ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವಾಗ್ ಸಿಕ್ತೀಯೆ? ಕಾಯ್ತಿರ್ತೀನಿ...!

Last Updated 8 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ತೃತೀಯ ಬಹುಮಾನ – ಸಾದೊಳಲು ಅನುಸತೀಶ್, ಮಂಡ್ಯ

ನೀನ್ ಬ್ಯಾರೆ ಮದ್ವ್ಯಾಗಿ ನನ್ನ ಬುಟ್ ಬುಟ್ ಹೋದಾಗ, ನಮ್ ಗದ್ದೇಲಿ ನೆಟ್ಟಿದ್ ತೆಂಗಿನ ಸಸಿ ಈಗ ಮರವಾಗದೆ. ಯಾಕೋ ಏನೋ ಆ ಮರ ನೋಡ್ದಾಗೆಲ್ಲಾ ಆಲೆಮನೇಲಿ ಕಬ್‌ನಾಲ್ಗೆ ನೊಣ ಮುತ್ತಕಂದಂಗೆ ನಿನ್ನ ನೆನಪು ಜುಯ್ಯೋ ಅಂತ ಮುತ್ಕತದೆ.

ಆವತ್ತು ನನ್ನ ಎದೇಲ್ ನೀನು, ಗದ್ದೆಗ್ ಕಬ್ಬುನ್ ಬಿತ್ತನೆ ನೆಟ್ಟಂಗೆ ಪ್ರೀತಿ ನೆಟ್ಟೆ. ಮೊಳಕೆ, ಪೈರು ಚನ್ನಾಗೇ ಕಡ್ದೋ. ನೋಡ್ ನೋಡ್ತಾ ಇದ್ದಂಗೆ ಕಬ್ಬು ಗಿಣ್ಣಿಕ್ಕಕೆ ಸುರುವಾಯ್ತು.

ಇವತ್ಗೂ ನೆನಪದೆ… ನಮ್ಮೂರಿಂದ ನಾನು ಬಸ್ಸತ್ತಕಂದ್ ಮಂಡೆದ್ ಕಾಲೇಜುಗ್ ಬತ್ತಿದ್ದೆ. ಅದ್ರ ಮುಂದಿನ್ ಸ್ಟಾಪಲ್ಲೇ ನೀನ್ ಹತ್ಕವೆ. ವತ್ತಾರೆ ಎಂಟುವರೆಗೆ ಬತ್ತಿದ್ದ ಕಂಡಾಕ್ಟ್ರು ರಾಜಣ್ಣನ್ ಬಸ್ಗೆ ಇಬ್ರೂ ಹತ್ಕತಿದ್ದೊ. ನೀನ್ ಬತ್ತೀಯೋ ಇಲ್ವೋ ಅಂತ ನನ್ನ ಕಣ್ ನಿನ್ ಹುಡುಕ್ತಿತ್ತು. ಬಸ್್ಗೆ ಹತ್ಕಂಡೇಟ್ಗೆ ನಾನೆಲ್ಲಿವ್ನಿ ಅಂತ ನಿನ್ ಕಣ್ ನನ್ನ ಹುಡ್ಕುವೋ. ಅಂಗೆ ನೋಡ್ತಿದ್ದಂಗೆ ಮಂಡ್ಯ ಬಂದುಬುಡುದು. ನೀನು ಹೆಣ್ಣೈಕ್ಳ ಕಾಲೇಜ್‌ಗೆ, ನಾನು ಗಂಡೈಕ್ಳು ಕಾಲೇಜ್‌ಗೆ ವೊಯ್ತಿದ್ದೊ. ನನ್ನ ಕಾಲೇಜು ಜಲ್ದಿ ಮುಗುದೋದ್ರುವೆ ನೀನ್ ಬರುಗಂಟ ನಾನು ಬಸ್ಸತ್ತಿರನಿಲ್ಲ.

ನಿನಗ್ ನೆನಪಿರಬೇಕು…
ನಾನು ಏನ್ ಅನ್ನಬಾರದಾ ಅಂದುಬುಟ್ಟಿ ಅಂತ ನೀನ್ ಮುನ್ಸಕಂದಿದ್ದೆ. ನೀನೆ ಅಲ್ವೇ... ನಿಮ್ಮೂರಿಂದ ನಮ್ಮೂರ್ ನಿಂಗೇಗೌಡನ್‌ಗೆ ಮದ್ಯಾಗವಳಲ್ಲಾ... ನಿನ್ ಪ್ರೆಂಡು ಕುಳ್ಳಿ ಕೈಲಿ ಒಂದ್ ಲೆಟ್ರು ಬರ್ದು ಕೊಟ್ಟಿದ್ದೆ. ನಾನ್ ಅದ್ರಲ್ ಏನೋ ಗನಂದಾರಿ ಆದೆ ಅಂತ ಅಂದ್ರೆ, ‘ನಿನ್ ಕಂಡ್ರೆ ನನಗ್ ಇಷ್ಟ’ ಅಂತಷ್ಟೇ ಇತ್ತು.

ನಾನೂ ನಿಂಗ್ ಅಷ್ಟೇ ಬರುದ್ ಕಳುಸ್ದೆ. ಇಂಗೇ ನಡಿತಾ ಇದ್ದಾಗ ಒಂದಿನ ಬೆಳದಿರೋ ಕಬ್ಬಲಿ ಒಂದ್ ಗಿಣ್ಣ್ ತಿನ್ನಾನ ಅಂತ... ‘ಒಂದ್ ಮುತ್ ಕೊಡು’ ಅಂದೆ. ಅದ್ಕೆ ನೀನು ‘ಮುರಿಮಾಡು ಹೊತ್ತಲ್ಲಿ ಕಬ್ಗೆ ಬೆಂಕಿರೋಗ ಬಂದಂಗೆ’ ನನ್ಜೊತೆ ಮಾತ್ಬುಟ್ಟೆ. ಸರ್‍್ಯಾಗಿ 18 ದಿಸ ಮಾತಾಡ್ನಿಲ್ಲ. ನಾನೋ ಆರಂಭ ಮಾಡ್ದೆ ಇರೋ ಕೂಳೆಗದ್ದೆ ಕಬ್ಬುನಂಗೆ ಗಡ್ಡಬುಟ್ಕಂದ್ಬತ್ತಿದ್ದೆ.

ಅದೇ ಟೈಂಗೆ ನಮ್ಮಪ್ಪ ‘ಆಲೆಮನೆ ಆಳು ಊರ್ಗೋಗವ್ರೆ. ಅಲ್ಲಿಗಂಟ ಕಾಲೇಜ್ಗೋಗೋದ್ ಬ್ಯಾಡ... ಆಲೆಮನೆ ಒಲೆಉರ್ಯಾಕು’ ಅಂದ. ಅವಾಗ ನಾನೂ ಮೂರ್ದಿನ ಕಾಲೇಜ್‌ಗೆ ಬರ್ನಿಲ್ಲ. ಮಾರ್ನೆದಿನ ಬಂದ್ರೆ ನೀನು, ‘ಒಂತಿಗ್ಳಿಂದ ನೀರ್ ಹಾಯ್ಸದೆ ಇರೋ ಕಬ್ಬ್ನ ಗದ್ಯಂಗೆ’ ನಿನ್ ಮೊಕ ನೋಡುಕಾಯ್ತಿರ್ನಿಲ್ಲ. ನೀನು ಬಸ್ಸಲ್ ನನ್ನ ನೋಡ್ದುದ್ ಮ್ಯಾಲೆ, ಎರಡ್ ಕಿವಿನೂ ಹಿಡ್ಕದ್ ತಪ್ಪಾಯ್ತು ಅಂತ ಸನ್ನೆ ಮಾಡ್ದೆ.

ಅವತ್ತೊಂದಿನಾ...
ಏನಾದ್ರು ಮಾಡಿ ನಿನ್ಗೆ ಎಂವಿಜೆ ಬೇಕ್ರೀಲ್ ತಿಂಡಿ ತಿನ್ಸಿ ಬಾದಾಮಿ ಹಾಲ್ ಕುಡಿಸ್ಬೇಕು ಅಂತ, ನಮ್ಮಪ್ಪನ್ತಾವ್ ಸುಳ್ಳೋ ಪಳ್ಳೋ ಹೇಳಿ ‘ಟೈಂಟೇಬಲ್ ಪೀಜ್ ಕೊಡಪ್ಪೊ, ಆಲ್ ಟಿಕೀಟ್ ಪೀಜ್ ಕೊಡಪ್ಪೊ’ ಅಂತ ಈಸ್ಗಂದಿದ್ ದುಡ್ಡಲ್ಲಿ ಬೇಕ್ರೀಗ್ ಕರ್ದೆ. ಯಾವತ್ತೂ ಅಷ್ಟ್ ಧೈರ್ಯ ಮಾಡ್ದೆದ್ದ ನೀನ್ ಬಂದೇಬುಟ್ಟೆ. ‘ಏನಾರು ತಿನ್ನು ಅಂದ್ರೆ, ಬಾದಾಮಿ ಹಾಲೇ ಸಾಕು’ ಅಂದೆ. ಅರ್ಧ ಹಾಲ್ ಕುಡಿತಿದ್ದೊಳ್... ‘ನಮ್ಮೂರ್ ಸಿದ್ರಾಮಣ್ಣ ಬತ್ತಾವ್ನೆ’ ಅಂತ ಬಿದ್ದಂಬಿಳಿಯ ವಾಟಕಿತ್ತೆ. ನಾನೂವೆ ಕುಡ್ದುದ್ ಅರ್ಧ ಹಾಲ ಅಲ್ಲೇಬುಟ್ಬಂದೆ.

ಈಗ್ಲೂ ಅತ್ತಾಗ್ ಹೋದ್ರೆ ‘ಸಿನಿಂದೆ ಕರನುಕ್ಕಂದ್ ಬಂದಂಗೆ’ ಗೆಪ್ತಿ ಆಯ್ತದೆ. ಅದ್ಕೆ ಅತ್ತಗೋಗುದೆ ಇಲ್ಲ. ಹೋದ್ರೂವೆ ಒಳಕಂತೂ ಬಿಲ್ಕುಲ್ ಹೋಗುದಿಲ್ಲ.
ಅದ್ ಸರಿ. ನಿನ್ ಮದುಗ್ ನನ್ಗೇಳ್ಲೇ ಇಲ್ಲ... ನಿನ್ನ ಮದ್ವ್ಯಾಗ್ಬೇಕು ಅಂತ ನಮ್ಮಪ್ಪನ್ಗೇಳ್ಬೇಕು ಅಂತನ್ನುಸ್ತು. ಈಗ್ ‘ಎರಡ್ಮೂರ್ದಿನ್ದಲ್ ಮುರಿ ಮಾಡ್ದು ಕಬ್ನಂಗಿದಯೆ ನಿನಗ್ಯಾಕ್ಲಾ ಮದ್ವೆ ಅಂತನೆ’ ಅಂತ ಕೇಳ್ನಿಲ್ಲ. ಆಮೇಲ್ ನಿನ್ ಪ್ರೆಂಡು ಕುಳ್ಳಿ ಹೇಳುದ್ಲು... ‘ಬೆಂಗ್ಳೂರ್ಗೆ ನಿನ್ ಮದ್ವೆ ಫಿಕ್ಸಾಗದೆ’ ಅಂತ. ನನ್ಗೋ... ‘ಕನ್ನಂಬಾಡಿ ಕಟ್ಟೆಲ್ ನೀರಿಲ್ದೆ ಬಯ್ಲಾದ್ ಬಯ್ಲಲುನ್ ಬೆಳೆಲ್ಲ ಒಣ್ಗೋದಂಗೆ... ಮರ್ಗಿಡ್ದ್ ಎಲೆಲ್ಲಾ ಉದ್ರೋಗಿ ಬೋಳ್ಬೋದಾಂಗೆ’ ಅನ್ಸ್್ಬುಡ್ತು.
‘ಆಮೇಲ್ ಕಬ್ಬುನ್ ಕೂಳೆ ಕಿತ್ತು ಬತ್ತ ನಾಟಿ ಮಾಡ್ದಂಗೆ’ ನಂಗೂ ನಮ್ಮಪ್ಪ ಒಂದೆಂಣ್ಣು ಹುಡುಕ್ದ. ಅದ್ ನಿನ್ಗೆ ಗೊತ್ತಿಲ್ಲ್ವೇನೋ...’ ಆರಂಬ ಮಾಡ್ಕಂದ್ ಆಲೆಮನೆ ಒಲೆ ಉರ್ಯಾಕಂದಿರೋನ್ಗೆ ಯಾರ್ ಹೆಣ್ಕೋಟ್ಟರು’ ಅಂತ ಕೊಟ್ಟಿರ್ನಿಲ್ಲ. ಹೆಂಗೋ ಆಯ್ತು ಅನ್ನು.

ಆಮೇಲ್ ನಿನ್ ಪ್ರೆಂಡ್ ಕುಳ್ಳೀನುವೆ, ನಮ್ಮನಿಯೋಳುವೆ ಪ್ರೆಂಡಾಗವ್ರೆ. ಇಬ್ರೂವೆ ಸ್ತ್ರೀಸಂಗಕ್ಕೆ ಲೀಡ್ರಾಗವ್ರೆ. ಯಾವತ್ತಾರ ಇಬ್ರೆ ಮಾತಾಡ್ತಿದ್ರೆ... ‘ಕಟಾವ್ಗ್ಬಂದಿರೋ ಕಬ್ಗೆ ಬೆಂಕಿಬಿದ್ದಂಗೆ’ ಏನಾರ ನಮ್ ವಿಷ್ಯ ಹೇಳ್ಬುಟ್ಟಳು ಅಂತ ನನ್ನೆದೆ ದಸಕ್ ಅಂತುದೆ. ಆದ್ರೂ ಅಂಗೆನೂ ಆಗಿಲ್ಲ.
ಈ ಪತ್ರ ಬರೀತಾ ಇರುದ್ ಎಲ್ಲಿ ಗೊತ್ತಾ... ಮೊದ್ಲೇಳೂದ್ನಲ್ಲಾ, ಅದೇ ತೆಂಗನ್ ಮರದಡಿಲಿ. ಮನೇಲ್ ಬರುದ್ರೆ ಮಕ್ಳೆಲ್ಲಾ ಓದ್ತಾವೆ ಅದುಕ್ಕೆ. ಅದ್ ಸರಿ...  ಬರ್ದು ಈ ಲೆಟ್ರ ಎಲ್ಗ್ ಕೊಡನೆ... ಅದ್ಕೂ ಮುಂಚೆ ನಿನ್ಗೇಳುದ್ರೆ ನೀನ್ಯಾಕ ಬರ್ದೆ ಅಂದಿಯೇನೋ?

ಫೆ.14ನೇ ತಾರೀಕು ಪ್ರೇಮಿಗಳ ದಿನ ಅಂತಲ್ಲಾ... ನಾವ್ ಪ್ರೀತುಸ್ತಿದ್ದಾಗ ಇವೆಲ್ಲಾ ಗೊತ್ತಿರ್ನಿಲ್ಲ. ಅಂಗೆ ನೆನಪಾಯ್ತು. ನಿನ್ ನೆನಪಲ್ ಬರೀತೀವ್ನಿ. ನನ್ಗೊತ್ತು. ಇದ್ನ ನಿನ್ಗೆ ಕೊಡುಕಾಗುದಿಲ್ಲ ಅಂತ. ಅಂಗಂತ ಇದ್ನ ಎತ್ತಿಟ್ಕಂದ್ ಅವಾಗವಾಗ್ ಓದೂಕಾಗುದಿಲ್ಲ. ಮತ್ತೆನ್ಮಾಡುದು... ‘ಇದ ಬರ್ದಮ್ಯಾಲೆ ನಾನೇ ಒಂದ್ಸತಿ ಓದ್ಕಂದು ಬಾಯೊಳಕ್ಕಾಕಂದ್ ಗಸಗಸ ಅಗ್ದು ನುಂಕಬುಡ್ತೀನಿ’.

ಕೊನೆ ಮಾತೇನಂದ್ರೆ... ‘ಕಬ್ಬುನ್ದಸಿ ಕಡ್ದಂಗೆ’ ನಿನ್ಡೊಡ್ಲಲ್ಲುಟ್ಟಿರೋ ನಿನ್ ಹೈಕ್ಳುಮಕ್ಳ ನೀ ಕರ್‍ಕಂದ್, ಬತ್ತದಾ ಪೈರ್‍ನಂಗಿರೋ ನನ್ ಹೈಕ್ಳ ನಾನ್ ಕರ್‍ಕಂದ್ ಬಂದು, ಮಂಡೇದ್ ಎಂವಿಜಿ ಬೇಕ್ರೀಲ್ ಒಂದೊಂದ್ ಲೋಟ ಬಾದಾಮಿ ಹಾಲ್ ಕುಡೀಬೇಕು ಅಂತಾಸೆ. ನಿನ್ ಮಕ್ಳ ನಾನು ನೇವರ್ಸಿ, ನನ್ ಮಕ್ಳ ನೀನ್ ಮುದ್ದುಸ್‌ವಾಗ ನಿನ್ನ ಕಣ್ಣಲ್ ಕಣ್ಣಿಟ್ ನೋಡ್ಬೇಕು ಅಂತನ್ಸುತ್ತೆ... ಯಾವಾಗ್ ಸಿಕ್ತೀಯೆ, ಕಾಯ್ತಿರ್‍್ತೀನಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT