ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಗಿರಿ: ಸುಗಮ ಸಂಚಾರಕ್ಕೆ ಒಮ್ಮುಖ ರಸ್ತೆ ಇರಲಿ

ಕಿರಿದಾದ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ರಸ್ತೆ
Last Updated 6 ಫೆಬ್ರುವರಿ 2017, 5:02 IST
ಅಕ್ಷರ ಗಾತ್ರ

ಚನ್ನಗಿರಿ: ಪಟ್ಟಣದ ಅತಿ ಜನಸಂದಣಿ ಹಾಗೂ ವ್ಯಾಪಾರ ವಹಿವಾಟು ನಡೆಯುವ ಸ್ಥಳವಾದ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ರಸ್ತೆಯನ್ನು ಒಮ್ಮುಖ ರಸ್ತೆಯನ್ನಾಗಿ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಪಡಿಸಿದ್ದಾರೆ.

ಕನ್ನಿಕಾ ಪರಮೇಶ್ವರಿ ದೇವಸ್ಥಾನದ ರಸ್ತೆ ಅತ್ಯಂತ ಕಿರಿದಾದ ರಸ್ತೆಯಾಗಿದೆ. ಕಿರಿದಾದ ರಸ್ತೆಯಾದರೂ ಪಟ್ಟಣದಲ್ಲಿಯೇ ಅತಿ ಹೆಚ್ಚು ವ್ಯಾಪಾರ ವಹಿವಾಟು ಸ್ಥಳ ಎಂಬ ಹೆಸರನ್ನು ಪಡೆದುಕೊಂಡಿದೆ. ಈ ರಸ್ತೆಯಲ್ಲಿ ಸದಾ ಜನಸಂದಣಿ ಹೆಚ್ಚಾಗಿರುವುದರ ಜತೆಗೆ ವಾಹನಗಳ ಸಂಚಾರವೂ ಹೆಚ್ಚಾಗಿರುತ್ತದೆ.

ಪ್ರತಿ ದಿನ ಈ ರಸ್ತೆಯಲ್ಲಿ ಕನಿಷ್ಠ ಎಂದರೂ 200ರಿಂದ 300 ದ್ವಿಚಕ್ರ ವಾಹನಗಳು ಹಾಗೂ 50ರಿಂದ100 ನಾಲ್ಕು ಚಕ್ರದ ವಾಹನಗಳು, ಟ್ರ್ಯಾಕ್ಟರ್, ಆಟೊ ಮುಂತಾದ ವಾಹನಗಳು ಸಂಚರಿಸುತ್ತವೆ. ಪೊಲೀಸ್‌ ಠಾಣೆಯ ಹಿಂಭಾಗದಲ್ಲಿಯೇ ಈ ರಸ್ತೆ ಇದೆ.

ಈ ಕಿರಿದಾದ ರಸ್ತೆಯಲ್ಲಿ ಸಂಚಾರಿ ನಿಯಮ ಪಾಲನೆ ಮಾಡದಿರುವುದು ಸುಗಮ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ವಸ್ತುಗಳನ್ನು ಖರೀದಿ ಮಾಡಲು ವಾಹನಗಳಲ್ಲಿ ಬರುವ

ಜನರು ಎಲ್ಲೆಂದರಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ವಸ್ತುಗಳನ್ನು ಖರೀದಿ ಮಾಡಲು ಹೋಗುತ್ತಾರೆ. ದ್ವಿಚಕ್ರ ವಾಹನಗಳ ಸವಾರರು ಅಡ್ಡಾದಿಡ್ಡಿಯಾಗಿ ಹಾಗೂ ರಸ್ತೆಗೆ ಅಡ್ಡವಾಗಿ ತಮ್ಮ ವಾಹನಗಳನ್ನು ನಿಲ್ಲಿಸಿ ಹೋಗುತ್ತಾರೆ. ಈ ರಸ್ತೆಯಲ್ಲಿ ಹೋಗಲು ಅಪ್ಪಿತಪ್ಪಿ ಬಂದ ವಾಹನಗಳು ಗಂಟೆಗಟ್ಟಲೆ ಕಾದು ರಸ್ತೆಯಲ್ಲಿ ಸಂಚರಿಸಬೇಕಾದ ಸ್ಥಿತಿ ಉಂಟಾಗಿದೆ.

ಈ ರಸ್ತೆಯನ್ನು ಪೊಲೀಸ್ ಇಲಾಖೆಯವರು ನೇರವಾಗಿ ಒಮ್ಮುಖ ರಸ್ತೆಯನ್ನಾಗಿ ಮಾಡಲು ಕಾನೂನಿನಲ್ಲಿ ಅವಕಾಶ ಇರುವುದಿಲ್ಲ. ಪುರಸಭೆಯ ಜನಪ್ರತಿನಿಧಿಗಳು ಸಾಮಾನ್ಯ ಸಭೆಯಲ್ಲಿ ನಿರ್ಣಯವನ್ನು ಅಂಗೀಕಾರ ಮಾಡಿ ನಿರ್ಣಯದ ಪ್ರತಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಟ್ಟರೆ ಅವರು ಒಮ್ಮುಖ ರಸ್ತೆ ಮಾಡಲು ಅನುಮತಿ ಕೊಡುತ್ತಾರೆ.

ಈ ನಿಟ್ಟಿನಲ್ಲಿ ಈ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ರಸ್ತೆಯನ್ನು ಒಮ್ಮುಖ ರಸ್ತೆಯನ್ನಾಗಿ ಮಾಡಲು ಪುರಸಭೆಯವರು ತುರ್ತಾಗಿ ಮುಂದಾಗಬೇಕು ಎನ್ನುತ್ತಾರೆ ಪಟ್ಟಣದ ವಾಸಿಗಳಾದ ಶಿವಕುಮಾರ್, ವಕೀಲರಾದ ಅನಿಲ್‌ಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT