ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಶಂಕರ್‌ಗೆ ಜಿಎಸ್‌ಎಸ್ ಪ್ರಶಸ್ತಿ ಪ್ರದಾನ

Last Updated 7 ಫೆಬ್ರುವರಿ 2017, 20:06 IST
ಅಕ್ಷರ ಗಾತ್ರ
ಬೆಂಗಳೂರು: ‘ವಿಮರ್ಶಕರ ಬಗ್ಗೆ ವಿಮರ್ಶಕರೇ ಚರ್ಚಿಸುತ್ತಿದ್ದಾರೆ. ಇದಕ್ಕೆ ಬದಲಾಗಿ ವಿಮರ್ಶೆಯ ಫಲಾನುಭವಿಗಳು ಚರ್ಚಿಸುವಂತಹ ವಾತಾವರಣ ಸೃಷ್ಟಿಯಾಗಬೇಕು’ ಎಂದು ಡಾ.ಎಚ್.ಎಸ್.ರಾಘವೇಂದ್ರರಾವ್ ಅವರು ಅಭಿಪ್ರಾಯಪಟ್ಟರು. 
 
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಡಾ.ಜಿಎಸ್‌ಎಸ್‌ ವಿಶ್ವಸ್ಥ ಮಂಡಳಿ ನ್ಯಾಷನಲ್ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಮರ್ಶಕ ಎಸ್‌.ಆರ್‌. ವಿಜಯಶಂಕರ್‌ ಅವರಿಗೆ ‘ಜಿಎಸ್‌ಎಸ್‌ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 
 
‘ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರು ನಮ್ಮೆಲ್ಲರೊಳಗೆ ಅಚ್ಚಳಿಯದ ನೆನಪಾಗಿ, ಜನಪರ ಕಾಳಜಿಯಾಗಿ ಉಳಿಯುವ ಮತ್ತು ಉಳಿಯಬೇಕಾದ ವ್ಯಕ್ತಿ. ಅವರ ವಿಚಾರಧಾರೆಯ ಬೆಳಕಿನಲ್ಲಿ ಸಣ್ಣ ಹಣತೆ ಹಚ್ಚಿಕೊಂಡವರು ಅನೇಕ ಮಂದಿ ಇದ್ದಾರೆ. ಅದರಲ್ಲಿ ವಿಮರ್ಶಕ ವಿಜಯ ಶಂಕರ್ ಒಬ್ಬರು. ಇವರಿಗೆ ಈ ಸಾಲಿನ ಜಿಎಸ್‌ಎಸ್‌ ಪ್ರಶಸ್ತಿ ಲಭಿಸಿರುವುದಕ್ಕೆ ನಾನು ಅವರನ್ನು ಅಭಿನಂದಿಸುತ್ತೇನೆ’ ಎಂದು ಅವರು ಹೇಳಿದರು. 
 
ಪ್ರಶಸ್ತಿ ಪುರಸ್ಕೃತ ವಿಜಯಶಂಕರ್ ಅವರು ಮಾತನಾಡಿ, ‘ಜಿಎಸ್‌ಎಸ್‌ ಅವರಿಗೆ ವಿಶೇಷವಾದ ಕಣ್ಣಿತ್ತು. ಆ ಕಣ್ಣಿನ ಮೂಲಕ ಕರ್ನಾಟಕದ ಯಾವುದೊ ಮೂಲೆಯಲ್ಲಿದ್ದ ವಿಶೇಷ ವ್ಯಕ್ತಿಯನ್ನು ಗುರುತಿಸಿ ಅವರಿಂದ ವಿಮರ್ಶೆಗಳನ್ನು ಬರೆಸುತ್ತಿದ್ದರು. ಅವರ ವಿಶೇಷ ಕಣ್ಣಿಗೆ ಬಿದ್ದವರಲ್ಲಿ ನಾನೂ ಒಬ್ಬ’ ಎಂದರು.
 
‘ಭಿನ್ನವಿದ್ದು ಬೆರೆಯಬಹುದು ಎಂಬ ಜಿಎಸ್‌ಎಸ್‌ ಅವರ ಸಮನ್ವಯ ಸಿದ್ಧಾಂತ ಬಹುಮುಖ್ಯವಾಗಿದೆ. ಆದರೆ, ಇಂದು ಭಿನ್ನತೆ ಇದ್ದರೆ ಸಹನೆ ಇರುವುದಿಲ್ಲ. ದೊಡ್ಡ ಹೊಡೆದಾಟ ನಡೆದುಹೋಗುತ್ತದೆ. ಪ್ರಜಾಪ್ರಭುತ್ವದ ಜವಾಬ್ದಾರಿಯನ್ನು ನಾವು ಉಳಿಸಿಕೊಳ್ಳಬೇಕಿದೆ’ ಎಂದು ಅವರು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT