ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್‌ನಲ್ಲಿ ಜನಮರುಳು ನೀತಿಗೆ ಜಾಗವಿಲ್ಲ

ಪ್ರಬಲ ಪ್ರಜಾತಂತ್ರಗಳಲ್ಲಿ ಮುಖ್ಯವಾಹಿನಿ ರಾಜಕಾರಣದ ಬಗ್ಗೆ ಕುಂದುತ್ತಿರುವ ವಿಶ್ವಾಸ
Last Updated 10 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಟೋಕಿಯೊ: ಇವರನ್ನು ಜನಪ್ರಿಯತೆಯ ಹಿಂದೆ ಬಿದ್ದವರು ಅಥವಾ ವ್ಯವಸ್ಥೆಯ ವಿರೋಧಿಗಳು ಎನ್ನಿ. ಡೊನಾಲ್ಡ್ ಟ್ರಂಪ್, ಮರೀನ್ ಲಿ ಪೆನ್ ಅಥವಾ ನರೇಂದ್ರ ಮೋದಿ ಬಲಪಂಥೀಯರು. ಬರ್ನಿ ಸ್ಯಾಂಡರ್ಸ್, ಅಲೆಕ್ಸಿಸ್ ಸಿಪ್ರಸ್, ಜೆರೆಮಿ ಕಾರ್ಬಿನ್, ಪಾಬ್ಲೊ ಇಗ್ಲೆಸಿಯಾಸ್ ಎಡಪಂಥೀಯರು. ಆದರೆ ಜಗತ್ತಿನಾದ್ಯಂತ ಗಟ್ಟಿಯಾಗಿ ಸ್ಥಾಪಿತವಾಗಿರುವ ಪ್ರಜಾಪ್ರಭುತ್ವಗಳಲ್ಲಿ ಉನ್ನತ  ವರ್ಗದ ಜನರ ಬಗ್ಗೆ ಇರುವ ಅಸಮಾಧಾನ ಅಥವಾ ಭ್ರಮನಿರಸನವನ್ನು ಬಳಸಿಕೊಂಡು ರಾಜಕಾರಣಿಗಳು ಈಗ ಅಧಿಕಾರಕ್ಕೆ ಏರಿದ್ದಾರೆ.

ಆದರೆ ಜಪಾನ್‌ನಲ್ಲಿ ಹಾಗಲ್ಲ. ಪ್ರಧಾನಿ ಶಿಂಜೊ ಅಬೆ ವ್ಯವಸ್ಥೆಯ ಜತೆಗೇ ಸಾಗಿ ಬಂದವರು. ಅವರ ತಂದೆ ವಿದೇಶಾಂಗ ಸಚಿವರಾಗಿದ್ದವರು. ಅವರ ಅಜ್ಜಂದಿರು ಜಪಾನ್‌ನ ಪ್ರಧಾನ ಮಂತ್ರಿಗಳಾಗಿದ್ದರು. ಹಾಗಿದ್ದರೂ ಶಿಂಜೊ ಅಬೆ ಅವರ ಜನಪ್ರಿಯತೆ ನಿರಂತರವಾಗಿ ಶೇ 50ರ ಮೇಲೆಯೇ ಇದೆ. ಜಪಾನ್‌ನ ಮಾನದಂಡದಲ್ಲಿ ನೋಡುವುದಾದರೆ ಇದು ಅಸಾಧಾರಣವೇ ಆಗಿದೆ. ಅಬೆ ಅವರ ಮುಂದೆ ಈಗ ಅಂತಹ ಗಂಭೀರ ಸವಾಲುಗಳು ಯಾವುವೂ ಇಲ್ಲ.

ಪಶ್ಚಿಮದ ದೇಶಗಳು ಮತ್ತು ಇತರೆಡೆಗಳಲ್ಲಿ ಮುಖ್ಯವಾಹಿನಿಯ ರಾಜಕೀಯ ಮುಖಂಡರ ಮೇಲೆ ಜನರು ವಿಶ್ವಾಸ ಕಳೆದುಕೊಳ್ಳುವುದಕ್ಕೆ ಕಾರಣವೇನು ಮತ್ತು ಜಪಾನ್‌ನಲ್ಲಿ ಜನರು ಇನ್ನೂ ಯಾಕೆ ವಿಶ್ವಾಸ ಇರಿಸಿಕೊಂಡಿದ್ದಾರೆ?

ಎಡಪಂಥೀಯ ಜನಪ್ರಿಯತಾವಾದದ ಬಗ್ಗೆ ಜಪಾನ್‌ನ ಜನರಿಗೆ ಇರುವ ಅನುಭವ ಅತ್ಯಂತ ಸೀಮಿತವಾದುದು. ಎಡಪಂಥೀಯ ಜನಪ್ರಿಯತಾವಾದ ಇಲ್ಲಿ ದಯನೀಯ ವೈಫಲ್ಯ ಕಂಡಿದೆ ಎಂಬುದು ಅದಕ್ಕೆ ಇರುವ ಒಂದು ಕಾರಣ. 2009ರಲ್ಲಿ ಡೆಮಾಕ್ರಟಿಕ್ ಪಾರ್ಟಿ ಆಫ್ ಜಪಾನ್ ಗೆಲುವು ಸಾಧಿಸಿತು; ಸುಮಾರು ಅರ್ಧ ಶತಮಾನ ಕಾಲ ಬಹುತೇಕ ನಿರಂತರವಾಗಿ ಅಧಿಕಾರದಲ್ಲಿದ್ದ ಸಂಪ್ರದಾಯವಾದಿ ‘ಲಿಬರಲ್ ಡೆಮಾಕ್ರಟಿಕ್ ಪಕ್ಷ’ದ  (ಎಲ್‌ಡಿಪಿ) ಬಗ್ಗೆ ಜನರಲ್ಲಿ ಇದ್ದ ಭ್ರಮನಿರಸನ ಈ ಗೆಲುವಿಗೆ ಕಾರಣ.

ಆ ಕಾಲದಲ್ಲಿದ್ದ ಅಧಿಕಾರಶಾಹಿಯ ಬಗೆಗಿನ ಆಕ್ರೋಶ ಇದಕ್ಕೆ ಪೂರಕವಾಗಿ ಕೆಲಸ ಮಾಡಿತು.  ಆದರೆ ಡೆಮಾಕ್ರಟಿಕ್ ಪಾರ್ಟಿ ಆಫ್ ಜಪಾನ್  (ಡಿಪಿಜೆ) ನೀಡಿದ ಭರವಸೆಗಳಾದ ಸಾಮಾಜಿಕ ಭದ್ರತೆಗಾಗಿ ಹೆಚ್ಚು ಹಣ ನೀಡಿಕೆ, ಮಕ್ಕಳನ್ನು ಬೆಳೆಸುವ ಭತ್ಯೆ ಕಾರ್ಯಸಾಧ್ಯವಾದುದಾಗಿರಲಿಲ್ಲ. ಒಕಿನಾವಾದಲ್ಲಿದ್ದ ಅಮೆರಿಕದ ಮೆರೈನ್ ಕೋರ್ ಅನ್ನು (ನೌಕಾಪಡೆ ತುಕಡಿ) ಹೊರದಬ್ಬುವ ಪ್ರಸ್ತಾವದಲ್ಲಿಯೂ ಪಕ್ಷ ಯಶಸ್ಸು ಗಳಿಸಲಿಲ್ಲ.

ಇದು ಜನರ ಅಸಮಾಧಾನಕ್ಕೆ ಕಾರಣವಾಗುವುದರ ಜತೆಗೆ ಅಮೆರಿಕ ಸರ್ಕಾರದ ಸಿಟ್ಟಿಗೂ ಕಾರಣವಾಯಿತು. ಡೆಮಾಕ್ರಟಿಕ್ ಪಾರ್ಟಿ ಆಫ್ ಜಪಾನ್‌ನ ಈ ಎಲ್ಲ ವೈಫಲ್ಯಗಳ ಕಾರಣದಿಂದಾಗಿ 2012ರ ಚುನಾವಣೆಯಲ್ಲಿ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಗೆಲುವು ಪಡೆಯಿತು.

ಅಬೆ ಮತ್ತೆ ಪ್ರಧಾನಿಯಾದರು. 2006ರಲ್ಲಿ ಅವರು ಮೊದಲ ಬಾರಿಗೆ ಪ್ರಧಾನಿಯಾಗಿದ್ದರು. ಆಗಲೇ ಅವರಲ್ಲಿ ಬಲಪಂಥೀಯ ಜನಪ್ರಿಯತಾವಾದದ ಕುರುಹುಗಳು  ಗೋಚರಿಸಿದ್ದವು. ಇತ್ತೀಚಿನ ವರ್ಷಗಳಲ್ಲಿ ಇಂತಹ ಭಾವನೆಗಳು ಜಪಾನ್‌ನಲ್ಲಿ ಬೇರೂರುತ್ತಿವೆ. ಜೈಟೊಕುಕೈ ಎಂಬ ಸಂಘಟನೆಯೊಂದು 2006ರಲ್ಲಿ ಸ್ಥಾಪನೆಯಾಗಿತ್ತು. ಕೊರಿಯಾದ ವಲಸಿಗರಿಗೆ ಹಕ್ಕುಗಳನ್ನು ನೀಡುವುದನ್ನು ಈ ಸಂಘಟನೆ ಬಲವಾಗಿ ವಿರೋಧಿಸುತ್ತಿದೆ.

1999ರಿಂದ 2012ರವರೆಗೆ ಟೋಕಿಯೊ ಪ್ರಾಂತ್ಯದ ಗವರ್ನರ್ ಆಗಿದ್ದ ಶಿಂಟಾರೊ ಇಷಿಹರ ತೀವ್ರವಾದಿ ಚಿಂತನೆಗಳ ಮುಖಂಡ. ತಮ್ಮ ಅಧಿಕಾರಾವಧಿಯಲ್ಲಿ ಅವರು ಸೆಂಕಾಕು ದ್ವೀಪವನ್ನು ಖರೀದಿಸಲು ಯತ್ನಿಸಿದ್ದರು. ಈ ದ್ವೀಪ ತನ್ನದೆಂದು ಚೀನಾ ಹಕ್ಕು ಸಾಧಿಸುತ್ತಿದೆ. ಈ ದ್ವೀಪವನ್ನು ಚೀನಾ ಡಿಯಾಯು ಎಂಬ ಹೆಸರಿನಿಂದ ಕರೆಯುತ್ತಿದೆ. ಈ ದ್ವೀಪವನ್ನು ಖರೀದಿಸುವ ಶಿಂಟಾರೊ ಅವರ ಪ್ರಯತ್ನ ಜಪಾನ್‌ನಲ್ಲಿ ಅತಿ ರಾಷ್ಟ್ರೀಯತೆಯ ಚಿಂತನೆಗಳಿಗೆ ಪ್ರಚೋದನೆ ನೀಡಿತು.

ಆದರೆ ಇಂತಹ ತೀವ್ರವಾದಿ ಮನೋಭಾವವನ್ನು ನಿವಾರಿಸುವಲ್ಲಿ ಅಬೆ ಅವರು ಯಶಸ್ವಿಯಾಗಿದ್ದಾರೆ. ಕಲ್ಯಾಣ ರಾಜ್ಯದ ಚಿಂತನೆಯನ್ನು ರಕ್ಷಿಸಿಕೊಳ್ಳುತ್ತಲೇ ದೇಶಪ್ರೇಮದ ಸಂಕೇತಗಳನ್ನು ಮುನ್ನೆಲೆಗೆ ತರುವ ಮೂಲಕ ದೇಶವನ್ನು ಅವರು ಒಗ್ಗಟ್ಟಾಗಿ ಇಟ್ಟಿದ್ದಾರೆ. ವಿದೇಶಾಂಗ ವ್ಯವಹಾರಗಳಿಗೆ ಸಂಬಂಧಿಸಿ ಅವರು ರಾಷ್ಟ್ರೀಯವಾದವನ್ನು ರೂಢಿಸಿಕೊಂಡಿದ್ದಾರೆ. ಆದರೆ ಈ ರಾಷ್ಟ್ರೀಯವಾದದ ಜತೆಗೆ ಅವರು ವಾಸ್ತವಿಕವಾದ ವ್ಯಾವಹಾರಿಕತೆಯನ್ನು ಅನುಸರಿಸುತ್ತಾರೆ.

ಉದಾಹರಣೆಗೆ, ಕಳೆದ ವರ್ಷ ಅವರು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರ ಜತೆ ಪರ್ಲ್ ಹಾರ್ಬರ್‌ಗೆ ಭೇಟಿ ನೀಡಿದರು. 1930 ಮತ್ತು 1940ರ ದಶಕದಲ್ಲಿ ಜಪಾನ್‌ನ ಸೈನಿಕರಿಂದ ಲೈಂಗಿಕ ಶೋಷಣೆಗೆ ಒಳಗಾದ ದಕ್ಷಿಣ ಕೊರಿಯಾ ಮಹಿಳೆಯರಿಗೆ ಪರಿಹಾರ ನೀಡುವ ಐತಿಹಾಸಿಕ ಒಪ್ಪಂದಕ್ಕೆ 2015ರಲ್ಲಿ ಅವರು ಸಹಿ ಹಾಕಿದರು. ಅಬೆ ಅವರ ಸಾಂಕೇತಿಕ ನಿಲುವುಗಳ ಜತೆಗೆ ಮೂರು ಪ್ರಮುಖ ಅಂಶಗಳು ಆಕ್ರೋಶದ ಜನಪ್ರಿಯತೆಯ ಅಲೆಯಿಂದ ಜಪಾನ್ ದೇಶವನ್ನು ರಕ್ಷಿಸಿವೆ.

ಬ್ರಿಟನ್‌ನಲ್ಲಿ ಬ್ರೆಕ್ಸಿಟ್‌ ಪರವಾಗಿ (ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರ ಹೋಗುವುದಕ್ಕೆ ಸಂಬಂಧಿಸಿದ ಜನಮತಗಣನೆ) ಮತ್ತು ಅಮೆರಿಕದಲ್ಲಿ ಡೊನಾಲ್ಡ್‌ ಟ್ರಂಪ್‌ ಪರವಾಗಿ ಮತ ಹಾಕಿದವರು ಕಡಿಮೆ ವಿದ್ಯಾವಂತರು, ಮಧ್ಯ ವಯಸ್ಕರು ಅಥವಾ ಹಿರಿಯ ನಾಗರಿಕರು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವವರು.

ಜಪಾನ್‌ನಲ್ಲಿಯೂ ಹೆಚ್ಚು ರಾಜಕೀಯ ಅಧಿಕಾರ ಹೊಂದಿರುವ ಗುಂಪು ಇದು. ಜಪಾನ್‌ನ ಚುನಾವಣಾ ವ್ಯವಸ್ಥೆ ಹೇಗಿದೆಯೆಂದರೆ, ಗ್ರಾಮೀಣ ಪ್ರದೇಶದ ವ್ಯಕ್ತಿಯ ಒಂದು ಮತಕ್ಕೆ ನಗರ ಪ್ರದೇಶದ ವ್ಯಕ್ತಿಯ ಮತದ ಎರಡರಷ್ಟು ಮೌಲ್ಯ ಇದೆ. ಹಾಗಾಗಿ ಹತಾಶರಾದವರಿಗೆ ತಮ್ಮ ಬೇಡಿಕೆಗಳನ್ನು ಮಂಡಿಸುವುದಕ್ಕೆ ರಾಜಕೀಯ ವ್ಯವಸ್ಥೆಯಲ್ಲಿಯೇ ಅವಕಾಶ ಇದೆ.

ಲೆಹ್ಮನ್‌ ಬ್ರದರ್ಸ್‌ ಸಂಸ್ಥೆ 2008ರಲ್ಲಿ  ಕುಸಿದು ಬಿದ್ದಾಗ ಹಣದುಬ್ಬರ ಇಳಿತ ಅಮೆರಿಕ ಮತ್ತು ಯುರೋಪ್‌ಗೆ ದೊಡ್ಡ ಹೊಡೆತ ಕೊಟ್ಟಿತು. ತೀವ್ರವಾದ ಆರ್ಥಿಕ ಸಮಸ್ಯೆಗಳ ಜತೆಗೆ ಸಾಮಾಜಿಕ ತೊಂದರೆಗಳಿಗೂ ಕಾರಣವಾಯಿತು.

ಜಪಾನ್‌ನ ಆರ್ಥಿಕ ವ್ಯವಸ್ಥೆ ಅದಕ್ಕೂ ಬಹಳ ಹಿಂದೆ 1990ರ ದಶಕದ ಆರಂಭದಲ್ಲಿ ಕುಸಿಯಿತು. ಜಪಾನ್‌ ಸುದೀರ್ಘ ಕಾಲ ಆರ್ಥಿಕ ಹಿನ್ನಡೆ ಅನುಭವಿಸಿತು. ಆದರೆ ಇಲ್ಲಿ ದೊಡ್ಡ ಮಟ್ಟದ ಸಾಮಾಜಿಕ ಆಕ್ರೋಶ ಉಂಟಾಗಲಿಲ್ಲ. ‘ನಷ್ಟವಾಗಿ ಹೋದ ದಶಕಗಳು’ ಎಂದು ಹೇಳಲಾದ ಈ ಅವಧಿ ಹೆಚ್ಚು ಕಡಿಮೆ ಶಾಂತಿಯುತವಾಗಿಯೇ ಕಳೆದು ಹೋಯಿತು.

ಇನ್ನೊಂದು ಮುಖ್ಯ ವಿಚಾರವೆಂದರೆ  ಕೆಲವು ವಲಯಗಳಿಗೆ ಸಂಬಂಧಿಸಿ ಜಾಗತೀಕರಣವನ್ನು ಜಪಾನ್‌ ಸ್ವಲ್ಪ ದೂರವೇ ಇರಿಸಿತು. ಈ ವಲಯಗಳಲ್ಲಿ ಗಮನಾರ್ಹವಾದುದು ವಲಸೆ ಕ್ಷೇತ್ರ. 2015ರಲ್ಲಿ ಜಪಾನ್‌ ಸರ್ಕಾರವು ಹೊರಗಿನಿಂದ ಬಂದ 27 ಮಂದಿಗೆ ಮಾತ್ರ  ನಿರಾಶ್ರಿತ ಸ್ಥಾನದ ಮಾನ್ಯತೆ ನೀಡಿದೆ. ಆ ವರ್ಷ ಜಪಾನ್‌ನಲ್ಲಿದ್ದ ವಿದೇಶಿ ಸಂಜಾತ ಜನರ ಪ್ರಮಾಣ ಶೇ 1.5ರಷ್ಟು ಮಾತ್ರ. ದಕ್ಷಿಣ ಕೊರಿಯಾದಲ್ಲಿ ಈ ಪ್ರಮಾಣ ಶೇ 3.4ರಷ್ಟು ಇತ್ತು. ಅಮೆರಿಕದಲ್ಲಿ ಶೇ 13.3ರಷ್ಟು ಇತ್ತು.

ಜಾಗತೀಕರಣಕ್ಕೆ ಜಪಾನ್‌ನಲ್ಲಿ ದೊಡ್ಡ ಮಟ್ಟದ ಪ್ರತಿರೋಧ ವ್ಯಕ್ತವಾಗಲಿಲ್ಲ. ಜಾಗತೀಕರಣದ ಕೆಡುಕುಗಳನ್ನು ಸಮರ್ಪಕವಾಗಿ ನಿರ್ವಹಿಸಲು ಜಪಾನ್‌ಗೆ ಸಾಧ್ಯವಾದದ್ದು ಇದಕ್ಕೆ ಕಾರಣ.

ಜಾಗತಿಕ ನೆಲೆಯಲ್ಲಿ ತೀವ್ರವಾದ ಜನಪ್ರಿಯತಾವಾದದತ್ತ ವಾಲುವುದರಿಂದ, ಇಲ್ಲಿಯವರೆಗೂ ಜಪಾನನ್ನು ಕಾಪಾಡಿದ  ಅಂಶಗಳೇ ದೀರ್ಘಾವಧಿಯಲ್ಲಿ ದೇಶದ ಸ್ಥಿರತೆಗೆ ದೊಡ್ಡ ಬೆದರಿಕೆಯಾಗುವ ಅಪಾಯ ಇದೆ.

ಸಮಾನತೆ ಇಲ್ಲದ ಮತ ವ್ಯವಸ್ಥೆ ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನರ ನಡುವೆ ಗಂಭೀರ ರಾಜಕೀಯ ಅಸಮಾನತೆಯನ್ನು ಸೃಷ್ಟಿಸುತ್ತಿದೆ. ಇದು ತಲೆಮಾರುಗಳ ನಡುವಣ ಅಸಮಾನತೆಗೂ ಕಾರಣವಾಗುತ್ತಿದೆ. ಈ ವ್ಯವಸ್ಥೆ ಸಾಕಷ್ಟು ಓರೆಕೋರೆಗಳನ್ನು ಹೊಂದಿದೆ. ಇತ್ತೀಚೆಗೆ ನಡೆದ ಹಲವು ಚುನಾವಣೆಗಳು ಅಸಾಂವಿಧಾನಿಕವಾಗಿವೆ ಎಂದು ಸುಪ್ರೀಂ ಕೋರ್ಟ್‌ ಕೂಡ ಹೇಳಿದೆ.

ಸಾಮಾಜಿಕ ಭದ್ರತೆಗಾಗಿ ಭಾರಿ ಪ್ರಮಾಣದಲ್ಲಿ ಹಣ ವೆಚ್ಚ ಮಾಡುತ್ತಿರುವ ಕಾರಣ  ಜಪಾನ್‌ನ ಸರ್ಕಾರಿ ಸಾಲದ ಪ್ರಮಾಣ ಹೊರಲಾರದ ಹೊರೆಯಾಗಿ ಪರಿಣಮಿಸಿದೆ. ಇದನ್ನು ಸುಸ್ಥಿರ ಮಟ್ಟಕ್ಕೆ ಒಯ್ಯುವುದು ಸಾಧ್ಯವೇ ಇಲ್ಲ. ದೇಶದ ಹೊರಗಿನ ಪ್ರತಿಭಾವಂತರಿಗೆ ಜಪಾನ್‌ನಲ್ಲಿ ಪ್ರವೇಶವೇ ಇಲ್ಲ. ಹಾಗಾಗಿ ಇಲ್ಲಿ ವೈವಿಧ್ಯ ಮತ್ತು ಹೊಸ ಚಿಂತನೆಗಳ ಕೊರತೆ ಇದೆ. ಈ ಎರಡು ಅಂಶಗಳೇ ಕಾರ್ಯದಕ್ಷತೆ ಮತ್ತು ಆವಿಷ್ಕಾರದ ಚಾಲಕ ಶಕ್ತಿಗಳು.

ಈ ಎಲ್ಲವುಗಳ ಜತೆಗೆ ಅಬೆ ಅವರೂ ಒಂದು ಸಮಸ್ಯೆಯಂತೆಯೇ ಕಾಣಿಸುತ್ತಿದ್ದಾರೆ. 2012ರಲ್ಲಿ ಅವರು ಪ್ರಧಾನಿಯಾಗುವುದಕ್ಕೆ ಮೊದಲಿನ 20 ವರ್ಷಗಳ ಅವಧಿಯಲ್ಲಿ 14 ಮಂದಿ ಈ ಹುದ್ದೆಗೆ ಬಂದಿದ್ದಾರೆ. ರಾಜಕೀಯ ಸ್ಥಿರತೆ ತಂದುಕೊಟ್ಟ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅಬೆ ಅವರೇ ಈಗ ದೇಶವನ್ನು ಅಸ್ಥಿರತೆಯತ್ತ ತಳ್ಳುತ್ತಿದ್ದಾರೆ.

ಅಬೆ ಅವರು ತಮ್ಮ ಉತ್ತರಾಧಿಕಾರಿಯಾಗಿ ಯಾರನ್ನೂ ಬೆಳೆಸಿಲ್ಲ. ಅವರ ಪಕ್ಷದೊಳಗೆ ಅವರಿಗೆ ಪ್ರತಿಸ್ಪರ್ಧಿಯಾಗಿ ಯಾರೂ ಸೃಷ್ಟಿಯಾಗಿಲ್ಲ. ಅಷ್ಟೇ ಅಲ್ಲ, ವಿರೋಧ ಪಕ್ಷದಲ್ಲಿಯೂ ಅವರ ಮಟ್ಟಕ್ಕೆ ನಿಲ್ಲಬಲ್ಲ ದೊಡ್ಡ ನಾಯಕ ಇಲ್ಲ.

ಜಪಾನ್‌ನ ರಾಜಕಾರಣ ಒಬ್ಬ ವ್ಯಕ್ತಿಯ ಸುತ್ತ ಕೇಂದ್ರೀಕೃತವಾಗಿದೆ. ಒಬ್ಬ ವ್ಯಕ್ತಿಯ ಮೇಲೆ ಈ ರೀತಿಯ ಅತಿಯಾದ ಅವಲಂಬನೆ ಕ್ರಮೇಣ ಅಷ್ಟೊಂದು ಹಿತಕರವಲ್ಲದ ಬೆಳವಣಿಗೆಗಳಿಗೆ ಕಾರಣವಾಗಬಹುದು.
ಲೇಖಕ ರಿಬಿಲ್ಡ್‌ ಜಪಾನ್‌ ಇನಿಷಿಯೇಟಿವ್‌ ಫೌಂಡೇಶನ್‌ ಎಂಬ ಟೋಕಿಯೊದ ಚಿಂತಕರ ಗುಂಪಿನ ಅಧ್ಯಕ್ಷ
ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT