ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವ ಸೆಲ್ಫಿಯೂ ಸೆರೆಹಿಡಿಯಲಾಗದ ಪರವಶತೆಗೆ ನೀನೇ ಕಾರಣ

Last Updated 8 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಪ್ರಥಮ ಬಹುಮಾನ – ಪ್ರೇಮಲತಾ ಬಿ. ತುಮಕೂರು

ಎನ್ನರಸ,
ಬೆಳ್ಳಂಬೆಳಕಿನ ಬದುಕಿನಲ್ಲಿ ಒಂಟಿತನದ ಕತ್ತಲೆ ಕಾಡುವ ಭಯ ಹುಣ್ಣಿಮೆಯ ಚಂದ್ರನಂತೆ ನೀನು ನನ್ನ ಬದುಕಿನಲ್ಲಿ ಉದಿಸಿದ ಕ್ಷಣದಿಂದ ನನಗಿಲ್ಲವೇ ಇಲ್ಲ! ಒಂಟಿತನದ ಬೇಗೆ, ಸುಡು ಸುಡುವ ನಿಟ್ಟುಸಿರುಗಳ ಸ್ಪರ್ಶವೇ ನನ್ನ ನೆನಪಿನಲ್ಲಿ ಮರೆಯಾಗಿರುವ ಕಾಲವಿದು ಗೆಳೆಯ!

ಅಂದಿನ ಆ ಭೇಟಿಯಲ್ಲಿ ನೀನು ಸಿಗುವೆಯೆನ್ನುವ ಪರಿವೆಯೇ ನನಗಿರಲಿಲ್ಲ. ನಾನು ನಿನಗೆ ಕೊಡಲು ಏನನ್ನೂ ತಂದಿರಲಿಲ್ಲ. ಈ ಭೇಟಿಯ ಕೊನೆಯಲ್ಲಿ ನೀನು ನನಗೆ ಹೊರಿಸಿ ಕಳಿಸಿದ್ದು ಏನೂ ಇರಲಿಲ್ಲ! ಕೊನೆಗೆ ಬಿಟ್ಟು ಬಂದಿದ್ದಷ್ಟೇ ನೆನಪು. ಮರಳಿ ಮನೆಗೆ ಬಂದಾಗಲೇ ಅರಿವಾದ್ದು ಕಳೆದುಹೋಗಿದ್ದು ನನ್ನ ಹೃದಯ ಅಂತ!! ಹೀಗಂತ ಕಂಡಿದ್ದವರು ಯಾರು?

ಅಲ್ಲಿಂದ ಮುಂದಕ್ಕೆ ಶುರುವಾದದ್ದೆಲ್ಲ ನಸು ನಗುಗಳ, ಪಿಸು ಮಾತುಗಳ ,ಕೆನ್ನೆ ರಂಗೇರುವ, ಮೈ ಬಿಸಿಯಾಗುವ ಅವಿಸ್ಮರಣೀಯ ಅನುಭವಗಳು! ಯಾವೊಂದು ಕ್ರಿಯೆಗಳೂ ನನ್ನ ಹಿಡಿತದಲ್ಲಿರಲೇ ಇಲ್ಲ. ಆಗಲೇ ನನಗರಿವಾದ್ದು ಪ್ರೇಮದ ಸಮ್ಮೋಹಕ ತಾಕತ್ತು ಏನು ಅಂತ. ನಾನೇ ನಿನ್ನ ಪಕ್ಕ ಕುಳಿತು ಇದನ್ನೆಲ್ಲ ಹೇಳಿದರೆ ‘ಹುಚ್ಚು ಹುಡುಗಿ’ ಅಂತ ಎಲ್ಲಿ ನಗುತ್ತೀಯೋ ಅನ್ನುವ ಸಂಕೋಚ.

ಅಲ್ಲದೆ, ಅವತ್ತಿನ ಆ ಆನಂದದ ಕ್ಷಣಗಳನ್ನು ಅನುಭವಿಸುತ್ತ ಜಗತ್ತನ್ನು ಮರೆತುಬಿಡುವ ಕ್ಷಣಗಳಲ್ಲಿ ಇದನ್ನೆಲ್ಲ ದಾಖಲಿಸಲು ಸಂಭ್ರಮದಿ ನವಿಲಾಗಿ ಕುಣಿಯುವ ಮನಸ್ಸಿಗೆ ಕಡಿವಾಣದ ಅಗತ್ಯವನ್ನು ಸೃಷ್ಟಿಸುವ ಇಷ್ಟವೂ ನನಗಿಲ್ಲ! ನೀನು ನನ್ನ ಅಗಲಿದಾಗಲೆಲ್ಲ ನಿನ್ನೊಡನೆ ಕಳೆದ ಕ್ಷಣಗಳೊಡನೆ ನನ್ನ ಸರಸ ಮುಂದುವರೆಯುತ್ತದೆ!! ಅದೂ ಅಷ್ಟೇ ಅಪ್ಯಾಯಮಾನವಾಗುತ್ತದೆ!!

ಈ ಸರಸದಲ್ಲಿ ನಾನು ನಿನ್ನೊಂದಿಗೆ ಏನೆಲ್ಲ ಸಂವಾದಿಸುತ್ತೇನೆ!ಕಾಣದ ಕಮಾನುಗಳನ್ನು ಹಿಡಿದು ಜೋಕಾಲಿಯಾಡುತ್ತೇನೆ! ನನ್ನ ಹೃದಯದಾಳದ ಝೇಂಕಾರಕ್ಕೆ ನಸುನಗುತ್ತ ಪದಗಳನ್ನು ಬೆಸೆಯುತ್ತೇನೆ! ಕವಿತೆಗಳನ್ನು ಹೊಸೆಯುತ್ತೇನೆ! ಇದೊಂದು ದಿವ್ಯ ಅನುಭವ!! ಇಹಲೋಕದ ಯಾವ ಪರಿವೆಗಳೂ ಇಲ್ಲಿ ನನ್ನನ್ನು ಕಾಡುವುದೇ ಇಲ್ಲ. ಯಾವುದೋ ಮೋಹದ ಮುರಳಿ ಕರೆಗೆ ಚಂಗನೆಗೆದು ನರ್ತಿಸುವ ಅವರ್ಚನೀಯ ಅನುಭಾವದಲ್ಲಿ ಕಳೆದುಹೋಗುವುದರಲ್ಲಿ ಎಷ್ಟೊಂದು ಆನಂದವಿದೆ. ನೀನು ಕೊಟ್ಟ ಈ ಅನುಭಾವಕ್ಕೇ ನಾನು ನಿನಗೆ ಸಲ್ಲಿಸಬಹುದಾದ  ಋಣ ಬೇಕಾದಷ್ಟಿದೆ!!
ಬಹುಶಃ ಇದನ್ನು ಒಂದು ಇ ಮೇಲ್‌ನಲ್ಲಿ ಬರೆಯಲು ನನಗೆ ಸಾಧ್ಯವಿಲ್ಲ.

ಟೆಕ್ಸ್ಟ್ ಮಾಡಲೂ ಸಾಧ್ಯವಿಲ್ಲ. ನನ್ನ ಈ ಪರವಶತೆಯ ಪರಿಸ್ಥಿತಿಯನ್ನು ಯಾವ ಸೆಲ್ಫಿಗಳೂ ಸೆರೆಹಿಡಿಯಲಾರವು. ನಿಜ ಹೇಳಬೇಕೆಂದರೆ ನಾನು ಇವನ್ನು ಸೆರೆಹಿಡಿಯುವ ಗೋಜಿಗೂ ಹೋಗುವುದಿಲ್ಲ!

ಈ ಭಾವನೆಗಳೂ ನನ್ನಂತೆ ಸ್ವೇಚ್ಛೆಯಾಗಿ ಪದಗಳೊಡನೆ ಚಕ್ಕಂದವಾಡುವುದನ್ನು ನೋಡಲು ನನಗೆ ಇನ್ನಿಲ್ಲದ ಆನಂದ. ಅವುಗಳನ್ನು ಬೊಗಸೆ ತುಂಬ ಮೊಗೆದು ನಿನಗೆ ಅರ್ಪಿಸುವ ತವಕ. ಅದಕ್ಕೇ ಈ ಪತ್ರ.

ನಿನ್ನೊಡನಿನ ಈ ದಿನಗಳಲ್ಲಿ ಹಾಡುವ ಹಕ್ಕಿ ಹಾಡನಾಡಿದರೆ  ಮೃದುವಾಗಿ ನರಳುತ್ತ ನಸುನಗುತ್ತೇನೆ. ಬೀಳುಬೆಳಕ ಪ್ರಕಾಶದಲ್ಲಿ ನಿನ್ನ ಇರುವಿಲ್ಲದಿದ್ದರೆ ಬಳಲುತ್ತೇನೆ. ಊಟದಲ್ಲಿ ರುಚಿ ಕಳೆದು ಬೆಂದಕ್ಕಿಯಲ್ಲಿ ಕಲ್ಲಾಗಿ ಕಾಡುವ ನಿನ್ನನ್ನು ನಸುನಗುತ್ತ ಹಿಡಿಯಲು ತವಕಿಸುತ್ತೇನೆ. ನಿನ್ನ ಕಲ್ಪನೆಯಲ್ಲೇ ಬೆವರಾಗಿ ನೀರಾಗುತ್ತೇನೆ. ಗಿಜಿಗುಡುವ ಮಂದೆಯಲಿ ನನ್ನ ಇರುವಿದ್ದರೂ ಯಾವ ಶಬ್ದಗಳು ಕಿವಿಗೆ ಬೀಳದೆ ನನ್ನ ಕಿವಿಗೆ ಮಾತ್ರ ಕೇಳುವ ನಿನ್ನ ಪಿಸುನುಡಿಗಳ ಮೋಡಿಗೆ ಕಿರುನಗೆ ನಗುತ್ತಿರುತ್ತೇನೆ! ನವಿರಾದ ಎಷ್ಟೆಲ್ಲ ಪದಗಳು ಕಣ್ಣಿಗೆ ಕಂಡರೂ ಅದರಲ್ಲಿ ನೀನಿಲ್ಲದಿದ್ದರೆ ಬೋರಾಗಿ ಪುಟ ತಿರುವುತ್ತೇನೆ. ನಿನ್ನ ಕಲ್ಪನೆಗಳ ಕೋಡಿಯಲ್ಲಿ ಹಗುರಾಗಿ ತೇಲುತ್ತೇನೆ! ಕಾರ್ಯಮುಖಿಯಾಗಿದ್ದ ನನ್ನ ಬದುಕನ್ನು ಕೆಡಿಸಿ ಮನಸ್ಸಿನ ತುಂಬ ಬಣ್ಣದ ಕೇಳಿಯನ್ನು ಸೃಷ್ಟಿಸಿದ ನೀನು ಪ್ರೇಮಲೋಕದಲ್ಲಿ ನನ್ನ ಜೊತೆಯಾಗಿರುವುದಷ್ಟೆ ನನಗೆ ಮುಖ್ಯವಾಗಿಬಿಟ್ಟಿದೆ.

ಬದುಕನ್ನು ಹಂಚಿಕೊಳ್ಳುತ್ತಾ ಸಾಗುವ ಮುಂದಿನ ನಮ್ಮ ಕನಸಿನ ಬದುಕಲ್ಲಿ ನೀನು ನನಗೆ ನೀಡಬಹುದಾದ ಕಾಣಿಕೆಯ ಪರಿಧಿ ಹಿರಿದಾದ್ದು ಗೆಳೆಯ.
ಸದಾಕಾಲ ನಿನ್ನ ಬೆಚ್ಚಗಿನ ಎದೆಯನ್ನು ತೆರೆದು ನನ್ನನ್ನು ನಿನ್ನ ಭಾವನೆಗಳ ಹೂಮೆತ್ತೆಯಲ್ಲಿ ಬಂಧಿಸು. ನನ್ನ ಕಣ್ಣನ್ನು ಮುಚ್ಚಿ, ಕನಸನ್ನು ತೆರೆದು ಸದಾ ಶೃಂಗಾರದ ಕನ್ನಡಿಯನ್ನು ಹಿಡಿಯೆಂದು ಕೇಳುತ್ತೇನೆ. ಬೊಗಸೆ ತುಂಬ ಸಿಹಿಯಾದ ನುಡಿಗಳನ್ನು ಮೊಗೆದು ನಿನ್ನ ಮಂದಹಾಸದಲ್ಲಿ ನನ್ನನ್ನು ಹಿಡಿದಿಡು ಎಂದು ಬೇಡುತ್ತೇನೆ. ಪದಗಳೊಡನೆ ಲಾಸ್ಯವಾಡುವಲ್ಲಿ ನನ್ನೊಡನೆ ಒಂದಾಗು. ಭಾವ ಪರವಶತೆಯಲ್ಲಿ ನೀನು ನನ್ನ ನಟರಾಜನಾಗಬಲ್ಲೆಯಾದರೆ ನಿನ್ನಲ್ಲಿ ಲೀನಳಾಗುವ ಬಯಕೆಯ ಪಾರ್ವತಿ ನಾನು!

ತುಂಬ ಭಾವುಕಳಾಗಿ ಬರೆದಿದ್ದೇನೆ ಎಂದು ನಗದಿರು. ಬದುಕು ಏನೆಂದು ನಮಗೆ ತಾನೇ ಏನ ಗೊತ್ತು? ನಾವೊಂದು ಕಾಲಘಟ್ಟದಲ್ಲಿದ್ದಾಗ ಅದನ್ನು ಸಂಪೂರ್ಣ ಅನುಭವಿಸಬಾರದೆನ್ನುವಂತಹ ಕಾಯಿದೆಗಳೇ ಇಲ್ಲದ ನಮ್ಮ ಲೋಕದಲ್ಲಿ ನಾವು ತಾನೇ ನಿಯಮಗಳನ್ನು ಸೃಷ್ಟಿಸುವವರು?
ಇಲ್ಲಿ ನಾವು ಹಾಕುವ ಪ್ರೀತಿಯ, ಪ್ರೇಮದ, ಪರವಶತೆಯ, ಮೋಹದ, ಶೃಂಗಾರದ, ಭಾವುಕತೆಯ ಅಡಿಪಾಯದ ಮೇಲೆ ನಮ್ಮ ಕನಸ ಸೌಧ ಏಳುವುದಾದಲ್ಲಿ ಆ ಮನೆಯ ಹಂದರದ ತುಂಬೆಲ್ಲ ನಾವು ಇದೇ ಹದದಲ್ಲಿ ಮಿಡಿಯುತ್ತ ಸಾಗಬಹುದಲ್ಲವೆ? ಜಗತ್ತಲ್ಲಿ ಕಣ್ಣಿಗೆ ಕಾಣುವ ವಿಚಾರಗಳು ಅದೆಷ್ಟೋ. ಆದರೆ ಕಣ್ಣಿಗೆ ಕಾಣದ ಪ್ರೀತಿ, ಪ್ರೇಮ, ಮಮತೆ, ವಿಶ್ವಾಸ ಮತ್ತು ನಂಬಿಕೆಗಳ ಮೇಲಲ್ಲವೇ ಈ ಜಗತ್ತು ಸಾಗುತ್ತಿರುವುದು? ಇದನ್ನು ಕಳೆದು ಉಳಿದದ್ದೆಲ್ಲ ವ್ಯಾಪಾರವಲ್ಲವೇ?

ಪ್ರೀತಿಯ ಸುಳಿಯಲ್ಲಿ ಸಿಲುಕಿ ನಲಿದವರೂ, ನರಳಿದವರೂ ಈ ಜಗತ್ತಿನಲ್ಲಿ ನಾವೇ ಮೊದಲೇನು? ಕೊನೆಯವರೂ ಆಗಲು ಸಾಧ್ಯವಿಲ್ಲ, ಈ ನಡುವೆ ನಾವು ಈ ಪ್ರೀತಿಯ ಆಯಾಮಕ್ಕೆ ನೀರೆರೆಯೋಣ. ಅದರಲ್ಲಿ ಕಳೆದು ಹೋಗೋಣ. ಅಂಗ-ಸಂಗಗಳ ಮಧುರ ಬಾಂಧವ್ಯಕ್ಕೂ ಪ್ರೀತಿಯ ಧಾರೆಯೆರೆಯೋಣ. ಈ ಪ್ರೇಮ ಪತ್ರದ ಪ್ರತಿ ಮಜಲುಗಳಲ್ಲಿ  ನಮ್ಮ ಹೆಸರುಗಳನ್ನು ಕೆತ್ತೋಣ. ಭಾವನೆಗಳಿಲ್ಲದೆ ಮಧುರ ಬಾಂಧವ್ಯಗಳ ಸೃಷ್ಟಿಯಾಗಲು ಸಾಧ್ಯವಿಲ್ಲ. ನನ್ನ ಲೋಕದಲ್ಲಿ ನಿನ್ನ ವಿಹಾರವೂ ನಡೆಯಲಿ. ಇದು ನಿಜ ಬದುಕಲ್ಲೂ ಸಾಕಾರವಾಗಲಿ.

– ನಿನ್ನ ನಲುಮೆಯ ಎಂದೆಂದಿಗೂ ನಿನ್ನವಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT