ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 7 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ನಂದೀಶ್‌, ಬೆಂಗಳೂರು
ನಾನು ಟೊಯೊಟಾ ಕಿರ್ಲೊಸ್ಕರ್‌ ಮೋಟಾರ್‌್ಸನಲ್ಲಿ ಕೆಲಸ ಮಾಡುತ್ತೇವೆ. ನನ್ನ ಹತ್ತಿರ₹ 8 ಲಕ್ಷದಷ್ಟು ಬೆಲೆಯ ಜಪಾನಿನ ಕರೆನ್ಸಿ ಯೆನ್‌ ಇದೆ. ಇದನ್ನು ರೂಪಾಯಿಗೆ ಪರಿವರ್ತಿಸಿದರೆ ತೆರಿಗೆ ಬರುತ್ತಿದೆಯೇ ಈ ಹಣ ನಾನು ಜೂನ್‌ನಿಂದ ಅಕ್ಟೋಬರ್‌ 2016 ರಲ್ಲಿ ಜಪಾನಿಗೆ ತರಬೇತಿಗೆ ಹೋದಾಗ ದುಡಿದಿರುವ ಹಣ ದಯಮಾಡಿ ತಿಳಿಸಿ.

ಉತ್ತರ: 
  ಅನಿವಾಸಿ ಭಾರತೀಯರಿಗೆ, ಹೊರ ರಾಷ್ಟ್ರದಲ್ಲಿ ದುಡಿದ ಹಣ, ಭಾರತದಲ್ಲಿ ಎನ್‌ಆರ್‌ಐ ಠೇವಣಿಯಲ್ಲಿ ಇರಿಸಿದರೆ ಮಾತ್ರ ತೆರಿಗೆ ಬರುವುದಿಲ್ಲ. ನೀವು ಭಾರತ ಪ್ರಜೆಯಾಗಿದ್ದು, ವರ್ಷದ ಸ್ವಲ್ಪಕಾಲ ಜಪಾನಿನಲ್ಲಿ ತರಬೇತಿಗೆಂದು ಹೋಗಿ ಪಡೆದ ಹಣ ಈ ವ್ಯಾಪ್ತಿಯಲ್ಲಿ ಬರುವುದಿಲ್ಲ. ಯೆನ್‌ ರೂಪಾಯಿಗೆ ಪರಿವರ್ತಿಸಿ ತೆರಿಗೆ ರಿಟರ್ನ್‌ ತುಂಬುವಾಗ ನಿಮ್ಮ ವಾರ್ಷಿಕ ಸಂಬಳ ಹಾಗೂ ಈ ಮೊತ್ತ ಸೇರಿಸಿ ತೆರಿಗೆ ಪಾವತಿಸಿರಿ. ಒಂದು ವೇಳೆ ಜಪಾನಿನಲ್ಲಿ  ಈ ಹಣಕ್ಕೆ ತೆರಿಗೆ ಸಲ್ಲಿಸಿದ್ದರೆ ಅದಕ್ಕೆ ಪುರಾವೆ ಇದ್ದರೆ, ತೆರಿಗೆ ವಿನಾಯತಿ ಪಡೆಯಬಹುದು. 31–7–2017 ರೊಳಗೆ ಆನ್‌ಲೈನ್‌ನಲ್ಲಿ ರಿಟರ್ನ್‌ ತುಂಬಿ.

ಸುನೀಲ್‌ ಕಾಶಾಂಪುರಿ, ವಿಜಯಪುರ
ನಾನು ಸ್ಥಿರ ಆಸ್ತಿ ₹ 45 ಲಕ್ಷಕ್ಕೆ ಮಾರಾಟ ಮಾಡಿದ್ದೇನೆ. ನನಗೆ ತೆರಿಗೆ ಬರುತ್ತದೆಯೇ ತಿಳಿಸಿ.

ಉತ್ತರ:
ಸ್ಥಿರ ಆಸ್ತಿಯ ಕೊಂಡ ಬೆಲೆ ಹಾಗೂ ಮಾರಾಟ ಮಾಡಿದ ಬೆಲೆ, ಇವೆರಡರ ಅಂತರಕ್ಕೆ ಶೇ 20 ರಂತೆ ಕ್ಯಾಪಿಟಲ್‌ ಗೇನ್‌ ಟ್ಯಾಕ್‌್ಸ ಕೊಡಬೇಕಾಗುತ್ತದೆ. ಇದೇ ವೇಳೆ ಕೊಂಡ ವರ್ಷದಿಂದ ಮಾರಾಟ ಮಾಡಿದ ವರ್ಷಗಳ cost of inflation index  ಲೆಕ್ಕಹಾಕಿ ಬಂದ ಲಾಭದಲ್ಲಿ ಕಳೆದು ತೆರಿಗೆ ಕಡಿಮೆ ಮಾಡಿಕೊಳ್ಳಬಹುದು. ಸಂಪೂರ್ಣ ಕ್ಯಾಪಿಟಲ್‌ ಗೇನ್‌ ಟ್ಯಾಕ್‌್ಸ ಉಳಿಸಲು, ಮಾರಾಟ ಮಾಡಿದ 6 ತಿಂಗಳೊಳಗೆ ಗರಿಷ್ಠ ₹ 50 ಲಕ್ಷಗಳ ತನಕ NHIAಅಥವಾ REC ಯಲ್ಲಿ 3 ವರ್ಷಗಳ ಅವಧಿಗೆ ತೊಡಗಿಸಿ ತೆರಿಗೆ ವಿನಾಯತಿ ಪಡೆಯಬಹುದು. ಈ ಎರಡೂ ಕಂಪೆನಿಗಳು ಸರ್ಕಾರಿ ಸ್ವಾಮ್ಯದಲ್ಲಿದ್ದು, ಹೂಡಿಕೆಯಲ್ಲಿ ಭದ್ರತೆ ಇದೆ. ಬಡ್ಡಿದರ ಶೇ  5.25 ಇರುತ್ತದೆ. ಇಲ್ಲಿ ವಿವರಿಸಿದ ಮಾರ್ಗ ತಕ್ಷಣ ಅನುಸರಿಸಿ. ತೆರಿಗೆ ಉಳಿಸುವ ಸಲುವಾಗಿ ಏನೂ  ಕಪ್ಪು ಹಣವೆಂದು ಪರಿಗಣಿಸುವಾಗ ಅಸಲಿಗೆ ಸಮೀಪದಲ್ಲಿ ತೆರಿಗೆ ಕೊಡಬೇಕಾಗುತ್ತದೆ. ಇದರಿಂದ ಆಸ್ತಿಯೂ ಕಳೆದುಕೊಂಡು, ಬಂದ ಹಣವನ್ನು ಕಳೆದುಕೊಂಡು ಸಂಕಟಪಡಬೇಕಾದೀತು ತಿಳಿದಿರಲಿ.

ಹೆಸರು, ಊರು ಬೇಡ
ನಾನು ಸರ್ಕಾರಿ ನೌಕರ, ತಿಂಗಳ ಸಂಬಳ
₹ 10 ಸಾವಿರ. ನನಗೆ ₹ 5–6 ಲಕ್ಷದ ಕಾರು ಕೊಳ್ಳುವ ಆಸೆ ಇದೆ. ದಯವಿಟ್ಟು ನನಗೆ ಸರಿಯಾದ ಉತ್ತರ ನೀಡಿ.

ಉತ್ತರ:
ನೀವು ₹ 5–6 ಲಕ್ಷದ ಕಾರು ಕೊಳ್ಳುವುದಾದಲ್ಲಿ ಬ್ಯಾಂಕ್‌ ಸಾಲದ ಮೊರೆ ಹೋಗಬೇಕಾಗುತ್ತದೆ. ಕಾರು ಕೊಳ್ಳುವ ಮೊದಲು ಕಾರಿನ ಮೌಲ್ಯದ ಶೇ 25 ಮಾರ್ಜಿನ್‌ ಮನಿ ಬ್ಯಾಂಕಿನಲ್ಲಿ ಇರಿಸಬೇಕು. ನೀವು ₹ 5 ಲಕ್ಷ ಕಾರು ಸಾಲ ಪಡೆದರೆ ಗರಿಷ್ಠ 84 ತಿಂಗಳು ಮರುಪಾವತಿಸಲು ಅವಧಿ ದೊರೆಯುತ್ತದೆ, ಆಗ ಕನಿಷ್ಠ ಇಎಂಐ ₹ 8000 ಪ್ರತೀ ತಿಂಗಳು ತುಂಬಬೇಕಾಗುತ್ತದೆ. ಎಲ್ಲಕ್ಕೂ ಮುಖ್ಯವಾಗಿ ಸಾಲ ಮರು ಪಾವತಿಸುವ ಸಾಮರ್ಥ್ಯ ಇಲ್ಲದವರಿಗೆ ಎಂದಿಗೂ ಬ್ಯಾಂಕುಗಳು ಸಾಲ ನೀಡುವುದಿಲ್ಲ. ಪ್ರಾರಂಭದಲ್ಲಿ ₹ 3 ಲಕ್ಷದ ಒಂದು ಕಾರು ಕೊಳ್ಳಿರಿ. ಒಮ್ಮೆಲೇ ₹ 5–6 ಲಕ್ಷದ ಕಾರು ಸಾಲದ ಮೇಲೆ ಪಡೆದರೆ, ನಿಮ್ಮ ದಿನ ನಿತ್ಯದ ಜೀವನ ತಲ್ಲಣಗೊಳ್ಳಬಹುದು. ಸಂಬಳದ ಹೊರತು ಪಡಿಸಿ ಮನೆಯಿಂದ ಬೇರಾವ ಆದಾಯವಿರುವಲ್ಲಿ ಮಾತ್ರ ಹೆಚ್ಚಿನ ಮೊತ್ತದ ಕಾರು ಕೊಳ್ಳಿರಿ.

ರಾಘವೇಂದ್ರ. ಬಿ., ಶಿವಮೊಗ್ಗ
ನಾನು ಲೀಸಿನ ಮೇಲೆ ಕೃಷಿ ಜಮೀನು ತೆಗೆದುಕೊಂಡಿದ್ದೇನೆ. ಈ ವರ್ಷ ₹ 8 ಲಕ್ಷ ಬೆಲೆ ಬರುವ ಭತ್ತ ಬೆಳೆದಿದ್ದೇನೆ. ಈ ಹಣ ತೆರಿಗೆ ಮುಕ್ತವಾಗಿದೆಯೇ? ನಾನು ಆದಾಯ ತರಿಗೆ ರಿಟರ್ನ್‌ ತುಂಬಬೇಕೇ? ನಾನು ರಿಟರ್ನ್‌ ತುಂಬುವಾಗ ಕೊಡಬೇಕಾದ ಕಾಗದ ಪತ್ರಗಳು ಯಾವುವು?

ಉತ್ತರ:
ನೀವು ದೊಡ್ಡ ಪ್ರಮಾಣದಲ್ಲಿ ಕೃಷಿಭೂಮಿ ಲೀಸಿಗೆ ಪಡೆದಂತೆ ಕಾಣುತ್ತದೆ. ಭತ್ತದಲ್ಲಿ ₹ 8 ಲಕ್ಷ ಆದಾಯ ಪಡೆದ ನಿಮಗೆ ಅಭಿನಂದಿಸುತ್ತೇನೆ. ನಿಮ್ಮನ್ನು ನೋಡುವಾಗ ಹಳ್ಳಿಜನ ಪಟ್ಟಣದತ್ತ ವಲಸೆ ಏತಕ್ಕಾಗಿ ಬರುತ್ತಾರೆ ತಿಳಿಯಲಿಲ್ಲ. ಕೃಷಿ ಆದಾಯ ಎಷ್ಟು ಬಂದರೂ, ಆದಾಯ ತೆರಿಗೆ ಸೆಕ್ಷನ್‌ 10(1) ಆಧಾರದ ಮೇಲೆ ತೆರಿಗೆ ಸಲ್ಲಿಸುವ ಅವಶ್ಯವಿಲ್ಲ ಹಾಗೂ ರಿಟರ್ನ್‌ ತುಂಬುವ ಅವಶ್ಯವೂ ಇಲ್ಲ. ಹೀಗೆ ಬಂದ ಹಣವನ್ನು ಬ್ಯಾಂಕ್‌ ಠೇವಣಿಯಾಗಿ ಇರಿಸಿ, ಅಲ್ಲಿ ಬರುವ ಬಡ್ಡಿಗೆ ತೆರಿಗೆ ವಿನಾಯತಿ ಇರುವುದಿಲ್ಲ. ಆದರೂ ಬಡ್ಡಿ ಹಾಗೂ ಕೃಷಿಯೇತರ ಆದಾಯ ₹ 2.50 ಲಕ್ಷದ ಒಳಗಿರುವಲ್ಲಿ ತೆರಿಗೆ ಬರುವುದಿಲ್ಲ ಮತ್ತು ರಿಟರ್ನ್‌ ತುಂಬುವ ಅವಶ್ಯವಿಲ್ಲ.

ಹೆಸರು ಊರು ಬೇಡ
ನಾನು ಜೂನಿಯರ್‌ ಅಸಿಸ್ಟಂಟ್‌ ಆಗಿ ಟಿ.ಜಿ.ಎಂ.ಸಿ. ಬ್ಯಾಂಕಿನಲ್ಲಿ ಕೆಲಸ ಮಾಡುತ್ತೇನೆ. ನನ್ನ ಸಂಬಳ ₹ 30,200. ಇದರಲ್ಲಿ ತಿಂಗಳಿಗೆ ಸಿಟಿಡಿ ₹ 10,500, ₹ 500 ಹಬ್ಬದ ಸಾಲ, ₹ 1,000 ಮ್ಯೂಚುವಲ್‌ ಫಂಡ್‌, ಕೋಣೆ ಬಾಡಿಗೆ ಹಾಗೂ ಆಹಾರ ₹ 7000, ಎಲ್‌ಐಸಿ ಜೀವನ ಆನಂದ ಪಾಲಿಸಿ ₹ 2500 ಹೀಗೆ ಕಡಿತವಾಗುತ್ತದೆ. ನಾನು ಷೇರಿನಲ್ಲಿ ಹಣ ಹೂಡಬೇಕೆಂದಿದ್ದೇನೆ. ಯಾವ ಕಂಪೆನಿ ಷೇರಿನಲ್ಲಿ ಹಣ ಹೂಡಲಿ– ಅಥವಾ ಬೇರಾವ ಹೂಡಿಕೆ ಮಾಡಲಿ ತಿಳಿಸಿ.

ಉತ್ತರ:
ಸಂವೇದಿ ಸೂಚ್ಯಂಕ  ಈಗ ತುಂಬಾ ಮೇಲಕ್ಕೆ ಏರಿದೆ ಜೊತೆಗೆ, ಒಂದಲ್ಲಾ ಒಂದು ಕಾರಣಕ್ಕೆ ವಾರದಲ್ಲಿ 2–3 ಬಾರಿ, ಏರಿಳಿತ ಕಾಣುತ್ತಿದೆ. ಹೊಸಬರಿಗೆ ಷೇರು ಮಾರುಕಟ್ಟೆ ಪ್ರವೇಶಿಸಲು ಇದು ಒಂದು ಉತ್ತಮ ಸಮಯವಲ್ಲ ಎನ್ನುವುದು ನನ್ನ ವೈಯಕ್ತಿಕ ವಿಚಾರ. ನೀವು ಕಟ್ಟುತ್ತಿರುವ ಮೂಚ್ಯೂವಲ್‌ ಫಂಡ್‌ನಲ್ಲಿ ಸದ್ಯ ಎಷ್ಟು ತೊಡಗಿಸಿದ್ದೀರಿ ಎಂಬುದು ತಿಳಿಯಲಿಲ್ಲ. ಈ ಮೊತ್ತದ, ಇಂದಿನ ಎನ್‌ಎವಿ ಎಷ್ಟು ಎಂದು ವಿಚಾರಿಸಿರಿ. ಲಾಭ ಬಂದಲ್ಲಿ ಮಾತ್ರ ಮುಂದುವರಿಸಿ. ಮಧ್ಯಮ ವರ್ಗದ ಜನರಿಗೆ, ಕಂಟಕರಹಿತ ಹೂಡಿಕೆ ಅವಶ್ಯವಿದೆ. ನೀವು ಉಳಿಸಬಹುದಾದ ಹಣ ನಿಮ್ಮ ಬ್ಯಾಂಕಿನಲ್ಲಿಯೇ 10 ವರ್ಷಗಳ ಅವಧಿಗೆ ಆರ್‌.ಡಿ. ಮಾಡಿ. ಮುಂದೊಂದು ದಿವಸ ಈ ದೊಡ್ಡ ಮೊತ್ತ ಹಾಗೂ ಸ್ವಲ್ಪ ಸಾಲಪಡೆದು ನಿವೇಶನ ಕೊಳ್ಳಿ.

ನಾಗಶ್ರೀ ಮಂಜುನಾಥ, ಊರು ಬೇಡ
ನಾನು ಗೃಹಿಣಿ, ನಾನು ತಿಂಗಳಿಗೆ ₹ 2,000 ಉಳಿಸುತ್ತೇನೆ. ಆದರೂ ಎಲ್ಲಾ ಖರ್ಚಾಗಿ ಬಿಡುತ್ತದೆ. ನಾನು ಯಾವ ಬ್ಯಾಂಕಿನಲ್ಲಿ ಯಾವ ರೀತಿ ಹಣ ಉಳಿಸಲಿ, ದಯಮಾಡಿ ತಿಳಿಸಿರಿ.

ಉತ್ತರ:
ಲಕ್ಷ್ಮಿ ಚಂಚಲೆ. ಅವಳನ್ನು ಪ್ರೀತಿ ಯಿಂದ ಕಾಪಾಡಿಕೊಂಡು ಬಂದರೆ ನಿಮ್ಮೊಡ ನೆಯೇ ನಿಲ್ಲುತ್ತಾಳೆ, ಹಣ ಖರ್ಚಾಗುತ್ತದೆ ಎಂದರೆ, ನೀವು ಆಕೆಗೆ ಆಶ್ರಯ ನೀಡುತ್ತಿಲ್ಲ ಎಂದರ್ಥ. ತಾನಾಗಿ ಖರ್ಚಾಗುವುದಿಲ್ಲ. ನೀವು ಖರ್ಚು ಮಾಡುತ್ತೀರಿ, ಇದರಿಂದ ತಿಂಗಳಂತ್ಯಕ್ಕೆ ಹಣ ಉಳಿಯುವುದಿಲ್ಲ. ಹಣ ಉಳಿಸಲು ಸ್ವಲ್ಪಮಟ್ಟಿನ ತ್ಯಾಗ ಮನೋಭಾವನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ. ನೀವು ಗೃಹಿಣಿಯಾ ದ್ದರಿಂದ ನಿಮ್ಮ ಯಜಮಾನರು ತಿಂಗಳ ಖರ್ಚಿ ಗೆಂದು ಒಂದಿಷ್ಟು ಹಣ ನಿಮ್ಮ ಕೈಗೆ ಕೊಡುತ್ತಾರೆ. ನಿಮಗೆ ತಿಂಗಳ ಖರ್ಚು ಬಂದೇ ಬರುತ್ತದೆ, ಆದರೆ ನೀವು ಉಳಿಸಬೇಕಾದ ₹ 2000 ಖರ್ಚಿನ ಪಟ್ಟಿಯಲ್ಲಿ ಒಂದನೇ ಸ್ಥಾನದಲ್ಲಿರಲಿ. ಮೊದಲು
₹ 2000 ಬ್ಯಾಂಕಿಗೆ ತುಂಬಿ ಉಳಿದ ಹಣ ಮಾತ್ರ ಖರ್ಚುಮಾಡಿ.  ಇದರಿಂದ ಕಡ್ಡಾಯ ಉಳಿತಾಯ ಮಾಡಿದಂತಾಗುತ್ತದೆ. ಎಲ್ಲಾ ಖರ್ಚಿನ ನಂತರ ಉಳಿಸುತ್ತೇವೆ ಎನ್ನುವ ಮಾತು ಎಂದಿಗೂ ಸಾಧ್ಯವಾಗದ ವಿಚಾರ. ನಿಮ್ಮ ಮನೆಗೆ ಸಮೀಪದ ಬ್ಯಾಂಕಿನಲ್ಲಿ ₹ 2000, 5 ವರ್ಷಗಳ ಅವಧಿಗೆ ಆರ್‌.ಡಿ. ಮಾಡಿರಿ. 5 ವರ್ಷಗಳ ಅಂತ್ಯಕ್ಕೆ ಶೇ 8 ಬಡ್ಡಿದರದಲ್ಲಿ ₹ 1,47,724 ಪಡೆಯಿರಿ. ನಿಮಗೆ ಉಜ್ವಲ ಭವಿಷ್ಯ ಹಾರೈಸುತ್ತೇನೆ.

ಚಂದ್ರಶೇಖರ್‌, ಬೆಂಗಳೂರು
ನನ್ನ ಸಹೋದರಿ ದೀಪಾ ಬಿ.ಇ. ಮುಗಿಸಿದ್ದಾರೆ. ನಾವು ಕೆನರಾ ಬ್ಯಾಂಕಿನ ವಿದ್ಯಾಸಾಗರ ಯೋಜನೆಯ ಅಡಿಯಲ್ಲಿ ಶಿಕ್ಷಣ ಸಾಲ ಪಡೆಯಬೇಕೆಂದಿದ್ದೇನೆ. ಪ್ರಶ್ನೆ: 1. ಸಾಲ ಯಾವಾಗ ಮರುಪಾವತಿಸಬೇಕು; 2. ಈ ಸಾಲಕ್ಕೆ ಬಡ್ಡಿ ಇದೆಯೇ; 3. ಸಾಲ ತೀರಿಸಿದ ನಂತರ ಸಾಲ ತೀರಿಸಿರುವುದಕ್ಕೆ ಸರ್ಟಿಫಿಕೇಟ್‌ ಬ್ಯಾಂಕ್‌ ಕೊಡುತ್ತದೆಯೇ? ದಯಮಾಡಿ ತಿಳಿಸಿರಿ.

ಉತ್ತರ
: ಬಿ.ಇ. ಮುಗಿದ ನಂತರ, ಶಿಕ್ಷಣ ಸಾಲ ಪಡೆಯುವ ಕಾರಣ ತಿಳಿಯಲಿಲ್ಲ. ಎಂ.ಟೆಲ್‌ ಅಥವಾ ಎಂ.ಇ. ಮಾಡಲು ಸಾಲ ಬೇಕಾಗಿರ ಬಹುದು ಎಂದು ಭಾವಿಸುತ್ತೇನೆ. ಶಿಕ್ಷಣ ಸಾಲ ಪಡೆದ, ಶಿಕ್ಷಣದ ಅವಧಿ ಮುಗಿದು ಒಂದು ವರ್ಷ ಅಥವಾ ಕೆಲಸಕ್ಕೆ ಸೇರಿ ಆರು ತಿಂಗಳು, ಇವುಗಳಲ್ಲಿ ಯಾವುದೂ ಮೊದಲು ಅದಕ್ಕನುಗುಣವಾಗಿ ಸಾಲ ಮರು ಪಾವತಿಸಲು ಪ್ರಾರಂಭಿಸಬೇಕು. ಈ ಸಾಲಕ್ಕೆ ಬಡ್ಡಿ ಇದೆ. ಬಡ್ಡಿದರ ಆಗಾಗ ಬದಲಾಗುತ್ತದೆ. ಆದರೆ ಉಳಿದ ಸಾಲಗಳಿಗಿಂತ ಕಡಿಮೆ ಇರುತ್ತದೆ. ಇದೇ ವೇಳೆ ಹೆತ್ತವರ ಆದಾಯ ವಾರ್ಷಿಕ ₹ 4.50 ಲಕ್ಷ ದೊಳಗಿರುವಲ್ಲಿ ‘ಬಡ್ಡಿಯ ಅನುದಾನಿತ ಮಾದರಿ ಶಿಕ್ಷಣಸಾಲದಲ್ಲಿ, ಬಡ್ಡಿ ಇಲ್ಲದೆ ಅಂದರೆ ಅನುದಾನಿತ ಆಧಾರದ ಮೇಲೆ ಪಡೆಯಬಹುದು. ಸಾಲ ತೀರಿದ ತಕ್ಷಣ ಸಾಲ ತೀರಿದೆ ಎಂಬುದಾಗಿ (closure certificate) ಬ್ಯಾಂಕಿನಲ್ಲಿ ಸರ್ಟಿಫಿಕೇಟ್‌ ಕೊಡುತ್ತಾರೆ.

ಕಲಸೇಶ್ವರ. ಎ., ಊರು ಬೇಡ
ನಾನು ನಿವೃತ್ತಿಯಾಗಿದ್ದೇನೆ. ನನ್ನ ತಿಂಗಳ ಪಿಂಚಣಿ ₹ 23,000. ನನಗೆ ಠೇವಣಿ ಬಡ್ಡಿ ವಾರ್ಷಿಕವಾಗಿ ₹ 1.50 ಲಕ್ಷ ಬರುತ್ತದೆ. ನನ್ನ ವಯಸ್ಸು 61. ವಿಮೆ ನನಗೆ ಇಳಿಸಬಹುದೇ ಹಾಗೂ ತೆರಿಗೆ ಉಳಿಸಲು ಸರಿಯಾದ ವಿಧಾನ ತಿಳಿಸಿರಿ.

ಉತ್ತರ: 
ನೀವು ಹಿರಿಯ ನಾಗರೀಕರಾಗಿ ಈ ಇಳಿವಯಸ್ಸಿನಲ್ಲಿ ವಿಮೆ ಇಳಿಸುವುದರಿಂದ ಅತೀ ಹೆಚ್ಚಿನ ಪ್ರೀಮಿಯಂ ಹಣ ತುಂಬಬೇಕಾಗುತ್ತದೆ. ಜೊತೆಗೆ ತೆರಿಗೆ ಉಳಿಸಲು ವಿಮೆ ಇಳಿಸಿದರೆ, ತೆರಿಗೆಗಿಂತ ಪ್ರೀಮಿಯಂ ಹಣ ಹೆಚ್ಚಿಗೆ ತುಂಬ ಬೇಕಾಗುತ್ತದೆ. ಕೆಲವು ವಿಮಾ ಕಂಪೆನಿಗಳು ನಿಮಗೆ ವಿಮಾ ಸೌಲತ್ತು ನೀಡಬಹುದು. ಆದರೆ ಇದು ನಿಮಗೆ ಎಂದಿಗೂ ಲಾಭದಾಯಕವಲ್ಲ. ನಿಮ್ಮ ಪಿಂಚಣಿ ಹಾಗೂ ಬ್ಯಾಂಕ್‌ ಬಡ್ಡಿ ಸೇರಿದರೆ ವಾರ್ಷಿಕ ಆದಾಯ ₹ 4.26 ಲಕ್ಷವಾಗುತ್ತದೆ. ಆರ್ಥಿಕ ವರ್ಷದಲ್ಲಿ ₹ 1.26 ಲಕ್ಷ ಬ್ಯಾಂಕ್‌ ಠೇವಣಿ, 5 ವರ್ಷಗಳ ಅವಧಿಗೆ, ತೆರಿಗೆ ಉಳಿಸುವ ಠೇವಣಿ ಯಲ್ಲಿ ಇರಿಸಿದರೆ ನೀವು ತೆರಿಗೆ ಸಂಪೂರ್ಣ ವಿನಾಯತಿ ಪಡೆಯಬಹುದು. ಇದೇ ವೇಳೆ ನಿಮಗೆ ಆರೋಗ್ಯ ವಿಮೆಯ ಅವಶ್ಯವಿದ್ದು, ಸಿಂಡಿಕೇಟ್‌ ಬ್ಯಾಂಕಿನ ‘ಸಿಂಡ್‌ ಆರೋಗ್ಯ’ ಯೋಜನೆಯಲ್ಲಿ, ನೀವು ನಿಮ್ಮ ಹೆಂಡತಿ ಸೇರಿ ಕನಿಷ್ಠ ₹ 3 ಲಕ್ಷ ಆರೋಗ್ಯ ವಿಮೆ ಪಾಲಿಸಿ ಪಡೆಯಿರಿ. ಇಲ್ಲಿ ತುಂಬುವ ಪ್ರಿಮಿಯಂ ಕೂಡಾ ಆದಾಯ ತೆರಿಗೆ ಸೆಕ್ಷನ್‌ 80 ಡಿ. ಆಧಾರಾದ ಮೇಲೆ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು.

***

ಹಣಕಾಸು ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು (ದೂರವಾಣಿ ಸಂಖ್ಯೆ ಸಹಿತ) ಪತ್ರದಲ್ಲಿ ಬರೆದು ಕಳುಹಿಸಿ, ಪರಿಣತರಿಂದ ಸೂಕ್ತ ಉತ್ತರ ಪಡೆಯಬಹುದು. ವಿಳಾಸ; ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು –560001
ಇ–ಮೇಲ್‌: businessdesk@prajavani.co.in 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT