ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರನ್ನು ಕಂಗಾಲಾಗಿಸಿದ ಥ್ರಿಪ್ಸ್ ನುಸಿ ರೋಗ

ವಾಣಿಜ್ಯ ಬೆಳೆಯಾಗಿರುವ ‘ಬೆಂಗಳೂರು ಬ್ಲೂ ದ್ರಾಕ್ಷಿ’ಗೆ ಅಂಟಿದ ರೋಗ
Last Updated 6 ಫೆಬ್ರುವರಿ 2017, 9:12 IST
ಅಕ್ಷರ ಗಾತ್ರ

ವಿಜಯಪುರ: ಬಹುತೇಕ ಮಳೆಯಾಧಾರಿತ ಪ್ರದೇಶವಾಗಿರುವ ವಿಜಯಪುರ ಹೋಬಳಿ ಮತ್ತು ಚನ್ನರಾಯಪಟ್ಟಣ ಹೋಬಳಿಗಳಲ್ಲಿನ ರೈತರು ಕೊಳವೆ ಬಾವಿಗಳಿಗೆ ಅವಲಂಬಿತರಾಗಿ ವಾಣಿಜ್ಯ ಬೆಳೆಯಾಗಿರುವ ‘ಬೆಂಗಳೂರು ಬ್ಲೂ ದ್ರಾಕ್ಷಿ’ಯನ್ನು ಹೆಚ್ಚಾಗಿ ಬೆಳೆಯಲಾರಂಭಿಸಿದ್ದು, ಈಚೆಗೆ  ಹೆಚ್ಚಾಗುತ್ತಿರುವ ಬಿಸಿಲಿನ ತಾಪಮಾನದಿಂದಾಗಿ ಕಾಡುತ್ತಿರುವ ಥ್ರಿಪ್ಸ್ ನುಸಿ ರೋಗ ರೈತರನ್ನು ಕಂಗಾಲಾಗಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಹೋಬಳಿಯ ಹಾರೋಹಳ್ಳಿ, ಇರಿಗೇನಹಳ್ಳಿ, ಬಿಜ್ಜವಾರ, ಮುದುಗುರ್ಕಿ, ವೆಂಕಟಗಿರಿಕೋಟೆ, ಗೊಡ್ಲುಮುದ್ದೇನಹಳ್ಳಿ, ಪುರ, ಚನ್ನರಾಯಪಟ್ಟಣ ಹೋಬಳಿಯ ಬೀಡಿಗಾನಹಳ್ಳಿ, ದಿನ್ನೂರು, ಮಂಡಿಬೆಲೆ, ಮುಂತಾದ ಕಡೆಗಳಲ್ಲಿನ ರೈತರು ಹೆಚ್ಚಿನ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಬೇಸಿಗೆ ಪ್ರಾರಂಭವಾಗುವ ಮುನ್ನವೇ ಈ ಭಾಗದಲ್ಲಿನ ಉಷ್ಣಾಂಶ 35 ಡಿಗ್ರಿಗೂ ಹೆಚ್ಚು ದಾಖಲಾಗುತ್ತಿರುವುದರಿಂದ ಗಿಡಮರಗಳು ಒಣಗುತ್ತಿರುವುದರಿಂದ ಥ್ರಿಪ್ಸ್ ನುಸಿರೋಗವು ದ್ರಾಕ್ಷಿ ಬೆಳೆಗಳ ಮೇಲೆ ದಾಳಿ ಮಾಡಲಾರಂಭಿಸಿದೆ.

ತೀವ್ರ ನೀರಿನ ಕೊರತೆಯ ನಡುವೆ ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿರುವ ರೈತರು ಟ್ಯಾಂಕರುಗಳ ಮೂಲಕ ನೀರು ಹಾಯಿಸಲು ಆರಂಭಿಸಿದ್ದಾರೆ. ಆದರೆ ಥ್ರಿಪ್ಸ್ ನುಸಿ ರೋಗದಲ್ಲಿ ಕಂಡು ಬರುವ ಸಣ್ಣ ಹುಳುಗಳು ದ್ರಾಕ್ಷಿ ತೋಟಗಳಲ್ಲಿ ಬೆಳವಣಿಗೆಯ ಹಂತದಲ್ಲಿರುವ ಕಾಯಿಗಳ ಮೇಲೆ ಕುಳಿತು ಕಾಯಿಗಳಲ್ಲಿನ ನೀರಿನ ಅಂಶವನ್ನು ಸಂಪೂರ್ಣವಾಗಿ ಎಳೆಯುವುದರಿಂದ ಕಾಯಿಗಳಲ್ಲಿ ಬೆಳವಣಿಗೆ ಕುಂಠಿತವಾಗಿ ಲಕ್ಷಾಂತರ ರೂಪಾಯಿಗಳಷ್ಟು ಬೆಳೆಗಳು ನಷ್ಟವಾಗುತ್ತವೆ.

ರೈತರು ರೋಗವನ್ನು ನಿಯಂತ್ರಣ ಮಾಡಲು ಔಷಧಿಗಳನ್ನು ಸಿಂಪರಣೆ  ಮಾಡಲು ಮುಂದಾಗುತ್ತಾರಾದರೂ ಒಂದು ಕಡೆಯಿಂದ ಔಷಧಿ ಸಿಂಪರಣೆ ಮಾಡಿಕೊಂಡು ಹೋಗುತ್ತಿದ್ದರೆ, ಹುಳುಗಳು ಮತ್ತೊಂದು ಕಡೆಗೆ ಕುಳಿತುಕೊಂಡು ಬೆಳೆಗೆ ಹಾನಿ ಮಾಡುತ್ತಿವೆ. ಇದರಿಂದ ಲಕ್ಷಾಂತರ ರೂಪಾಯಿಗಳ ಬಂಡವಾಳ ಹೂಡಿಕೆ ಮಾಡಿ ಬೇಸಿಗೆಯಲ್ಲಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿರುವ ರೈತರ ಪಾಲಿಗೆ ಥ್ರಿಪ್ಸ್ ಮಾರಕವಾಗುತ್ತಿದೆ.

ದ್ರಾಕ್ಷಿ ಬೆಳೆಗಾರರು ಬೆಳೆಯುತ್ತಿರುವ ದ್ರಾಕ್ಷಿಗೆ ವೈಜ್ಞಾನಿಕ ಬೆಲೆಯನ್ನಂತು ಸರ್ಕಾರ ನೀಡುತ್ತಿಲ್ಲ, ಮಾರುಕಟ್ಟೆಯ ವ್ಯವಸ್ಥೆಯಿಲ್ಲ, ಒಂದು ವಿಧದಲ್ಲಿ ದ್ರಾಕ್ಷಿ ಬೆಳೆಗಾರರು ಅಸಂಘಟಿತವಲಯದ ರೈತರಾಗಿದ್ದೇವೆ. ಆದ್ದರಿಂದ ಸರ್ಕಾರ ತನ್ನ ಬಜೆಟ್ ನಲ್ಲಿ ದ್ರಾಕ್ಷಿಬೆಳೆಗಾರರಿಗೆ ರಿಯಾಯಿತಿ ದರದಲ್ಲಿ ಔಷಧಿಗಳ ಖರೀದಿಗೆ ಅವಕಾಶ ಮಾಡಿಕೊಡಬೇಕು ಎಂದು ರೈತರಾದ ರಾಮಕೃಷ್ಣಪ್ಪ, ವೆಂಕಟೇಶ್, ಶ್ರೀನಿವಾಸ್, ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.

ಏನಿದು ಥ್ರಿಪ್ಸ್‍ : ಇದೊಂದು ರಸ ಹೀರುವ ಕೀಟವಾಗಿದ್ದು , ಎಲೆಗಳಿಂದ ರಸವನ್ನು ಹೀರಿ ಎಲೆ ಮುದುರುಗುವಂತೆ ಮಾಡುತ್ತದೆ. ತೀವ್ರ ಹಾನಿಗೊಳಗಾದ ಬಳ್ಳಿಗಳಿಂದ ಎಲೆಗಳು ಹಳದಿಯಾಗಿ ಮುರುಟುತ್ತವೆ.  ನುವಾನ್, ಕ್ಲೊರೋಪೈರಿಫಾಸ್, ಅಥವಾ ಮಾನೋಕ್ಲೋರಿಪಾಸ್ ಸಿಂಪರಣೆ  ಮಾಡಬಹುದು.
 
2 ಲೀಟರ್ ನೀರಿಗೆ 2 ಎಂ.ಎಲ್ ನಂತೆ ಒಂದೊಂದು ಸ್ಪ್ರೇ ಮಾಡಬಹುದು. ರೈತರು  ದುಬಾರಿ ಬೆಲೆಯ ಔಷಧಿಗಳನ್ನು ಸಿಂಪರಣೆ ಮಾಡುವ ಅಗತ್ಯವಿಲ್ಲವೆಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
–ಎಂ. ಮುನಿನಾರಾಯಣ

*
ನೀರಿನ ಅಭಾವದಲ್ಲಿ ಕಷ್ಟಪಟ್ಟು ಬೆಳೆಯುತ್ತಿರುವ ದ್ರಾಕ್ಷಿ ಬೆಳೆಗೆ ಥ್ರಿಪ್ಸ್‌ ರೋಗ ಬೀಳುತ್ತಿದೆ.
-ನಂಜುಂಡಪ್ಪ ,
ದ್ರಾಕ್ಷಿ ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT