ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುಗ್ಧ ಹುಡುಗಿ ನಾನಲ್ಲ’

ಕಿರುತೆರೆ
Last Updated 10 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
* ನಟನೆಯ ನಂಟು ಬೆಸೆದಿದ್ದು ಹೇಗೆ?
ಬಾಲ್ಯದಲ್ಲಿ ಟಿ.ವಿ. ಪರದೆಯ ಮೇಲೆ ನಟಿಯರನ್ನು ಕಂಡಾಗ ನಾನು ಅವರಂತೆಯೇ ಆಗಬೇಕು ಎಂಬ ಆಸೆಯಾಗುತ್ತಿತ್ತು. ಆದರೆ ಅದನ್ನು  ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಮೊದಲಿನಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದಿದ್ದೆ. ಅಪ್ಪನ ಸ್ನೇಹಿತರೊಬ್ಬರು ನಿರ್ಮಾಪಕರು. ಅವರ ಸಹಾಯದಿಂದ ಸಿನಿಮಾದಲ್ಲಿ ನಟಿಸುವ ಅವಕಾಶ ದೊರಕಿತು. ನಂತರ ಕಿರುತೆರೆಗೆ ಅವಕಾಶ ಅರಸಿ ಬಂತು.
 
* ಮೊದಲ ಬಾರಿ ಕ್ಯಾಮೆರಾ ಎದುರಿಸುವಾಗ ತುಂಬಾ ಭಯವಾಗಿತ್ತಂತೆ? 
ನಾನು ನಟನೆಯ ತರಬೇತಿ ಪಡೆದಿಲ್ಲ. ಹಾಗಾಗಿ ಮೊದಲ ಬಾರಿಗೆ ಕ್ಯಾಮೆರಾ ಎದುರಿಸುವಾಗ ತುಂಬಾ ಕಷ್ಟವಾಯಿತು. ದೊಡ್ಡ ಸಂಭಾಷಣೆಯನ್ನೇ ಕೊಟ್ಟಿದ್ದರು. ಎದುರಿಗೆ ವ್ಯಕ್ತಿ ಇದ್ದಾರೆ ಎಂದು ಊಹಿಸಿಕೊಂಡು ನಟಿಸುವಂತೆ ತಿಳಿಸಿದ್ದರು. ನನಗೆ ಅದು ಕಷ್ಟವಾಗಿತ್ತು. ಭಯದಿಂದಲೇ ಕ್ಯಾಮೆರಾ ಎದುರಿಸಿದ್ದೆ. ಕ್ರಮೇಣ ಅಭ್ಯಾಸವಾಯಿತು.
 
* ಯಾವ ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದ್ದೀರಿ?
ಮೊದಲ ಬಾರಿಗೆ ‘ಸನಿಹ’ ಮತ್ತು ‘12 ಎಎಂ’ ಸಿನಿಮಾಗಳಲ್ಲಿ ನಟಿಸಿದ್ದೆ. ಆದಾದ ಬಳಿಕ ‘ಆಕಾಶದೀಪ’, ‘ಸಾಗುತ ದೂರ ದೂರ’ ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ಸದ್ಯ ‘ಅಮ್ಮ’ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದೇನೆ. 
 
* ಜನರು ನಿಮ್ಮ ಹೆಸರು ದಿವ್ಯಾ ಎನ್ನುವುದನ್ನು ಮರೆತು ದೀಪಾ ಎಂದೇ ಕರೆಯುತ್ತಾರಂತೆ?
ಹೌದು, ಆಕಾಶದೀಪದ ಧಾರಾವಾಹಿಯಲ್ಲಿ ದೀಪಾ ಪಾತ್ರಕ್ಕೆ ಬಣ್ಣ ಹಚ್ಚಿದ್ದೆ. ಧಾರಾವಾಹಿ ಮುಗಿದಿದ್ದರೂ, ಜನ ನನ್ನನ್ನು ದೀಪಾ ಎಂದೇ ಗುರುತಿಸುತ್ತಾರೆ. ನಾನೂ ಅಷ್ಟೆ, ಯಾರೇ ದೀಪಾ ಎಂದು ಕರೆದರೂ ಒಮ್ಮೆ ತಿರುಗಿ ನೋಡುತ್ತೇನೆ. ಅಷ್ಟರಮಟ್ಟಿಗೆ ಆ ಪಾತ್ರ ನನ್ನೊಳಗೆ ಬೆಸೆದುಕೊಂಡಿದೆ.  
 
* ನಟನೆಯ ಹೊರತಾಗಿ ಬೇರೆ ಹವ್ಯಾಸಗಳೇನು?
ಪುಸ್ತಕ ಓದುವುದೆಂದರೆ ತುಂಬಾ ಇಷ್ಟ. ಕಾದಂಬರಿಗಳನ್ನು ಓದುತ್ತೇನೆ. ನಟನೆಯಲ್ಲಿ ಪಕ್ವತೆ ಪಡೆಯುವ ಕಾರಣಕ್ಕೆ ಹೆಚ್ಚು ಟಿ.ವಿ. ನೋಡುತ್ತೇನೆ. ತುಂಬಾ ಬೇಸರವಾದಾಗ ಕಾರಿನಲ್ಲಿ ಒಂದು ಸುತ್ತು ಹಾಕಿಕೊಂಡು ಬರುತ್ತೇನೆ.  
 
* ಯಾವ ರೀತಿಯ ಪಾತ್ರಗಳಲ್ಲಿ ನಟಿಸುವ ಆಸೆ?
ಸವಾಲು ಎನ್ನಿಸುವಂತಹ ಪಾತ್ರಗಳಲ್ಲಿ ನಟಿಸುವ ಆಸೆಯಿದೆ. ‘ಗೆಜ್ಜೆಪೂಜೆ’ ಸಿನಿಮಾದಲ್ಲಿ ಕಲ್ಪನಾ ನಟಿಸಿದಂಥ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂಬುದು ನನ್ನ ಕನಸು. 
 
* ನಿಮ್ಮ ನೆಚ್ಚಿನ ಉಡುಪು ಯಾವುದು?
ಸೀರೆ ಎಂದರೆ ತುಂಬಾ ಇಷ್ಟ. ಆದರೆ ಹೆಚ್ಚು ತೊಡುವುದು ಜೀನ್ಸ್‌.
 
* ಮನೆಯವರ ಬೆಂಬಲ ಹೇಗಿದೆ?
ಸಾಮಾನ್ಯವಾಗಿ ಪೋಷಕರು ಮಕ್ಕಳಿಗೆ ಬೆಂಬಲ ನೀಡುತ್ತಾರೆ. ಆದರೆ ಮದುವೆ ಬಳಿಕ ಗಂಡನ ಮನೆಯವರು ನಟನೆಗೆ ಒಪ್ಪಿಗೆ ಸೂಚಿಸುವುದು ಕಡಿಮೆ. ಆದರೆ ನಾನು ಆ ವಿಷಯದಲ್ಲಿ ಅದೃಷ್ಟವಂತೆ. ಅಪ್ಪ, ಅಮ್ಮನಂತೆ ಪತಿಯೂ ಬೆಂಬಲ ನೀಡುತ್ತಿದ್ದಾರೆ. ಮದುವೆಗೆ ಮುಂಚೆಯೇ ‘ನನಗೆ ನಟನೆ ಇಷ್ಟ, ನೀವು ಅದಕ್ಕೆ ಅಡ್ಡಿ ಬರಬಾರದು’ ಎಂದು ಅವರಿಗೆ ತಿಳಿಸಿದ್ದೆ. ಅವರು ಒಪ್ಪಿಗೆ ಸೂಚಿಸಿದ್ದರು. ಇಲ್ಲಿಯವರೆಗೆ ಯಾವ ವಿಷಯಕ್ಕೂ ಅವರು ಅಡ್ಡಿಯಾಗಿಲ್ಲ.
 
* ಧಾರಾವಾಹಿಯಲ್ಲಿ ಸಿಕ್ಕಾಪಟ್ಟೆ ಒಳ್ಳೆಯತನ ತೋರಿಸುತ್ತೀರಿ. ನಿಜ ಜೀವನದಲ್ಲಿಯೂ ನೀವು ಅಷ್ಟೇ ಒಳ್ಳೆಯವರಾ?  
 ಧಾರಾವಾಹಿಯಲ್ಲಿ ತೋರಿಸುವಷ್ಟು ಮುಗ್ಧ ಹುಡುಗಿ ನಾನಲ್ಲ. ತಪ್ಪು, ಸರಿ ವಿಮರ್ಶೆ ಮಾಡದೆ ಎಲ್ಲವನ್ನೂ ಸಹಿಸಿಕೊಂಡು ಹೋಗಲ್ಲ. ನನ್ನ ತಪ್ಪಿಲ್ಲವೆಂದರೆ ವಾದ ಮಾಡುತ್ತೇನೆ.  ಸುಳ್ಳು ಹೇಳುವುದು ಕಡಿಮೆ. ಹೇಳಿದರೂ ಸಿಕ್ಕಿ ಹಾಕಿಕೊಳ್ಳುತ್ತೇನೆ.  ಮನೆಯವರ ಜೊತೆ ಸಿಕ್ಕಾಪಟ್ಟೆ ಮಾತಾಡುತ್ತೇನೆ. ಹೊರಗೆ ಕಡಿಮೆ ಮಾತನಾಡುತ್ತೇನೆ. 
 
* ಚಿತ್ರೀಕರಣ ಸ್ಥಳದಲ್ಲಿ  ಬಿದ್ದಿದ್ರಂತೆ?
 ಶೂಟಿಂಗ್‌ ಜಾಗಕ್ಕೆ ಹೋಗುವ ವೇಳೆಯಲ್ಲಿ ಬಿದ್ದಿದ್ದೆ. ಆ ಸಂದರ್ಭದಲ್ಲಿ ಎಲ್ಲಾ ನನ್ನನ್ನೇ ನೋಡುವಾಗ ಮುಜುಗರವಾಗಿತ್ತು. ಆದರೆ ಈಗ ನಗು ಬರುತ್ತದೆ.
 
* ಗ್ಲಾಮರಸ್‌ ಪಾತ್ರಗಳಲ್ಲಿ ನಟಿಸುವಿರಾ?
ನಟಿಯಾದವಳು ಪಾತ್ರಕ್ಕೆ ಅಗತ್ಯವಿರುವಂತೆ ಕಾಣಿಸಿಕೊಳ್ಳುವುದು ಮುಖ್ಯ. ಪಾತ್ರ ಬೇಡಿದಾಗ ಗ್ಲಾಮರಸ್‌ ಆಗುವೆ. 
 
* ಸಿನಿಮಾ ಮತ್ತು ಧಾರಾವಾಹಿ ಇವೆರಡರಲ್ಲಿ ನಿಮ್ಮ ಆಯ್ಕೆ?
ಕಲಾವಿದೆಗೆ ಜನ ಗುರುತಿಸುವುದು ಮುಖ್ಯ. ಹಾಗಾಗಿ ಇವೆರಡರ ನಡುವೆ ಯಾವ ಭೇದ ನನಗೆ ಕಾಣಿಸಿಲ್ಲ. ಧಾರಾವಾಹಿಗಳು ಇಂದು ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಪ್ರತಿದಿನ ಜನ ನಮ್ಮ ಮುಖವನ್ನು ನೋಡುವುದರಿಂದ ಅವರ ಮನಸ್ಸನ್ನು ಗೆಲ್ಲುವುದು ಸುಲಭ. ಒಳ್ಳೆಯ ಅವಕಾಶ ದೊರಕಿದರೆ ಸಿನಿಮಾದಲ್ಲಿಯೂ ನಟಿಸುತ್ತೇನೆ.
 
* ದೇಹದ ಸೌಂದರ್ಯ ಕಾಪಾಡಿಕೊಳ್ಳಲು ಹೇಗೆ ಕಸರತ್ತು ಮಾಡುತ್ತೀರಿ?
ಮದುವೆಗೆ ಮುಂಚೆ ಏನು ತಿಂದರೂ ದಪ್ಪಗಾಗುತ್ತಿರಲಿಲ್ಲ.  ಮಗುವಾದ ನಂತರ ಹೆಚ್ಚು ತಿಂದರೆ ದಪ್ಪಗಾಗುತ್ತೇನೆ ಎಂಬ ಕಾರಣಕ್ಕೆ ಅನ್ನವನ್ನು ಕಡಿಮೆ ತಿನ್ನುತ್ತೇನೆ. ಮನೆಯಲ್ಲಿಯೇ ಸ್ಕಿಪಿಂಗ್‌ ಆಡುತ್ತೇನೆ. ಚಿಕ್ಕಪುಟ್ಟ ವ್ಯಾಯಾಮ ಮಾಡುತ್ತೇನೆ. ಹಾಗಂತ ಬಾಯಿ ಕಟ್ಟುವುದಿಲ್ಲ. ನನಗೆ ಚಿಕನ್‌ ತುಂಬಾ ಇಷ್ಟ. ವಾರಕ್ಕೆ ಮೂರು ಬಾರಿ ಚಿಕನ್‌ ಬೇಕು.
 
**
ಪ್ರತಿ ಭಾರಿ ನನ್ನ ಪಾತ್ರವನ್ನು ನೋಡುವಾಗ ನಾನಿನ್ನೂ ನಟನೆಯಲ್ಲಿ ಪಳಗಬೇಕು ಎಂದೇ ಅನಿಸುತ್ತಿರುತ್ತದೆ. ನಟನೆಯಲ್ಲಿ ಮಾಗಲು ಉತ್ಸುಕಳಾಗಿರುತ್ತೇನೆ. 
–ದಿವ್ಯಾ, ನಟಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT