ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಡದಲ್ಲಿನ ಗಿಡ ಜೋಪಾನ...

Last Updated 9 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಕೈತೋಟ ಎಂದಾಕ್ಷಣ ಒಂದಷ್ಟು ಜಾಗ, ಹತ್ತಾರು ಬಗೆಯ ಹೂ ಹಣ್ಣು, ಸೊಪ್ಪು ತರಕಾರಿ ಎಂಬ ಸಾಂಪ್ರದಾಯಿಕ ವ್ಯವಸ್ಥೆ ಕಣ್ಮುಂದೆ ಬರುತ್ತದೆ. ಆದರೆ ಅಪಾರ್ಟ್‌ಮೆಂಟ್ ಎಂಬ ಗೃಹಗುಚ್ಛದಲ್ಲಿ ಜೀವನ ನಡೆಸುವ ನಗರವಾಸಿಗಳಿಗೆ ಒಂದೆರಡು ಕುಂಡಗಳನ್ನು ಇಟ್ಟುಕೊಂಡು ಅವುಗಳನ್ನು ಜೋಪಾನ ಮಾಡುವುದೇ ಸಾಹಸ ಎನಿಸಿಬಿಡುತ್ತದೆ.

ಸ್ವಂತ ಮನೆ ಕಟ್ಟುವವರು ತಾರಸಿಗಳ ಮೌಲ್ಡಿಂಗ್ ನಿರ್ಮಾಣದ ಹಂತದಲ್ಲಿಯೇ ಕುಂಡಗಳನ್ನು ಜೋತು ಹಾಕಲು ಕಬ್ಬಿಣದ ಕೊಕ್ಕೆಗಳನ್ನು ಅಳವಡಿಸಬೇಕಾಗುತ್ತದೆ. ಈ ಹಂತದಲ್ಲಿ ಕೊಕ್ಕೆ ಅಳವಡಿಸಲು ಮರೆತರೆ ಅದಕ್ಕಾಗಿ ಪರ್ಯಾಯ ಮಾರ್ಗಗಳನ್ನು ಹುಡುಕಬೇಕಷ್ಟೇ. ಹಾಗೆ ಜೋತುಬಿಟ್ಟ ಕುಂಡಗಳಲ್ಲಿ ಗಿಡ ಬೆಳೆಸುವುದಾದರೆ ನಮ್ಮ ಭುಜದ ಮಟ್ಟಕ್ಕೆ ಬರುವಂತೆ ಕುಂಡಗಳನ್ನು ಇಳಿಬಿಡುವುದು ಸೂಕ್ತ. ನಮಗಿಂತ ಎತ್ತರದಲ್ಲಿ ಜೋತುಬಿಟ್ಟಲ್ಲಿ ಪ್ರತಿನಿತ್ಯ ನೀರುಣಿಸುವುದು ಹಾಗೂ ಕುಂಡದಲ್ಲಿನ ಗಿಡದ ಬುಡವನ್ನು ಕಾಲಕಾಲಕ್ಕೆ ಪರೀಕ್ಷಿಸಿ ಜೋಪಾನ ಮಾಡುವುದು, ಗೊಬ್ಬರ ಹಾಕುವುದು ಸವಾಲಾಗಬಹುದು. ಯಾಕೆಂದರೆ, ಸ್ಟೂಲ್ ಅಥವಾ ಕಿಟಕಿಗೆ ಹತ್ತಿ ಕುಂಡವನ್ನು ನಿರ್ವಹಣೆ ಮಾಡುವಾಗಿನ ಸುರಕ್ಷತೆ ಬಗ್ಗೆ ನೀವೇ ಊಹಿಸಿಕೊಳ್ಳಿ. ಹಾಗಾಗಿ ಕುಂಡಗಳು ನಮಗಿಂತ ಎತ್ತರದಲ್ಲಿರುವುದು ಅಷ್ಟು ಸೂಕ್ತವಲ್ಲ.

ಕುಂಡಗಳನ್ನು ಇಟ್ಟುಕೊಳ್ಳಲೆಂದೇ ಸ್ಟ್ಯಾಂಡ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಅವುಗಳನ್ನು ಬಳಸುವುದರಿಂದ ಒಂದೇ ಸ್ಥಳದಲ್ಲಿ ನಾಲ್ಕಾರು ಕುಂಡಗಳನ್ನು ಇರಿಸಿ ಸುಲಭವಾಗಿ ನಿರ್ವಹಣೆ ಮಾಡಬಹುದು. ಮನೆಯ ಹೊರಗೆ ಒಂದೇ ಮೂಲೆಯಲ್ಲಿ ಇಲ್ಲವೇ ಒಂದೊಂದು ಮೂಲೆಯಲ್ಲಿ ಇಂತಹ ಸ್ಟ್ಯಾಂಡ್ ಇಟ್ಟರೆ 10ಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಬಹುದು.

ಕೆಲವು ಕಡೆ ಮನೆ ಮಾಲೀಕರು ತುಳಸಿ ಗಿಡ ಬೆಳೆಸಲೂ ಅವಕಾಶ ಕೊಡುವುದಿಲ್ಲ. ಅವಕಾಶ ಸಿಕ್ಕಿದರೆ ತುಳಸಿ ಗಿಡವನ್ನು ಮಧ್ಯಮ ಗಾತ್ರದ ಕುಂಡದಲ್ಲಿ ಬೆಳೆಸುವುದು ಸೂಕ್ತ. ಮಾರುಕಟ್ಟೆಯಲ್ಲಿ ಸಿಗುವ ಬೃಂದಾವನ ಮಾದರಿಯ ತುಳಸಿಕಟ್ಟೆಗಳಲ್ಲಿ ಒಂದೆರಡು ಲೋಟದಷ್ಟೂ ನೀರು ಹಿಡಿಸುವುದಿಲ್ಲ. ಹೊಯ್ದ ಅಷ್ಟೂ ನೀರು ಚೆಲ್ಲಿ ವ್ಯರ್ಥವಾಗುತ್ತದೆ. ಹಾಗಾಗಿ ಒಂದರಿಂದ ಒಂದೂವರೆ ಅಡಿ ವ್ಯಾಸದ ಕುಂಡ ತೆಗೆದುಕೊಂಡರೆ ಗಿಡದಿಂದ ಕನಿಷ್ಠ ನಾಲ್ಕೈದು ಇಂಚುಗಳಷ್ಟಾದರೂ ಜಾಗ ಉಳಿಯುತ್ತದೆ. ಮಣ್ಣು, ನೀರು, ಗೊಬ್ಬರ ಹಾಕಲು ಸ್ಥಳಾವಕಾಶ ಸಿಗುತ್ತದೆ.

ಇದೇ ಉಪಾಯ ಇತರ ಗಿಡಗಳಿಗೂ ಅನ್ವಯವಾಗುತ್ತದೆನ್ನಿ. ಪಕ್ಕದ ಮನೆಯಲ್ಲಿ ಕಳೆದ ವಾರ ಮೂರು ಗುಲಾಬಿ ಮೊಗ್ಗುಗಳು ನಳನಳಿಸುತ್ತಿದ್ದುದನ್ನು ನೋಡಿ ಬೆರಗಾದೆ. ನಮ್ಮ ಮನೆಯಲ್ಲಿ ಒಂದು ತುಳಸಿ ಗಿಡವೂ ಸೊಂಪಾಗಿ ಬೆಳೆಸಲಾಗದೆ ಹೆಣಗಾಡುತ್ತಿರುವಾಗ ಅಲ್ಲಿ ಮೂರು ಗುಲಾಬಿ! ಅವರನ್ನೇ ವಿಚಾರಿಸಿದೆ. ಅತಿಯಾದ ಬಿಸಿಲಿನಿಂದ ನಿಮ್ಮ ಮನೆಯ ಗಿಡ ಕಂಗಾಲಾಗಿದೆ ಅಂದರು. ಎರಡೂ ಮನೆಗಳು ಪೂರ್ವದ್ವಾರಗಳೇ ಆದರೂ ನಮ್ಮ ಮನೆಯಲ್ಲಿ ಕುಂಡಗಳನ್ನಿಟ್ಟ ಜಾಗಕ್ಕೆ  ಬೆಳಗ್ಗಿನಿಂದ ಸಂಜೆವರೆಗೂ ನೇರವಾಗಿ ಬಿಸಿಲು ಬೀಳುತ್ತದೆ. ಬೆಳಿಗ್ಗೆ ಉಣಿಸಿದ ನೀರು ಹತ್ತು ಗಂಟೆಯೊಳಗೆ ಆರಿ ಕುಂಡ ಒಣಗುತ್ತದೆ.

ನಿಮಗೂ ಇಂತಹ ಸಮಸ್ಯೆ ಎದುರಾಗಿರಬಹುದು. ಅತಿಯಾದ ಬಿಸಿಲಿಗೆ ನಮ್ಮನ್ನು ನಾವು ಒಡ್ಡಿಕೊಂಡಾಗ ದಾಹವಾಗಿ, ಚರ್ಮ ಒಣಗಿ, ಕಳೆಗುಂದಿ ಬಣ್ಣ ಕಳೆದುಕೊಳ್ಳುವಂತೆ ಗಿಡಗಳೂ ಹೈರಾಣಾಗುತ್ತವೆ. ದಿನವಿಡೀ ಬೀಳುವ ನೇರ ಬಿಸಿಲನ್ನು ತಪ್ಪಿಸಲು ಕುಂಡದ ಸುತ್ತಮುತ್ತ ಬಟ್ಟೆ ಒಣಹಾಕಬಹುದು ಇಲ್ಲವೇ ತಡೆಗೋಡೆಯಂತೆ ಏನಾದರೂ ಹಾಳೆ ಅಳವಡಿಸಬಹುದು.

ಪಕ್ಕದ ಮನೆಯಲ್ಲಿ ಗುಲಾಬಿ ಮೊಗ್ಗುಗಳು ಮೂರನೇ ದಿನಕ್ಕೆ ಬಿರಿದು ನಗುತ್ತಿದ್ದವು. ಗೊಬ್ಬರ ಏನು ಹಾಕುತ್ತೀರಿ ಎಂದು ಕೇಳಿದೆ. ‘ರಸ್ತೆಯಲ್ಲಿ ಬಿದ್ದ ಹಸುವಿನ ಸಗಣಿಯನ್ನು ನೀರಿನಲ್ಲಿ ಕಲಸಿ ಹೊಯ್ಯುವುದು, ಅಡುಗೆ ಮನೆಯ ತ್ಯಾಜ್ಯವನ್ನು ಚಟ್ನಿ ಜಾರ್‌ನಲ್ಲಿ ರುಬ್ಬಿ ತೆಳುವಾಗಿ ನೀರಿನಲ್ಲಿ ಕಲಸಿ ಬುಡಕ್ಕೆ ಹೊಯ್ಯುವುದು ಬಿಟ್ಟರೆ ಇನ್ನೇನೂ ಇಲ್ಲ’ ಅಂದರು ಅಕ್ಷತಾ.

ಕುಂಡ ಕಿರಿದಾಗಿದ್ದರೆ ಹಸಿ ತ್ಯಾಜ್ಯದ ನೀರು ಗಿಡದ ಬುಡದಲ್ಲಿ ಮೆತ್ತಿಕೊಳ್ಳುತ್ತದೆ. ಸ್ಥಳಾವಕಾಶವಿದ್ದರೆ ಆ ನೀರು ಹೊಯ್ದ ಬಳಿಕ ಮೇಲಿನ ಮಣ್ಣನ್ನು ಸ್ವಲ್ಪ ಕೆದಕಿಬಿಡಬಹುದು. ಇರುವೆ ಬರದಂತೆ ಜಾಗ್ರತೆ ವಹಿಸಬೇಕು ಅಷ್ಟೇ ಎಂಬ ಸಲಹೆಯನ್ನೂ ಅವರು ಕೊಟ್ಟರು. ಕುಂಡಗಳಲ್ಲಿ ಸಸಿ ನೆಟ್ಟು ಬೆಳೆಸುವುದು ಅಭ್ಯಾಸ ಆಗುವವರೆಗೂ ಸವಾಲು ಎನಿಸಿಬಿಡುತ್ತದೆ. ತಾಳ್ಮೆ ಮತ್ತು ಬದ್ಧತೆಯಿಂದ ಕಾಳಜಿ ವಹಿಸಿದರೆ ಗಿಡಗಳು ನಮಗೆ ಒಳ್ಳೆಯ ಸಂಗಾತಿಗಳಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT