ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರು ಪೂರೈಕೆಗೆ ಆಗ್ರಹ

ಪುರಸಭೆ ಕಚೇರಿ ಎದುರು ಖಾಲಿ ಕೊಡ ಹಿಡಿದು ವಾರ್ಡ್‌ ನಿವಾಸಿಗಳ ಪ್ರತಿಭಟನೆ
Last Updated 8 ಫೆಬ್ರುವರಿ 2017, 8:00 IST
ಅಕ್ಷರ ಗಾತ್ರ

ಮಳವಳ್ಳಿ: ಗ್ರಾಮ ದೇವತೆ ದಂಡಿನ ಮಾರಮ್ಮ ಹಬ್ಬದ ದಿನವೇ ಕುಡಿಯುವ ನೀರು ಪೂರೈಕೆಯಾಗಿಲ್ಲ ಎಂದು ಪಟ್ಟಣದ 7ನೇ ವಾರ್ಡ್‌ನ ನಿವಾಸಿಗಳು ಪಟ್ಟಣದ ಪುರಸಭೆ ಕಚೇರಿ ಮುಂದೆ ಖಾಲಿಕೊಡ ಹಿಡಿದು ಮಂಗಳವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ 7ನೇ ವಾರ್ಡ್‌ನಲ್ಲಿ ವಾರದಿಂದ ಕುಡಿಯುವ ನೀರು ಸಮಸ್ಯೆ ಇರುವ ಬಗ್ಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ವಾರ್ಡ್‌ನ ಕೆಲವು ನಿವಾಸಿಗಳು ದೂರಿದರು.

ನಿವಾಸಿ ಮಹದೇವ ಮಾತನಾಡಿ, ನೀರು ಪೂರೈಕೆಯಾಗದಿರುವ ಬಗ್ಗೆ ವಾರ್ಡ್‌ನ ಸದಸ್ಯರಾಗಲಿ, ಪುರಸಭೆ ಅಧಿಕಾರಿಗಳಾಗಲಿ ಗಮನ ನೀಡಿಲ್ಲ. ಇದರಿಂದ ನಮ್ಮ ಸಮಸ್ಯೆ ಕೇಳುವವರಿಲ್ಲದಂತಾಗಿದೆ. ಅಲ್ಲದೆ ಸ್ವಚ್ಛತೆಯೂ ಮರೀಚಿಕೆಯಾಗಿದೆ  ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು. ಅಲ್ಲಿವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ಪುರಸಭೆ ಸದಸ್ಯರಾದ ನಾಗೇಶ್, ಉಮೇಶ್, ಗಂಗರಾಜೇಅರಸು, ಮುಖಂಡ ಚಿಕ್ಕಮೊಗಣ್ಣ ಮೊದಲಾದ ವರು ಪ್ರತಿಭಟನೆ ಕೈ ಬಿಡುವಂತೆ ಮನವೊಲಿಸಲು ಯತ್ನ ನಡೆಸಿ ವಿಫಲರಾದರು.

ಸ್ಥಳಕ್ಕೆ ಮುಖ್ಯಾಧಿಕಾರಿ ಎಂ.ಶಿವಪ್ಪ ಧಾವಿಸಿ, ಕೂಡಲೇ ನಿಮ್ಮ ವಾರ್ಡ್‌ಗೆ ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿ ಸುವುದಾಗಿ ತಿಳಿಸಿದರು. ಈಗಾಗಲೇ ಕುಡಿಯುವ ನೀರು ಪೂರೈಸುವ ವ್ಯವಸ್ಥೆ ಮಾಡಲಾಗಿದ್ದು, ಸ್ವಚ್ಛತೆ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು  ವಾರದೊಳಗೆ ಬಗೆಹರಿಸುವುದಾಗಿ ತಿಳಿಸಿದ ನಂತರ ಪ್ರತಿಭಟನಕಾರರು ತೆರಳಿದರು.

ಕಾರ್ಮಿಕ ಕಾನೂನು ಜಾರಿಗೆ ಆಗ್ರಹ
ಮಂಡ್ಯ: 
ಕಾರ್ಮಿಕ ಕಾನೂನುಗಳು ಜಾರಿ ಆಗಬೇಕು. ಕೂಲಿ ದರ ಪರಿಷ್ಕರಣೆಯ ಸಂಬಂಧ ಲೋಡಿಂಗ್‌ (ಹಮಾಲಿ) ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಶ್ರಮಿಕ ಶಕ್ತಿ ಸಂಘಟನೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ಮಾಡಿದರು.

ಲೋಡಿಂಗ್‌– ಅನ್‌ಲೋಡಿಂಗ್‌ ಕೆಲಸ ಮಾಡುವ ಕಾರ್ಮಿಕರು ಜಿಲ್ಲೆಯ ವಿವಿಧ ರೀತಿಯ ಗೋದಾಮುಗಳು ಹಾಗೂ ರೈಲ್ವೆ ಗೂಡ್ಸ್‌ಶೆಡ್‌ಗಳಲ್ಲಿ ಕೆಲಸ ಮಾಡುತ್ತಾರೆ. ಇವರು ಕಡಿಮೆ ಕೂಲಿಗೆ ದುಡಿಯುತ್ತಿದ್ದಾರೆ. ಇವರಿಗೆ ಕಾನೂನಿನ ಪ್ರಕಾರ ಯಾವುದೇ ಸವಲತ್ತುಗಳು ಇವರಿಗೆ ಸಿಗುತ್ತಿಲ್ಲ ಎಂದು
ದೂರಿದರು.

ಇಎಸ್‌ಐ, ಫಿಎಫ್‌, ವೇತನ ಚೀಟಿ, ಗುರುತಿನ ಚೀಟಿಗಳು ಸಂಪೂರ್ಣವಾಗಿ ಜಾರಿ ಆಗಿಲ್ಲ. ಬರದ ಸಮಸ್ಯೆಯಿಂದ ಕೆಲವು ಕೆಲಸಗಳು ಅರ್ಧಕ್ಕೆ ನಿಂತಿವೆ. ಇದರಿಂದ ಕೂಲಿಕಾರರು ಸಂಕಷ್ಟದಲ್ಲಿದ್ದಾರೆ. ಕೂಲಿದರ ಹೆಚ್ಚು ಮಾಡಲು ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿದರು.

ಡಿಕೆಶಿ ರಾಜೀನಾಮೆಗೆ ಆಗ್ರಹ
ಶ್ರೀರಂಗಪಟ್ಟಣ:
ಮಧುಗಿರಿಯಿಂದ ಪಾವಗಡಕ್ಕೆ ವಿದ್ಯುತ್‌ ಮಾರ್ಗ ಜೋಡಿಸುವ ಕಾಮಗಾರಿ ನಡೆಸುವ ವೇಳೆ, ಪರಿಹಾರಕ್ಕೆ ಒತ್ತಾಯಿಸಿ ವಿದ್ಯುತ್‌ ತಂತಿ ಹಿಡಿದು ಪ್ರತಿಭಟಿಸಿದ ರೈತರನ್ನು ತಂತಿ ಸಹಿತ ಹತ್ತಾರು ಅಡಿ ಮೇಲೆತ್ತಿ ಅಮಾನುಷವಾಗಿ ನಡೆಸಿಕೊಂಡ ಪ್ರಕರಣದ ನೈತಿಕ ಹೊಣೆ ಹೊತ್ತು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ರಾಜೀನಾಮೆ ನೀಡಬೇಕು ಎಂದು ರೈತ ಸಂಘದ ಕಾರ್ಯಕರ್ತರು ಆಗ್ರಹಿಸಿದರು.

ಪಟ್ಟಣದ ಸೆಸ್ಕ್‌ ಕಚೇರಿ ಎದುರು ಮಂಗಳವಾರ ಕೆಲ ಕಾಲ ಪ್ರತಿಭಟನೆ ನಡೆಸಿದ ರೈತರು ಸರ್ಕಾರ ಹಾಗೂ ಡಿ.ಕೆ.ಶಿವಕುಮಾರ್‌ ವಿರುದ್ಧ ಘೋಷಣೆ ಕೂಗಿದರು.

ರೈತರಿಗೆ ಕಿರುಕುಳ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದ ಇಂಧನ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಪ್ರರಣ ದಾಖಲಿಸಿಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ರೈತರ ಕ್ಷಮೆ ಯಾಚಿಸಬೇಕು ಎಂದು ರೈತ ಮುಖಂಡ ಕೆ.ಎಸ್‌. ನಂಜುಂಡೇಗೌಡ ಒತ್ತಾಯಿಸಿದರು.

ತಮ್ಮ ಜಮೀನಿಗೆ ಪರಿಹಾರ ಕೇಳಿದ ರೈತನನ್ನು 30 ಅಡಿ ಎತ್ತರಕ್ಕೆ ಹಾಗೂ ಅವರ ಮಗನನ್ನು 10 ಅಡಿ ಎತ್ತರಕ್ಕೆ ತಂತಿ ಸಹಿತ ಎಳೆದು ಹಿಂಸೆ ನೀಡಲಾಗಿದೆ. ರೈತರನ್ನು ಪ್ರಾಣಿಗಳಿಗಿಂತ ಕೀಳಾಗಿ ನಡೆಸಿಕೊಳ್ಳಲಾಗಿದೆ. ನ್ಯಾಯಬದ್ಧ ಪರಿಹಾರ ಕೇಳಲು ಹೋದವರನ್ನು ಹೀನಾಯವಾಗಿ ನಡೆಸಿಕೊಂಡಿರುವುದು ರಾಜ್ಯದ ಆಡಳಿತ ವೈಖರಿಗೆ ಕನ್ನಡಿ ಹಿಡಿದಂತಿದೆ.

ಘಟನೆ ಕುರಿತು ಇಂಧನ ಸಚಿವರು ಉಡಾಫೆ ಮಾತನಾಡುತ್ತಿದ್ದು ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಮರಳಾಗಾಲ ಕೃಷ್ಣೇಗೌಡ, ಬಿ.ಎಸ್‌. ರಮೇಶ್‌,  ಕಡತನಾಳು ಬಾಬು, ಪಿಎಸ್‌ಎಸ್‌ಕೆ ನಿರ್ದೇಶಕರಾದ ಪಾಂಡು, ಬಿ.ಸಿ. ಕೃಷ್ಣೇಗೌಡ, ನಂಜುಂಡಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT