ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರುವುದು ಸಾಕಷ್ಟು; ಆಗಬೇಕಿದೆ ಇನ್ನಷ್ಟು

Last Updated 5 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ ಈಗ ರಾಜ್ಯ ಒಲಿಂಪಿಕ್ಸ್ ನಡೆಯುತ್ತಿದೆ. ಇಲ್ಲಿ ಕ್ರೀಡಾ ಸೌಲಭ್ಯಗಳ ಕುರಿತು ಸಂದೇಹಗೊಂಡಿದ್ದವರಿಗೆ ಅಚ್ಚರಿ ಮೂಡಿಸುವ ರೀತಿಯಲ್ಲಿ ಮೈದಾನಗಳು, ಅಂಗಣಗಳು ಸಜ್ಜಾಗಿವೆ. ಇಂಥ ಕೂಟಗಳ ನೆಪದಲ್ಲಿ ಇಲ್ಲಿನ ಕ್ರೀಡಾ ಚಟುವಟಿಕೆಗೆ ಹೊಸ ಆಯಾಮ ದೊರಕಬೇಕು ಎಂಬುದು ಕ್ರೀಡಾ ಕ್ಷೇತ್ರದ ಆಶಯ. ಈ ಕುರಿತು ವಿಕ್ರಂ ಕಾಂತಿಕೆರೆ ಬರೆದಿದ್ದಾರೆ.

ಹುಬ್ಬಳ್ಳಿ–ಧಾರವಾಡ ಅವಳಿ ನಗರಗಳಿಗೆ ರಾಜ್ಯ ಒಲಿಂಪಿಕ್ಸ್‌ನ ಆತಿಥ್ಯ ವಹಿಸಲು ಅವಕಾಶ ನೀಡಿದಾಗ ಈ ಭಾಗದ ಎಲ್ಲರಲ್ಲಿ ಎದ್ದ ಪ್ರಮುಖ ಪ್ರಶ್ನೆ, ‘ಇಷ್ಟು ದೊಡ್ಡ ಕೂಟ ಆಯೋಜಿಸಲು ಇಲ್ಲಿ ಕ್ರೀಡಾ ಸೌಲಭ್ಯಗಳಿವೆಯೇ’ ಎಂಬುದು. ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಒಲಿಂಪಿಕ್ಸ್ ಆರಂಭಗೊಂಡಿದೆ. ಒಟ್ಟು 24 ಸ್ಪರ್ಧೆಗಳ ಪೈಕಿ ಎರಡನ್ನು ಬಿಟ್ಟರೆ ಉಳಿದವುಗಳೆಲ್ಲವೂ ಅವಳಿ ನಗರದಲ್ಲೇ ನಡೆಯುತ್ತಿವೆ.

ರಾಜ್ಯದ ಕ್ರೀಡಾಕ್ಷೇತ್ರದ ಎಲ್ಲ ವಿಭಾಗಗಳಲ್ಲೂ ಉತ್ತರ ಕರ್ನಾಟಕ ವಿಶಿಷ್ಟ ಕೊಡುಗೆ ನೀಡಿದೆ. ಆ ಎಲ್ಲ ಕ್ರೀಡಾಪಟುಗಳಿಗೆ ಒಂದಿಲ್ಲ ಒಂದು ಕಾರಣಕ್ಕೆ ಹುಬ್ಬಳ್ಳಿ–ಧಾರವಾಡದ ಜೊತೆ ಸಂಬಂಧವಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದ ಅಥ್ಲೀಟ್‌ಗಳಾದ ಉದಯ ಪ್ರಭು, ವಿಲಾಸ ನೀಲಗುಂದ, ನಾಗರಾಜ, ದೂರ ಅಂತರದ ಓಟಗಾರ ಮೊಹಸಿನ್‌, ಶಿವಾನಂದ, ವಾಲಿಬಾಲ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿದ ಖಾನ್ ಸಹೋದರರು, ಕುಸ್ತಿಯಲ್ಲಿ ಹೆಸರು ಮಾಡಿರುವ ರಫೀಕ್ ಹೊಳಿ, ನಾಗರಾಜ, ಬ್ಯಾಡ್ಮಿಂಟನ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದ ಸಾಧನೆ ಮಾಡುತ್ತಿರುವ ಅಭಿಷೇಕ್ ಎಲಿಗಾರ...ಹೀಗೆ ಸಾಗುತ್ತಿದೆ ಇಲ್ಲಿನ ಸಾಧಕರ ಹೆಸರಿನ ಪಟ್ಟಿ.


ಇವರೆಲ್ಲರೂ ಇಲ್ಲಿನ ಸಾಮಾನ್ಯ ಸೌಲಭ್ಯಗಳನ್ನು ಬಳಸಿಕೊಂಡೇ ಬೆಳೆದವರು. ಆಧುನಿಕ ಸೌಕರ್ಯಗಳು ಬೇಕು ಎಂಬ ನಿರಂತರ ಬೇಡಿಕೆಯ ಜೊತೆಯಲ್ಲೇ ಸಾಧನೆ ಮಾಡಿದವರು. ಇಲ್ಲಿನ ಕ್ರೀಡಾ ಕ್ಷೇತ್ರ ಇನ್ನೂ ಸೌಲಭ್ಯಗಳನ್ನು ಬೇಡುತ್ತಿದೆ. ಅದಕ್ಕೆ ಕಾರಣವೂ ಇದೆ. ಖಾಸಗಿಯವರು ಸೃಷ್ಟಿಸಿದ ಸೌಲಭ್ಯಗಳೇ ಇಲ್ಲಿನ ಕ್ರೀಡಾಪಟುಗಳಿಗೆ ಆಸರೆಯಾಗಿರುವುದು ಈ ಬೇಡಿಕೆಗೆ ಕಾರಣ.

ಭಾರತ ಕ್ರೀಡಾ ಪ್ರಾಧಿಕಾರದ ಧಾರವಾಡ ಕೇಂದ್ರದ ಅಂಗಣಗಳು, ಕರ್ನಾಟಕ ವಿಶ್ವವಿದ್ಯಾಲಯದ ಮೈದಾನ ಬಿಟ್ಟರೆ ಅವಳಿ ನಗರದಲ್ಲಿ ಸರ್ಕಾರ ಒದಗಿಸಿರುವ ಕ್ರೀಡಾ ಸೌಲಭ್ಯ ಕಡಿಮೆ. ಹುಬ್ಬಳ್ಳಿಯಲ್ಲಂತೂ ಇನ್ನಷ್ಟು ಕಡಿಮೆ. ವಿವಾದಗಳನ್ನು ಸೃಷ್ಟಿಸಿದ ನಂತರ ಹುಬ್ಬಳ್ಳಿಯ ಮಹಾನಗರ ಪಾಲಿಕೆ ಈಜುಕೊಳ ಈಗ ನಳನಳಿಸತೊಡಗಿದೆ. ಆದರೆ ಧಾರವಾಡದ ಈಜುಕೊಳ ಇನ್ನೂ ಅಭಿವೃದ್ಧಿ ಹೊಂದಿಲ್ಲ. ಕರ್ನಾಟಕ ವಿಶ್ವ ವಿದ್ಯಾಲಯದ ರಾಣಿ ಚನ್ನಮ್ಮ ಮೈದಾನದಲ್ಲಿ ಉತ್ತಮ ಟ್ರ್ಯಾಕ್ ಇದೆ. ಆದರೆ ಅದನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಕನಸು ನನಸಾಗಲಿಲ್ಲ.

ಸಿಂಥೆಟಿಕ್ ಟ್ರ್ಯಾಕ್‌ ಗರಿಮೆ

ಅವಳಿ ನಗರದಲ್ಲಿ ಈಗ ಇರುವ ಅತ್ಯುತ್ತಮ ಮೈದಾನ ಎಂದರೆ ಧಾರವಾಡದ ಆರ್.ಎನ್‌.ಶೆಟ್ಟಿ ಕ್ರೀಡಾಂಗಣ. ಇಲ್ಲಿನ ಟ್ರ್ಯಾಕ್‌ ಮತ್ತು ಫೀಲ್ಡ್‌ಗೆ ಸಿಂಥೆಟಿಕ್‌ ಸೌಲಭ್ಯ ಅಳವಡಿಸುವ ಕಾರ್ಯ ಒಂದೂವರೆ ವರ್ಷದ ಹಿಂದೆ ಪೂರ್ಣಗೊಂಡಾಗ ಇಲ್ಲಿನ ಕ್ರೀಡಾ ಕ್ಷೇತ್ರಕ್ಕೆ ಹೊಸ ಆಯಾಮ ಸಿಕ್ಕಿದಂತಾಗಿದೆ. ಎರಡು ‘ಡಿ’ ಪ್ರದೇಶಗಳು, ಜಿಗಿತಕ್ಕೆ ಬೇಕಾದ ರನ್‌ವೇ, ಹೊಂಡ (ಪಿಟ್‌), ಡಿಸ್ಕಸ್‌ ಎಸೆತದ ವೃತ್ತ ಇತ್ಯಾದಿ ಎಲ್ಲವೂ ಇಲ್ಲಿದೆ. ಆರ್‌.ಎನ್‌.ಶೆಟ್ಟಿ ಮೈದಾನದ ಒಳಾಂಗಣ ಕ್ರೀಡಾಂಗಣದಲ್ಲೂ ಸಾಕಷ್ಟು ಸೌಲಭ್ಯಗಳಿವೆ. ಬ್ಯಾಡ್ಮಿಂಟನ್‌, ಟೇಬಲ್ ಟೆನಿಸ್‌ ಪಟುಗಳ ಸಾಧನೆಗೆ ವೇದಿಕೆಯಾಗುತ್ತಿದೆ.

ಹುಬ್ಬಳ್ಳಿಯ ನೆಹರೂ ಮೈದಾನದಲ್ಲೂ ಇಂಥ ಸೌಲಭ್ಯಗಳ ಕನಸು ಕಂಡವರು ಇನ್ನೂ ಮರುಗುತ್ತಲೇ ಇದ್ದಾರೆ. ಕ್ರೀಡಾ ಪ್ರಿಯರ ನೆನಪಿನಂಗಳದಲ್ಲಿ ಹಸಿಯಾಗಿ ರುವ ಅನೇಕ ಕ್ರೀಡಾ ಚಟುವಟಿಕೆಗೆ ಸಾಕ್ಷಿಯಾಗಿದ್ದ ಈ ಮೈದಾನ ಈಗ ರಾಜಕೀಯ ಸಮಾರಂಭ, ಜಾತಿ ಸಮಾವೇಶಗಳ ‘ವೇದಿಕೆ’ಯಾಗಿ ಪರಿವರ್ತನೆಗೊಂಡಿದೆ. ವರ್ಷದ ಹಿಂದೆ ಇಲ್ಲಿ ಬ್ಯಾಡ್ಮಿಂಟನ್ ಅಂಗಣ ಸಿದ್ಧಗೊಳಿಸಿರುವುದು ಬಿಟ್ಟರೆ ಉಳಿದಂತೆ ಮೈದಾನದ ಅಭಿವೃದ್ಧಿ ಶೂನ್ಯ.

ಖಾಸಗಿಯವರ ಮೇಲುಗೈ
ಅವಳಿ ನಗರದ ಕ್ರೀಡಾ ಚಟುವಟಿಕೆಗೆ ಹೆಚ್ಚು ಆಶ್ರಯ ನೀಡುತ್ತಿರುವುದು ಖಾಸಗಿಯವರು. ಧಾರವಾಡದಲ್ಲಿ ಜೆ.ಎಸ್‌.ಎಸ್ ಕಾಲೇಜು ಮತ್ತು ಹುಬ್ಬಳ್ಳಿಯಲ್ಲಿ ಬಿ.ವಿ.ಬಿ ಕಾಲೇಜು ಉತ್ತಮ ಸೌಲಭ್ಯಗಳನ್ನು ಅಳವಡಿಸಿಕೊಂಡಿದ್ದು ಎಲ್ಲ ಕ್ರೀಡೆ ಗಳಲ್ಲೂ ಪ್ರತಿಭೆಗಳಿಗೆ ಸಾಣೆ ಹಿಡಿಯುತ್ತಿದ್ದಾರೆ. ಧಾರವಾಡದ ಕಾಸ್ಮಸ್ ಕ್ಲಬ್‌, ಮಲ್ಲಸಜ್ಜನ ವ್ಯಾಯಾಮ ಶಾಲೆ, ರೋವರ್ಸ್‌ ಕ್ಲಬ್‌, ಬಾಲಮಾರುತಿ ಜಿಮ್ನಾಷಿಯಂ ಮುಂತಾದ ಕಡೆಗಳಲ್ಲಿ ಒಳಾಂಗಣ ಕ್ರೀಡೆಗಳಿಗೆ ಉತ್ತಮ ಸೌಲಭ್ಯ ಒದಗಿಸಲಾಗಿದೆ. ಎಸ್‌.ಡಿ.ಎಂ ದಂತ ವೈದ್ಯಕೀಯ ಕಾಲೇಜು ಮೈದಾನ ಕೆ.ಎಸ್.ಸಿ.ಎ ಮೈದಾನ ಬಿಟ್ಟರೆ ಅವಳಿ ನಗರದ ಕ್ರಿಕೆಟ್ ಚಟುವಟಿಕೆಗೆ ಏಕೈಕ ಆಶ್ರಯ.

ಹುಬ್ಬಳ್ಳಿಯಲ್ಲಿ ಅಥ್ಲೆಟಿಕ್ ಚಟುವಟಿಕೆಗೆ ಬಿ.ವಿ.ಬಿ.ಮೈದಾನವೊಂದೇ ಆಸರೆ. ಮಹಾರಾಷ್ಟ್ರ ಮಂಡಳದಲ್ಲಿ ಟೇಬಲ್ ಟೆನಿಸ್‌, ಹುಬ್ಬಳ್ಳಿ ಬ್ಯಾಡ್ಮಿಂಟನ್‌ ಅಕಾಡೆಮಿಯಲ್ಲಿ ಬ್ಯಾಡ್ಮಿಂಟನ್‌ಗೆ ಸೌಲಭ್ಯವಿದೆ.
ಅತ್ಯಂತ ಹಳೆಯ ಸೆಟ್ಲ್‌ಮೆಂಟ್ ಪ್ರದೇಶದ ಹಾಕಿ ಮೈದಾನ ಈ ಭಾಗದಲ್ಲಿ ಹಾಕಿ ಆಟಗಾರರನ್ನು ಅಂತರರಾಷ್ಟ್ರೀಯ ಮಟ್ಟದ ವರೆಗೆ ಏರಿಸಿದರೂ ಉತ್ತಮ ಸೌಲಭ್ಯದ ಕನಸು ನನಸಾಗುವ ಕಾಲ ಇನ್ನೂ ಕೂಡಿ ಬಂದಿಲ್ಲ.

ಆರ್ಚರಿ, ಲಾನ್ ಟೆನಿಸ್‌, ಟ್ರಯಥ್ಲಾನ್‌, ಶೂಟಿಂಗ್ ಇತ್ಯಾದಿಗಳಿಗೆ ಸೌಲಭ್ಯ ಕಲ್ಪಿಸುವ ಪ್ರಯತ್ನ ಈ ಭಾಗದಲ್ಲಿ ನಡೆದಿಲ್ಲ. 
‘ಇಲ್ಲಿ ಕ್ರೀಡಾ ಚಟುವಟಿಕಗೆ ಸಾಕಷ್ಟು ಸಾಧ್ಯತೆಗಳಿವೆ. ಆದರೆ ಅದನ್ನು ಬಳಸಿ ಕೊಳ್ಳಲು ಸಾಧ್ಯವಾಗಲಿಲ್ಲ. ಮೈದಾನಗಳನ್ನು ಅಭಿವೃದ್ಧಿಪಡಿಸಿದರೆ ಸಾಧನೆಯ ಹೊಸ ದಿಸೆಯನ್ನು ತಲುಪಬಹುದು. ಒಲಿಂಪಿಕ್ಸ್‌ ಹೆಸರಿನಲ್ಲಿ ಸುಂದರವಾಗಿ ಕಂಗೊ ಳಿಸುತ್ತಿರುವ ಕೆ.ಸಿ.ಡಿ ಮೈದಾನವೇ ಇದಕ್ಕೆ ಸಾಕ್ಷಿ. ಈ ಮೈದಾನ ಇಷ್ಟು ಚೆನ್ನಾಗಿತ್ತು ಎಂಬ ಊಹೆಯೇ ಇರಲಿಲ್ಲ. ಕಲ್ಪನೆಗೂ ಮೀರಿ ಅದು ಈಗ ಉತ್ತಮ ಫುಟ್‌ಬಾಲ್ ಅಂಗಣವಾಗಿ ಪರಿವರ್ತನೆಗೊಂಡಿದೆ. ಇದೇ ರೀತಿ ಇರುವ ಸೌಲಭ್ಯವನ್ನು ಅಭಿವೃದ್ಧಿ ಪಡಿಸಿದರೆ ಕರ್ನಾಟಕದ ಕ್ರೀಡಾ ಕ್ಷೇತ್ರಕ್ಕೆ ಇಲ್ಲಿಂದ ಇನ್ನಷ್ಟು ಪ್ರತಿಭೆಗಳನ್ನು ಕಾಣಿಕೆ ಯಾಗಿ ನೀಡಬಹುದು’ ಎಂದು ಹೇಳುತ್ತಾರೆ ಕ್ರೀಡಾ ಸಂಘಟಕ ಮತ್ತು ಅಳ್ನಾವರ ಸರ್ಕಾರಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಶ್ರೀಪಾಲ ಕುರಕುರಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT