನಾವು ಓಟು ಹಾಕಿದರೂ ಹಾಕದಿದ್ದರೂ ಅದು ನಮ್ಮ ರಾಜಕೀಯ ತೀರ್ಮಾನವೇ. ಮತ್ತು ಅದರ ಪರಿಣಾಮ ನಮ್ಮ ಬದುಕಿನ ಮೇಲೆ ಆಗ್ತಾನೇ ಇರುತ್ತೆ. ಇದನ್ನ ನಾವು ನಿವಾರಿಸುವುದಕ್ಕೆ ಸಾಧ್ಯ ಇಲ್ಲ.

* ಸರ್, ಈ ನಮ್ಮ ಕಾಲ ಅಸಾಧ್ಯ ತಲ್ಲಣಗಳ ಕಾಲ. ಈ ಹೊತ್ತಿನಲ್ಲಿ ಬರಹಗಾರರ ಜವಾಬ್ದಾರಿ ಎಂದಿಗಿಂತ ಹೆಚ್ಚಾಗಿದೆ ಅಲ್ಲವೇ?
ಖಂಡಿತಾ ಹೌದು. ಬರಹಗಾರ ಈ ಜವಾಬ್ದಾರಿಯನ್ನು ಒಪ್ಪಿಕೊಂಡೇ ಬರೆಯುತ್ತಾನೆ. ಈ ಜವಾಬ್ದಾರಿಯಿಂದ ಬರಹಗಾರರು ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ.

* ನೀವು ಉದ್ದಕ್ಕೂ ನೆಚ್ಚಿ ಬಂದ ದೇಸಿ–ಜಾನಪದ ಪರಂಪರೆಯ ಅನನ್ಯತೆಯ ಬಗ್ಗೆ ಹೇಳಿ.
ಕನ್ನಡದಲ್ಲಿ ಬಂದ ಎರಡೇ ವ್ಯಕ್ತಿನಿಷ್ಠ ಸಾಹಿತ್ಯ ಘಟ್ಟಗಳೆಂದರೆ ಚಂಪೂ ಮತ್ತು ನವ್ಯ ಕಾವ್ಯ. ಈ ಎರಡೂ ಪರಂಪರೆಗಳು ಸಮುದಾಯದ ಜೊತೆಯಲ್ಲಿ ಜೀವಂತ ಸಂಬಂಧ ಏರ್ಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಚಂಪೂ ಕಾವ್ಯ ಒಡ್ಡೋಲಗ ಕುರಿತು ನಿರ್ಮಾಣವಾದಾಗ, ನವ್ಯಕಾವ್ಯ ವ್ಯಕ್ತಿಯನ್ನು ಸಮುದಾಯದಿಂದ ಬೇರ್ಪಟ್ಟ, ವ್ಯಕ್ತಿಯೊಂದಿಗೆ ಮಾತಾಡಿದಾಗ ಸಮುದಾಯ ಪ್ರಜ್ಞೆಯನ್ನು ಬಿಟ್ಟುಬಿಡಲಾಯಿತು. ಆದರೆ ವಚನಗಳು ಮತ್ತು ಹರಿಹರ–ರಾಘವಾಂಕರಿಂದ ಶುರುವಾದ ಕಾವ್ಯ ಪರಂಪರೆ ಸಮುದಾಯವನ್ನು ಕುರಿತ, ಸಮುದಾಯವನ್ನು ಒಳಗೊಂಡ, ಸಮುದಾಯಕ್ಕಾಗಿ ಬರೆದ ಕಾವ್ಯ. ಈ ಬಗೆಯ ಕಾವ್ಯವು ರಸಾನುಭವವನ್ನು ನೆಚ್ಚಿದ ಕಥನ ಪರಂಪರೆ. ಈ ಕಾರಣಕಾಗಿಯೇ ಇವು ಸಮುದಾಯಕ್ಕಾಗಿ ಬರೆದವೂ ಹೌದು. ಕಥನಪರಂಪರೆಯನ್ನು ಕ್ರಿಯಾಶೀಲವಾಗಿಟ್ಟವೂ ಹೌದು. ನನ್ನ ಮಟ್ಟಿಗೆ ನಾನು ಮತ್ತು ನನ್ನಂತ ಅನೇಕರು ಈ ಸಮುದಾಯ ಪ್ರಜ್ಞೆಯಿಂದ ಬರೆಯುತ್ತಿದ್ದಾರೆ ಅನ್ನಿಸುತ್ತದೆ ನನಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT