ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಮ್ರಾಟ್’ ತ್ರಿವಿಕ್ರಮ್ ಅದೃಷ್ಟ ಪರೀಕ್ಷೆ

Last Updated 7 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಬೆಳ್ಳಿತೆರೆ ಮತ್ತು ಕಿರುತೆರೆಯಲ್ಲಿ ಒಂದೇ  ಸಮಯದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದೇಕೆ ?
ಹೌದು, ನಾನು ಅಭಿನಯಿಸಿದ ಮೂರು ಸಿನಿಮಾಗಳು ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಅರ್ಜುನ್‌ ಸರ್ಜಾ ನಿರ್ಮಾಣದ ಚಿತ್ರದಲ್ಲೂ ನಟಿಸಿದ್ದೇನೆ. ಚಿತ್ರದ ಪ್ರೊಮೋಷನ್‌ ಕೆಲಸಗಳು ಇನ್ನಷ್ಟೇ ನಡೆಯಬೇಕಿದೆ. ಈ ನಡುವೆ ‘ಪದ್ಮಾವತಿ’ ಧಾರಾವಾಹಿಯ ಆಫರ್‌ ಬಂತು. ಇದು ಒಂದೂವರೆ ವರ್ಷದ ಕಮಿಟ್‌ಮೆಂಟ್‌.

ಕಿರುತೆರೆ ನಟನೆಯಿಂದ ಸಿನಿಮಾ ಬದುಕಿಗೆ ಧಕ್ಕೆಯಾಗುವುದಿಲ್ಲವೇ?
ನಾನು ಹಾಗೆ ಅಂದುಕೊಂಡಿಲ್ಲ. ನನ್ನ ಚಲನಚಿತ್ರಗಳ ಬಗ್ಗೆ ಭರವಸೆಯಿದೆ. ‘ಪದ್ಮಾವತಿ’ ಧಾರಾವಾಹಿಯಲ್ಲಿ ನನ್ನದು ಸೂಪರ್‌ಸ್ಟಾರ್ ಒಬ್ಬನ ಪಾತ್ರ. ಸಿನಿಮಾದ ರೀತಿಯಲ್ಲಿಯೇ ಅದ್ಧೂರಿಯಾಗಿ ಧಾರಾವಾಹಿ ನಿರ್ಮಾಣವಾಗುತ್ತಿದೆ. ಇದು ನನ್ನ ವೃತ್ತಿಬದುಕಿಗೆ ಇನ್ನಷ್ಟು ಬಣ್ಣ ತುಂಬುವ ಭರವಸೆಯಿದೆ.

ನಿಮ್ಮ ಶೈಕ್ಷಣಿಕ ಹಿನ್ನೆಲೆಯೇನು?
ಬಾಲ್ಯದಿಂದಲೂ ನನಗೆ ನಟನೆಯ ಕಡೆಗೆ ಹೆಚ್ಚು ಒಲವಿತ್ತು. ಆದರೆ, ನಮ್ಮ ಹೆತ್ತವರ ಅಭಿಲಾಷೆಯಂತೆ ಮಾರ್ಕೆಟಿಂಗ್‌ನಲ್ಲಿ ಎಂಬಿಎ ಮಾಡಿದ ನಂತರ ನಟನೆಗೆ ಬಂದೆ.

ನಟನೆ ಕುರಿತು ಏನಾದರೂ ಸಿದ್ಧತೆ ಮಾಡಿಕೊಂಡಿದ್ದಿರಾ?
ಹೀರೋ ಆಗಬೇಕಿದ್ದರೆ ಮಾಡಿಕೊಳ್ಳಬೇಕಿರುವ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇನೆ. ಫಿಟ್‌ನೆಸ್‌, ಅಭಿನಯ, ನೃತ್ಯ ತರಬೇತಿ ಪಡೆದೇ ಬಂದಿದ್ದೇನೆ.

ನಿಮ್ಮ ಫಿಟ್‌ನೆಸ್‌  ಗುಟ್ಟೇನು?
ನನಗೆ ಮೊದಲಿನಿಂದಲೂ ಫಿಟ್‌ನೆಸ್‌ ಕಾಳಜಿ ಇದೆ. ಕಾಲೇಜಿನಲ್ಲಿರುವಾಗ ಎಲ್ಲ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದ ಕಾರಣ ಫಿಟ್‌ ಆಗಿಯೇ ಇದ್ದೆ. ಈಗಲೂ ಪ್ರತಿದಿನ ನಾಲ್ಕು ಗಂಟೆ ವರ್ಕೌಟ್‌ ಮಾಡುತ್ತೇನೆ. ನನ್ನ ಸ್ನೇಹಿತ ಯಾವ ಹೊತ್ತಿನಲ್ಲಿ ಹೋದರೂ ತನ್ನ ಜಿಮ್‌ ಬಾಗಿಲು ತೆರೆದು ಅವಕಾಶ ನೀಡುತ್ತಾನೆ.

ಕಿರುತೆರೆ–ಬೆಳ್ಳಿತೆರೆ ನಟನೆಯ ಬಗ್ಗೆ ಅನುಭವ ಹೇಗಿದೆ?
ನಿರ್ಮಾಣದ ವಿಚಾರದಲ್ಲಿ ಇವೆರಡರ ನಡುವೆ ಅಜಗಜಾಂತರವಿದೆ. ಆದರೆ, ಕಮಿಟ್‌ಮೆಂಟ್‌ ವಿಚಾರದಲ್ಲಿ ನನಗೆ ಎರಡೂ ಒಂದೇ. ಕಿರುತೆರೆಯ ವೀಕ್ಷಕರ ಬಳಗ ಬಹಳ ದೊಡ್ಡದಿದೆ. ಅದರಲ್ಲೂ ಧಾರಾವಾಹಿ ಪ್ರತಿದಿನ  ಪ್ರಸಾರವಾಗುವ ಕಾರಣ ಬೇಗ ಪರಿಚಿತರಾಗುತ್ತೇವೆ. ಇದರಿಂದ ನನ್ನ ಸಿನಿಮಾ ಪಯಣಕ್ಕೂ ಅನುಕೂಲವಾಗುವ ನಂಬಿಕೆಯಿದೆ.

ಬೇರೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಬಂದಿದೆಯೇ?
ಇಲ್ಲ. ಸದ್ಯ ಪದ್ಮಾವತಿ ಧಾರಾವಾಹಿಯ ಕಡೆ ಹೆಚ್ಚು ಗಮನಹರಿಸಿದ್ದೇನೆ. ಒಂದು ವರ್ಷದವರೆಗೂ ಇದರಲ್ಲಿ ತೊಡಗಿಕೊಳ್ಳುತ್ತೇನೆ. ಒಳ್ಳೆಯ ಅವಕಾಶ ಬಂದರೆ ಒಪ್ಪಿಕೊಳ್ಳುತ್ತೇನೆ.

ಪದ್ಮಾವತಿಯಲ್ಲಿ ನಿಮ್ಮ  ಜೊತೆ ನಟಿಸುತ್ತಿರುವ ದೀಪ್ತಿ ಕೂಡ ಸಿನಿಮಾದಲ್ಲಿ ನಟಿಸಿದ್ದಾರಲ್ವಾ?
ಹೌದು, ದೀಪ್ತಿ ಮನ್ನೆ ಅವರು ಈಗಾಗಲೇ ನಾಲ್ಕು ಚಿತ್ರಗಳಲ್ಲಿ ನಟಿಸಿದ್ದಾರೆ. ‘ತುಂಡು ಹೈಕ್ಳು’ ಚಿತ್ರದಲ್ಲೂ ಅವರು ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT