ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಗೆ ಬಾರದ ಅನುದಾನ

ಪಶುಸಂಗೋಪನಾ ಇಲಾಖೆಯಿಂದ ನಿರ್ಮಿಸುವ ಉದ್ದೇಶ; ಏಳು ಜಿಲ್ಲೆ ಜಾನುವಾರುಗಳಿಗೆ ಅನುಕೂಲ
Last Updated 6 ಫೆಬ್ರುವರಿ 2017, 6:48 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆ ಮಾತ್ರವಲ್ಲದೇ ವಿಭಾಗದ 7 ಜಿಲ್ಲೆಗಳ ಜಾನುವಾರುಗಳ ಹಾಗೂ ಹೈನುಗಾರರ ಅನುಕೂಲಕ್ಕಾಗಿ ನಗರದಲ್ಲಿ ಸೂಪರ್‌ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಅನುದಾನದ ಕೊರತೆ ಎದುರಾಗಿದ್ದು, ಕಳೆದ ವರ್ಷವೇ ಆರಂಭವಾಗಬೇಕಿದ್ದ ಕಾಮಗಾರಿಗೆ ಗ್ರಹಣ ಬಡಿದಿದೆ.

ವಿವಿಧ ರೋಗಗಳಿಂದ ಬಳಲು ತ್ತಿರುವ ಹಾಗೂ ಅಪಘಾತದಲ್ಲಿ ಗಾಯ ಗೊಂಡ ಜಾನುವಾರುಗಳಿಗೆ ಅತ್ಯಾ ಧುನಿಕ ಮಾದರಿಯಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವ ಸಲುವಾಗಿ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವೆ ಇಲಾಖೆ ವತಿಯಿಂದ ಜಾನುವಾರುಗಳ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಇದಕ್ಕೆ ಸರ್ಕಾರದಿಂದ ಅನುಮೋದನೆಯೂ ದೊರೆತಿದ್ದು, ಕರ್ನಾಟಕ ಗೃಹ ಮಂಡಳಿಗೆ ನಿರ್ಮಾಣದ ಹೊಣೆ ವಹಿಸಲಾಗಿದೆ.

ಇದಕ್ಕೆ ಪೂರಕವಾಗಿ ಯೋಜನಾ ಮೊತ್ತ ಈವರೆಗೂ ಬಿಡುಗಡೆಯಾಗಿಲ್ಲ. ಪರಿಣಾಮ, ಮಹತ್ವದ ಯೋಜನೆ ಯೊಂದು ಇನ್ನೂ ಕಾಗದದಲ್ಲಿಯೇ ಉಳಿದಿದೆ.
ಈ ಭಾಗದಲ್ಲಿ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದಿರುವುದರಿಂದ ವಿಶೇಷ ವಾಗಿ ಅಪಘಾತದಲ್ಲಿ ಗಾಯಗೊಂಡ ಸಾಕುಪ್ರಾಣಿಗಳಿಗೆ ಅಗತ್ಯ ತುರ್ತು ಚಿಕಿತ್ಸೆ ಲಭಿಸದೇ ಸಾವನ್ನಪ್ಪುತ್ತಿವೆ. ಇದನ್ನು ತಡೆಯಲು ಅತ್ಯಾಧುನಿಕ ಮಾದರಿಯ ಆಸ್ಪತ್ರೆ ನಿರ್ಮಿಸಲು ಇಲಾಖೆಯಿಂದ ಸಲ್ಲಿಸಿದ್ದ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಮೂರು ವರ್ಷಗಳ ಹಿಂದೆಯೇ ಮಂಜೂರಾತಿ ನೀಡಿದೆ.

ನಿರ್ಮಾಣವಾದರೆ...: 2015–16ನೇ ಸಾಲಿನ ಆರಂಭದಲ್ಲಿ ಈ ಆಸ್ಪತ್ರೆ ನಿರ್ಮಿಸಲು ₹ 3.60 ಕೋಟಿ ಅನುದಾನ ನಿಗದಿಯಾಗಿದೆ. ಕಟ್ಟಡ ನಿರ್ಮಾಣ ಜವಾಬ್ದಾರಿಯನ್ನು ಕರ್ನಾಟಕ ಗೃಹ ಮಂಡಳಿಗೆ ವಹಿಸಲಾಗಿದೆ. ಮಂಡಳಿ ಸಿದ್ಧಪಡಿಸಿದ್ದ ಕಟ್ಟಡದ ನೀಲನಕ್ಷೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಬೇಕಾಗಿತ್ತು.

ಸಣ್ಣ ಪುಟ್ಟ ಬದಲಾವಣೆ ಮಾಡಲಾಗಿತ್ತು. ಆದರೆ, ಕಳೆದ ವರ್ಷ ಅನುದಾನ ದೊರೆಯಲಿಲ್ಲ! ಇದರಿಂದಾಗಿ, ಈ ಕಾಮಗಾರಿಯನ್ನು ಮುಂದುವರಿದ ಕಾಮಗಾರಿ ಎಂಬುದಾಗಿ ನಮೂದಿಸಿ ಈ ವರ್ಷಕ್ಕೂ ಮುಂದುವರಿಸಲಾಗಿದೆ. ಈ ಬಾರಿ ಅನುದಾನ ದೊರೆತಲ್ಲಿ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದೆ. ನಿರ್ಮಾಣ ಪ್ರಕ್ರಿಯೆ ಆರಂಭಗೊಂಡರೆ ಎರಡು ವರ್ಷದಲ್ಲಿ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

‘ಜಾನುವಾರುಗಳ ಅನುಕೂಲಕ್ಕಾಗಿ ನಿರ್ಮಿಸಲಿರುವ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿ ಈ ವರ್ಷ ಆರಂಭಗೊಳ್ಳಲಿದೆ. ಮಹಾಂತೇಶ ನಗರದ ಗೋಕಾಕ ರಸ್ತೆಯಲ್ಲಿರುವ ಕೆಎಂಎಫ್‌ ಡೈರಿ ಪಕ್ಕದಲ್ಲಿ ಪಶು ಸಂಗೋಪನಾ ಇಲಾಖೆಗೆ ಸೇರಿದ ಜಾಗವಿದ್ದು, ಇದರಲ್ಲಿ ಒಂದು ಎಕರೆ ಯನ್ನು ಆಸ್ಪತ್ರೆ ನಿರ್ಮಿಸಲು ನೀಡಲಾಗಿದೆ.

ಮುಂದಿನ ಐದು ದಶಕಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅತ್ಯಾಧುನಿಕ ಸೌಲಭ್ಯಗಳಿರುವ ಆಸ್ಪತ್ರೆ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಒಂದು ಮಹಡಿಯ ಕಟ್ಟಡ ನಿರ್ಮಿಸ ಲಾಗುವುದು. ಇಲ್ಲಿ ತರಬೇತಿ ಕೇಂದ್ರ, ಸಣ್ಣ ಆಸ್ಪತ್ರೆ ಹಾಗೂ ಕೋಳಿ ಸಾಕಾಣಿಕೆ ಕೇಂದ್ರವಿದೆ.

ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಗೊಂಡರೆ ರೈತರಿಗೆ ಮತ್ತಷ್ಟು ಅನುಕೂಲವಾಗುತ್ತದೆ. ಅನುದಾನ ಬಿಡುಗಡೆಗೆ ಕಾಯುತ್ತಿದ್ದೇವೆ’ ಎಂದು ಇಲಾಖೆಯ ಉಪನಿರ್ದೇಶಕ ಡಾ.ಎ.ಕೆ. ಚಂದ್ರ ಶೇಖರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಯಾವ ಜಿಲ್ಲೆಗಳಿಗೆ ಅನುಕೂಲ: ಈ ಆಸ್ಪತ್ರೆಯು ಬೆಳಗಾವಿ ವಿಭಾಗದ ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಳ್ಳಲಿದೆ.

ಈ ವ್ಯಾಪ್ತಿಯಲ್ಲಿ ಯಾವುದಾದರೂ ಜಾನುವಾರು ಗಂಭೀರ ರೋಗದಿಂದ ಬಳಲುತ್ತಿದ್ದರೆ, ವೈದ್ಯರು ಈ ಆಸ್ಪತ್ರೆಗೆ ಶಿಫಾರಸು ಮಾಡುತ್ತಾರೆ. ಸದ್ಯ ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿಯ ಕಾಲೇಜು ರಸ್ತೆ ಬಳಿಯಲ್ಲಿರುವ ಪಾಲಿಕ್ಲಿನಿಕ್‌ಗೆ ಜಾನುವಾರು ತರಲಾಗುತ್ತಿದೆ.

78 ಸಿಬ್ಬಂದಿ ನಿಯೋಜನೆ: ಈ ಆಸ್ಪತ್ರೆಯಲ್ಲಿ 8 ತಜ್ಞ ವೈದ್ಯರು ಸೇರಿದಂತೆ 78 ಸಿಬ್ಬಂದಿ ಕೆಲಸ ಮಾಡಲಿದ್ದಾರೆ. ಉಪನಿರ್ದೇಶಕರ ಹುದ್ದೆಯ ವೈದ್ಯ ಅಧಿಕಾರಿಗಳು ಆಸ್ಪತ್ರೆಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ

ಪ್ರಾಣಿಗಳಿಗೆ ಇರಲಿದೆ ಐಸಿಯು
ಅಪಘಾತಗಳಲ್ಲಿ ಗಂಭೀರವಾಗಿ ಗಾಯಗೊಂಡ ಜಾನುವಾರುಗಳನ್ನು ಆರೈಕೆ ಮಾಡಲು ಸೂಪರ್‌ಸ್ಪೆಷಾಲಿಟಿ  ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕ (ಐ.ಸಿ.ಯು) ನಿರ್ಮಿಸಲಾಗುತ್ತದೆ. ನೆಲಮಹಡಿಯಲ್ಲಿ ನಾಯಿ, ಬೆಕ್ಕು ಮೊದಲಾದ ಸಣ್ಣ ಸಾಕುಪ್ರಾಣಿಗಳಿಗೆ ಹಾಗೂ ಆಕಳು, ಎಮ್ಮೆಯಂಥ ದೊಡ್ಡ ಸಾಕುಪ್ರಾಣಿಗಳಿಗೆ ಪ್ರತ್ಯೇಕವಾಗಿ ಹೊರರೋಗಿ ವಿಭಾಗ ಮತ್ತು ಒಳರೋಗಿ ವಿಭಾಗಗಳನ್ನು ನಿರ್ಮಿಸಲಾಗುವುದು. ಜೊತೆಗೆ ಪ್ರತ್ಯೇಕವಾಗಿ ಶಸ್ತ್ರಚಿಕಿತ್ಸಾ ವಿಭಾಗ, ಎಕ್ಸರೆ ಕೊಠಡಿ, ಪ್ರಯೋಗಾಲಯ ನಿರ್ಮಿಸಲಾಗುವುದು.

ಹೊರರೋಗಿ ವಿಭಾಗದಲ್ಲಿ ಸಣ್ಣ ಹಾಗೂ ದೊಡ್ಡ ಪ್ರಾಣಿಗಳಿಗೆ ಪ್ರತ್ಯೇಕವಾಗಿ ಏಳು ಟೇಬಲ್‌ಗಳು ಇರಲಿವೆ. ಇದರಿಂದ, ಏಕಕಾಲಕ್ಕೆ ಏಳು ಜಾನುವಾರು ತಪಾಸಣೆ ಮಾಡಲು ಸಾಧ್ಯವಾಗಲಿದೆ. ಅದೇ ರೀತಿ ಸಣ್ಣ ಹಾಗೂ ದೊಡ್ಡ ಜಾನುವಾರುಗಳ ಒಳರೋಗಿ ವಿಭಾಗಗಳಲ್ಲಿ ಪ್ರತ್ಯೇಕವಾಗಿ ತಲಾ 8 ಬೆಡ್‌ ವ್ಯವಸ್ಥೆ ಕಲ್ಪಿಸಲಾಗುವುದು.

ಜಾನುವಾರುಗಳಿಗೆ ಮೇವು ನೀಡುವ ಸಲುವಾಗಿ ಪ್ರತ್ಯೇಕವಾಗಿ ಮೇವಿನ ದಾಸ್ತಾನು ಕೋಣೆ ಹಾಗೂ ಜಾನುವಾರು ತಂದ ರೈತರಿಗೆ ವಿಶ್ರಾಂತಿ ಪಡೆಯಲು ಪ್ರತ್ಯೇಕ ಕೊಠಡಿ ಇರಲಿದೆ. ಗಾಯಗೊಂಡ ಜಾನುವಾರುಗಳನ್ನು ವಾಹನದಿಂದ ಇಳಿಸಿ ತಳ್ಳುವ ಗಾಡಿಯಲ್ಲಿ ಹಾಕಿಕೊಂಡು ಹೋಗಲು ರ್‍ಯಾಂಪ್‌ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು.

ಮೊದಲನೇ ಮಹಡಿಯಲ್ಲಿ ವೈದ್ಯಾಧಿಕಾರಿ ಕಚೇರಿ ಹಾಗೂ ಸಿಬ್ಬಂದಿ ಕೊಠಡಿ, ರಾತ್ರಿ ಪಾಳಿ ಮಾಡುವ ವೈದ್ಯರಿಗೆ ತಂಗಲು ಕೊಠಡಿ ನಿರ್ಮಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.

*
ರೈತರು ಜಾನುವಾರು ಚಿಕಿತ್ಸೆಗಾಗಿ ಮಹಾರಾಷ್ಟ್ರದ ಮೀರಜ್‌ಗೆ ಹೋಗುತ್ತಿದ್ದಾರೆ. ಬೆಳಗಾವಿಯಲ್ಲಿಅತ್ಯಾಧುನಿಕ ಆಸ್ಪತ್ರೆ ನಿರ್ಮಾಣವಾದರೆ ಅನುಕೂಲ.
-ಡಾ.ಎ.ಕೆ. ಚಂದ್ರಶೇಖರ, ಉಪನಿರ್ದೇಶಕರು, ಪಶುಸಂಗೋಪನಾ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT