ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಳೆತನಕ್ಕೆ ಅಡ್ಡಿಯಾಗಲಿಲ್ಲ

Last Updated 10 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಬುರ್ಖಾ... ಕೇಸರಿ ಶಾಲು... ಎಂದು ಇತ್ತೀಚಿನ ದಿನಗಳಲ್ಲಿ ಗಲಾಟೆ ನಡೆಯುತ್ತಾ ಪೊಲೀಸರ ಸುಪರ್ದಿಯಲ್ಲಿ ಉಸಿರುಗಟ್ಟುತ್ತಿರುವ ಸಹ್ಯಾದ್ರಿ ಕಾಲೇಜಿನಲ್ಲಿ ನಾನು ಬಿ.ಎ ಓದುತ್ತಿರಬೇಕಾದರೆ, ನನಗಿದ್ದ ಇಬ್ಬರು ಜೀವದ ಗೆಳತಿಯರೆಂದರೆ ಮಮ್ತಾಜ್ ಮತ್ತು ಯಾಸ್ಮೀನ್...

ಪದವಿಯ ಮೊದಲ ವರ್ಷ ಅವರಿಬ್ಬರಿಗೂ ಬುರ್ಖಾದ ಹಂಗಿರಲಿಲ್ಲ. ಎರಡನೇ ವರ್ಷದಿಂದ ಬುರ್ಖಾ ಹಾಕಲೇಬೇಕಾದ ಅನಿವಾರ್ಯ ಉದ್ಭವಿಸಿತು. ‘ನೀವು ಬುರ್ಖಾ ಹಾಕಿಕೊಂಡು ಹೋಗದಿದ್ದರೆ ಕ್ಲಾಸಿಗೆ ಹೋಗುವುದು ಬೇಡ’ ಎಂದು ಅವರ ಮನೆಯಲ್ಲಿ ಫರ್ಮಾನಾಯಿತು (ಇಂಥ ಫರ್ಮಾನುಗಳು ಹೆಣ್ಣು ಮಕ್ಕಳಿಗೆ ಬೇಗ ಅರ್ಥವಾಗುತ್ತವೆ.

ಏಕೆಂದರೆ ಬಳೆ ಹಾಕ್ಕೊ, ಕುಂಕುಮ ಇಟ್ಕೊ, ಕೂದಲು ಬಿಟ್ಕೊಂಡು ಹೊರಗೆ ಹೋಗ್ಬೇಡ... ಎನ್ನುವುದನ್ನೆಲ್ಲ ಕೇಳುತ್ತಲೇ ಬೆಳೆದವರು ನಾವಲ್ಲವೇ?) ಆದ್ದರಿಂದ ನಾವು ಉಳಿದ ಹುಡುಗಿಯರು ಅವರ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡು, ಅವರು ಬುರ್ಖಾದ ಬಗ್ಗೆ ಗೊಣಗಿದಾಗ ನಾವೇ ಹೇಳ್ತಿದ್ವಿ... ‘ನೀವು  ನಿಮ್ಮ ಮುಂದಿನ ತಲೆಮಾರಿಗೆ ಇದನ್ನು ಹೊರೆಸಬೇಡಿ.

ಈಗ ಇದನ್ನು ನೀವು ಹಾಕಿಕೊಂಡು ಬನ್ನಿ. ಏಕೆಂದರೆ ಹಾಕಿಕೊಂಡು ಬರದೇ ಇದ್ದರೆ ನೀವು ಕಾಲೇಜಿಗೆ ಬರೋಕೆ ಸಾಧ್ಯವಿಲ್ಲ. ನಿಮ್ಮನ್ನು ಬಿಟ್ಟಿರೋಕೆ ನಮಗೆ ಸಾಧ್ಯವಿಲ್ಲ...’ ಜೊತೆಗೆ ನಾವು ಹೇಳ್ತಿದ್ವಿ ‘ನಮ್ಮ ಮುಂದಿನ ಪೀಳಿಗೆಗೆ ನಾವು ಕೂಡ ಧರ್ಮ, ಸಂಸ್ಕೃತಿಯ ಹೆಸರಿನಲ್ಲಿ ವೇಷಭೂಷಣಗಳನ್ನ ಖಂಡಿತಾ ಅವರ ಮೇಲೆ  ಹೊರೆಸುವುದಿಲ್ಲ...’

ಇದು ಕೇವಲ ಹದಿನೈದು ವರ್ಷಗಳ ಹಿಂದೆ, ಇದೇ ಸಹ್ಯಾದ್ರಿ ಕಾಲೇಜಿನಲ್ಲಿ ಓದುತ್ತಾ ಇದ್ದಾಗ ನಮ್ಮ ಬಿಡುವಿನ ವೇಳೆಯಲ್ಲಿ ದಿನನಿತ್ಯ ಆಡುತ್ತಿದ್ದ ಮಾತುಕತೆಗಳಾಗಿದ್ದವು. ಮಮ್ತಾಜ್ ಮತ್ತು ಯಾಸ್ಮೀನ್‌ಗೆ ಬುರ್ಖಾ ಕೆಲವೊಮ್ಮೆ ಹೊರೆ ಅನಿಸುತ್ತಿತ್ತು. ಆದರೆ ನಮಗೆ ಅವರ ಅನಿವಾರ್ಯದ ಅರಿವಾಗಿತ್ತು. ಯಾಕೆಂದರೆ ಅವರಂತೆಯೇ ನಮ್ಮ ಅನಿವಾರ್ಯಗಳೂ ಹಲವಿದ್ದವು. ಆದ್ದರಿಂದ ಬುರ್ಖಾ ನಮ್ಮಗಳ ಗೆಳೆತನಕ್ಕೆ ಎಲ್ಲಿಯೂ ಅಡ್ಡಿ ಮಾಡಲಿಲ್ಲ.

ನಾವು ನಮ್ಮ ವೇಷಭೂಷಣ ನಮ್ಮ ಆಯ್ಕೆ ಮತ್ತು ಇಷ್ಟ ಆಗುವ ದಿನ ಬಂದೇ ಬರುತ್ತದೆ ಎಂಬ ನಾಳಿನ ಕನಸನ್ನು ಒಟ್ಟಿಗೇ ಕಾಣುತ್ತಿದ್ದೆವು. ಇವತ್ತಿಗೂ ನಮ್ಮ ಗೆಳೆತನ ಮುಕ್ಕಾಗಿಲ್ಲ. ಆದರೆ ಇದೇ ಸಹ್ಯಾದ್ರಿ ಕಾಲೇಜಿನ ಹುಡುಗಿಯರು ‘ಬುರ್ಖಾ ಹಾಕಿಕೊಂಡವಳು ನನ್ನ ಪಕ್ಕ ಕೂರುವುದು ಬೇಡ’ ಎಂದು ಪ್ರತಿಭಟಿಸುತ್ತಿದ್ದಾರಂತೆ.  ಹೆಣ್ಣು ಮಕ್ಕಳೇ ಹೀಗೆ ಹೆಣ್ಣಿನ ಬಂಧನ ಮತ್ತು ಅನಿವಾರ್ಯವನ್ನು ಅರ್ಥ ಮಾಡಿಕೊಳ್ಳದೆ ಅಸ್ಪೃಶ್ಯತೆಯ ಹರಿಕಾರರಾದರೆ ಅದಕ್ಕಿಂತ ದುರಂತ ಮತ್ತೊಂದಿಲ್ಲ.
ಅಕ್ಷತಾ ಹುಂಚದಕಟ್ಟೆ
ಕವಯಿತ್ರಿ

*

ಕೇಸರಿ ಶಾಲು: ತಪ್ಪೇನು?
ವಿದ್ಯಾರ್ಥಿಗಳು ಒಂದೋ ಶಿಕ್ಷಣ ಸಂಸ್ಥೆ ಜಾರಿಗೆ ತರುವ ಸಮವಸ್ತ್ರವನ್ನು ಅಳವಡಿಸಿಕೊಳ್ಳಬೇಕು, ಇಲ್ಲವಾದರೆ ಎಲ್ಲ ಸಮುದಾಯದವರೂ ಅವರವರ ಸಾಂಪ್ರದಾಯಿಕ ವಸ್ತ್ರ ಧರಿಸಿ ಬರಲು ಕಾಲೇಜುಗಳು ಅವಕಾಶ ಮಾಡಿಕೊಡಬೇಕು.

ಅದು ಬಿಟ್ಟು, ಯಾವುದೋ ಒಂದು ವರ್ಗವನ್ನು ಓಲೈಸುವುದಕ್ಕೆ ಕೇಸರಿ ಶಾಲು ಧರಿಸಿಕೊಂಡು ಬರುವ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ನೋಡುವುದು ಸರಿಯಲ್ಲ. ಬುರ್ಖಾ ಇರುವುದಾದರೆ ಶಾಲೂ ಇರಲಿ. ಅದರಲ್ಲಿ ತಪ್ಪೇನು? ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳುವುದು ಆತಂಕಕಾರಿ ಬೆಳವಣಿಗೆ.
-ಭವಾನಿ ರಾವ್‌ ಮೋರೆ, ಉಪಾಧ್ಯಕ್ಷ,
ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT