ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದು ವಿಡಿಯೊ ಕ್ಯಾಸೆಟ್ 'ಚಿನ್ನಮ್ಮ' ಇಂದು ಮುಖ್ಯಮಂತ್ರಿ!

Last Updated 6 ಫೆಬ್ರುವರಿ 2017, 15:39 IST
ಅಕ್ಷರ ಗಾತ್ರ

ಎಂಬತ್ತರ ದಶಕದ ಆರಂಭದಲ್ಲಿ ಕಡಲೂರು ಜಿಲ್ಲೆಯಲ್ಲಿ 'ವಿನೋದ್ ವಿಡಿಯೊ ವಿಷನ್' ಎಂಬ ಒಂದೇ ಒಂದು ಕೋಣೆಯಿರುವ ಪುಟ್ಟ ಅಂಗಡಿಯಲ್ಲಿ ವಿಡಿಯೊ ಕ್ಯಾಸೆಟ್ ಮಾರಾಟ ಮಾಡುತ್ತಿದ್ದಾಕೆಯ ಹೆಸರು ಶಶಿಕಲಾ. ದೇಶದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭವಾಗಿದ್ದರಿಂದ ತಮಿಳುನಾಡು ಸರ್ಕಾರದಲ್ಲಿ ಅಸಿಸ್ಟೆಂಟ್ ಪಿಆರ್ ಒ ಆಗಿದ್ದ  ನಟರಾಜನ್ ಉದ್ಯೋಗ ಕಳೆದುಕೊಂಡಿದ್ದರು. ಹೀಗಿರುವಾಗ ಬದುಕು ಸಾಗಿಸಲು ಅವರು ಕಂಡುಕೊಂಡ ಕೆಲಸವಾಗಿತ್ತು ವಿಡಿಯೊ ಕ್ಯಾಸೆಟ್ ಮಾರಾಟ.

ಕಳೆದುಕೊಂಡ ಕೆಲಸವನ್ನು ಪಡೆಯುವುದಕ್ಕಾಗಿ ತನ್ನ ಕೈಯಲ್ಲಿದ್ದ ಒಡವೆಗಳನ್ನೆಲ್ಲಾ ಮಾರಿ, ಆಮೇಲೆ ಕ್ಯಾಸೆಟ್ ಮಾರಾಟ ಆರಂಭ ಮಾಡಿದ್ದು ಎಲ್ಲವೂ ಬದುಕಿನ ಹೋರಾಟದ ಅಧ್ಯಾಯಗಳಲ್ಲೊಂದು. ಕ್ಯಾಸೆಟ್ ಮಾರಾಟದ ನಡುವೆ ಫೋಟೊಗ್ರಫಿ, ವಿಡಿಯೊಗ್ರಫಿ ಕಲಿತು ಮದುವೆ ಸಮಾರಂಭಗಳ ವಿಡಿಯೊ ಮಾಡಲು ತೊಡಗಿಕೊಂಡಾಗ ವ್ಯಾಪಾರ ಇನ್ನೂ ಹೆಚ್ಚಾಯಿತು.

ಶಾಲಾ ಶಿಕ್ಷಣವನ್ನು ಅರ್ಧಕ್ಕೇ ಕೈ ಬಿಟ್ಟಿದ್ದ ಶಶಿಕಲಾ ಎಂಬಾಕೆ ಬದುಕಿನ ಬಂಡಿ ಎಳೆಯಲು ಒಂದಷ್ಟು ಕಷ್ಟಪಟ್ಟ ಕಾಲವೊಂದಿತ್ತು. ಆಗ ಶಶಿಕಲಾಳ ವಯಸ್ಸು 25. ನಂತರದ 33 ವರ್ಷಗಳಲ್ಲಿ ಈಕೆ ಜೆ.ಜಯಲಲಿತಾ ಅವರ ಆಪ್ತ ಗೆಳತಿಯಾಗಿ ಗುರುತಿಸಿಕೊಂಡರು. ಜಯಲಲಿತಾ ಪಾಲಿಗೆ ಈಕೆ ಅಮ್ಮ, ಸಹೋದರಿ, ಸಖಿ ಎಲ್ಲವೂ ಆಗಿದ್ದರು.

80ರ ದಶದಲ್ಲಿ ಜಯಾ ಎಐಎಡಿಎಂಕೆ ಪ್ರಚಾರ ಕಾರ್ಯದರ್ಶಿಯಾಗಿದ್ದಾಗ ಶಶಿಕಲಾ ಕಾರ್ಯಕ್ರಮಗಳನ್ನು ರೆಕಾರ್ಡ್ ಮಾಡುತ್ತಿದ್ದರು. ಅಲ್ಲಿಂದ ಶುರುವಾಯಿತು ಶಶಿ- ಜಯಾ ಗೆಳೆತನ.

ಶಶಿಯಲ್ಲಿ ಕೇಳಿ...
ಪೋಯಸ್ ಗಾರ್ಡನ್‍ನಲ್ಲಿರುವ ಜಯ ಅವರ ಮನೆಯಲ್ಲಿ ಶಶಿಗೆ ಸ್ಥಾನ ಸಿಕ್ಕಿದ್ದೇ ಹೀಗೆ. ಜಯಾ ಮನೆಯ ಕೆಲಸದಾಳುಗಳು ಜಯಾ ಅವರಲ್ಲಿ ಏನಾದರೂ ಕೇಳಲು ಬಂದರೆ ಶಶಿಯಲ್ಲಿ ಕೇಳಿ, ಆಕೆ ಹೇಳಿದಂತೆ ಮಾಡಿ ಎಂದು ಜಯಾ ಉತ್ತರಿಸುತ್ತಿದ್ದರು. ಜಯಾ ಅವರ ಪಾಲಿಗೆ ಶಶಿ ಗೆಳತಿ ಮಾತ್ರವಲ್ಲ ಪರ್ಸನಲ್ ಅಸಿಸ್ಟೆಂಟ್ ಕೂಡಾ ಆಗಿದ್ದರು. ಆನಂತರ ಸಚಿವರೋ, ಶಾಸಕರೋ ಅಭಿಪ್ರಾಯಗಳನ್ನು ಕೇಳಲು ಬಂದರೂ 'ಶಶಿ ಏನು ಹೇಳುತ್ತಾಳೋ ಹಾಗೇ ಮಾಡಿ' ಅನ್ನುತ್ತಿದ್ದರು ಜಯಾ. ಹೀಗೊಂದು ಆತ್ಮೀಯತೆ ಮತ್ತು ನಂಬಿಕೆ ಅವರ ನಡುವೆ ಇತ್ತು.

ಹೀಗಿದ್ದರೂ ಜಯಾ ಅವರ ಸಾವಿನ ಸುದ್ದಿ ಬಹಿರಂಗವಾಗುವವರೆಗೆ ಶಶಿಕಲಾ ಎಂದೂ ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಂಡಿಲ್ಲ. ಪಕ್ಷದಲ್ಲಿ ಯಾವುದೇ ಜವಾಬ್ದಾರಿಯನ್ನೂ ವಹಿಸಿಲ್ಲ. ಈಕೆ ಪಕ್ಷದ ಪ್ರಾಥಮಿಕ ಸದಸ್ಯೆ ಮತ್ತು ನಿರ್ವಾಹಕ ಸಮಿತಿಯ ಆಹ್ವಾನಿತ ವ್ಯಕ್ತಿ ಎಂಬುದನ್ನು ಬಿಟ್ಟರೆ ರಾಜಕೀಯದಲ್ಲಿ ಬೇರೆ ಯಾವ ಸ್ಥಾನವನ್ನೂ ಈಕೆ ವಹಿಸಿಲ್ಲ.

ಒಲಿದು ಬಂದ ಭಾಗ್ಯ
ವಿವೇಕಾನಂದಂ-ಕೃಷ್ಣವೇಣಿ ದಂಪತಿಗಳ ಮಗಳಾದ ಶಶಿಕಲಾ ಜನಿಸಿದ್ದು 1953ರಲ್ಲಿ. ಎಂಜಿಆರ್‍ ಅವರ ನಿಧನ ನಂತರ ಏಕಾಂಗಿ ಎಂಬ ಭಾವ ಮೂಡಿ ಜಯಾ ಮಂಕಾಗಿದ್ದ ದಿನಗಳಲ್ಲಿ ಆಕೆಗೆ ಧೈರ್ಯ ತುಂಬಿದ ಗೆಳತಿ ಈ ಶಶಿಕಲಾ. 1989ರಲ್ಲಿ ಇವರಿಬ್ಬರೂ ಪೋಯಸ್ ಗಾರ್ಡನ್‍ನಲ್ಲಿರುವ ಮನೆಯಲ್ಲಿ ಜತೆಯಾಗಿ ವಾಸಿಸಲು ಆರಂಭಿಸಿದರು. ಆಗ ಶಶಿಕಲಾ ಅವರ ಪತಿ ನಟರಾಜನ್ ಸೇರಿದಂತೆ 40 ಸಂಬಂಧಿಕರೂ ಕೂಡಾ ಶಶಿಕಲಾ ಜತೆ ಪೋಯಸ್ ಗಾರ್ಡನ್‍ಗೆ ಬಂದು ಬಿಟ್ಟರು. ನಂತರ ಜಯಾ ಅವರ ಮನೆಯಲ್ಲಿ, ಕಚೇರಿಯಲ್ಲಿ, ಜಯಾ ಟೀವಿ ಎಲ್ಲದರಲ್ಲೂ ಇವರೇ ಕೆಲಸಗಾರರಾದರು.

1991ರಲ್ಲಿ ಜಯಲಲಿತಾ ಮೊದಲ ಬಾರಿಗೆ ತಮಿಳುನಾಡು ಮುಖ್ಯಮಂತ್ರಿ ಸ್ಥಾನಕ್ಕೇರಿದಾಗ ಶಶಿಕಲಾ ಅವರಿಗೆ ಗಜಕೇಸರಿ ಯೋಗ ಪ್ರಾಪ್ತವಾದಂತ ಅನುಭವ! ಜಯಾ ಮುಖ್ಯಮಂತ್ರಿಯಾಗುತ್ತಿದ್ದಂತೆ ಶಶಿಕಲಾ ಅವರ ಕುಟುಂಬ ರಾತ್ರೋರಾತ್ರಿ ಶ್ರೀಮಂತವಾಗಿ ಬಿಟ್ಟಿತು.

ಶಶಿಕಲಾ ಅವರ ಸಹೋದರಿಯ ಪುತ್ರ ಸುಧಾಕರನ್ ಅವರನ್ನು ಜಯಾ ದತ್ತು ಪಡೆದುಕೊಂಡು ಕೋಟಿಗಟ್ಟಲೆ ಹಣ ಸುರಿದು ಅದ್ದೂರಿಯಾಗಿ ವಿವಾಹವನ್ನೂ ಮಾಡಿದರು. ಈ ವಿವಾಹದ ಜತೆಗೆ 'ಅಕ್ರಮ ಸಂಪತ್ತು' ವಿವಾದಗಳೂ ಜಯಾ ಅವರ ಮೇಲೇರಿ ಬಂದವು.ಅಕ್ರಮ ಭೂಸ್ವಾಧೀನ, ಪ್ಲೆಸೆಂಟ್ ಸ್ಟೇ ಹೋಟೆಲ್ ಪ್ರಕರಣ, ಕಲರ್ ಟಿವಿ ಮೊದಲಾದ ವಿವಾದಗಳು ಜಯಾ ಮೇಲಿತ್ತು.

ಆ ಹೊತ್ತಿಗೆ ಶಶಿಕಲಾ ಅವರನ್ನು ದೂರ ಮಾಡಿ ಎಂದು ಎಐಎಡಿಎಂಕೆ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು. ಹಾಗೆ 1996ನಲ್ಲಿ ಜಯಾ-ಶಶಿಕಲಾ ದೂರವಾದರು. ಆದರೆ ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಬಂದ ಶಶಿಕಲಾ ಮತ್ತೆ ಪೋಯಸ್ ಗಾರ್ಡನ್‍ಗೆ ಬಂದರು. ಅಲ್ಲಿಂದ ಜಯಾ-ಶಶಿಕಲಾ ಅವರ ಗೆಳೆತನದ ಎರಡನೇ ಇನ್ನಿಂಗ್ಸ್ ಪ್ರಾರಂಭವಾಯಿತು.

2011ರಲ್ಲಿ ಜಯಾ ಮುಖ್ಯಮಂತ್ರಿಯಾಗಿದ್ದಾಗ ಮತ್ತೆ ಆ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿತು. ಪರಿಣಾಮ ಶಶಿಕಲಾ ಅವರ ಕುಟುಂಬವನ್ನೇ ಜಯಾ ಮನೆಯಿಂದ ಹೊರಹಾಕಿದರು. ಆಗ ಬಂತು ನೋಡಿ ಶಶಿಕಲಾ ಅವರ ಪತ್ರ!

'ಅಕ್ಕನೇ ನನ್ನ ಬದುಕು. ಅಕ್ಕನಿಗಾಗಿ ನಾನು ನನ್ನ ಪತಿಯನ್ನೇ ಬಿಟ್ಟುಬಿಡುತ್ತೇನೆ' ಈ ಪತ್ರ ಸುದ್ದಿಯಾದೊಡನೆ ಜಯಾ ಅವರ ಮನೆಯ ಗೇಟಿನಿಂದ ಹೊರಗೆ ನಟರಾಜನ್ ಮತ್ತು ಕುಟುಂಬವನ್ನು ಬಿಟ್ಟು ಶಶಿಕಲಾ ಜಯಾ ಮನೆಗೆ ಪ್ರವೇಶ ಮಾಡಿದರು. ಆನಂತರ ಅವರಿಬ್ಬರೂ ಎಂದೂ ದೂರವಾಗಿಲ್ಲ. ಜಯಾ ನಿಧನದವರೆಗೆ ಎಲ್ಲವನ್ನೂ ತನ್ನ ಹಿಡಿತದಲ್ಲಿಟ್ಟುಕೊಂಡು ಶಶಿಕಲಾ ಮೌನವಾಗಿಯೇ ಇದ್ದರು.

'ಜಯಾ ನಿಧನದ ನಂತರ ನೀವೇ ಮುಖ್ಯಮಂತ್ರಿಯಾಗಿ ಎಂದು ಪನ್ನೀರ್‍ ಸೆಲ್ವಂ ಒತ್ತಾಯಿಸಿದ್ದರು' ಎಂದು ಶಶಿಕಲಾ ಅವರು ನಿನ್ನೆ ಮಾಧ್ಯಮದವರಿಗೆ ಹೇಳಿಕೆ ನೀಡುವವರೆಗೂ ಶಶಿಕಲಾ ಏನೂ ಮಾತನಾಡದೆ ಎಲ್ಲವನ್ನೂ ನಿಯಂತ್ರಿಸುತ್ತಾ ಬಂದರು.

ಈಗ ಜಯಾ ಅವರ ಆಪ್ತೆ 'ಚಿನ್ನಮ್ಮ' ತಮಿಳುನಾಡಿನ ಮುಖ್ಯಮಂತ್ರಿ ಸ್ಥಾನವೇರುತ್ತಿದ್ದಾರೆ. ತಮಿಳುನಾಡಿನ ಜನತೆ ಅಮ್ಮನಿಗೆ ನೀಡಿದ ಬೆಂಬಲವನ್ನು ಚಿನ್ನಮ್ಮನಿಗೂ ನೀಡುತ್ತಾ? ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT