ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಿದಾಗುತ್ತಿರುವ ಬುಗುಡನಹಳ್ಳಿ ಕೆರೆ

ಬರದ ಬವಣೆ: ತುಮಕೂರು ನಗರದಲ್ಲೂ ಕುಡಿಯುವ ನೀರಿಗೆ ಹಾಹಾಕಾರ ಸಂಭವ
Last Updated 8 ಫೆಬ್ರುವರಿ 2017, 6:36 IST
ಅಕ್ಷರ ಗಾತ್ರ

ತುಮಕೂರು: ನಗರದಲ್ಲಿ ಕುಡಿಯುವ ನೀರಿನ ಬವಣೆ ತೀವ್ರವಾಗುವ ಸಮಯ ಸನ್ನಿಹಿತವಾಗಿದೆ. ನಗರ ನಿವಾಸಿಗಳಿಗೆ ಕುಡಿಯುವ ನೀರಿನ ಮೂಲವಾದ ಬುಗುಡನಹಳ್ಳಿ ಕೆರೆ ಬರಿದಾಗುತ್ತಿದ್ದು, ತಿಂಗಳಿಗಾಗುವಷ್ಟು ಮಾತ್ರ  ನೀರಿದೆ.

ಪಾಯಿಂಟ್‌ 24 ಟಿಎಂಸಿ (.24) ಸಂಗ್ರಹ ಸಾಮರ್ಥ್ಯದ ಕೆರೆಯಲ್ಲಿ ಈಗ 40 ಎಂಸಿಎಫ್‌ಟಿ ( ಮೆಟ್ರಿಕ್‌ ಕ್ಯುಬಿಕ್‌ ಫೀಟ್‌) ನೀರಿದೆ. ಕೆರೆಯಿಂದ ನಿತ್ಯ 10 ಎಂಎಲ್‌ಡಿ, ಕೊಳವೆಬಾವಿಗಳಿಂದ 30 ಎಂಎಲ್‌ಡಿ ನೀರನ್ನು ಪಡೆಯಲಾಗುತ್ತಿದೆ. ನಗರ ವ್ಯಾಪ್ತಿಯಲ್ಲಿ 7 ದಿನಕ್ಕೆ ಒಮ್ಮೆ ನೀರು ಬಿಟ್ಟರೆ, ಹೊರವಲಯದಲ್ಲಿ 3– 4 ದಿನಗಳಿಗೆ ನೀರು ಪೂರೈಸಲಾಗುತ್ತಿದೆ.

ಪಾಲಿಕೆಯ 27, 26, 25, 15, 30 ನೇ ವಾರ್ಡ್‌ಗಳಲ್ಲಿ ನೀರಿನ ಬವಣೆ ವಿಪರೀತವಾಗಿದೆ. ಬುಗುಡನಹಳ್ಳಿ ಕೆರೆಯಲ್ಲಿರುವ ನೀರು ಮಾ.15ರವರೆಗೂ ಆಗಬಹುದು. ಆ ನಂತರ ಪರಿಸ್ಥಿತಿ ಬಿಗಡಾಯಿಸಲಿದೆ ಎಂದು ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಆತಂಕ ವ್ಯಕ್ತಪಡಿಸುತ್ತಾರೆ.

ಪಾಲಿಕೆ ವ್ಯಾಪ್ತಿಯ 600 ಕೊಳವೆ ಬಾವಿಗಳಿಂದ ನಿತ್ಯ 30 ಎಂಎಲ್‌ಡಿ (ಒಂದು ಎಂಎಲ್‌ಡಿಗೆ ಹತ್ತು ಲಕ್ಷ ಲೀಟರ್‌) ನೀರು ಪಡೆಯಲಾಗುತ್ತಿದೆ. ಕೆಲ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ.

‘ಬುಗುಡನಹಳ್ಳಿ ಕೆರೆಯ ನೀರು ಖಾಲಿಯಾದ ಬಳಿಕ ನಗರದಲ್ಲಿರುವ 1500 ಖಾಸಗಿ ಕೊಳವೆಬಾವಿಗಳನ್ನು ಪಾಲಿಕೆ ವಶಕ್ಕೆ ಪಡೆದು ನೀರು ಪೂರೈಸಲಾಗುವುದು. ಈಗಾಗಲೇ ಅಂತಹ ಖಾಸಗಿ ಬೋರ್‌ವೆಲ್‌ ಹಾಗೂ ಟ್ಯಾಂಕರ್‌ಗಳನ್ನು ಗುರುತಿಸಲಾಗಿದೆ’ ಎಂದು ಟಿ.ಆರ್‌.ನಾಗರಾಜ್‌ ತಿಳಿಸಿದರು

ನೀರು ಆವಿಯಾಗುವ ಆತಂಕ: 542 ಎಕರೆ ವಿಸ್ತೀರ್ಣದ ಕೆರೆಯಲ್ಲಿ ನೀರಿನ ಪ್ರಮಾಣ ದಿನೇ ದಿನೇ ಕಡಿಮೆಯಾಗುತ್ತಿದೆ. ಕೆರೆಯ ತಳದಲ್ಲಿ ಬೆಳೆದಿರುವ ಹೈಡ್ರಿಲಾ (ನೀರನ್ನು ತಣ್ಣಗಾಗಿಸುವ ಸಸ್ಯ ಪ್ರಬೇಧ) ಮೇಲೆ ಕಾಣುತ್ತಿದೆ.

‘ಸಸ್ಯ ಪ್ರಬೇಧವು ಹೊರಗೆ ಬಂದರೆ ಹೆಚ್ಚು ಆಮ್ಲಜನಕ ಹೀರುತ್ತದೆ. ಹೈಡ್ರಾಕ್ಸೈಡ್‌ ಉತ್ಪಾದನೆ ಹೆಚ್ಚಾಗುವುದರಿಂದ ರಾಸಾಯನಿಕ ಪ್ರಕ್ರಿಯೆ ನಡೆದು ಶರವೇಗದಲ್ಲಿ ನೀರು ಆವಿಯಾಗುತ್ತದೆ’ ಎಂದು ಪಾಲಿಕೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ವಸಂತ್‌ ವಿವರಿಸಿದರು.

‘ನಗರಕ್ಕೆ ನಿತ್ಯ ಸರಾಸರಿ 57 ಎಂಎಲ್‌ಡಿ ನೀರಿನ ಅವಶ್ಯಕತೆ ಇದೆ. ಆದರೆ, ಮಳೆ ಅಭಾವದಿಂದ ನೀರಿನ ಸಮಸ್ಯೆ ತಲೆದೋರಿರುವ ಪರಿಣಾಮ ಕೇವಲ 47 ಎಂಎಲ್‌ಡಿ ನೀರು ಪೂರೈಸಲಾಗುತ್ತಿದೆ’ ಎಂದರು.

ಏಳು ಹಂತದಲ್ಲಿ ನೀರು ಶುದ್ಧೀಕರಣ: ಕುಪ್ಪೂರು ಜಾಕ್‌ವೆಲ್‌ನಿಂದ ಬುಗುಡನಹಳ್ಳಿ ಕೆರೆಯ ನೀರನ್ನು ಪಿ.ಎನ್.ಪಾಳ್ಯದಲ್ಲಿರುವ ಜಲ ಶುದ್ಧೀಕರಣಕ್ಕೆ ಹರಿಸಲಾಗುತ್ತಿದೆ. 52 ದಶಲಕ್ಷ ಲೀಟರ್‌ ನೀರು ಶುದ್ಧೀಕರಣ ಘಟಕದೊಳಗೆ 7 ಹಂತದಲ್ಲಿ ನೀರಿನ ಶುದ್ಧೀಕರಣ ನಡೆಯುತ್ತದೆ. ಶುದ್ಧೀಕರಿಸಿದ ನೀರನ್ನು ವಿವಿಧ ಬಡಾವಣೆಗಳಿಗೆ ಹರಿಸಲಾಗುತ್ತದೆ.

ಸಚಿವರೇ ನೇರ ಹೊಣೆ
‘ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಲು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅವರೇ ನೇರ ಹೊಣೆ’ ಎಂದು ಪಾಲಿಕೆಯ ಉಪ ಮೇಯರ್‌ ಟಿ.ಆರ್‌.ನಾಗರಾಜ್‌ ಆಪಾದಿಸಿದರು.

‘ನಗರಕ್ಕೆ ಕುಡಿಯುವ ನೀರು ಪೂರೈಸುವ ಬುಗುಡನಹಳ್ಳಿ, ಹೆಬ್ಬಾಕ ಕೆರೆಗೆ ಅಗತ್ಯ ಪ್ರಮಾಣದಲ್ಲಿ ನೀರು ಹರಿಸಲು ಬಿಡದೇ ಶಿರಾ ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನೀರು ಕೊಂಡೊಯ್ದರು. ಅಲ್ಲಿ ಚೆಕ್‌ಡ್ಯಾಂ ಮೂಲಕ ನೀರು ಹರಿಸಿದ ಕಾರಣ ಕೆರೆಗಳೂ ತುಂಬಿಲ್ಲ. ಇದರಿಂದ ತುಮಕೂರಿನ ಕೆರೆಗಳೂ ತುಂಬಿಲ್ಲ. ಶಿರಾದ ಕೆರೆಗಳು ತುಂಬಿಲ್ಲ. ಸಚಿವರ ಏಕಪಕ್ಷೀಯ ನಿರ್ಧಾರದಿಂದ ಎಲ್ಲೆಡೆ ನೀರಿನ ಸಮಸ್ಯೆ ತೀವ್ರವಾಗಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

*
ನೀರಿನ ಸಮಸ್ಯೆ ಬಿಗಡಾಯಿಸುವ ಕಾರಣದಿಂದ ಜನರು ನೀರನ್ನು ಮಿತವಾಗಿ ಬಳಸಬೇಕು. ಅನಗತ್ಯವಾಗಿ ಪೋಲು ಮಾಡಬಾರದು.
-ವಸಂತ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT