ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗದದ ದೋಣಿ ಹತ್ತಿ ಕಡಲ ದಾಟಹೊರಟವನ ಮೇಲೆ ಕ್ಷಮೆಯಿರಲಿ

Last Updated 8 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ದ್ವಿತೀಯ ಬಹುಮಾನ – ಸವಿರಾಜ್ ಎಸ್ ಆನಂದೂರು, ಶಿವಮೊಗ್ಗ

ನನ್ನ ನೂರ್,
ನಿನ್ನ ಅಪ್ಪುಗೆಯ ಸಹಾರೆ ತಪ್ಪಿಹೋಗಿ ಇವತ್ತಿಗೆ ಸರಿಯಾಗಿ ಹನ್ನೊಂದು ದಿನ, ಹನ್ನೆರಡು ರಾತ್ರಿ ಮತ್ತು ಅಷ್ಟೇ ಸಾಯಂಕಾಲಗಳು. ಈ ಕ್ಷಣಕ್ಕೂ ಅಲ್ಲಿ ನನ್ನ ಪುಟ್ಟ ಜೋಪಡಿಯ ಪ್ರತಿ ಮಣ್ಣಿನ ಹರಳಿನಲ್ಲೂ ನಿನ್ನ ಮೈಯ ಘಮವಿದೆ. ಕೆನ್ನೆಗಳ ಮೇಲೆ ನೀನಿತ್ತಿರೋ ಮುತ್ತುಗಳ ತೇವ. ಎದೆಯ ಮೇಲೆ ಮಲಗಿರುವ ಮೂರು ತಿಂಗಳ ಮಗು ಮೊಹಬ್ಬತ್ ನಿನ್ನ ನೆನಪುಗಳಷ್ಟೇ ಅಗಾಧವಾದ ತನ್ನ ಕಣ್ಣುಗಳಿಂದ ಬಿಟ್ಟುಹೋದ ಅಮ್ಮೀಜಾನ್‌ಳನ್ನು ಹುಡುಕುತ್ತಿದೆ. ಮೊಹಬ್ಬತ್‌ಗೆ ನೀನು ಬೇಕು, ನನಗೆ ನಿನ್ನ ಮೊಹಬ್ಬತ್!

ಹಾಗೊಂದು ಮುಂಜಾವು ನೀ ನನಗೆ ಕಾಣದೆ ಹೋಗಿದ್ದರೆ, ಅಲ್ಲಾಹ್ ನನ್ನ ಅದೃಷ್ಟಹೀನ ಅಂಗೈನ ಮೇಲೆ ಅದೊಂದು ಬೆಳ್ಳಿಯ ರೇಖೆ ಗೀಚದೆ ಹೋಗಿದ್ದರೆ, ಈ ಫಕೀರನ ಬದುಕು ಎಷ್ಟೊಂದು ಖಾಲಿ ಖಾಲಿಯಾಗಿರುತ್ತಿತ್ತು.

ನೀ ಬರುವ ಮುನ್ನ ಅಲ್ಲಿ ಪೇಷಾವರ್ ನಗರಿಗೆ ಆತ್ಮವೇ ಇರಲಿಲ್ಲ. ನೀ ಬಂದ ಮೇಲೆಯೆ ಅಲ್ಲವೇ ಮೇರಿ ಜಾನ್, ಮೈ ತೋಯುವಷ್ಟು ಬೆಳದಿಂಗಳು ಸುರಿದಿದ್ದು, ಮನಸ್ಸು ಹೂವಾಗುವಷ್ಟು ಮಳೆ ಬಿದ್ದಿದ್ದು ಮತ್ತು ನಿನ್ನ ಸ್ಪರ್ಶದಷ್ಟೇ ಹಿತವಾದ ಬಿಸಿಲು ಚೆಲ್ಲಿದ್ದು!

ನಿನ್ನನ್ನು ಮೊದಲ ಸಲ ನೋಡಿದ ಮುಂಜಾವು ಇನ್ನೂ ಸ್ಪಷ್ಟವಾಗಿ ನೆನಪಿದೆ. ಪೇಷಾವರದ ಗಡಿ ಕಾಯುವ ಸಿಪಾಯಿಯಾಗಿದ್ದ ನನ್ನನ್ನು ಮನ್‍ಸುಬಹ್‍ದಾರ್ ದಿಲ್‍ಷಾದ್‌ಖಾನ್‌ರ ಮಹಲಿನ ಪಹರೆಗೆ ನೇಮಿಸಲಾಗಿತ್ತು. ಮುಂಜಾವು ಖಾವಂದರು ಮರ್ದಾನಾದ ಹಜಾರದಲ್ಲಿ ಹುಕುಮು ನೀಡುತ್ತಿದ್ದಾಗ, ಅವರ ಬಲಭಾಗದ ಮಹಡಿಯ ಮೇಲಿನ ಜನಾನದ ಕಿಟಕಿಯ ಸರಳುಗಳ ಹಿಂದೆ ಅರ್ಧ ನಕಾಬು ಜಾರಿದ ಕಣ್ಣುಗಳೆರಡು ನನ್ನನ್ನೇ ದಿಟ್ಟಿಸುತ್ತಿದ್ದವು.

ತಿಳಿಜೇನು ಬಣ್ಣದ ಕಣ್ಣಗೊಂಬೆಗಳ ಸುತ್ತ ಮೊಲದ ಬಿಳುಪು, ಸಾವಿರ ರಂಜಾನ್ ಚಂದ್ರರ ಹೊಳಪು... ನಾನೆಂಥ ಹುಚ್ಚ! ಇದೆಂತಹ ದಿವಾನಗಿ ನಂದು ನೀನೇ ಹೇಳು? ಜಗತ್ತಿನ ಹಕ್ಕಿಗಳ ಪುಚ್ಛಗಳನೆಲ್ಲಾ ಹೆಕ್ಕಿ ತಂದು ಮಸಿಯಲ್ಲಿ ಅದ್ದಿ ಬರೆದರೂ, ನಿನ್ನ ಕಣ್ಣುಗಳ ಬಗ್ಗೆ ಬರೆದು ಮುಗಿಸಲಾದೀತೆ ಜಾನಮ್? ಅವತ್ತೇ ಈ ಖಾಲಿ ಎದೆಯ ಮೇಲೆ ನೀನು ಮೊಹಬ್ಬತ್ ಎಂಬ ಭಿತ್ತಿಪತ್ರ ಅಂಟಿಸಿ ಹೋಗಿದ್ದೆ. ಅದು ಸನ್ 1803ನೇ ಇಸವಿ, ಪವಿತ್ರ ರಂಜಾನ್ ಮಾಸದ ಹದಿಮೂರನೆ ದಿನ!

ನಂತರ ನೀನು ನಿನ್ನ ನೌಕರಾನಿಯೊಂದಿಗೆ ‘ಅಜ಼ೀಮ್ ಷಾ’ ದರ್ಗಾಕ್ಕೆ ಬಂದಾಗಲೆಲ್ಲಾ, ನಿಮ್ಮ ಅಬ್ಬಾಜಾನ್ ನಿನ್ನ ರಕ್ಷಣೆಗೆ ನನ್ನನ್ನೇ ಕಳಿಸುತ್ತಿದ್ದರು. ದರ್ಗಾದ ಹೊರಗೆ ನೀನು ಡೋಲಿಯಿಂದ ಇಳಿದ ಕ್ಷಣ, ನಿನ್ನ ಪರಿಮಳವನ್ನು ಹುಡುಕಿ ನನ್ನ ಉಸಿರು ಬಳಲುತ್ತಿತ್ತು. ವಾಪಸು ಮಹಲಿಗೆ ಬರುವ ದಾರಿಯಲ್ಲಿ ಡೋಲಿ ಹೊರುವವನನ್ನು ಪಕ್ಕಕ್ಕೆ ಸರಿಸಿ, ತುಸು ದೂರ ನಾನು ಡೋಲಿಗೆ ಹೆಗಲು ಕೊಡುತ್ತಿದ್ದೆ. ಅಷ್ಟು ಮಾತ್ರದ ಅದೃಷ್ಟ ಕರುಣಿಸಿದ್ದಕ್ಕಾಗಿ ನಾನು ಖುದಾನ ಸನ್ನಿಧಿಯಲ್ಲಿ ಸಾವಿರ ಪ್ರಣಾಮಗಳನ್ನು ಸಲ್ಲಿಸುತ್ತಿದ್ದೆ.

ನನ್ನ ಜನ್ಮಗಳ ದುವಾಗಳಿಗೆ ಫಲ ಸಿಕ್ಕ ದಿನವನ್ನು ಹೇಗೆ ಮರೆಯಲಿ? ಮಹಲಿನಲ್ಲಿ ಬೆಳೆದ ಹುಡುಗಿ, ಅವತ್ತು ಸಂಜೆ ನನ್ನ ಜೋಪಡಿಯ ಕಪ್ಪು ನೆಲದ ಮೇಲೆ ಕಾಲಿಟ್ಟಿದ್ದೆ. ಪೇಷಾವರ ಮುಳುಗಿ ಹೋಗುವಷ್ಟು ಮಳೆ ಸುರಿಯುತ್ತಿತ್ತು ಆ ಹೊತ್ತಲ್ಲಿ. ಹಸಿ ನೆಲದ ಮೇಲೆ, ನಿನ್ನ ನೂಪುರದ ನಾದದಷ್ಟೇ ನಯವಾದ ಪಾದಗಳನ್ನು ಊರುತ್ತ ನಡೆದುಬಂದೆ. ಲಾಂದ್ರದ ಬೆಳಕು ನಿಧಾನವಾಗಿ ನಮ್ಮಿಬ್ಬರ ಮೇಲೆ ಚೆಲ್ಲಿತು. ಆಗ ಸರಿಯಿತು ನಕಾಬು! ಸುಭನಲ್ಲಾಹ್!! ಅಲ್ಲಿಯವರೆಗೆ ನಾನು ನೋಡಿದ್ದ ಸೌಂದರ್ಯವೆಲ್ಲ ನಿನ್ನ ಪಾದದ ಕೆಳಗಿನ ದೂಳಲ್ಲದೆ ಇನ್ನೇನು? ಬೊಗಸೆಯ ತುಂಬಾ ಮಳೆನೀರು ಹಿಡಿದು, ಅದರಲ್ಲಿನ ನಿನ್ನ ಬಿಂಬವನ್ನು ಕಣ್ಣುಗಳೊಳಕ್ಕೆ ಬಸಿದುಕೊಳ್ಳುತ್ತಿದ್ದೆ, ನಿನ್ನ ಕಣ್ಣುಗಳಿಗೆ ಕಣ್ಣು ಸೇರಿಸುವಷ್ಟು ಧೈರ್ಯ ನಿಮ್ಮ ಅಬ್ಬಾಜಾನ್‌ರ ಕೆಳಗಿನ ಸಾಮಾನ್ಯ ಸಿಪಾಯಿಯಾದ ನನಗೆಲ್ಲಿಂದ ಬಂದೀತು? ನಿನ್ನ ದೇಹದ ಕಂಪನವೊಂದು ನಿನ್ನ ಕಿರುಬೆರಳಿನ ಮೂಲಕ ನನ್ನ ದೇಹದಲ್ಲಿ ಪ್ರವಹಿಸಿ ಎದೆಯಲ್ಲಿ ಝೇಂಕರಿಸಿತು. ಇಷ್ಟು ಕಾಲ ಹೊತ್ತಿದ್ದ ಮುತ್ತುಗಳ ಭಾರವನ್ನು ನಿನ್ನ ಕಣ್ಣ ಮೇಲಿಳಿಸಿ ತುಟಿ ನಿರಾಳವಾಯಿತು. ತುಸು ಹೊತ್ತಿನಲ್ಲಿ ನನ್ನ ಜೋಪಡಿ ಪರಾಗದ ಗಂಧದಿಂದ ತುಂಬಿಹೋಯಿತು!

ಅವತ್ತೇ ಕೊನೆ, ಆಮೇಲೆ ನಾನು ನಾನಾಗಿ ಉಳಿಯಲೇ ಇಲ್ಲ. ನಿನ್ನ ನೆನಪುಗಳ ಬೆಂಕಿಗೆ ನನ್ನ ಸಂಜೆಗಳು ಆಹುತಿಯಾದವು. ಕನಸಿನಲ್ಲಿ ನೀನು ಬರಬಹುದೆಂಬ ಅತಿ ಚಿಕ್ಕ ಆಸೆ ಹೊತ್ತು ನಿದ್ದೆಯೂ ಎಚ್ಚರವಾಗಿರುತ್ತಿತ್ತು. ಪ್ರೀತಿಯ ರಾವೀ ನದಿಯಲ್ಲಿ ನಿನ್ನ ಹೆಸರಿನ ಪ್ರಣತಿಗಳ ಮೆರವಣಿಗೆ ಹೊರಟಿತು. ನಂಗೆ ಇಷ್ಟು ಮಾತ್ರ ಅರ್ಥವಾಗಿ ಹೋಯಿತು, ನೀನು ಇಲ್ಲಿಯವಳಲ್ಲವೇ ಅಲ್ಲ. ಯಾವುದೋ ದೂರದ ನಕ್ಷತ್ರ ಲೋಕದಿಂದ, ನನ್ನ ವಿಷಾದಗಳ ವಿಷದ ಬಟ್ಟಲಿಗೆ, ಮುಹಬ್ಬತ್ ಎಂಬ ಮಧು ಸುರಿಯಲು ಬಂದ ಕಿನ್ನರಿ ನೀನು!

ಷಹಜ಼ಾದೇ ದಿಲ್‍ಷಾದ್‌ಖಾನ್ ನಿನ್ನ ನಿಕಾಹ್ ಕುರಿತು ಮಾತನಾಡಿದ ದಿನ, ನಿನ್ನ ಕಣ್ಣುಗಳು ಸಮುದ್ರವಾಗಿದ್ದವು. ಅವತ್ತು ನಮಗೆ ಪೇಷಾವರ್ ತೊರೆಯದೆ ಬೇರೆ ದಾರಿಯಾದರೂ ಎಲ್ಲಿತ್ತು? ಪೇಷಾವರ್‌ನಲ್ಲಿ ಮುಳುಗಿದ ಸೂರ್ಯ ಲಾಹೋರಿನಲ್ಲಿ ಉದಯಿಸಿದ್ದ. ಲಾಹೋರದ ಬೀದಿಗಳಲ್ಲಿ ನಿನ್ನ ಕೈ ಬೆರಳುಗಳನ್ನು ಹಿಡಿದು ನಡೆಯುತ್ತಿದ್ದರೆ, ಜನ್ನತ್ ಇದಕ್ಕಿಂತ ಅದ್ಭುತವಿರಲು ಸಾಧ್ಯವೆ ಎಂದು ನಾನು ಯೋಚಿಸುತ್ತಿದ್ದೆ. ಈಗ ನಮ್ಮಿಬ್ಬರ ಪ್ರೀತಿಯ ಕುರುಹಾಗಿ ನಮ್ಮ ಮಗುವಿತ್ತು. ಅದಕ್ಕೆ ‘ಮೊಹಬ್ಬತ್’ ಎಂಬ ಹೆಸರಿಟ್ಟ ದಿನ, ಕಲ್ಲುಸಕ್ಕರೆ ತಿಂದು ನಾವು ಮೂರೂ ಜೀವಗಳು ಸಂಭ್ರಮಿಸಿದ್ದೆವು.

ಸನ್ 1805ರ ಹೊಸ ವರ್ಷದ ಮೊದಲ ದಿನದ ಮುಂಜಾವು, ಪೇಷಾವರ್‌ನ ಸೈನಿಕರು ನಮ್ಮ ಜೋಪಡಿಯ ಬಾಗಿಲಿನಲ್ಲಿದ್ದರು. ನಿನ್ನನ್ನು ಮತ್ತೆ ಪೇಷಾವರಕ್ಕೆ ಎಳೆದೊಯ್ಯಲಾಯಿತು. ನಾನೀಗ ಲಾಹೋರದ ಜೈಲಿನ ಬಂಧಿ. ಷಹಜ಼ಾದೇ ನವಾಬರು ನನಗೆ ಮರಣಶಿಕ್ಷೆ ವಿಧಿಸಿದ್ದಾರೆ. ನಾಳೆ ಮುಂಜಾನೆ ನನ್ನ ಕುತ್ತಿಗೆಗೆ ಸಾವಿನ ಕುಣಿಕೆ ಬೀಳುತ್ತದೆ. ನನ್ನ ಜೊತೆ ಸಾವಿದೆ. ನಿನ್ನೊಂದಿಗೆ ನಿನ್ನ ಅಬ್ಬಾಜಾನ್, ನಿನ್ನ ಪೇಷಾವರ್ ನಗರಿ ಇದೆ. ಆದರೆ ಮೊಹಬ್ಬತ್? ಅಮ್ಮೀ, ಅಬ್ಬೂ ಇಲ್ಲದ ಮೊಹಬ್ಬತ್ ಇನ್ನು ಅನಾಥ! ಆದರೂ ಅಲ್ಲಾಹ್ ಎಷ್ಟೊಂದು ಕರುಣಾಮಯಿ ನೋಡು? ಸಾವಿರ ಜನ್ಮಗಳಿಗಾಗುವಷ್ಟು ನಿನ್ನ ಪ್ರೀತಿ ಕೊಟ್ಟು, ಬದಲಿಗೆ ಕೇವಲ ಸಾವೆಂಬ ಪುಟ್ಟ ಕಂದಾಯ ಕಟ್ಟಿಸಿಕೊಳ್ಳುತ್ತಿದ್ದಾನೆ. ನಿನ್ನ ಪ್ರೀತಿಗೆ ಋಣಿ ನಾನು. ನನ್ನ ಮೇಲೆ ಕ್ಷಮೆ ಇರಲಿ ನೂರ್. ಎಲ್ಲಾ ಸವಾಲುಗಳನ್ನು ಎದುರಿಸಿ, ನಮ್ಮ ಕನಸಿನ ಗಮ್ಯವನ್ನು ಸೇರಿಸುವ ಹಡಗು ನನ್ನ ಬಳಿ ಇರಲಿಲ್ಲ. ನನ್ನಂಥ ನಿಕೃಷ್ಟ ತೇಲಿಬಿಟ್ಟ ಕಾಗದದ ನೌಕೆ ಖುದಾನ ಕರುಣೆ ಇದ್ದಷ್ಟು ಹೊತ್ತು ಮಾತ್ರ ಮುಂದೆ ಸಾಗುತ್ತಿತ್ತು!..

05–02–1805  
ಅಲ್ಲಾಹ್ ಹಾಫೀಜ಼್! ಲಾಹೋರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT