ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್‌ ಅನಿವಾರ್ಯ ಎನ್ನುವುದು ಮೂರ್ಖತನ

ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ನ್ಯಾಯಮೂರ್ತಿ ಎ.ಜೆ. ಸದಾಶಿವ ಅಭಿಮತ
Last Updated 11 ಫೆಬ್ರುವರಿ 2017, 6:13 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ‘ಜ್ಞಾನ ಮತ್ತು ಉದ್ಯೋಗಕ್ಕೆ ಇಂಗ್ಲಿಷ್‌ ಕಲಿಕೆ ಅನಿವಾರ್ಯ ಎನ್ನುವುದು ಮೂರ್ಖ­ತನದ ನಿರ್ಧಾರ’ ಎಂದು 10ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ, ನ್ಯಾಯಮೂರ್ತಿ ಎ.ಜೆ. ಸದಾಶಿವ ಹೇಳಿದರು.

ಪಟ್ಟಣದ ಟಿಎಪಿಸಿಎಂಎಸ್‌ ಭವನದ ನಿಘಂಟು ಬ್ರಹ್ಮ ಜಿ. ವೆಂಕಟ­ಸುಬ್ಬಯ್ಯ ವೇದಿಕೆಯಲ್ಲಿ ಶುಕ್ರವಾರ ನಡೆದ 10ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.

ಪ್ರತಿ ಹಳ್ಳಿಯಲ್ಲೂ ಇಂಗ್ಲಿಷ್‌ ಶಾಲೆಗಳು ನಾಯಿಕೊಡೆಗಳಂತೆ ಹುಟ್ಟಿ­ಕೊ­ಳ್ಳುತ್ತಿವೆ. ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವುದು ಅನಿವಾರ್ಯ ಎಂಬ ಭ್ರಮೆ ಪೋಷಕರಲ್ಲಿದೆ. ಉತ್ತಮ ಜೀವನಕ್ಕೆ ಇಂಗ್ಲಿಷ್‌ ಕಲಿಕೆಯೇ ರಹದಾರಿ ಎನ್ನುವುದು ಸರಿಯಲ್ಲ. ಇದರಿಂದ ಬೌದ್ಧಿಕ ದಾರಿದ್ರ್ಯ ಎದುರಾಗುವ ಅಪಾಯವಿದೆ. ಜ್ಞಾನಾರ್ಜನೆಗೆ ಎಷ್ಟು ಭಾಷೆಗಳನ್ನಾದರೂ ಕಲಿಯಲಿ. ಆದರೆ, ಶಿಕ್ಷಣ ಮಾಧ್ಯಮ ಪ್ರಾದೇಶಿಕ ಭಾಷೆಯಲ್ಲಿರಬೇಕು ಎಂದು ಅವರು ಪ್ರತಿಪಾದಿಸಿದರು.

ಭಾಷೆ ಎಂಬುದು ಭಾವನೆಗಳ ಮುಖ್ಯ ವಾಹಕ. ಅದು ಕೇವಲ ಅಕ್ಷರಗಳ ಕೊಂಡಿಯಲ್ಲ. ಅವ್ಯಕ್ತ ಸಂಗತಿಗಳ ಪ್ರಕಾಶಕ್ಕೆ ಕೈಗನ್ನಡಿ. ಶಿಕ್ಷಣ ಯಾವಾಗಲೂ ಊರ್ಧ್ವಮುಖವಾಗಿ ಸಾಗಬೇಕು. ತಾಯ್ನುಡಿ ಹೊರತುಪಡಿಸಿ ಇತರ ಭಾಷೆಗಳಲ್ಲಿ ಶಿಕ್ಷಣ ನೀಡಿದರೆ ಮಕ್ಕಳು ಅರ್ಥೈಸಿಕೊಳ್ಳಲು ವಿಫರಾಗುತ್ತಾರೆ ಎಂದು ಸಾಕಷ್ಟು ಶಿಕ್ಷಣ ತಜ್ಞರು ಹೇಳಿದ್ದಾರೆ.

ಮಾತೃಭಾಷೆಯಲ್ಲಿ ಶಿಕ್ಷಣ ನೀಡುವ ಕುರಿತು ನ್ಯಾಯಾಲಯಗಳು ಬೇರೆಬೇರೆ ವ್ಯಾಖ್ಯಾನ ಮಾಡಿವೆ. ಇದರಿಂದ ಪೋಷಕರು, ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಗಳು ಗೊಂದಲಕ್ಕೀಡಾಗಿವೆ. ವರದಿಗಳು ಏನೇ ಇರಲಿ; ಕನ್ನಡದ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲೇ ಪ್ರಾಥಮಿಕ ಶಿಕ್ಷಣ ನೀಡಬೇಕು ಎಂದು ಹೇಳಿದರು.

ಕನ್ನಡದಲ್ಲಿ ಕಲಿತ ಸರ್‌.ಎಂ. ವಿಶ್ವೇಶ್ವರಯ್ಯ, ಪ್ರೊ.ಸಿ.ಎನ್‌.ಆರ್‌. ರಾವ್‌, ನಾಲ್ವಡಿ ಕೃಷ್ಣರಾಜ ಒಡೆಯರ್‌, ಸುಪ್ರೀಂಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌. ವೆಂಕಟಾ­ಚಲಯ್ಯ, ಇನ್ಫೊಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಮುಂತಾದವರು ಮಹತ್ತರವಾದುದನ್ನೇ ಸಾಧಿಸಿದ್ದಾರೆ. ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಕನ್ನಡ ಸಂಘಗಳನ್ನು ಕಟ್ಟಿಕೊಂಡು ಕನ್ನಡ ಸೇವೆ ಮಾಡುತ್ತಿರುವುದು ಸ್ತುತ್ಯಾರ್ಹ ಎಂದರು.

ಶಾಸಕ ರಮೇಶ ಬಂಡಿಸಿದ್ದೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮನೆಯ ಹಬ್ಬದಂತೆ ಆಚರಿಸಬೇಕು ಎಂದರು.
ತೋಳ್ಬಲದಿಂದ ಭಾಷೆ ಬೆಳೆಯದು: ಹಿರಿಯ ಸಾಹಿತಿ ಪ್ರೊ,ಎಂ.ಕರಿಮುದ್ದೀನ್‌ ಮಾತನಾಡಿ, ಯಾವುದೇ ಭಾಷೆ ತೋಳ್ಬಲದಿಂದ ಬೆಳೆಯುವುದಿಲ್ಲ; ಪ್ರೀತಿಯಿಂದ ಮಾತ್ರ ಬೆಳೆಯುತ್ತದೆ. ಮಾನವೀಯತೆಯ ಸ್ಪರ್ಶ ಇಲ್ಲದ ಭಾಷೆ ಹೆಚ್ಚು ಕಾಲ ಉಳಿಯಲಾರದು. ಶರಣರು ಮತ್ತು ಕೀರ್ತನಕಾರರು ಕನ್ನಡ ಭಾಷೆಗೆಗೆ ಜೀವ ತುಂಬಿದ್ದಾರೆ.

ಮಾತೃಭಾಷೆಯಲ್ಲಿ ಶಿಕ್ಷಣ ಎನ್ನುವ ಬದಲು ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಗೆ ಬರಬೇಕು ಎಂದರು.
ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷೆ ಮಂಗಳಗೌರಮ್ಮ ಮಾತನಾಡಿ, ಕನ್ನಡದಲ್ಲಿ ಸಹಿ ಮಾಡುವುದು ಅವಮಾನ ಎಂದು ಕೆಲವರು ಭಾವಿಸಿದ್ದಾರೆ. ಈ ಭಾವನೆ ದೂರಾಗ­ಬೇಕು ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ತ್ರಿಭಾಷಾ ಸೂತ್ರ ಜಾರಿಯಾಗಬೇಕು ಎಂದು ಒತ್ತಾಯಿಸಿದರು.

* ಭಾಷೆ ಎಂಬುದು ಭಾವನೆಗಳ ಮುಖ್ಯ ವಾಹಕ. ಅದು ಕೇವಲ ಅಕ್ಷರಗಳ ಕೊಂಡಿಯಲ್ಲ. ಅವ್ಯಕ್ತ ಸಂಗತಿಗಳ ಪ್ರಕಾಶಕ್ಕೆ ಕೈಗನ್ನಡಿ. ಮಾತೃಭಾಷೆ ಹಿರಿಮೆ ಇನ್ನೂ ದೊಡ್ಡದು  
-ನ್ಯಾಯಮೂರ್ತಿ ಎ.ಜೆ. ಸದಾಶಿವ, ತಾಲ್ಲೂಕು  ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT