ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸಂಖ್ಯೆ ಆಧಾರದಲ್ಲಿ ಒಳ ಮೀಸಲಾತಿ ನೀಡಿ

ದಲಿತ ಸಂಘಟನೆಗಳ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ಡಿ.ಜಿ.ಸಾಗರ ಆಗ್ರಹ
Last Updated 8 ಫೆಬ್ರುವರಿ 2017, 9:14 IST
ಅಕ್ಷರ ಗಾತ್ರ

ವಿಜಯಪುರ: ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜು ವರದಿ ಆಧಾರದ ಮೇಲೆ ಜನಸಂಖ್ಯೆ ಪರಿಗಣಿಸಿ, ರಾಜ್ಯ ಸರ್ಕಾರ ನ್ಯಾಯಮೂರ್ತಿ ಸದಾಶಿವ ಆಯೋಗದ ಶಿಫಾರಸ್ಸಿನಂತೆ ಒಳ ಮೀಸಲಾತಿ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ರಾಜ್ಯ ದಲಿತ ಸಂಘಟನೆಗಳ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ಡಿ.ಜಿ.ಸಾಗರ ಆಗ್ರಹಿಸಿದರು.

ಒಳ ಮೀಸಲಾತಿ ಜಾರಿ ಸಂದರ್ಭ ಯಾರಿಗೂ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಸದಾಶಿವ ಆಯೋಗದ ವರದಿಯನ್ನು ಬಹಿರಂಗ ಚರ್ಚೆಗೆ ಒಳಪಡಿಸಬೇಕು ಎಂದು ಮಂಗಳವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಇಂದಿಗೂ ಸಹ ಪರಿಶಿಷ್ಟ ಜಾತಿಯ ಅನೇಕ ಸಮಾಜಗಳಿಗೆ ಮೀಸಲಾತಿಯ ಪ್ರಯೋಜನ ದೊರಕಿಲ್ಲ ಎಂಬುದು ನಗ್ನ ಸತ್ಯ. ಇದಕ್ಕಾಗಿಯೇ ಸದಾಶಿವ ಆಯೋಗದ ವರದಿ ಜಾರಿಗೊಳ್ಳಬೇಕಿದೆ. ಒಳ ಮೀಸಲಾತಿಯ ವಿಚಾರದಲ್ಲಿ ದಲಿತರ ನಡುವಿನ ಒಗ್ಗಟ್ಟನ್ನು ಕಾಯ್ದುಕೊಳ್ಳಬೇಕಾದ ಅವಶ್ಯಕತೆಯಿದೆ. ಈ ಕಾರಣಕ್ಕಾಗಿ ಎಲ್ಲ ದಲಿತ ಸಂಘಟನೆಗಳನ್ನು ಒಗ್ಗೂಡಿಸಿ ಸಮಿತಿ ರಚನೆ ಮಾಡಲಾಗಿದೆ.

ಜನವರಿ 16ರಂದು ರಾಜ್ಯದ ವಿವಿಧ ದಲಿತ ಸಂಘಟನೆಗಳ ಮುಖಂಡರು ಸಭೆ ಸೇರಿ ರಾಜ್ಯದಲ್ಲಿ ಈಚೆಗೆ ಹೆಚ್ಚು ಚರ್ಚೆಗೊಳಗಾಗುತ್ತಿರುವ ಒಳ ಮೀಸಲಾತಿ ಬಗೆಗೆ ಕೂಲಂಕಷವಾಗಿ ಚರ್ಚೆ ನಡೆಸಲಾಗಿದೆ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಎಲ್ಲ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸ ಲಾತಿ ಕಲ್ಪಿಸಬೇಕು ಎಂದು ತಿಳಿಸಿದರು.

ತೋಳದ ಹತ್ತಿರ ಕುರಿ ನ್ಯಾಯ ಕೇಳಿದಂತೆ..!: ದಲಿತರು, ಹಿಂದುಳಿದ ವರ್ಗದವರ ಶ್ರೇಯೋಭಿವೃದ್ಧಿ ಬಗ್ಗೆ ಮಾತನಾಡುತ್ತಿರುವ ಕೆ.ಎಸ್.ಈಶ್ವರಪ್ಪ ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ದಲಿತರು, ಹಿಂದುಳಿದ ವರ್ಗದವರ ಹೆಸರು ಹೇಳಿಕೊಂಡು ಹೊರಟಿದ್ದಾರೆ. ಇದೊಂದು ರೀತಿಯಲ್ಲಿ ತೋಳದ ಹತ್ತಿರ ಕುರಿ ನ್ಯಾಯ ಕೇಳಿದಂತಾಗಿದೆ ಎಂದು ಡಿ.ಜಿ.ಸಾಗರ್ ವ್ಯಂಗ್ಯವಾಡಿದರು.

ರಾಜ್ಯ ಸಂಚಾಲಕ ರಮೇಶ ಆಸಂಗಿ, ಜಿಲ್ಲಾ ಸಂಚಾಲಕ ವಿನಾಯಕ ಗುಣಸಾಗರ, ಶರಣು ಸಿಂಧೆ, ಅಶೋಕ ಚಲವಾದಿ, ಸಿದ್ದು ರಾಯಣ್ಣನವರ್, ರಮೇಶ ಧರನಾಕರ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಅಧಿವೇಶನದ ಬಳಿಕ ಸಿ.ಎಂ ಬಳಿ ನಿಯೋಗ
ವಿಜಯಪುರ:
ಬಜೆಟ್‌ ಅಧಿವೇಶನದ ಬಳಿಕ ಜನಸಂಖ್ಯೆಗನುಗುಣವಾಗಿ ನ್ಯಾಯಮೂರ್ತಿ ಸದಾಶಿವ ಆಯೋಗದ ಶಿಫಾರಸಿನಂತೆ ಒಳ ಮೀಸಲಾತಿ ಜಾರಿಗೊಳಿಸುವಂತೆ ಮುಖ್ಯಮಂತ್ರಿ ಮನವೊಲಿಸಲು ರಾಜ್ಯ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ನಿಯೋಗ ತೆರಳಲಿದೆ ಎಂದು ಸಮಿತಿಯ ರಾಜ್ಯ ಸಂಚಾಲಕ ಡಿ.ಜಿ.ಸಾಗರ ತಿಳಿಸಿದರು.

ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜು ವರದಿ ಆಧಾರದ ಮೇಲೆ ಜನಸಂಖ್ಯೆ ಪರಿಗಣಿಸಿ ರಾಜ್ಯ ಸರ್ಕಾರ ಒಳ ಮೀಸಲಾತಿ ಅನುಷ್ಠಾನಕ್ಕೆ ಮುಂದಾಗ ಬೇಕು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ರಾಜ್ಯದಲ್ಲಿ ಶೇ 70ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸುವುದಾಗಿ ಮುಖ್ಯಮಂತ್ರಿ ನೀಡಿರುವ ಹೇಳಿಕೆ ಸ್ವಾಗತಿಸಿದ ಸಾಗರ್‌, ಇದಕ್ಕೆ ಬೆಂಬಲ ವ್ಯಕ್ತಪಡಿಸುವುದಾಗಿ ಹೇಳಿದರು.

ಮೀಸಲಾತಿ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಬದ್ಧತೆಯಿಲ್ಲ. ಬಿಜೆಪಿ ವ್ಯಾಪಾರಿಗಳ ಪಕ್ಷ. ಮೀಸಲಾತಿ ವ್ಯವಸ್ಥೆ ತೆಗೆದು ಹಾಕುವಂತೆ ಬಿಜೆಪಿ ಮಾತೃ ಸಂಸ್ಥೆ ಆರ್‌ಎಸ್‌ಎಸ್‌ ಒತ್ತಾಯ ಸಂವಿಧಾನ ಬಾಹಿರವಾದುದು ಎಂದು ಸಾಗರ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT