ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಧನ ಉಳಿತಾಯಕ್ಕೆ ಹೊಸ ಹೆಜ್ಜೆ

ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಹೊಸಪೇಟೆ ವಿಭಾಗದಿಂದ ಚಾಲಕರಿಗೆ ತಿಳಿವಳಿಕೆ ಕಾರ್ಯಕ್ರಮ
Last Updated 8 ಫೆಬ್ರುವರಿ 2017, 9:58 IST
ಅಕ್ಷರ ಗಾತ್ರ

ಹೊಸಪೇಟೆ: ಇಂಧನ ಉಳಿಸಿ, ಸಂಸ್ಥೆಯ ಆದಾಯ ಹೆಚ್ಚಿಸಲು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಸಪೇಟೆ ವಿಭಾಗವು ಹೊಸ ಹೆಜ್ಜೆ ಇಟ್ಟಿದೆ.
‘ಇಂಧನ ಉಳಿತಾಯ ದ್ವಿ–ಮಾಸಿಕ’ ಹೆಸರಿನಲ್ಲಿ ಫೆ. 1ರಿಂದ ಮಾರ್ಚ್‌ 31ರ ವರೆಗೆ ಕಾರ್ಯಕ್ರಮ ಹಮ್ಮಿಕೊಂಡಿದೆ. ವಾಹನ ಚಾಲಕರಲ್ಲಿ ಇಂಧನ ಉಳಿಸುವ ಕುರಿತು  ಜಾಗೃತಿ ಮೂಡಿಸಿ, ಸಂಸ್ಥೆಯ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಸಂಸ್ಥೆ ಈ ಯೋಜನೆ ಹಾಕಿಕೊಂಡಿದೆ.

ಈ ಕಾರ್ಯಕ್ರಮದ ಅಂಗವಾಗಿ ಪ್ರತಿ ಒಂದು ಲೀಟರ್‌ ಡೀಸೆಲ್‌ನಲ್ಲಿ ಒಂದು ಬಸ್ಸು ಐದೂವರೆ ಕಿ.ಮೀ (5.30 ಕಿ.ಮೀ) ಕ್ರಮಿಸುವಂತೆ ನೋಡಿಕೊಳ್ಳುವುದು ಇದರ ಮುಖ್ಯ ಉದ್ದೇಶ. ಸದ್ಯ ಪ್ರತಿ ಲೀಟರ್‌ಗೆ ಬಸ್ಸುಗಳು 5.18 ಕಿ.ಮೀ ಸಂಚರಿಸುತ್ತಿವೆ.

ಸಂಸ್ಥೆ ಹಾಕಿಕೊಂಡಿರುವ ಗುರಿ ಪ್ರಕಾರ ವಾಹನಗಳು ಕ್ರಮಿಸಿದರೆ ಹೊಸಪೇಟೆ ವಿಭಾಗವೊಂದಕ್ಕೆ ಪ್ರತಿ ತಿಂಗಳು ₹ 2ರಿಂದ ₹ 3 ಲಕ್ಷ ಆದಾಯ ವೃದ್ಧಿಯಾಗಲಿದೆ. ಒಟ್ಟಾರೆ ಈಶಾನ್ಯ ಸಾರಿಗೆ ಸಂಸ್ಥೆ ವ್ಯಾಪ್ತಿಗೆ ಒಳಪಡುವ ಎಲ್ಲ ಜಿಲ್ಲೆಗಳಲ್ಲಿ ಈ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡರೆ ಆದಾಯ ಕೋಟಿಗೂ ಹೆಚ್ಚು ಮೀರಬಹುದು.

ಪ್ರತಿ ಲೀಟರ್‌ಗೆ ಐದೂವರೆ ಕಿ.ಮೀ ಕ್ರಮಿಸಲು ಚಾಲಕರಲ್ಲಿ ತಿಳಿವಳಿಕೆ ಮೂಡಿಸಲಾಗುತ್ತಿದೆ. ಅದು ಕೂಡ ಸಂಸ್ಥೆ ನಿಗದಿಪಡಿಸಿದ ವೇಗದಲ್ಲಿಯೇ ಎನ್ನುವುದು ವಿಶೇಷ. ಟಾಪ್‌ ಗೇರ್‌ನಲ್ಲಿ ವಾಹನ ಚಲಾಯಿಸುವುದು, ಆ್ಯಕ್ಸಿಲ್‌ರೇಟರ್‌ ಅತಿಯಾಗಿ ಬಳಸದಿರುವುದು, ಪದೇ ಪದೇ ಬ್ರೇಕ್‌ ಹಾಕದೇ ಇರುವುದು ಮತ್ತು ಕ್ಲಚ್‌ ಬಳಸದಿರುವುದರ ಕುರಿತು ಚಾಲಕರಿಗೆ ತಿಳಿ ಹೇಳಲಾಗುತ್ತಿದೆ.

ಇಷ್ಟೇ ಅಲ್ಲ, ಈ ಅವಧಿಯಲ್ಲಿ ಎಲ್ಲ ಬಸ್ಸುಗಳ ಸೈಲೆನ್ಸರ್‌, ಕ್ಯಾಲಿಬ್ರೇಷನ್‌, ಬ್ರೇಕ್‌ ರೋಲ್‌ ಪರಿಶೀಲನೆ, ತೈಲ ಸೋರಿಕೆಯಾಗದಂತೆ ಎಚ್ಚರ ವಹಿಸುವುದು ಸೇರಿದಂತೆ ಇತರ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದೆ.

ಬಸ್‌ ಓಡಿಸುವ ಎಲ್ಲ ಚಾಲಕರಿಗೂ ಪಾಸ್‌ ಬುಕ್‌ ನೀಡಲಾಗಿದ್ದು, ಒಂದು ಲೀಟರ್‌ನಲ್ಲಿ ಎಷ್ಟು ಕಿ.ಮೀ ಕ್ರಮಿಸಲಾಗುತ್ತಿದೆ ಎನ್ನುವುದನ್ನು ಪರಿಶೀಲಿಸಿ, ಅದರಲ್ಲಿ ನಿತ್ಯ ನಮೂದಿಸಲಾಗುತ್ತಿದೆ. ಚಾಲಕರನ್ನು ಪ್ರೋತ್ಸಾಹಿಸಲು ಚಾಲಕರಿಗೆ ಸಂಸ್ಥೆ ಬಹುಮಾನ ಕೂಡ ನೀಡಲು ತೀರ್ಮಾನಿಸಿದೆ.

ಫೆಬ್ರುವರಿ, ಮಾರ್ಚ್‌ ತಿಂಗಳಿನಲ್ಲಿ ಎಲ್ಲೆಡೆ ಜಾತ್ರೆ ಸೇರಿದಂತೆ ಇತರ ಧಾರ್ಮಿಕ ಕಾರ್ಯಕ್ರಮಗಳು ಇರುವುದರಿಂದ ಬಸ್ಸಿನಲ್ಲಿ ಜನರ ಓಡಾಟ ಅಧಿಕ ಇರುತ್ತದೆ. ಈ ಅವಧಿಯಲ್ಲಿ ಸಾಮಾನ್ಯ ಸಂದರ್ಭಕ್ಕಿಂತ ಹೆಚ್ಚಿನ ಬಸ್ಸುಗಳು ರಸ್ತೆಗೆ ಇಳಿಯುತ್ತವೆ. ಈ ಎಲ್ಲ ಕಾರಣಗಳಿಂದ ಈ ಅವಧಿಯಲ್ಲೇ ಈ ಕಾರ್ಯಕ್ರಮ ರೂಪಿಸಿರುವುದು ವಿಶೇಷ.

‘ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಚಾಲಕರಲ್ಲಿ ಇಂಧನ ಉಳಿತಾಯದ ಬಗ್ಗೆ ಅರಿವು ಮೂಡಿಸುವುದು. ಪ್ರಾಯೋಗಿಕವಾಗಿ ಎರಡು ತಿಂಗಳವರೆಗೆ ಈ ಯೋಜನೆ ಇರುತ್ತದೆ. ಈ ಅವಧಿಯಲ್ಲಿ ಚಾಲಕರು ಹೊಂದಿಕೊಂಡರೆ ವರ್ಷವಿಡೀ ಒಂದೇ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಾರೆ’ ಎಂದು ಹೊಸಪೇಟೆ ವಿಭಾಗದ ಡಿಪೊ ವ್ಯವಸ್ಥಾಪಕ ಬಸವರಾಜ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಂಧನ ಉಳಿತಾಯ, ಆದಾಯ ವೃದ್ಧಿ ಜತೆ ಜತೆಗೇ ಸುರಕ್ಷಿತ ಬಸ್‌ ಚಾಲನೆಗೂ ಒತ್ತು ಕೊಡಲಾಗಿದೆ. ಈಗಷ್ಟೇ ಕಾರ್ಯಕ್ರಮ ಆರಂಭವಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಹೇಳಿದರು.

150 ಬಸ್‌ಗಳು ನಿತ್ಯ ಸಂಚಾರ...
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಸಪೇಟೆ ವಿಭಾಗ ವ್ಯಾಪ್ತಿಗೆ ಕೂಡ್ಲಿಗಿ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ ಹಾಗೂ ಸಂಡೂರು ಸೇರಿದ್ದು, ಎಲ್ಲ ಕಡೆಗಳಲ್ಲಿ ಇಂಧನ ಉಳಿತಾಯ ಕಾರ್ಯಕ್ರಮ ನಡೆಸಲಾಗುತ್ತಿದೆ.

ಹೊಸಪೇಟೆ ಘಟಕವೊಂದರಿಂದಲೇ 28 ನಗರ ಸಂಚಾರ ಸೇರಿದಂತೆ ಒಟ್ಟು 150 ಬಸ್ಸುಗಳು ನಿತ್ಯ ಸಂಚರಿಸುತ್ತವೆ. 450 ಚಾಲಕರು ಹಾಗೂ ಅಷ್ಟೇ ಸಂಖ್ಯೆಯ ನಿರ್ವಾಹಕರು ಕೆಲಸ ನಿರ್ವಹಿಸುತ್ತಿದ್ದಾರೆ.

*
ಇಂಧನ ಉಳಿತಾಯಕ್ಕಾಗಿ ಚಾಲಕರಿಗೆ ಅದರ ಮಹತ್ವ ತಿಳಿ ಹೇಳಲಾಗುತ್ತಿದೆ. ಸಂಸ್ಥೆ ನಿಗದಿಪಡಿಸಿರುವ ವೇಗಕ್ಕೆ ಅನುಗುಣವಾಗಿ ಚಾಲಕರು ಬಸ್ಸು ಓಡಿಸಿದರೆ ಗುರಿ ಸಾಧನೆ ಕಷ್ಟವೇನಲ್ಲ.
-ಬಸವರಾಜ,
ಹೊಸಪೇಟೆ ಡಿಪೊ ವ್ಯವಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT