ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಷ್ಯರೆಲ್ಲ ಒಂದೇ ಎನ್ನುವವನೇ  ಸಾಹಿತಿ

ಸಮಾರೋಪ ಸಮಾರಂಭದಲ್ಲಿ ಸಾಹಿತಿ ಶ್ರೀಕಂಠ ಕೂಡಿಗೆ ಅಭಿಮತ
Last Updated 6 ಫೆಬ್ರುವರಿ 2017, 4:48 IST
ಅಕ್ಷರ ಗಾತ್ರ

ಶಿವಮೊಗ್ಗ: ಜಾತಿ, ಮತ ಪಂಥ, ಧರ್ಮಗಳ ಹಂಗಿಲ್ಲದೇ ಮನುಷ್ಯರೆಲ್ಲ ಒಂದೇ ಎಂದು ನಂಬಿ ಬರೆಯುವವನೇ ನಿಜವಾದ ಸಾಹಿತಿ ಎಂದು ಸಾಹಿತಿ ಶ್ರೀಕಂಠ ಕೂಡಿಗೆ ಪ್ರತಿಪಾದಿಸಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ನಡೆದ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಅವರು ಮಾತನಾಡಿದರು.
ರಾಜ್ಯದ ಶೇ 98ರಷ್ಟು ಸಾಹಿತಿಗಳು ತಮ್ಮ ಸಾಹಿತ್ಯ ಕೃತಿಗಳ ಮೂಲಕ ಧರ್ಮ, ಜಾತಿ, ಪಂಥಗಳ ನಡುವೆ ಬೆಸುಗೆ ಹಾಕಿದ್ದಾರೆ. ಸೌಹಾರ್ದ ಸೌಧ ಕಟ್ಟಿದ್ದಾರೆ. ಆದರೆ, ಇಬ್ಬರು ಸಾಹಿತಿಗಳು ಮಾತ್ರ ಅದಕ್ಕೆ ವಿರುದ್ಧವಾಗಿ ಸಾಗಿದ್ದಾರೆ.

ಅಲ್ಪಸಂಖ್ಯಾತರನ್ನು ಈ ದೇಶದ ಪ್ರಜೆಗಳೇ ಅಲ್ಲ ಎನ್ನುವ, ಮಹಿಳೆಯರ ಕುರಿತು ಗೌರವ ಹೊಂದಿರದ ಇಂತಹ ರಾಜಕೀಯ ನಿಷ್ಠೆಯ ಸಾಹಿತಿಗಳನ್ನು ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವೇ ಎಲ್ಲ ಎಂದರು.

“ಸಾಹಿತಿ ಎಸ್‌.ಎಲ್‌.ಭೈರಪ್ಪ ಜತೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಭಿನ್ನಾಭಿಪ್ರಾಯ ಇರುವುದು ಅವರು ಬರೆದ ಕೃತಿಗಳ ಬಗ್ಗೆ. ಅವರ ಅನುಯಾಯಿಗಳು ಒಂದು ಚರ್ಚಾಗೋಷ್ಠಿ ಏರ್ಪಡಿಸಲಿ, ನಮಗೂ ಆಹ್ವಾನ ನೀಡಲಿ. ಅಲ್ಲಿ ಚರ್ಚೆ ನಡೆಸೋಣ. ಅವರ ಕೃತಿಗಳು ಸಮಾಜಕ್ಕೆ ಒಳ್ಳೆಯದು ಮಾಡಿರುವುದಕ್ಕಿಂತ, ಕೆಟ್ಟದ್ದು ಮಾಡಿರುವುದೇ ಹೇಗೆ ಎಂಬ ವಿಷಯ ಬಹಿರಂಗ ಪಡಿಸುವೆ’ ಎಂದು ಸವಾಲು ಎಸೆದರು.

ವಿಷಯ, ಸಿದ್ಧಾಂತಗಳ ಕುರಿತು ಚರ್ಚೆ ನಡೆಸದೇ, ಆಳವಾದ ಜ್ಞಾನ ಹೊಂದದೇ ಮಾತೆತ್ತಿದರೆ ತ್ರಿಶೂಲ, ದೊಣ್ಣೆ ಹಿಡಿದುಕೊಂಡು ಬಂದು ಹೆದರಿಸುವ ಮನೋಭಾವ ಮೊದಲು ಬದಲಿಸಿಕೊಳ್ಳಬೇಕು ಎಂದು ಕುಟುಕಿದರು.

ಯಾವುದೇ ವ್ಯಕ್ತಿ ತಾನು ನಂಬಿದ ಸಿದ್ಧಾಂತಕ್ಕೆ ಬದ್ಧನಾಗಿ ಇರಬೇಕು. ಅಜಾತಶತ್ರು ಎಂದರೆ ಎಲ್ಲರ ಜತೆ ಇರುವವನು ಎಂದರ್ಥ. ಸಜ್ಜನರ ನಿಷ್ಕ್ರಿಯತೆ ದುರ್ಜನರ ನಡವಳಿಕೆಗಿಂತ ಅಪಾಯಕಾರಿ ಎಂದು ಎಚ್ಚರಿಸಿದರು.

“ಭಷ್ಟಾಚಾರಕ್ಕೆ ಒಳಗಾಗದೇ ನೆಮ್ಮದಿಯ ಜೀವನ ನಡೆಸುವ ವ್ಯಕ್ತಿಯೇ ಈ ದೇಶದ ನಿಜವಾದ ಆಸ್ತಿ. ಭಷ್ಟಾಚಾರ ಎನ್ನುವುದು ಕೇವಲ ರಾಜಕಾರಣಕ್ಕೆ ಸೀಮಿತವಾಗಿಲ್ಲ. ಅದು ಶಿಕ್ಷಣ, ಸಾಹಿತ್ಯ ವಲಯಕ್ಕೂ ಕಾಲಿಟ್ಟಿದೆ. ಹಣ ನೀಡಿದ್ದರೆ ನಾನು ಎಂದೋ ಕುಲಪತಿಯಾಗುತ್ತಿದ್ದೆ. ಪುಸ್ತಕ ಖರೀದಿಯಲ್ಲೂ ಭ್ರಷ್ಟನಾಗುತ್ತಿದ್ದೆ’ ಎಂದರು.

ಶಾಸಕ ಕೆ.ಬಿ.ಪ್ರಸನ್ನಕುಮಾರ್, ಸಾಹಿತಿ ಸತ್ಯನಾರಾಯಣ ರಾವ್ ಅಣತಿ, ಸರ್ವಾಧ್ಯಕ್ಷ ಡಾ.ಸಣ್ಣರಾಮ, ಸೂಡಾ ಅಧ್ಯಕ್ಷ ಉಸ್ಮಾನ್‌ ಖಾನ್, ಪದವೀಧರರ ಸಹಕಾರ ಸಂಘದ ಅಧ್ಯಕ್ಷ ಎಸ್‌.ಪಿ.ದಿನೇಶ್ ಉಪಸ್ಥಿತರಿದ್ದರು.

ಸೋತ ನಂತರ ಪ್ರತಿಸ್ಪರ್ಧೆ
ಹತ್ತು ವರ್ಷ ಜಿಲ್ಲಾ ಸಾಹಿತ್ಯ ಪರಿಷತ್‌ ಚುಕ್ಕಾಣಿ ಹಿಡಿದವರು ಚುನಾವಣೆಯಲ್ಲಿ ಸೋತ ನಂತರ ಗೆದ್ದವರನ್ನು ಬೆಂಬಲಿಸುವ ಬದಲು ಪರ್ಯಾಯ ಸಂಘಟನೆ ಕಟ್ಟಿಕೊಂಡು ಪ್ರತಿ ಸ್ಪರ್ಧೆ ಒಡ್ಡುತ್ತಾರೆ ಎಂದು ಶ್ರೀಕಂಠ ಕೂಡಿಗೆ ಅಸಮಾಧಾನ ವ್ಯಕ್ತಪಡಿಸಿದರು. ಪರಿಷತ್‌ ಚಟುವಟಿಕೆಗಳಿಗೆ ಖರ್ಚು ಮಾಡಿದ ಹಣದ ಲೆಕ್ಕಪತ್ರ ನೀಡದೇ ಓಡಿ ಹೋದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

ನಿರ್ಣಯಗಳು
* ಸರ್ಕಾರಿ ಶಾಲೆ ಸದೃಢಗೊಳಿಸಿ, ಶಿಕ್ಷಕರ ಕೊರತೆ ನೀಗಿಸಬೇಕು.
* ಡಾ.ಸರೋಜಿನಿ ಮಹಿಷಿ ವರದಿ ಅನ್ವಯ ಐಟಿ, ಬಿಟಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಶೇ 100ರಷ್ಟು ಉದ್ಯೋಗ ನೀಡಬೇಕು.
* ರಸ್ತೆ ವಿಸ್ತರಣೆ ನೆಪದಲ್ಲಿ ಮರ ಕಡಿದಾಗ, ಮತ್ತೆ ಗಿಡ ನಡೆಬೇಕು.
* ಕೆರೆ ಹೂಳು ತೆಗೆಸಬೇಕು. ನದಿಗಳಿಗೆ ಚೆಕ್‌ ಡ್ಯಾಂ ನಿರ್ಮಿಸಿ ಕೆರೆಗಳಿಗೆ ನೀರು ತುಂಬಿಸಬೇಕು.
* ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಬೇಕು.
*ಶಿಕ್ಷಣ ಹಕ್ಕು ಕಾಯ್ದೆ ಅಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಉಚಿತ  ಪ್ರವೇಶ ನೀಡ ಬೇಕು. ಹಿಂದುಳಿದ ವರ್ಗಕ್ಕೆ ಶೇ 25ರಷ್ಟು ಮೀಸಲಾತಿ ವಿಸ್ತರಿಸಬೇಕು.
* ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಶೇ 50ರಷ್ಟು ಮೀಸಲಾತಿ ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT