ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದಲ್ಲಿ ರೋಯಿಂಗ್‌; ಬೇಕಿದೆ ಕಾಯಕಲ್ಪ

Last Updated 5 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಹೋದ ವಾರ ನಡೆದ ರಾಷ್ಟ್ರೀಯ ಸೀನಿಯರ್‌ ರೋಯಿಂಗ್‌ ಚಾಂಪಿಯನ್‌ ಷಿಪ್‌ನಲ್ಲಿ ರಾಜ್ಯ ತಂಡ ನಾಲ್ಕು ಚಿನ್ನ ಗೆದ್ದಿದೆ. ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ರೋಯಿಂಗ್‌ ಬೆಳವಣಿಗೆ ಕುರಿತು ಜಿ. ಶಿವಕುಮಾರ ವಿಶ್ಲೇಷಿಸಿದ್ದಾರೆ.

ಅಮೆರಿಕಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌, ನೆದರ್ಲೆಂಡ್ಸ್‌, ಕೆನಡಾ ಮತ್ತು ಬ್ರಿಟನ್‌ ದೇಶಗಳಲ್ಲಿ ಅಪಾರ ಜನಮನ್ನಣೆ ಗಳಿಸಿರುವ ಕ್ರೀಡೆ ರೋಯಿಂಗ್‌. ಹೆಚ್ಚು  ದೈಹಿಕ ಶ್ರಮ ಬೇಡುವ ಈ ಕ್ರೀಡೆ  ಭಾರತದಲ್ಲೂ  ನಿಧಾನವಾಗಿ ತನ್ನ ಕಂಪು ಪಸರಿಸುತ್ತಿದೆ.

ಈ ಕ್ರೀಡೆಯಲ್ಲಿ ಕರ್ನಾಟಕದ ಸ್ಪರ್ಧಿಗಳೂ ಅಚ್ಚಳಿಯದ ಹೆಜ್ಜೆ ಗುರುತು  ಮೂಡಿಸಿದ್ದಾರೆ. ದಿಲೀಪ್‌ ಕುಮಾರ್‌ ಮತ್ತು ವಿ.ವಿ. ರಾವ್‌ ಅವರು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ದೇಶವನ್ನು ಪ್ರತಿನಿಧಿಸಿ ಪದಕಗಳಿಗೆ ಕೊರಳೊಡ್ಡಿದ್ದಾರೆ.

1989ರಲ್ಲಿ ನಡೆದಿದ್ದ ಏಷ್ಯನ್‌  ಚಾಂಪಿಯನ್‌ಷಿಪ್‌ನ ಕಾಕ್ಸ್ಡ್ ಫೋರ್‌ ವಿಭಾಗದಲ್ಲಿ ಭಾರತ ತಂಡ ಚಿನ್ನ ಗೆದ್ದಿತ್ತು. ಆ ಸಾಧನೆಯ ಹಿಂದೆ ದಿಲೀಪ್‌ ಮತ್ತು ರಾವ್‌ ಅವರ  ಶ್ರಮವೂ ಅಡಗಿತ್ತು. ಮರು ವರ್ಷ (1990) ರಷ್ಯಾದಲ್ಲಿ ಆಯೋಜನೆ ಯಾಗಿದ್ದ ಚಾಂಪಿಯನ್‌ಷಿಪ್‌ನ ಕಾಕ್ಸ್ಡ್  ಫೋರ್‌ ವಿಭಾಗ ದಲ್ಲಿ ಕಂಚು ಗೆದ್ದ  ಭಾರತ ತಂಡದಲ್ಲೂ ದಿಲೀಪ್‌ ಇದ್ದರು.

ಆ ಬಳಿಕ ಬಿನೊಯ್‌ ಲುಕೊಸ್‌, ಆರ್‌.ಕೆ. ಪಿಳ್ಳೈ ಮತ್ತು ಜಾನ್ಸನ್‌ ಕ್ಸೇವಿಯರ್‌ ಅವರೂ ಈ ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡಿದ್ದರು.
ಜಾನ್ಸನ್‌ ಅವರು 2000ರಲ್ಲಿ ಜಪಾನ್‌ನಲ್ಲಿ ನಡೆದಿದ್ದ ಏಷ್ಯನ್‌  ಚಾಂಪಿಯನ್‌ಷಿಪ್‌ನ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಗೆದ್ದು,  ಸಿಡ್ನಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದರು. ಎಂ. ದಿವ್ಯಾ ಮತ್ತು ಬಿ.ಆರ್‌. ರಶ್ಮಿ ಅವರೂ ಇವರ ಹಾದಿಯಲ್ಲೇ ಸಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಮಿಂಚಿದ್ದರು.
ಟಿ.ಕೆ. ಕೀರ್ತನಾ, ಎಸ್‌. ಸ್ನೇಹಾ, ಸಿ.ಪಿ. ಜ್ಯೋತಿ, ದೀಪಾ ಮಹಾರಾಜ,  ಜಿ. ತರುಣ್‌ ಕೃಷ್ಣ ಪ್ರಸಾದ್್, ಮಂತೋಷ್‌ ಕುಮಾರ್‌ ಅವರು ಈಗ ಈ ಪರಂಪರೆ ಮುಂದುವರಿಸಿ ಕೊಂಡು ಸಾಗುತ್ತಿದ್ದಾರೆ. ಹೋದ ವಾರ ನಡೆದ ರಾಷ್ಟ್ರೀಯ ಸೀನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯ ತಂಡ ನಾಲ್ಕು ಚಿನ್ನ ಗೆದ್ದಿರುವುದು ಇದಕ್ಕೊಂದು ನಿದರ್ಶನ.

ಹೊಸ ಶಕೆಗೆ ನಾಂದಿಯಾದ ಕೂಟ
1997ರಲ್ಲಿ ಉದ್ಯಾನನಗರಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಕ್ರೀಡಾಕೂಟ ನಡೆದಿತ್ತು. ಆ ಕೂಟ ಕರ್ನಾಟಕದಲ್ಲಿ ರೋಯಿಂಗ್‌ ಬೆಳವಣಿಗೆಗೆ ಹೊಸ ದಿಕ್ಕು ತೋರಿತು.

ರಾಷ್ಟ್ರೀಯ ಕ್ರೀಡಾಕೂಟವನ್ನು ಗಮನದಲ್ಲಿಟ್ಟುಕೊಂಡು  ಅತ್ಯಾಧುನಿಕ  ಸೌಕರ್ಯಗಳನ್ನು ಕಲ್ಪಿಸಿದ್ದ  ರಾಜ್ಯ ಅಮೆಚೂರ್‌ ರೋಯಿಂಗ್ ಸಂಸ್ಥೆ ಪುಣೆಯಿಂದ ಸುಸಜ್ಜಿತ ಬೋಟ್‌ ಗಳನ್ನೂ ತರಿಸಿಕೊಂಡಿತ್ತು.  ಈ ಬೋಟ್‌ಗಳಲ್ಲಿ ಕಲಿತ ಅನೇಕರು ಉತ್ತಮ ಸಾಮರ್ಥ್ಯ ತೋರಿದ್ದರು. 

ಅದಾದ ಬಳಿಕ ಚೊಚ್ಚಲ ರಾಷ್ಟ್ರೀಯ ಸ್ಪ್ರಿಂಗ್‌ ಚಾಂಪಿ ಯನ್‌ಷಿಪ್‌ಗೂ ಬೆಂಗಳೂರು ಆತಿಥ್ಯ ವಹಿಸಿತ್ತು. 500 ಮತ್ತು 1000 ಮೀಟರ್ಸ್‌ ವಿಭಾಗಗಳಲ್ಲಿ ನಡೆದ ಈ ಚಾಂಪಿಯನ್‌ ಷಿಪ್‌ ಅಪಾರ ಜನಮನ್ನಣೆ ಪಡೆಯಿತು. ರಾಷ್ಟ್ರೀಯ ಸಬ್‌ ಜೂನಿಯರ್‌ ಮತ್ತು ಜೂನಿಯರ್‌ ಚಾಂಪಿಯನ್‌ಷಿಪ್‌ಗಳೂ ರಾಜಧಾನಿಯಲ್ಲಿ ರೋಯಿಂಗ್‌ ಚಟುವಟಿಕೆಗಳು ಗರಿಗೆದರು ವಂತೆ ಮಾಡಿದ್ದಂತೂ ಸುಳ್ಳಲ್ಲ.

ಎಂಇಜಿ ಮತ್ತು ತ್ರಿಷ್ನಾ ಕ್ಲಬ್‌ನ  ಪಾತ್ರ
ಕರ್ನಾಟಕದಲ್ಲಿ ರೋಯಿಂಗ್‌ ಕ್ರೀಡೆ ನಿಧಾನವಾಗಿ ತನ್ನ ಬೇರು ಗಳನ್ನು   ಆಳಕ್ಕಿಳಿಸುವಲ್ಲಿ ಮದ್ರಾಸ್‌ ಎಂಜಿನಿಯರಿಂಗ್‌ ಗ್ರೂಪ್‌ ಮತ್ತು ಹಲಸೂರಿನ ತ್ರಿಷ್ನಾ ಕ್ಲಬ್‌ನ ಪಾತ್ರ ಮಹತ್ವದ್ದು.

ತ್ರಿಷ್ನಾ ಕ್ಲಬ್‌ನಲ್ಲಿ ತರಬೇತುಗೊಂಡಿರುವ ಅನೇಕರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಚಾಂಪಿಯನ್‌ಷಿಪ್‌ ಗಳಲ್ಲಿ ಮಿಂಚುತ್ತಿದ್ದಾರೆ. ಎಳವೆಯಲ್ಲಿಯೇ ಈ ಕ್ರೀಡೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕ್ಲಬ್‌ ಅನೇಕ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದೆ.
ಎಂಇಜಿ ಸಂಸ್ಥೆ ಹಲಸೂರು ಕೆರೆಯನ್ನು ಗುತ್ತಿಗೆ ಪಡೆದು ರೋಯಿಂಗ್‌ ತರಬೇತಿಗೆ ಅನುವಾಗುವಂತೆ ಅಭಿವೃದ್ಧಿ ಪಡಿಸಿದೆ. ಈ ಕ್ರೀಡೆಯಲ್ಲಿ ನೈಪುಣ್ಯ ಸಾಧಿಸಿರುವ  ಸಂಸ್ಥೆಯ ಅನೇಕರು ಕಿರಿಯರಿಗೆ  ಹಲವು ಪಟ್ಟುಗಳನ್ನು ಕಲಿಸುತ್ತಿದ್ದಾರೆ.   ರಾಜ್ಯದ ಸ್ಪರ್ಧಿಗಳ ಪದಕದ ಸಾಧನೆ ಏರು ಮುಖವಾಗಿರುವು ದರ ಹಿಂದೆ ಈ ಸಂಸ್ಥೆಯ ಪ್ರಯತ್ನವೂ ಇದೆ.

ರಾಜ್ಯ  ಅಮೆಚೂರ್‌ ರೋಯಿಂಗ್‌ ಸಂಸ್ಥೆ ಕೂಡಾ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ಕೆ ಭಾರತ ಕ್ರೀಡಾ ಪ್ರಾಧಿಕಾರ ಕೂಡ ಕೈ ಜೋಡಿಸಿದೆ.

ಸಿಗದ ಸರ್ಕಾರದ ನೆರವು
ರೋಯಿಂಗ್‌ ಅನ್ನು ಇನ್ನಷ್ಟು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕೂಡಾ ಕೈಜೋಡಿಸಬೇಕಿದೆ.  ದೊಡ್ಡ ಕೆರೆಗಳನ್ನು ಸ್ವಚ್ಛಗೊಳಿಸುವ ಮತ್ತು  ಅತ್ಯಾಧುನಿಕ ಪರಿಕರಗಳನ್ನು ಕೊಂಡುಕೊಳ್ಳಲು ಸ್ಪರ್ಧಿಗಳಿಗೆ ಹಣಕಾಸಿನ ನೆರವು ನೀಡುವತ್ತ ಸರ್ಕಾರ ಚಿತ್ತ ಹರಿಸಬೇಕಿದೆ.
‘ರೋಯಿಂಗ್‌ ಕ್ರೀಡೆ ಜನರ ಮನಸ್ಸಿಗೆ ಹತ್ತಿರವಾಗುವಂತೆ ಮಾಡುವಲ್ಲಿ ಸರ್ಕಾರದ ಸಹಭಾಗಿತ್ವವೂ ತುಂಬಾ ಮಹತ್ವ ದ್ದಾಗಿದೆ. ಈ ನಿಟ್ಟಿನಲ್ಲಿ  ಹಲವು ಯೋಜನೆಗಳನ್ನು ರೂಪಿಸಿ ಅವುಗಳನ್ನು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ನಡೆಸ ಬೇಕು. ರೋಯಿಂಗ್‌ಗೆ ಬಳಸುವ ಸಲಕರಣೆಗಳನ್ನು ಖರೀದಿ ಸಲು ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. ಈ ಕಾರಣ ದಿಂದಲೇ ಪ್ರತಿಭೆ ಇದ್ದರೂ  ಪರಿಕರಗಳನ್ನು ಕೊಂಡುಕೊಳ್ಳ ಲಾಗದೆ  ಸಾಕಷ್ಟು ಮಂದಿ ಈ ಕ್ರೀಡೆಯಿಂದ ವಿಮುಖ ರಾಗು ತ್ತಿದ್ದಾರೆ’ ಎಂದು ಕರ್ನಾಟಕದ ಸ್ಪರ್ಧಿ ಕೀರ್ತನಾ ಹೇಳುತ್ತಾರೆ.

‘ನಾವು ಅಭ್ಯಾಸಕ್ಕಾಗಿ ಹಲಸೂರು ಕೆರೆಯನ್ನೇ ಅವಲಂ ಭಿಸಿದ್ದೇವೆ. ಕೆರೆ ಸ್ವಚ್ಛಗೊಳಿಸುವ ಕಾರ್ಯ ಕೈಗೊಂಡರೆ ಬೇರೆಲ್ಲೂ ಅಭ್ಯಾಸ ನಡೆಸಲು ಆಗುವುದಿಲ್ಲ.  ಹೀಗಾಗಿ ಅನಿ ವಾರ್ಯವಾಗಿ ಹೈದರಾಬಾದ್‌ಗೆ ಹೋಗಬೇಕು’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಶಾಲಾ ಹಂತದಿಂದಲೇ ಮಕ್ಕಳಲ್ಲಿ ರೋಯಿಂಗ್‌ ಬಗ್ಗೆ ಆಸಕ್ತಿ ಬೆಳೆಸುವ ಕೆಲಸವೂ ಆಗುತ್ತಿಲ್ಲ. ಇದರಿಂದ ಪ್ರತಿಭಾ ನ್ವೇಷಣೆಗೆ ಹಿನ್ನಡೆಯಾಗಿದೆ.
ಕೀರ್ತನಾ ಕೂಡಾ ಈ ಮಾತು ಒಪ್ಪುತ್ತಾರೆ. ‘ಅಮೆರಿಕಾ, ಬ್ರಿಟನ್‌ನಂತಹ ದೇಶಗಳಲ್ಲಿ ಶಾಲಾ ಹಂತದಿಂದಲೇ ರೋಯಿಂಗ್‌ ತರಬೇತಿ ನೀಡಲಾಗುತ್ತದೆ. ಇದಕ್ಕೆ ಪೋಷ ಕರೂ ಬೆಂಬಲವಾಗಿ ನಿಂತಿದ್ದಾರೆ. ಜೊತೆಗೆ ಅಲ್ಲಿ  ವಿಶೇಷ ವಿದ್ಯಾರ್ಥಿ ವೇತನಗಳನ್ನೂ ನೀಡಲಾಗುತ್ತಿದೆ. ಹೀಗಾಗಿಯೇ ಆ ದೇಶಗಳು  ಈ ಕ್ರೀಡೆಯಲ್ಲಿ ದೊಡ್ಡ ಶಕ್ತಿಯಾಗಿ ಬೆಳೆದಿವೆ ’ ಎಂದೂ ಅವರು ಅಭಿಪ್ರಾಯಪಡುತ್ತಾರೆ.                                            
 

ಇದು ಆರಂಭ ಮಾತ್ರ

2012ರಲ್ಲಿ ರೋಯಿಂಗ್‌ ಕ್ರೀಡೆಗೆ ಅಡಿಯಿಟ್ಟ ಕೀರ್ತನಾ ಅವರು ಸಬ್‌ ಜೂನಿಯರ್‌ ಮತ್ತು ಜೂನಿಯರ್‌ ವಿಭಾಗಗಳಲ್ಲಿ ಹಲವು ಪದಕಗಳನ್ನು ಗೆದ್ದಿದ್ದಾರೆ.

2015ರಲ್ಲಿ ಚೀನಾದಲ್ಲಿ ನಡೆದಿದ್ದ ಏಷ್ಯನ್‌ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಸಾಧನೆ ಮಾಡಿದ್ದ ಅವರು ಈಗ ಸೀನಿಯರ್‌ ವಿಭಾಗದಲ್ಲೂ ಮಿಂಚುತ್ತಿದ್ದಾರೆ. ಅವರು ‘ಪ್ರಜಾವಾಣಿ’ ಜೊತೆ ಮುಕ್ತವಾಗಿ ಮಾತನಾಡಿದ್ದಾರೆ.

* ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ತಂಡ ವಿಭಾಗದಲ್ಲಿ ಎರಡು ಚಿನ್ನ ಗೆದ್ದಿದ್ದೀರಿ. ಈ ಸಾಧನೆ ಬಗ್ಗೆ ಹೇಳಿ?
ತುಂಬಾ ಆನಂದವಾಗುತ್ತಿದೆ. ಇದೊಂದು ವಿಶೇಷ ಅನುಭವ. 2000 ಮತ್ತು 500 ಮೀಟರ್ಸ್‌ ಕಾಕ್ಸ್‌ಲೆಸ್‌ ಫೋರ್‌ ವಿಭಾಗಗಳಲ್ಲಿ ಮೊದಲ ಸ್ಥಾನ ಗಳಿಸಿದ್ದೇವೆ. ಈ ಸಾಧನೆಯ ಶ್ರೇಯ ತಂಡದಲ್ಲಿದ್ದ ಉಳಿದ ಮೂವರಿಗೂ ಸಲ್ಲಬೇಕು.

* ರೋಯಿಂಗ್‌ಗೆ ಅಡಿ ಇಟ್ಟ ಐದೇ ವರ್ಷಗಳಲ್ಲಿ ಅನೇಕ ಪದಕಗಳನ್ನು ಗೆದ್ದಿದ್ದೀರಿ. ನಿಮ್ಮ ಯಶಸ್ಸಿನ ಹಿಂದಿನ ಗುಟ್ಟೇನು?
ಸತತ ಪರಿಶ್ರಮ ಹಾಗೂ ಕ್ರೀಡೆಯ ಬಗ್ಗೆ ಹೊಂದಿರುವ ಬದ್ಧತೆ  ಇಷ್ಟು ಎತ್ತರಕ್ಕೆ ಬೆಳೆಸಿದೆ. ಇದು ಆರಂಭ ಮಾತ್ರ. ಸಾಧಿಸುವುದು ಇನ್ನೂ ಬಹಳಷ್ಟಿದೆ.
* ನಿಮ್ಮ ತರಬೇತಿ ಕ್ರಮ ಹೇಗಿರುತ್ತೆ?
ಪ್ರತಿ ನಿತ್ಯವೂ ಬೆಳಿಗ್ಗೆ ಮತ್ತು ಸಂಜೆ ತಲಾ 3 ಗಂಟೆ ಅಭ್ಯಾಸ ನಡೆಸುತ್ತೇವೆ. ರೋಯಿಂಗ್‌ ಹೆಚ್ಚು ದೈಹಿಕ ಶ್ರಮ ಬೇಡುವ ಕ್ರೀಡೆಯಾಗಿರುವ ಕಾರಣ ಫಿಟ್ನೆಸ್‌ಗೂ ಹೆಚ್ಚು ಒತ್ತು ನೀಡುತ್ತೇನೆ.
* ಕೋಚ್‌ ಬಗ್ಗೆ ಹೇಳಿ?
ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ  ಇಸ್ಮಾಯಿಲ್‌ ಬೇಗ್‌ ಅವರು ನಮಗೆ  ಮಾರ್ಗದರ್ಶನ ನೀಡುತ್ತಿದ್ದಾರೆ.

ಭೋಪಾಲ್‌ನಲ್ಲಿ ಚಿನ್ನದ ಮೋಡಿ

ಹೋದ ವಾರ ನಡೆದ 35ನೇ ರಾಷ್ಟ್ರೀಯ ಸೀನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯ ತಂಡ ನಾಲ್ಕು ಚಿನ್ನ ಗೆದ್ದ ಸಾಧನೆ ಮಾಡಿದೆ.

ಮಹಿಳೆಯರ ಕಾಕ್ಸ್‌ಲೆಸ್‌ ಫೋರ್‌ನ 2000 ಮತ್ತು 500 ಮೀಟರ್ಸ್‌ ಹಾಗೂ ಪುರುಷರ 2000 ಮೀಟರ್ಸ್ ಡಬಲ್‌ ಸ್ಕಲ್ಸ್‌ ಮತ್ತು 500 ಮೀಟರ್ಸ್‌ ಸಿಂಗಲ್‌ ಸ್ಕಲ್ಸ್‌ ವಿಭಾಗಗಳಲ್ಲಿ ಈ ಸಾಧನೆ ಮೂಡಿಬಂದಿದೆ.
ತಂಡ ವಿಭಾಗದಲ್ಲಿ ಎಸ್‌. ಸ್ನೇಹಾ, ಸಿ.ಪಿ. ಜ್ಯೋತಿ, ಟಿ.ಕೆ. ಕೀರ್ತನಾ ಮತ್ತು ದೀಪಾ ಮಹಾರಾಜ ಅವರು ರಾಜ್ಯದ ಕೀರ್ತಿ ಬೆಳಗಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ  ಚಿನ್ನ ಗೆದ್ದಿದ್ದ ಜಿ. ತರುಣ್‌ ಕೃಷ್ಣ ಪ್ರಸಾದ್್ ಅವರು ಡಬಲ್ಸ್‌ನಲ್ಲಿ ಮಂತೋಷ್‌ ಕುಮಾರ್‌ ಜೊತೆ ಸೇರಿ ರಾಜ್ಯದ ಖಾತೆಗೆ ಚಿನ್ನವನ್ನು ಸೇರಿಸಿದ್ದಾರೆ.
ಮಾಳವಿಕಾ ಸುರೇಂದ್ರ ಪೈ, ಕೆ. ಸೌಮ್ಯಾ ಮತ್ತು ಆರ್‌. ಜೋಷ್ನಾ ಅವರೂ ಗಮನ ಸೆಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT