ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ ಚಾಲಕರಿಂದ ಎಲ್ಲೆಂದರಲ್ಲಿ ಪಿಕ್‌ಅಪ್‌

ಹುಬ್ಬಳ್ಳಿಯ ಹಳೆ ಬಸ್‌ ನಿಲ್ದಾಣ, ಚನ್ನಮ್ಮ ವೃತ್ತ, ನೀಲಿಜಿನ್‌ ರಸ್ತೆಯಲ್ಲಿ ಪಾರ್ಕಿಂಗ್‌; ಸಾರ್ವಜನಿಕರಿಗೆ ತೊಂದರೆ
Last Updated 8 ಫೆಬ್ರುವರಿ 2017, 9:18 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಹಳೆ ಬಸ್‌ ನಿಲ್ದಾಣ, ಚನ್ನಮ್ಮ ವೃತ್ತ, ನೀಲಿಜಿನ್‌ ರಸ್ತೆ, ಕೊಪ್ಪಿಕರ್‌ ರಸ್ತೆ, ಮಿರ್ಜಾಕರ ಪೆಟ್ರೋಲ್‌ ಬಂಕ್‌ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಆಟೊಗಳನ್ನು ಎಲ್ಲೆಂದರಲ್ಲಿ ರಸ್ತೆ ಮಧ್ಯೆ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿರುವುದರಿಂದ ವಾಹನಗಳು ಮುಂದೆ ಸಾಗಲಾಗದೇ ಸಂಚಾರ ದಟ್ಟಣೆ ಉಂಟಾಗುತ್ತಿದೆ.

ಹಳೆ ಬಸ್‌ ನಿಲ್ದಾಣಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಪ್ರಯಾಣಿಕರು ಬಂದು ಹೋಗುತ್ತಾರೆ. ಬಸ್‌ ನಿಲ್ದಾಣದ ಒಳಗೆ ಆಟೊ ನಿಲ್ದಾಣ ಇದೆ. ಆದರೆ, ಅದು ನಾಮಕಾವಾಸ್ತೆಗೆ ಇದ್ದಂತಿದೆ. ಬಸ್‌ ನಿಲ್ದಾಣದ ಮುಂದಿನ ಪಿ.ಬಿ. ರಸ್ತೆಯಲ್ಲಿ ವಾಹನಗಳ ದಟ್ಟಣೆ ನಡುವೆಯೇ ಪ್ರಯಾಣಿಕರನ್ನು ಆಟೊ ಚಾಲಕರು ಹತ್ತಿಸಿಕೊಳ್ಳುತ್ತಾರೆ. ಕರ್ತವ್ಯನಿರತ ಪೊಲೀಸರ ಎದುರೇ ಈ ರೀತಿಯ ಘಟನೆಗಳು ನಡೆದಿದ್ದು, ಸಂಚಾರ ದಟ್ಟಣೆಗೆ ಕಾರಣವಾಗಿದೆ.

ಆಟೊ ನಿಲ್ದಾಣದಲ್ಲಿ ಪಾಳಿ ಹಚ್ಚಬೇಕು. ಆದರೆ, ಪಾಳಿ ಹಚ್ಚಲು ಹಿಂದೇಟು ಹಾಕುವ ಕೆಲ ಚಾಲಕರು ಬಸ್‌ ನಿಲ್ದಾಣದ ಎದುರೇ ಆಟೊ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಾರೆ.

ರಸ್ತೆ ಮಧ್ಯೆ ಆಟೊ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವಂತಿಲ್ಲ. ಕೆಲ ಬಾರಿ ಮಾತ್ರ ಸಂಚಾರ ಪೊಲೀಸರು ದಂಡ ಹಾಕಿ ಸುಮ್ಮನಾಗುತ್ತಾರೆ. ಆದರೆ, ಬಹುತೇಕ ಚಾಲಕರು ಬೆಳಿಗ್ಗೆಯಿಂದ ಸಂಜೆವರೆಗೆ ಇದೇ ಕಾಯಕದಲ್ಲಿ ತೊಡಗುತ್ತಾರೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

ಸಂಚಾರ ದಟ್ಟಣೆ: ಟ್ರಾಫಿಕ್‌ ಹೈಲ್ಯಾಂಡ್‌ ಎಂದೇ ಕರೆಯಲಾಗುವ ಚನ್ನಮ್ಮ ವೃತ್ತದಲ್ಲೂ ಇದೇ ಪರಿಸ್ಥಿತಿ ಇದೆ. ವೃತ್ತದಲ್ಲಿ ಸದಾ ವಾಹನ ದಟ್ಟಣೆ ಇರುತ್ತದೆ. ಇಲ್ಲಿ ಯಾವುದೇ ವಾಹನಗಳನ್ನು ನಿಲುಗಡೆ ಮಾಡುವಂತಿಲ್ಲ. ಆದರೆ, ಚನ್ನಮ್ಮ ವೃತ್ತದಲ್ಲಿ ಕೆಂಪು ದೀಪ ಹೊತ್ತಿದ್ದ ವೇಳೆ ಕೆಲ ಪ್ರಯಾಣಿಕರನ್ನು ಆಟೊ ಚಾಲಕರು ಹತ್ತಿಸಿಕೊಳ್ಳುತ್ತಾರೆ.

ಹಿಂದೆ ಸಾಲುಗಟ್ಟಿ ನಿಂತಿರುವ ವಾಹನ ಚಾಲಕರು ಹಾರನ್‌ಗಳ ಸುರಿಮಳೆಗರೆಯುತ್ತಾರೆ. ಪ್ರಯಾಣಿಕರನ್ನು ಬೇಕಾಬಿಟ್ಟಿ ಆಟೊಗೆ ಹತ್ತಿಸಿಕೊಳ್ಳುವ ಬಗ್ಗೆ ವಾಹನ ಸವಾರರು ಆಕ್ಷೇಪ ವ್ಯಕ್ತಪಡಿಸಿ, ಜಗಳ ಆಗಿರುವ ನಿದರ್ಶನಗಳು ಇವೆ.

ಚನ್ನಮ್ಮ ವೃತ್ತದ ಅನತಿ ದೂರದಲ್ಲೇ ಇರುವ ನೀಲಿಜನ್‌ ರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಇದೆ. ಆದರೆ, ಸಂಚಾರ ಪೊಲೀಸರ ಕಣ್ಣೆದುರೇ ವಿರುದ್ಧ ದಿಕ್ಕಿನಿಂದ ಆಟೊ ಚಾಲಕರು ಹಾದು ಹೋಗುತ್ತಾರೆ.

ಏಕಮುಖ ರಸ್ತೆಯಲ್ಲಿ ಎಲ್ಲೆಂದರಲ್ಲಿ ಆಟೊ ನಿಲ್ಲಿಸಿ, ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಾರೆ. ಆದರೆ, ನಿಲ್ದಾಣದಲ್ಲಿ ಗಂಟೆಗಟ್ಟಲೇ ಪ್ರಯಾಣಿಕರಿಗಾಗಿ ಕಾದು ಸುಸ್ತಾದ ಆಟೊ ಚಾಲಕರು ನಿಲ್ದಾಣದ ಹೊರಗೂ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಾರೆ.

‘ಕೆಲವೊಮ್ಮೆ ಎರಡು ತಾಸು ಪಾಳಿ ಹಚ್ಚಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತೇವೆ. ಆದರೆ, ನಿಲ್ದಾಣದಲ್ಲಿ ಆಟೊ ನಿಲ್ಲಿಸದೇ ರಸ್ತೆ ಮಧ್ಯೆ ಎಲ್ಲೆಂದರಲ್ಲಿ ಪ್ರಯಾಣಿಕರನ್ನು ಕೆಲ ಚಾಲಕರು ಹತ್ತಿಸಿಕೊಂಡು ಹೋಗುತ್ತಾರೆ. ಸಂಚಾರ ಪೊಲೀಸರು ಕಂಡೂ ಕಾಣದಂತೆ ಸುಮ್ಮನೆ ಕರ್ತವ್ಯ ನಿರ್ವಹಿಸುತ್ತಾರೆ.
ಪ್ರತಿಯೊಬ್ಬರೂ ಪಾಳಿ ಹಚ್ಚುವಂತೆ ಸೂಚಿಸಬೇಕು. ಇಲ್ಲವಾದಲ್ಲಿ ದಂಡ ಹಾಕಬೇಕು’ ಎಂದು ಚಾಲಕ ಮಂಜುನಾಥ ಛಬ್ಬಿ ಅಳಲು ತೋಡಿಕೊಂಡರು.

‘ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ದ್ವಿಚಕ್ರ ವಾಹನ ಸವಾರರಿಂದ ಸಂಚಾರ ಪೊಲೀಸರು ನಿತ್ಯ ನೂರಾರು ಪ್ರಕರಣಗಳನ್ನು ದಾಖಲಿಸುತ್ತಿರುವುದು ಸ್ವಾಗತಾರ್ಹ. ಆದರೆ, ದಂಡ ಹಾಕುವುದೊಂದೇ ಪೊಲೀಸರ ಕರ್ತವ್ಯ ಆಗಬಾರದು. ಹಳೆ ಬಸ್‌ ನಿಲ್ದಾಣ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಬೇಕಾಬಿಟ್ಟಿ ಎಲ್ಲೆಂದರಲ್ಲಿ ಪ್ರಯಾಣಿಕರನ್ನು ಪಿಕ್‌ಅಪ್‌ ಮಾಡಲಾಗುತ್ತಿದೆ.

ಹಳೆ ಹುಬ್ಬಳ್ಳಿ, ಉಣಕಲ್ ಸೇರಿದಂತೆ ಬೇರೆ ಪ್ರದೇಶಗಳಿಗೆ ಪ್ರಯಾಣಿಕರನ್ನು ಕೂಗಿ ಹತ್ತಿಸಿಕೊಳ್ಳಲಾಗುತ್ತದೆ. ಇದರಿಂದ ಸಂಚಾರ ದಟ್ಟಣೆ ಆಗುತ್ತಿದೆ. ಈ ಬಗ್ಗೆ ಪೊಲೀಸರು ಗಮನಹರಿಸಿ ಸುಧಾರಣೆ ಮಾಡುವ ಗೋಜಿಗೆ ಹೋಗುತ್ತಿಲ್ಲ. ಇನ್ನಾದರೂ ಇತ್ತ ಗಮನ ಹರಿಸಬೇಕು’ ಎಂದು ನಾಗರಿಕ ಲಿಂಗರಾಜ ಕೋರಿಶೆಟ್ಟರ ತಿಳಿಸಿದರು.

*
ನಿಲ್ದಾಣದ ಹೊರಗೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿರುವ ಆಟೊ ಚಾಲಕರಿಗೆ ದಂಡ ಹಾಕಲಾಗುತ್ತಿದೆ. ಚಾಲಕರು ಸಹಕರಿಸಿದರೆ  ದಟ್ಟಣೆ ತಪ್ಪಿಸಬಹುದು.
-ಮಲ್ಲಿಕಾರ್ಜುನ ಬಾಲದಂಡಿ,
ಡಿಸಿಪಿ (ಅಪರಾಧ–ಸಂಚಾರ)

*
‘ರಸ್ತೆ ಮಧ್ಯೆ ಬೇಕಾಬಿಟ್ಟಿ ಪ್ರಯಾಣಿಕರನ್ನು ಆಟೊಗೆ ಹತ್ತಿಸಿಕೊಳ್ಳುವುದು ತಪ್ಪು. ಅಂತಹ ಚಾಲಕರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಿ. ಅದಕ್ಕೆ ಅಭ್ಯಂತರವಿಲ್ಲ
ಶೇಖರಯ್ಯ ಮಠಪತಿ
ಆಟೊ ಚಾಲಕರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT