ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗೂ ಯೋಚಿಸಬಹುದೇ?

Last Updated 7 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಮನಸ್ಸಿನ ಯೋಚನೆಗಳು-ಭಾವನೆಗಳು-ದೈಹಿಕ ಸಂವೇದನೆಗಳು ಮತ್ತು ನಮ್ಮ ವರ್ತನೆಗಳಿಗೂ ಅವಿನಾಭಾವ ಸಂಬಂಧ ಇದೆ.  1979ರಲ್ಲಿ ಆರನ್ ಬೆಕ್ ಎಂಬ ಮನಃಶಾಸ್ತ್ರಜ್ಞ ಇದನ್ನೇ ಆಧಾರವಾಗಿಟ್ಟುಕೊಂಡು ‘Cognitive Behavior Therapy’  ಅಥವಾ ‘ಅರಿವಿನ ವರ್ತನಾ ಚಿಕಿತ್ಸೆ’ ಎಂಬುದನ್ನು ಹುಟ್ಟುಹಾಕಿದ. ಅವನು ಹೇಳಿದ್ದು ಇಷ್ಟು: ‘ಯಾವುದೇ ಪರಿಸ್ಥಿತಿ ಅಥವಾ ಸನ್ನಿವೇಶದಲ್ಲಿ, ಒಂದು ವ್ಯಕ್ತಿಯ ಪ್ರತಿಕ್ರಿಯೆ ಆ ಪರಿಸ್ಥಿತಿ/ಸನ್ನಿವೇಶದ ಮೇಲೆ ಅವಲಂಬಿತವಾಗಿಲ್ಲ. ಬದಲಿಗೆ, ಆ ವ್ಯಕ್ತಿ ಆ ಸಂದರ್ಭವನ್ನು ಗ್ರಹಿಸುವ ರೀತಿಯ ಮೇಲೆ ಅವಲಂಬಿಸಿದೆ’.

ಅರಿವಿನ ದೋಷಗಳು  (Cognitive Errors): ಕೆಲವು ರೀತಿಯ ಅರಿವಿನ ದೋಷಗಳು ನಮ್ಮಲ್ಲಿರಬಹುದು. ಇವು ನಾವು ಯಾವುದೇ ವ್ಯಕ್ತಿ/ಸನ್ನಿವೇಶವನ್ನು ಗ್ರಹಿಸುವ ರೀತಿ/ನೋಡುವ ದೃಷ್ಠಿಕೋನ ಬದಲಾಯಿಸುತ್ತವೆ. ಉದಾಹರಣೆಗಳೊಂದಿಗೆ ನೋಡೋಣ.

Overgeneralization (ಅತಿ ಸಾಮಾನ್ಯೀಕರಣ): ಇಪ್ಪತ್ತಾರು ವರ್ಷದ ಕುಮುದಾ ಆಫೀಸಿನಲ್ಲಿ ಯಾವುದೋ ಜಗಳದಿಂದಾಗಿ ತನ್ನ ಪ್ರಾಣ ಸ್ನೇಹಿತೆಯ ಗೆಳೆತನ ಬಿಟ್ಟಳು. ‘ತನಗೆ ಯಾವುದೇ ಸಂಬಂಧಗಳನ್ನು ಸರಿಯಾಗಿ ಕಾಪಾಡಿಕೊಳ್ಳುವುದಕ್ಕೇ ಬರುವುದಿಲ್ಲ’ ಎಂಬ ತೀರ್ಮಾನದಿಂದ ಖಿನ್ನತೆಗೆ ಒಳಗಾಗಿದ್ದಾಳೆ ಕುಮುದಾ. ನಿಜ ಹೇಳಬೇಕೆಂದರೆ, ಕುಮುದಾಳಿಗೆ ಎಷ್ಟೋ ವರ್ಷಗಳಿಂದ ಕಾಪಾಡಿಕೊಂಡ ಗೆಳೆತನಗಳಿವೆ. ಮನೆಯಲ್ಲಿ ತಂದೆ-ತಾಯಿ - ಸಹೋದರಿಯರೊಂದಿಗೆ ಆತ್ಮೀಯ ಸಂಬಂಧ ಇದೆ. ಆದರೆ ಇವೆಲ್ಲವನ್ನೂ ಕಡೆಗಾಣಿಸಿ, ಈ ತೀರ್ಮಾನಕ್ಕೆ ಬಂದಿದ್ದಾಳೆ. ಇದೇ Overgeneralization.

Personalizing (ವ್ಯಕ್ತೀಕರಣ): ಹರೀಶ ಕಳೆದ ಇಪ್ಪತ್ತು ವರ್ಷಗಳಿಂದ ಪ್ರಸಿದ್ಧ ಸಾಫ್ಟ್‌ವೇರ್ ಕಂಪನಿಯಲ್ಲಿ ಟೀಮ್ ಲೀಡರ್ ಆಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಈ ಬಾರಿಯ ಪ್ರಾಜೆಕ್ಟ್ ಒಂದರಲ್ಲಿ ಅವನ 50 ಜನರ ಟೀಂನ ಐದು ಜನರು ಸರಿಯಾಗಿ ಕೆಲಸ ಮಾಡಿಲ್ಲ. ಇದರಿಂದ ಪ್ರಾಜೆಕ್ಟ್ ಯಶಸ್ವಿಯಾಗಿಲ್ಲ. ಆದರೆ ಹರೀಶ ತಾನೇ ಇದಕ್ಕೆಲ್ಲಾ ಕಾರಣ ಎಂದು ಹೊಣೆ ಹೊತ್ತು, ಮೇಲಧಿಕಾರಿ ಎಷ್ಟೇ ಸಾಂತ್ವನ ಹೇಳಿದರೂ, ಮಂಕಾಗಿ ಕುಳಿತಿದ್ದಾನೆ. ಇದನ್ನು Personalizing ಎನ್ನುತ್ತೇವೆ.

Emotional Reasoning (ಭಾವನಾತ್ಮಕ ತರ್ಕ): ಇದೂ ಕೂಡ ಒಂದು ರೀತಿಯ ಅರಿವಿನ ದೋಷ. ಯಾವುದೇ ಸಂದರ್ಭದಲ್ಲಿ ನಮ್ಮಲ್ಲಿ ಉಂಟಾಗುವ ಭಾವನೆಗಳ ಮೇಲೆ ಸ್ಥಿತಿಯನ್ನು ಅರ್ಥೈಸುವುದು. ‘ಇವರು ನಮ್ಮನ್ನು ಬೇಸರಪಡಿಸಬೇಕೆಂದೇ, ನಮಗೆ ಆಹ್ವಾನ ಪತ್ರಿಕೆ ಕಳಿಸಿಲ್ಲ’ ಎಂದು ಭಾವನಾತ್ಮಕವಾಗಿ ಯೋಚಿಸುತ್ತೇವಲ್ಲಾ, ಹಾಗೆ. ಅದರ ಬದಲು ‘ಅವರು ಯಾವುದೋ ತೊಂದರೆಯಿಂದ ನಮಗೆ ಆಹ್ವಾನ ಪತ್ರಿಕೆ ಕೊಟ್ಟಿರಲಿಕ್ಕಿಲ್ಲ’ ಎಂದು ಮನಸ್ಸು ಯೋಚಿಸುವುದಿಲ್ಲ.  ಈ ಮೇಲಿನವು ಅರಿವಿನ ದೋಷಗಳಿಗೆ ಕೆಲವು ಉದಾಹರಣೆಗಳಷ್ಟೇ. ನಾವೇ ಒಂದು ಕ್ಷಣ ಕುಳಿತು ಯೋಚಿಸಿದರೆ, ಮತ್ತಷ್ಟು ಹೊಳೆಯುತ್ತವೆ.

ಬಾಲ್ಯ, ಹುಟ್ಟಿ ಬೆಳೆದ ಪರಿಸರ, ಘಟನೆಗಳು, ನಮ್ಮ ಮನಸ್ಸಿನಲ್ಲಿ ಕೆಲವು ನಂಬಿಕೆಗಳನ್ನು ಆಳವಾಗಿ ಬೇರೂರುವಂತೆ ಮಾಡುತ್ತದೆ. ಇವಕ್ಕೆ Core beliefs ಎನ್ನುತ್ತೇವೆ. ಕೆಲವು ಉದಾಹರಣೆಗಳು ಹೀಗಿವೆ: ‘ಎಲ್ಲರೂ ಸ್ವಾರ್ಥಿಗಳು’, ‘ಜೀವನದಲ್ಲಿ ಕೇವಲ ಸೋಲುಗಳೇ’, ‘ಕಷ್ಟದಲ್ಲಿದ್ದಾಗ ಯಾರೂ ಸಹಾಯಕ್ಕೆ ಬರುವುದಿಲ್ಲ’, ‘ಯಾರೂ ನಂಬಲರ್ಹರಲ್ಲ’ – ಈ ತಪ್ಪು ನಂಬಿಕೆಗಳನ್ನು ಮೀರಿ ಯೋಚಿಸುವುದಕ್ಕೆ ನಮಗೆ ಸಾಧ್ಯವಾಗುವುದಿಲ್ಲ. ಸಮಸ್ಯೆಗಳು, ಸಂಕಷ್ಟಗಳು, ದುಃಖ ಬಂದಾಗ ಈ ರೀತಿ ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳಬೇಕು; ಉತ್ತರ ಹುಡುಕಬೇಕು. ಇದಕ್ಕೆ ಪೂರಕವಾಗಿ ಕೆಲವು ಪ್ರಶ್ನೆಗಳು ಹೀಗಿವೆ:

ಇದು ನಿಜವೇ?
ಈ ಸಂದರ್ಭವನ್ನು ಬೇರೆಯ ರೀತಿ ಅರ್ಥೈಸಲು ಸಾಧ್ಯವೇ?
ನಾನು ಅಂದುಕೊಳ್ಳುತ್ತಿರುವುದಕ್ಕೆ ಸಾಕ್ಷಿ ಇದೆಯೇ?
ಭಾವನಾತ್ಮಕ ಉದ್ವೇಗದಿಂದ ನಾನು ಹೀಗೆ ಪ್ರತಿಕ್ರಿಯಿಸುತ್ತಿದ್ದೇನೆಯೇ?
ನಾನು ಸರಿಯಾದ ಸಾಕ್ಷಿಯಿಲ್ಲದೇ ಈ ನಿರ್ಧಾರಕ್ಕೆ ಬರುತ್ತಿದ್ದೇನೆಯೇ?
ಈ ಸಮಸ್ಯೆಗೆ ಬೇರೆ ಪರಿಹಾರ ಇರಬಹುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT