ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧತೆ ಪೂರ್ಣ: ವಚನ ವಿಜಯೋತ್ಸವ ನಾಳೆಯಿಂದ

ನಟ ನಾನಾ ಪಾಟೇಕರ್‌ಗೆ ‘ಗುರುಬಸವ ಪುರಸ್ಕಾರ’, ಮೇಧಾ ಪಾಟ್ಕರ್‌ಗೆ ‘ಅಕ್ಕಮಹಾದೇವಿ ಪುರಸ್ಕಾರ’
Last Updated 8 ಫೆಬ್ರುವರಿ 2017, 7:31 IST
ಅಕ್ಷರ ಗಾತ್ರ

ಬೀದರ್: ಶರಣರು ತಮ್ಮ ಪ್ರಾಣ ಪಣಕ್ಕಿಟ್ಟು ಹೋರಾಟ ನಡೆಸಿ ವಚನ ಸಾಹಿತ್ಯ ಸಂರಕ್ಷಣೆ ಮಾಡಿದ ಐತಿಹಾಸಿಕ ಘಟನೆಯ ಸ್ಮರಣೆಗಾಗಿ ನಗರದ ಬಸವಗಿರಿಯಲ್ಲಿ ಫೆಬ್ರುವರಿ 9 ರಿಂದ ಮೂರು ದಿನಗಳ ಕಾಲ ನಡೆಯಲಿರುವ ‘ವಚನ ವಿಜಯೋತ್ಸವ’ಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಅಕ್ಕ ಅನ್ನಪೂರ್ಣ ತಿಳಿಸಿದರು.

ನಗರದ ಶರಣ ಉದ್ಯಾನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಚನ ವಿಜಯೋತ್ಸವ ಯಶಸ್ವಿಯಾಗಿ ನಡೆಸಲು 24 ಉಪ ಸಮಿತಿಗಳನ್ನು ರಚನೆ ಮಾಡಲಾಗಿದೆ. ಪಂಚರಥಗಳು ಜಿಲ್ಲೆಯ 600 ಹಳ್ಳಿಗಳಲ್ಲಿ ಸಂಚರಿಸಿ ಪ್ರಚಾರ ನಡೆಸಿವೆ. ಬಸವಗಿರಿಯಲ್ಲಿ ಆಕರ್ಷಕವಾದ ಶಿವಶರಣ ಹರಳಯ್ಯ ವೇದಿಕೆ ಹಾಗೂ ಒಟ್ಟಿಗೆ 10 ಸಾವಿರ ಜನ ಕುಳಿತುಕೊಳ್ಳಲು ಅನುಕೂಲವಾಗುವಂತೆ ನೂಲಿಯ ಚಂದಯ್ಯ ಮಹಾಮಂಟಪ ಸಜ್ಜುಗೊಂಡಿದೆ ಎಂದು ಹೇಳಿದರು.

9 ರಂದು ಬೆಳಿಗ್ಗೆ 8 ಗಂಟೆಗೆ ರಾಷ್ಟ್ರೀಯ ಗಾಂಧಿ ಪ್ರಶಸ್ತಿ ಪುರಸ್ಕೃತೆ ಚೆನ್ನಮ್ಮ ಹಳ್ಳಿಕೇರಿ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸುವ ಮೂಲಕ ವಚನ ವಿಜಯೋತ್ಸವಕ್ಕೆ ಚಾಲನೆ ನೀಡುವರು. ಬಳಿಕ ಸಾಮೂಹಿಕ ಇಷ್ಟಲಿಂಗ ನಡೆಯಲಿದೆ.

ಬೆಳಿಗ್ಗೆ 11 ಗಂಟೆಗೆ ಯುವ ಪ್ರೇರಣಾ ಸಮಾವೇಶ ನಡೆಯಲಿದ್ದು, ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್‌. ಸಂತೋಷ ಹೆಗಡೆ ಉದ್ಘಾಟಿಸುವರು ಎಂದು ತಿಳಿಸಿದರು.

ಬಸವ ಸೇವಾ ಪ್ರತಿಷ್ಠಾನ ವತಿಯಿಂದ ರೈತ ಸಮುದಾಯದ ಅಭಿವೃದ್ಧಿಗಾಗಿ  ಶ್ರಮಿಸುತ್ತಿರುವ ನಟ ನಾನಾ ಪಾಟೇಕರ್‌ ಅವರಿಗೆ ‘ಗುರುಬಸವ ಪುರಸ್ಕಾರ’ ಹಾಗೂ ಮಹಾಬಳೇಶ್ವರದ ಅಂತರರಾಷ್ಟ್ರೀಯ ಪ್ರೇರಣಾ ಬೋಧಕ ಭಾವೇಶ ಭಾಟಿಯಾ ಅವರಿಗೆ ‘ಅಕ್ಕನಾಗಲಾಂಬಿಕಾ ಪುರಸ್ಕಾರ’ ನೀಡಲಾಗುವುದು. ‘ಗುರುಬಸವ ಪುರಸ್ಕಾರ’ ₹ 51 ಸಾವಿರ ಮೊತ್ತ, ಪ್ರಶಸ್ತಿ ಫಲಕ ಹಾಗೂ ಪತ್ರವನ್ನು  ಒಳಗೊಂಡಿದೆ ಎಂದು ತಿಳಿಸಿದರು.

ವಿನಾಶ ಕವಿ, ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಎಸ್‌. ಶಿವರಾಜಪ್ಪ  ಉಪನ್ಯಾಸ ನೀಡಲಿದ್ದಾರೆ. ಸಂಜೆ 6 ಗಂಟೆಗೆ ಕಲಬುರ್ಗಿಯ ನೀಲಮ್ಮನ ಬಳಗ ವತಿಯಿಂದ ‘ಗೃಹಿಣಿ ಲೋಕಾಯುಕ್ತಳಾದಾಗ’ ಹಾಗೂ ಜ್ಞಾನಸುಧಾ ವಿದ್ಯಾಲಯದ ಮಕ್ಕಳಿಂದ ‘ಅನ್ನದಾತ’ ರೂಪಕಗಳ ಪ್ರದರ್ಶನ ನಡೆಯಲಿವೆ ಎಂದು ಹೇಳಿದರು.

ಫೆ. 10 ರಂದು ಬೆಳಿಗ್ಗೆ 8 ಗಂಟೆಗೆ ಗುರುವಚನ ಪಾರಾಯಣ, ಬೆಳಿಗ್ಗೆ 11 ಗಂಟೆಗೆ ನೀಲಮ್ಮನ ಬಳಗಗಳ ಸಮಾವೇಶ ನಡೆಯಲಿದೆ. ಸಂಸದೆ ಶೋಭಾ ಕರಂದ್ಲಾಜೆ ಉದ್ಘಾಟಿಸುವರು.

ಬೆಳಗಾವಿಯ ಡಾ. ಗುರುದೇವಿ ಹುಲ್ಲೆಪ್ಪನವರ ಮಠ ಮತ್ತು ಚಿಕ್ಕಮಂಗಳೂರಿನ ದೀಪಾ ಹಿರೆಗುತ್ತಿ  ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 3.30ಕ್ಕೆ ನಡೆಯಲಿರುವ ‘ವಚನ ಎತ್ತರ ಬಿತ್ತರ’ ಅನುಭಾವ ಗೋಷ್ಠಿಯನ್ನು ಶಾಸಕ ವೈ.ಎಸ್‌.ವಿ. ದತ್ತಾ ಉದ್ಘಾಟಿಸುವರು. ಸಂಜೆ 6 ಗಂಟೆಗೆ ‘ಕಲ್ಯಾಣದಿಂದ ಉಳಿವೆಯೆಡೆಗೆ’ ಎಂಬ ರೂಪಕ ಕಾರ್ಯಕ್ರಮ ನಡೆಯಲಿದೆ ಎಂದರು.

ಫೆ.11 ರಂದು ಬೆಳಿಗ್ಗೆ 9 ಗಂಟೆಗೆ ಬಸವೇಶ್ವರ ವೃತ್ತದಿಂದ ಬಸವಗಿರಿ ವರೆಗೆ ಲಿಂಗಾಯತ ಧರ್ಮಗ್ರಂಥ, ಗುರುವಚನ ಮತ್ತು ವಚನ ಸಾಹಿತ್ಯದ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಜಾನಪದ ಕಲಾ ತಂಡಗಳು ಭಾಗವಹಿಸಲಿವೆ. ಮಧ್ಯಾಹ್ನ 2.30 ಗಂಟೆಗೆ ಗುರುವಚನ ಪಟ್ಟಾಭಿಷೇಕ– ದಶಮಾನೋತ್ಸವ  ನಡೆಯಲಿದೆ ಎಂದು ಹೇಳಿದರು.

ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ವಚನ ವಿಜಯೋತ್ಸವದಲ್ಲಿ ಕಂದಾಯ ಸಚಿವ ಕಾಗೋಡ ತಿಮ್ಮಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ  ಗಣ್ಯರು ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ನರ್ಮದಾ ಬಚಾವೋ ಆಂದೋಲನದ ಮೇಧಾ ಪಾಟ್ಕರ್‌ ಅವರಿಗೆ ‘ಜಗನ್ಮಾತೆ ಅಕ್ಕಮಹಾದೇವಿ ಪುರಸ್ಕಾರ’ ನೀಡಲಾಗುವುದು. ಉದ್ಯಮಿ ಜಯರಾಜ ಖಂಡ್ರೆ ಅವರು ಈ ಪುರಸ್ಕಾರದ ದಾಸೋಹಿಗಳಾಗಿದ್ದಾರೆ ಎಂದು ತಿಳಿಸಿದರು.

ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಗಂಗಾಂಬಿಕೆ ಅಕ್ಕ, ಗುತ್ತಿಗೆದಾರ ಗುರುನಾಥ ಕೊಳ್ಳೂರು, ಉದ್ಯಮಿ ಕಾಶೆಪ್ಪ ಧನ್ನೂರು, ಬಸವರಾಜ ಧನ್ನೂರು, ಜಿಲ್ಲಾ ಪಂಚಾಯಿತಿ ಸದಸ್ಯೆ ಶಕುಂತಲಾ ಬೆಲ್ದಾಳೆ, ರಮೇಶ ಮಠಪತಿ ಮಾಧ್ಯಮಗೋಷ್ಠಿಯಲ್ಲಿ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT