ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌಡನಕೆರೆಯಲ್ಲಿ ‘ಮೆಟ್ಟುಗಾಲು’ ಗುಂಪು

ಗುಂಪು ಗುಂಪಾಗಿರುವ ಹಕ್ಕಿಗಳು
Last Updated 11 ಫೆಬ್ರುವರಿ 2017, 11:54 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ನಗರದ ಹೊರವಲಯದ ಗೌಡನಕೆರೆಗೆ ಮೆಟ್ಟುಗಾಲು ಹಕ್ಕಿಗಳ ಗುಂಪು ಬಂದಿವೆ. ಕೆಸರು ಗೊರವ, ನೀರು ಗೊರವ ಎಂದೂ ಕರೆಯುವ ಈ ಹಕ್ಕಿಗಳು ಪುಟ್ಟ– ಪುಟ್ಟ ಗುಂಪುಗಳಾಗಿ ಆಹಾರ ಹುಡುಕುತ್ತಿವೆ.

ಹತ್ತಿರ ಯಾರಾದರೂ ಸುಳಿದಲ್ಲಿ ತಕ್ಷಣ ಹಾರಿ ಇನ್ನೊಂದು ಬದಿಗೆ ಹೋಗುತ್ತವೆ. ಜನಸಂಚಾರ ಹೆಚ್ಚಾದಲ್ಲಿ ಆಗಸದಲ್ಲಿ ಗುಂಪಿನಲ್ಲಿಯೇ ಹಾರುತ್ತಾ ಸುತ್ತಾಡುತ್ತವೆ. ನಂತರ ಒಟ್ಟಿಗೆ ಬಂದಿಳಿಯುತ್ತವೆ.

ಗೌಡನಕೆರೆಯು ಈಗ ಕೆರೆಯಾಗಿ ಉಳಿದಿಲ್ಲ. ಊರಿನ ತ್ಯಾಜ್ಯದ ನೀರು ನಿಲ್ಲುವ ತಾಣವಾಗಿದೆ. ತಾಲ್ಲೂಕಿನ ಬಹುತೇಕ ಕೆರೆಗಳು ಒಣಗಿದ್ದು, ನಗರದ ಹೊರವಲಯದ ಅಮ್ಮನಕೆರೆಯೂ ನೀರಿಲ್ಲದೆ ಒಣಗಿದೆ. ಕಾರಣ, ಇರುವ ಅತ್ಯಲ್ಪ ಕಲುಷಿತ ನೀರಿನಲ್ಲಿಯೇ ಹಕ್ಕಿಗಳ ಆಹಾರದ ಅನ್ವೇಷಣೆ ಸಾಗಿದೆ.

ಕೆಸರಿನಲ್ಲಿಯೂ ತಮ್ಮ ಆಹಾರವನ್ನು ಅರಸುವ ಈ ಹಕ್ಕಿಗಳ ಪ್ರವೃತ್ತಿಯಿಂದಾಗಿ ಇವಕ್ಕೆ ಕೆಸರು ಗೊರವ ಎಂದು ಕೂಡ ಕರೆಯುವರು. ಇವು ಕೆರೆ ಹೊಳೆಗಳ ಕೆಸರಿನಲ್ಲಿ ಮೇಯುತ್ತವೆ. ಹೊಸದಾಗಿ ಹಾರಲು ಕಲಿತಂತೆ ಯರ್ರಾಬಿರ್ರಿಯಾಗಿ ಹಾರುತ್ತವೆ. ಹಾರುವಾಗ ಕಾಲುಗಳು ತುಂಡಾಗಿ ನೇತಾಡುತ್ತಿರುವಂತೆ ಕಾಣುತ್ತದೆ. ಸಾಮಾನ್ಯವಾಗಿ ತಾಲ್ಲೂಕಿನ ಕೆರೆಗಳಲ್ಲಿ ಚಳಿಗಾಲದ ವೇಳೆ ಈ ಹಕ್ಕಿಗಳು ವಲಸೆ ಬರುತ್ತವೆ.

ಇಂಗ್ಲಿಷ್‌ನಲ್ಲಿ ಬ್ಲಾಕ್‌ವಿಂಗ್ಡ್‌ ಸ್ಟಿಲ್ಟ್‌ ಎನ್ನುವ ಮೆಟ್ಟುಗಾಲು ಹಕ್ಕಿಯು ಪಾರಿವಾಳದಷ್ಟು ದೊಡ್ಡದಾಗಿದ್ದು, ಕರಿಯ ಬಣ್ಣವಿರುತ್ತದೆ. ಇದರ ಗುಲಾಬಿ ಬಣ್ಣದ ಕಾಲುಗಳು ಸ್ಟ್ರಾ ರೀತಿಯಿದ್ದು, ಒಂದು ಅಡಿಯಷ್ಟು ಉದ್ದವಿರುತ್ತವೆ. ನೀಳವಾದ ಕಪ್ಪು ಕೊಕ್ಕು. ನೀರಲ್ಲೇ ಕೆದಕುತ್ತ ಹುಳುಗಳು, ಮೀನುಗಳನ್ನು ತಿನ್ನುತ್ತವೆ. ಗೌಡನಕೆರೆಯಲ್ಲಿ ಸುಮಾರು ಐದರ ಗುಂಪಿನಲ್ಲಿರುವ ಈ ಬ್ಲಾಕ್ ವಿಂಗ್ಡ್ ಸ್ಟಿಲ್ಟ್ ಹಕ್ಕಿಗಳು ಒಟ್ಟೊಟ್ಟಾಗಿ ತಮ್ಮ ಹಾರಾಟವನ್ನು ನಡೆಸುತ್ತಾ ಸ್ಥಳ ಬದಲಾಯಿಸುತ್ತಿರುವುದನ್ನು ಈಗ ಕಾಣಬಹುದು.

ಹಾರುವಾಗ ಕಪ್ಪುರೆಕ್ಕೆ, ಅಚ್ಚಬಿಳುಪಿನ ಶರೀರ ಮತ್ತು ಗುಲಾಬಿ ಬಣ್ಣದ ಕಾಲುಗಳು ಸುಂದರವಾಗಿ ಕಾಣಿಸುತ್ತದೆ. ಇವುಗಳ ಚೀಂವ್‌... ಚೀಂವ್‌... ನಾದವೂ ಹಾರಾಟದ ಸೊಗಸಿಗೆ ದನಿ ನೀಡಿದಂತಿರುತ್ತದೆ.

ಯೂರೋಪ್, ಅಮೆರಿಕ ಸೇರಿದಂತೆ ಚಳಿ ಪ್ರದೇಶಗಳಿಂದ ಇವುಗಳ ವಲಸೆಯನ್ನು ದಾಖಲಿಸಲಾಗಿದೆ. ಪ್ರಪಂಚದಾದ್ಯಂತ ಬ್ಲಾಕ್ ವಿಂಗ್ಡ್ ಸ್ಟಿಲ್ಟ್ ಹಕ್ಕಿಗಳ ಸಂಖ್ಯೆ ಹೆಚ್ಚಿರುವುದರಿಂದ ನಿಖರವಾಗಿ ಇವುಗಳ ಗಮ್ಯವನ್ನು ಗುರುತಿಸುವುದು ಪಕ್ಷಿತಜ್ಞರಿಗೆ ಸವಾಲಾಗಿದೆ.

ಮೊದಲಾದರೆ ಕೆರೆಗಳಲ್ಲಿ ನೀರಿರುತ್ತಿತ್ತು. ಪ್ರತಿ ಚಳಿಗಾಲದಲ್ಲೂ ವಿವಿಧ ರೀತಿಯ ಹಕ್ಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದವು. ಈಗ ಗೌಡನಕೆರೆಯಲ್ಲಿನ ಅತ್ಯಲ್ಪ ನೀರಿಗೆ ಕೇವಲ ಐದು ಕೆಸರು ಗೊರವ ಹಕ್ಕಿಗಳು ಬಂದಿವೆ. ಜತೆಯಲ್ಲಿ ಗ್ರೇಬ್‌ ಮತ್ತು ವುಡ್‌ ಸ್ಯಾಂಡ್‌ಪೈಪರ್‌ ಕೂಡ ಬಂದಿವೆ’ ಎಂದು ಪಕ್ಷಿವೀಕ್ಷಕ ಅಜಿತ್ ಕೌಂಡಿನ್ಯ ಅವರು ತಿಳಿಸಿದರು.

ಗೌಡನಕೆರೆಯಲ್ಲಿ ಗ್ರೇಬ್‌ ಅಥವಾ ಗುಳುಮುಳುಕ ಎಂದು ಕರೆಯುವ ಪುಟ್ಟ ಬಾತುಗಳು ಇವೆ. ಈಜಾಟದಲ್ಲಿ ಪರಿಣಿತವಾದ ಈ ಹಕ್ಕಿಗಳು ನೀರಿನಲ್ಲಿ ಮುಳುಗೇಳುವುದು ನೋಡುವುದೇ ಒಂದು ಚಂದ. ಇವು ಚಿಕ್ಕ– ಪುಟ್ಟ ಮೀನು, ಜಲಚರಗಳನ್ನು ತಿನ್ನುತ್ತವೆ. ಇವುಗಳೊಡನೆ ವುಡ್‌ ಸ್ಯಾಂಡ್‌ಪೈಪರ್‌ ಅಥವಾ ಅಡವಿ ಗದ್ದೆಗೊರವ ಹಕ್ಕಿಗಳೂ ಒಂದೆರಡು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT